»   » ಮಮಕಾರ ಮೂಡಿಸುವ ಸಾಹುಕಾರ

ಮಮಕಾರ ಮೂಡಿಸುವ ಸಾಹುಕಾರ

Subscribe to Filmibeat Kannada
  • ಎಂ.ಡಿ.
ಮುತ್ತು ಅಂದರೆ ಆ ಬಂಗಲೆಯವರಿಗೆ ಮುತ್ತಿಡುವಂಥಾ ಪ್ರೀತಿ. ಮುತ್ತು ಇಲ್ಲದೆ ಅಲ್ಲಿ ಯಾವ ಕೆಲಸವೂ ನಡೆಯುವು ದಿಲ್ಲ. ಮುತ್ತು ಬಂದರೆ ನಡೆಯುವ ಕೆಲಸ ನಿಲ್ಲುವುದೇ ಇಲ್ಲ. ಇಂತಿಪ್ಪಾ ಮುತ್ತು ಮನೆಯ ಯಜಮಾನನೇನಲ್ಲ. ಯಕಃಶ್ಚಿತ್‌ ಆಳು.

ಆದರೂ ಮನೆ ಒಡತಿಗೆ ಮುತ್ತು ಮಾತೆಂದರೆ ವೇದವಾಕ್ಯ. ಆತನಿಗೆ ಕೊಂಚ ನೋವಾದರೂ ಹಡೆದ ಮಗನಮೇಲೂ ಆಕೆ ಕೈ ಎತ್ತಬಲ್ಲಳು. ಹೀಗಿರುವಾಗ ಅವಳ ಮಗ ಶಶಿಕುಮಾರ್‌ ನಾಟಕದ ರಂಭಾಳಿಗೆ ಮನಸೋಲುತ್ತಾನೆ. ಅಷ್ಟರಲ್ಲಿ ಮುತ್ತು ಮತ್ತು ರಂಭಾ ಡ್ಯೂಯೆಟ್‌ ಹಾಡುತ್ತಿರುತ್ತಾರೆ. ಈ ನಡುವೆ ಸಾಹುಕಾರನಿಗೆ ತನ್ನ ಮಗಳನ್ನು ಮದುವೆ ಮಾಡಿ ಆಸ್ತಿ ಹೊಡೆಯಬೇಕೆಂದು ರಂಗಾಯಣ ರಘು ತಯಾರಾಗಿರುತ್ತಾನೆ. ಆದರೆ ಆಳಾಗಿರುವ ಮುತ್ತುವಿನ ನಿಜ ರೂಪವೇ ನು ಅನ್ನುವುದೇ ಕತೆಗೆ ಮಹತ್ವದ ತಿರುವು ನೀಡುತ್ತದೆ.

ಇದು ತಮಿಳಿನ ಸೂಪರ್‌ ಹಿಟ್‌ ಮುತ್ತು ಚಿತ್ರದ ರಿಮೇಕು. ಆದರೆ ನಿರ್ದೇಶಕ ಓಂಪ್ರಕಾಶ ರಾವ್‌ ಕತೆಯನ್ನು ಹಾಗೇ ಉಳಿಸಿಕೊಂಡಿದ್ದರೂ, ಕನ್ನಡದ ನೋಟಿವಿಟಿಗೆ ತಕ್ಕಂತೆ ದೃಶ್ಯಗಳನ್ನು ಬದಲಿಸಿದ್ದಾರೆ. ನಾಯಕ ರವಿಚಂದ್ರನ್‌ ಇಮೇಜಿ ಗೆ ಸರಿಯಾಗಿ ಸಂಭಾಷಣೆ ಹೊಸೆದಿದ್ದಾರೆ. ವಿಷ್ಣು ಪಾತ್ರಕ್ಕೆ ಅವಧೂತನ ಕಳೆ ತಂದು ಕೊಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯಾಂದು ಫ್ರೇಮಿನಲ್ಲೂ ಶ್ರೀಮಂತಿಕೆ ಕಾದುಕೊಂಡಿದ್ದಾರೆ.

ಮೊದಲರ್ಧ ತಮಾಷೆ. ದ್ವಿತಿಯಾರ್ಧದಲ್ಲಿ ಗಂಭೀರವಾದರೂ ಚಿತ್ರಕತೆಯ ಬಿಗಿ, ಚಿತ್ರವನ್ನು ನೋಡೆಬಲ್‌ ಆಗಿಸುತ್ತದೆ. ಕುದುರೆ ಗಾಡಿಯ ಚೇಸಿಂಗ್‌ ದೃಶ್ಯ ಅದ್ಭುತ. ಹಾಡುಗಳನ್ನು ಚಿತ್ರಿಸಿದ ರೀತಿ, ಅದಕ್ಕೆ ಹಾಕಿದ ಸೆಟ್‌, ಬಳಸಿಕೊಂಡ ಲೊಕೇಶನ್‌ ಕಣ್ಣಿಗೆ ಕಲ್ಲಂಗಡಿ ಹಣ್ಣು. ಜತೆಗೆ ಹಣ್ಣಿನಂಗಡಿಯ ಯಜಮಾನಿಯಂತಿರುವ ರಂಭಾ, ಹೂವಿನ ಬುಟ್ಟಿಯಂತೆ ಕಂಗೊಳಿಸುವ ಅನುಪ್ರಭಾಕರ್‌.... ಯಾರನ್ನು ನೋಡೋದು, ಯಾರನ್ನು ಬಿಡೋದು.

ರವಿಚಂದ್ರನ್‌ ತಮ್ಮ ಪಾತ್ರವನ್ನು ತಮ್ಮದೇ ಶೈಲಿಯಲ್ಲಿ ನಿಭಾಯಿಸಿದ್ದಾರೆ. ಯಾರನ್ನೂ ಅನುಕರಣೆ ಮಾಡದಿದ್ದುದು ಮತ್ತು ಅದರಲ್ಲಿ ಗೆಲುವು ಸಾಧಿಸಿರೋದು ಅವರಿಗಷ್ಟೆ ಸಾಧ್ಯ. ಇನ್ನು ವಿಷ್ಣುವರ್ಧನ್‌ ಬಗ್ಗೆ ಏನು ಹೇಳುವುದು? ಮೊದಲ ಸಲ ಸಂತನಾಗಿ ಕಾಣಿಸಿಕೊಂಡಿರುವ ಅವರು ವಿಲಕ್ಷಣ ವ್ಯಕ್ತಿತ್ವದಿಂದ ಬೆರಗು ಹುಟ್ಟಿಸುತ್ತಾರೆ. ಕೆಲವೇ ಮಾತು ಗಳಿಂದ ಹೊಸ ವಿಷ್ಣುವನ್ನು ತೋರಿಸಿದ್ದಾರೆ.

ಜಿರಲೆ ಕಂಡರೆ ಲುಂಗಿ ಬಿಚ್ಚಿ ಓಡುವ ಟೆನ್ನಿಸ್‌ ಕೃಷ್ಣ, ರಾಜಾ ನರಸಿಂಹನೆಂದು ಬೀಗುವ ಹೊನ್ನವಳ್ಳಿ ಕೃಷ್ಣ , ಅವನಿಗಾಗಿ ಚಡಪಡಿಸುವ ಪದ್ಮಿನಿ, ಬೆಂಕಿ ಉಗುಳುವ ರಂಗಾಯಣ ರಘು, ಸಾಹುಕಾರನಾಗಿ ಮಿಂಚುವ ಶಶಿಕುಮಾರ್‌, ನೂರೆಂ ಟು ಗುಟ್ಟು ಇಟ್ಟುಕೊಂಡು ನಗುವ ಸುಮಿತ್ರಾ, ಮುತ್ತಿಗಾಗಿ ಮರುಗುವ ಆಶಾಲತಾ, ಗೂಳಿಯಂತೆ ಎಗರುವ ಧರ್ಮ, ಶೋಭರಾಜ್‌ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವತುಂಬಿದ್ದಾರೆ. ರಾಜೇಶ್‌ ರಾಮನಾಥ್‌ ಸಂಗೀತದಲ್ಲಿ ಮೂರು ಹಾಡು ಗಳು ಹೆಜ್ಜೆಹಾಕುವಂತಿವೆ. ಸೀತಾರಾಂ ಛಾಯಾಗ್ರಹಣ ವಂಡರ್‌ಪುಲ್‌. ಮನೆಮಂದಿಯೆಲ್ಲಾ ಮುಜುಗರವಿಲ್ಲದೇ ನೋಡಬಹುದಾದ ಸಾಹುಕಾರ ಚಿತ್ರವನ್ನು ಸಾಹುಕಾರನಂತೆ ಕಾಸು ಸುರಿದು ನಿರ್ಮಿಸಿದ ಮಂಜು ಅವರಿಗೆ ಪುಲ್‌ಮಿಲ್ಸ್‌ ಸಿಗಬೇಕಾದರೆ ಥೇಟರ್‌ಗೆ ಭೇಟಿ ಕೊಡಿ. ಎಂಜಾಯ್‌ ಮಾಡಿ.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada