twitter
    For Quick Alerts
    ALLOW NOTIFICATIONS  
    For Daily Alerts

    ರಂಗು, ರಂಗಿನ ಚೆಲುವಿನ ಚಿತ್ತಾರ...

    By Staff
    |


    ಮುಗ್ಧ ಕನ್ನಡಿಗರಿಗೆ ಇಂಥವೆಲ್ಲಾ ಹೊಸದು! ಅದೇ ಕಾರಣಕ್ಕೆ ನಾಲ್ಕು ರೀಲುಗಳು ಒಂಚೂರು ವೇಗವಾಗಿದ್ದರೂ ತಾಳ್ಮೆ ಪರೀಕ್ಷಿಸುತ್ತದೆ; ಆ ಮಟ್ಟಿಗೆ ಪ್ರೇಕ್ಷಕ ಸಹನಾಮೂರ್ತಿಯಾಗಿರಬೇಕು!

    ಚಿತ್ರ :ಚೆಲುವಿನ ಚಿತ್ತಾರ
    ನಿರ್ಮಾಣ :ಭಾಗ್ಯವತಿ
    ಚಿತ್ರಕತೆ, ಸಂಭಾಷಣೆ, ಗೀತ ರಚನೆ, ನಿರ್ದೇಶನ : ಎಸ್.ನಾರಾಯಣ್
    ಸಂಗೀತ : ಮನೋಮೂರ್ತಿ
    ತಾರಾಗಣ : ಗಣೇಶ್, ಅಮೂಲ್ಯ, ಕೋಮಲ್, ಸುರೇಶ್ಚಂದ್ರ ಮತ್ತಿತರರು.

    ವಾಹನದ ಹಿಂದೆ ಹೋದ್ರೆ ಧೂಳು; ಹುಡುಗೀರ ಹಿಂದೆ ಹೋದ್ರೆ ಬರೀ ಗೋಳು! ಆಟೊ ಹಿಂದೆ ಬರೆದ ಈ ವಾಕ್ಯವನ್ನ ಓದಿ ತಕ್ಷಣವೇ ಮಾದೇಸ, ಪ್ರೀತಿಸಿದ ಹುಡುಗಿ ಐಸು ಜತೆ ಎಲ್ಲೋ ಓಡಿ ಹೋಗಿ ಮದುವೆ ಆಗುವ ತೀರ್ಮಾನವನ್ನು ಕೈಬಿಟ್ಟುಬಿಟ್ಟಿದ್ದರೆ ಅವನ ಜೀವನ ಬರೀ ಗೋಳಿನಲ್ಲಿ ಮುಕ್ತಾಯವಾಗುತ್ತಿರಲಿಲ್ಲವೇನೋ? ಆದರೆ, ಏನ್ ಮಾಡ್ತೀರಿ? ವಯಸ್ಸೇ ಹಾಗೆ. ಆಗ ಜಾತಿ, ಅಂತಸ್ತಿಗಿಂತ ದೊಡ್ಡದಾಗುತ್ತದೆ.

    ಮಾದೇಸನಿಗೂ ಅಷ್ಟೇ. ಆತ ಸಣ್ಣ ಸಂಬಳಕ್ಕೆ ಹೊಟ್ಟೆ ಹೊರೆಯುವ ಮೆಕ್ಯಾನಿಕ್. ಅಂತಸ್ತು, ಜಾತಿಯಲ್ಲಿ ತನಗಿಂತ ದೊಡ್ಡವಳಾದ ಒಂಬತ್ತನೇ ಕ್ಲಾಸಿನ ಪುಟ್ಟ ಹುಡುಗಿಯನ್ನು ಪ್ರೀತಿಸುತ್ತಾನೆ. ಅವಳೇ ತನ್ನ ಉಸಿರು; ಅಂದುಕೊಂಡಿರುತ್ತಾನೆ.

    ಇತ್ತ ಐಸು ಆದರೂ ಅಷ್ಟೇ, ತುಂಬು ಕುಟುಂಬದಲ್ಲಿ ಬೆಳೆದವಳು. ಅಪ್ಪ, ಇಬ್ಬರು ತಾಯಂದಿರು. ಅಜ್ಜಿ, ಚಿಕ್ಕಪ್ಪನ ಮುದ್ದಿನ ಕೂಸು. ಅಂಥವಳಿಗೆ ಒಂದು ಹಂತದಲ್ಲಿ ಅವರೆಲ್ಲರಿಗಿಂತ ಕೊಳಕ ಮೆಕ್ಯಾನಿಕ್ ಮಾದೇಸ ಇಷ್ಟವಾಗುತ್ತಾನೆ. ಅವನೇ ಜೀವದ ಗೆಳೆಯ ಅನ್ನುವಷ್ಟರಲ್ಲಿ ಕಹಾನಿ ಮೇ ಟ್ವಿಸ್ಟ್.

    ಹುಡುಗಿ ಮನೆಯವರಿಗೆ ಅವಳಿಗೆ ಮದುವೆ ಮಾಡಬೇಕೆಂಬ ಅದಮ್ಯ ಆಸೆ ಬಂದುಬಿಡುತ್ತದೆ. ಹುಡುಗಿಗೆ ಇವನ ಮೇಲೆ ಮನಸ್ಸು. ಮನೆಯಲ್ಲೇ ಇದ್ದರ ಯಾರದ್ದೋ ಜತೆ ಮದುವೆ ಖತಂ ಎಂದು ಗೊತ್ತಾಗುತ್ತಿದ್ದಂತೆ ಇಬ್ಬರೂ ಎಸ್ಕೇಪ್ ಸ್ಕೆಚ್ ಹಾಕುತ್ತಾರೆ. ಊರು ಬಿಟ್ಟು ಬೆಂಗಳೂರು ಸೇರುತ್ತಾರೆ. ಅಲ್ಲಿ ಸ್ನೇಹಿತನ ಆಶ್ರಯದಲ್ಲಿರುತ್ತಾರೆ. ನಾನಾ ಕಷ್ಟಗಳನ್ನೆದುರಿಸಿ ಮದುವೆಯಾಗುತ್ತಾರೆ. ಅಷ್ಟರಲ್ಲಿ ಹುಡುಗಿ ಮನೆಯವರು ಬೆಂಗಳೂರಿಗೇ ಹುಡುಕಿಕೊಂಡು ಬರುತ್ತಾರೆ. ಅಲ್ಲಿಗೇ... ನೀವು ಥಿಯೇಟರಲ್ಲಿದ್ದರೆ ಮುಂದೆ ಏನು ಎಂಬುದು ಗೊತ್ತಾಗುತ್ತೆ

    ಇದೊಂದು ಸತ್ಯ ಘಟನೆಯನ್ನಾಧರಿಸಿದ ಚಿತ್ರ ಎಂದು ಹೇಳುತ್ತದೆ ಟೈಟಲ್ ಕಾರ್ಡ್. ಮದುರೈನಲ್ಲಿ ನಡೆದ ಒಂದು ಘಟನೆಯನ್ನಿಟ್ಟುಕೊಂಡು ಒಂದೆರಡು ವರ್ಷಗಳ ಹಿಂದೆ ಕಾದಲ್ ಎಂಬ ಚಿತ್ರ ಬಂದಿತ್ತು. ಆ ಚಿತ್ರದ ನಕಲು ‘ಚೆಲುವಿನ ಚಿತ್ತಾರ. ಆ ಚಿತ್ರ ಅಲ್ಲಿ ಚೆನ್ನಾಗಿ ಓಡಿರುವಾಗ, ಇಲ್ಲೂ ಓಡುತ್ತದೆ ಎಂಬ ಕಾರಣಕ್ಕೋ? ಅಥವಾ ಅಷ್ಟೊಂದು ಹಣ ಕೊಟ್ಟು ರಿಮೇಕ್ ಹಕ್ಕುಗಳನ್ನು ಪಡೆದಿರುವಾಗ, ಶ್ರಮ ಏಕೆ ಎಂದೋ ಏನೋ? ಎಸ್. ನಾರಾಯಣ್ ಇಲ್ಲಿ ಯಾವುದೇ ದೊಡ್ಡ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ಅದೇ ಕತೆಯನ್ನು ಕನ್ನಡ ನೆಲದಲ್ಲಿ, ಕನ್ನಡಿಗರೊಂದಿಗೆ ಕನ್ನಡೀಕರಿಸಿದ್ದಾರೆ. ಚಿತ್ರಕ್ಕೆ ಟಾಂಗು ಕೊಟ್ಟಿದ್ದು ಅದೇ.

    ಆ ಕತೆ ಇಲ್ಲಿನ ನೇಟಿವಿಟಿಗೆ ಹೊಂದುವುದು ಕಷ್ಟ. ಜಾತಿ ಲೆಕ್ಕಾಚಾರ ಹಾಕಿ ಮಗಳ ಕತ್ತಿನಿಂದ ಮಾಂಗಲ್ಯ ಕೀಳುವುದು, ಬೇರೆ ಜಾತಿಯವನೆಂದು ತಾರಾಮಾರಿ ಹೊಡೆಯುವುದು... ಮುಗ್ಧ ಕನ್ನಡಿಗರಿಗೆ ಇಂಥವೆಲ್ಲಾ ಹೊಸದು. ಅದೇ ಕಾರಣಕ್ಕೆ ನಾಲ್ಕು ರೀಲುಗಳು ಒಂಚೂರು ವೇಗವಾಗಿದ್ದರೂ ತಾಳ್ಮೆ ಪರೀಕ್ಷಿಸುತ್ತದೆ; ಆ ಮಟ್ಟಿಗೆ ಪ್ರೇಕ್ಷಕ ಸಹನಾಮೂರ್ತಿಯಾಗಿರಬೇಕು.

    ಇನ್ನುಳಿದಂತೆ ಚಿತ್ರ ಸ್ವಲ್ಪ ಸಪ್ಪೆ. ಇದು ತಮಿಳಿನ ಊರಣವಾದ್ದರಿಂದ ಕನ್ನಡ ನಾಲಿಗೆಗೆ ಹೊಸ ರುಚಿ. ಒಂದೆರಡು ಕಡೆ ಬಿಟ್ಟರೇ ಅನವಶ್ಯಕ ದೃಶ್ಯವಾಗಲೀ, ಹಾಡಾಗಲೀ ಇಲ್ಲ. ಆದರೆ, ಅಲ್ಲಿನ ಟೈಮಿಂಗ್ ಇಲ್ಲಿ ಮಿಸ್ ಹೊಡೆದಿದೆ. ಇದರಿಂದಾಗಿ ಚಿತ್ರದಲ್ಲಿ ನಿಧಾನವೇ ಪ್ರಧಾನ. ಜತೆಗೆ ಅಲ್ಲಲ್ಲಿ ಬೋರು. ಬೋರಾದರೂ ಚಿತ್ರ ಖುಷಿಕೊಡುವುದು ವಾಸ್ತವತೆಯಿಂದ.

    ನಾರಾಯಣ್ ಮೂಲ ಕತೆಗೆ ಸಂಪೂರ್ಣ ಶರಣಾಗಿದ್ದಾರೆ. ಅವರು ಸ್ವಲ್ಪ ಮಟ್ಟಿಗೆ ಗೆಲ್ಲುವುದು ಇದೆ ಕಾರಣಕ್ಕೆ.. ಹದಿಹರೆಯದವರ ತವಕ-ತಲ್ಲಣಗಳಿಂದ, ಬ್ರಹ್ಮಚಾರಿಗಳ ರೂಮಿನವರೆಗೆ ನೈಜತೆಗೆ ಒತ್ತು ಕೊಟ್ಟಿದ್ದಾರೆ. ಆ ಮೂಲಕ ಸಿನಿಮೀಯವಾಗುವುದನ್ನು ತಪ್ಪಿಸಿದ್ದಾರೆ. ಚಿತ್ರ ಗಮನಸೆಳೆಯು ವುದು ಈ ಕಾರಣಕ್ಕೆ.

    ಇಷ್ಟೆಲ್ಲಾ ಇಲ್ಲಗಳ ಮಧ್ಯೆಯೂ ಚಿತ್ರ ಸ್ವಲ್ಪ ಇಷ್ಟವಾಗುವುದು ಪಾತ್ರಧಾರಿಗಳಿಂದ. ಮೆಕ್ಯಾನಿಕ್ ಪಾತ್ರವನ್ನು ಗಣೇಶ್ ಬದಲು ವಿಜಯ್ ಮಾಡಿದ್ದರೆ ಸಖತ್ತಾಗಿರುತ್ತಿತ್ತು ಎನ್ನುವುದು ಒಪ್ಪಬೇಕಾದ ಮಾತಾದರೂ, ಗಣೇಶ್ ಮೋಸ ಮಾಡಿಲ್ಲ. ಕೊಳಕ ಮೆಕ್ಯಾನಿಕ್ ಆಗಲೀ, ನಾಚುವ ಪ್ರೇಮಿಯಾಗಲೀ, ಹುಚ್ಚನಾಗಲೀ... ಎಲ್ಲದರಲ್ಲೂ ಗಣೇಶ್ ಅಚ್ಚು ಕಟ್ಟು; ಅದೇ ಅವರ ಗೆಲುವಿನ ಗುಟ್ಟು.

    ಅಮೂಲ್ಯ ಮುದ್ದು ಮುದ್ದಾಗಿದ್ದಾಳೆ. ಉಗುರು ಕಚ್ಚುವ, ಕಣ್ಣಿನಲ್ಲೇ ಕೋಪ ಸಿಡಿಸುವಾಗಿನ ನಟನೆ ವಾರೆವ್ಹಾ... ಪತ್ರಕರ್ತ ಸುರೇಶ್ಚಂದ್ರ ಸೇರಿದಂತೆ ಇನ್ನಷ್ಟು ಹೊಸ ಮುಖಗಳು ಇಲ್ಲಿ ತೆರದುಕೊಂಡಿವೆ. ಎಲ್ಲರೂ ಪಾತ್ರಕ್ಕೆ ಸರಿಯಾಗಿ ಒಪ್ಪುತ್ತಾರೆ; ಅಪ್ಪುತ್ತಾರೆ. ಸಣ್ಣ ಪಾತ್ರಗಳಲ್ಲೇ ಗಮನ ಸೆಳೆಯುತ್ತಾರೆ. ಕೆಲವು ಕಡೆ ರೇಣುಕುಮಾರ್ ಛಾಯಾಗ್ರಹಣ, ಮನೋಮೂರ್ತಿಯವರ ಒಂದೆರೆಡು ಹಾಡುಗಳು ಕಿವಿಗೆ ಇಂಪು, ಕಣ್ಣಿಗೆ ತಂಪನ್ನು ಎರಕಹೊಯ್ಯುತ್ತವೆ.

    ಈ ಚಿತ್ತಾರದಲ್ಲಿ ಇನ್ನಷ್ಟು ಚೆಲುವೂ ಇದ್ದಿದ್ದರೆ ಮತ್ತಷ್ಟು ಚೆನ್ನಾಗಿರುತಿತ್ತು!

    ಪೂರಕ ಓದಿಗೆ-

    ಚೆಲುವಿನ ಚಿತ್ತಾರಗೆಲ್ಲದಿದ್ದರೇ,ನಾರಾಯಣ್ ಗತಿ?

    Thursday, April 25, 2024, 20:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X