»   » ಐದಾರು ಕತೆ ಒಂದಾದವು, ಬಂದವರಿಗೆಲ್ಲ ಖುಷಿ ಕೊಟ್ಟವೋ...

ಐದಾರು ಕತೆ ಒಂದಾದವು, ಬಂದವರಿಗೆಲ್ಲ ಖುಷಿ ಕೊಟ್ಟವೋ...

Posted By:
Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ಆತ ತುಂಟಾಟದ ಹುಡುಗ. ಅವಳು ಮೊಂಡಾಟದ ಹುಡುಗಿ. ಅದನ್ನೇ ಕುಂಟಾಬಿಲ್ಲೆ ಮಾಡಿಕೊಂಡು ಮುಟ್ಟಾಟ ಆಡುವಾಗ ಏನಾಗುತ್ತೆ? ಏನೂ ಆಗುವುದಿಲ್ಲ. ಆತ ಐ ಲವ್‌ ಯೂ ಅಂತಾನೆ. ಆಕೆ ನಾನೂ ಅಷ್ಟೇ ಕಣಯ್ಯೋ ಅಂತಾಳೆ. ಇಷ್ಟೇ ಆಗಿಬಿಟ್ಟರೆ ಕತೆ ಬೆಳೆಯುತ್ತಾ? ಅದು ಸಾಧ್ಯವಿಲ್ಲವೆಂದೇ ನಡುವೆಯಾಂದು ಸೇಡಿನ ಕತೆ ಇದೆ. ನಾಯಕನ ಅಪ್ಪ ಮಾಡಿದ ತಪ್ಪಿಗೆ ಆತನ ಪತ್ನಿ ಮಕ್ಕಳು ಅವಮಾನ ಅನುಭವಿಸುತ್ತಾರೆ. ದ್ವೇಷಕ್ಕೆ ಈಡಾಗುತ್ತಾರೆ. ಅದನ್ನು ಸರಿಮಾಡಲು ನಾಯಕ ಏನೇನೋ ನಾಟಕ ಆಡುತ್ತಾನೆ. ಕೊನೆಗೆ ತನ್ನ ಪ್ರೇಮವನ್ನೇ ತ್ಯಾಗ ಮಾಡಲು ತಯಾರಾಗುತ್ತಾನೆ...

ಸಿನಿಮಾ ಹೆಸರು ಕೇಳಿದರೇ ಮುಂದಾಗುವುದು ಏನೆಂದು ಪ್ರೇಕ್ಷಕ ದೊರೆಗಳಿಗೆ ಗೊತ್ತಾಗುತ್ತದೆ. ಹೀಗಾಗಿ ಅದನ್ನು ಬಿಟ್ಟು ಉಳಿದ ಕತೆ ಕಡೆಗೂ ತಟುಗು ಕಣ್ಣಾಡಿಸೋಣ. ಇದು ತೆಲುಗಿನ ‘ಕಲಿಸುಂದಾಂ ರಾ’ ಚಿತ್ರದ ರೀಮೇಕು. ಆ ಚಿತ್ರದ ನಿರ್ದೇಶಕ ಉದಯಶಂಕರ್‌ ಅವರೇ ಇದನ್ನು ನಿರ್ದೇಶನ ಮಾಡಿದ್ದಾರೆ. ಅಲ್ಲಿರುವುದನ್ನೇ ಇಲ್ಲಿಯೂ ತಂದಿದ್ದಾರೆ. ಅದಕ್ಕೆ ಆಂಧ್ರದ ಮಂದಿ ಹೆಚ್ಚು ಇಷ್ಟಪಡುವ ಹಾಡುಗಳು ಇಲ್ಲೂ ಉಳಿದಿವೆ. ಹದಿನೈದು ನಿಮಿಷಕ್ಕೊಂದು ಹಾಡಿದೆ. ಕ್ಲೈಮ್ಯಾಕ್ಸ್‌ ಹತ್ತಿರ ಬರುವಾಗ ಹಾಡಿಟ್ಟರೆ ತಲೆಕೆಡದೆ ಇರುತ್ತಾ ? ಆದರೂ ಹಂಸಲೇಖ ಸಂಗೀತ ಮತ್ತು ಗೀತೆಗಳು ತಮ್ಮ ಸಾಮರ್ಥ್ಯದಿಂದ ಬೋರ್‌ ಹೊಡೆಸುವುದಿಲ್ಲ. ರವಿ ಜತೆ ಕೈಗೂಡಿಸಿದ್ದು ಮೋಸವಾಗಿಲ್ಲ.

ನಿರೂಪಣೆ ವಿಷಯಕ್ಕೆ ಬಂದರೆ, ಲವಲವಿಕೆಯಿಂದ ನವಿರು ಹಾಸ್ಯದಿಂದ ಮಂದಹಾಸದಿಂದ ಸಿನಿಮಾ ನೋಡುವಂತೆ ಮಾಡುತ್ತದೆ. ಚಿಕ್ಕಚಿಕ್ಕ ವಿಷಯಗಳನ್ನು ನಿರ್ದೇಶಕ ಜಾಣತನದಿಂದ ಕತೆಗೆ ಅಳವಡಿಸಿದ್ದಾರೆ. ಸಂಭಾಷಣೆ ಕೂಡಾ ಇಷ್ಟವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಶ್ರೀಮಂತಿಕೆ ಕಣ್ಣಿಗೆ ಹೊಡೆಯುತ್ತದೆ. ಒಂದೊಂದು ದೃಶ್ಯದಲ್ಲೂ ಖರ್ಚು ಮಾಡಿದ್ದು ಕಾಣುತ್ತದೆ. ಹಾಡಿಗಾಗಿ ಹಾಕಿದ ಸೆಟ್ಟು, ವಿದೇಶದ ಶೂಟಿಂಗು ಮನಸ್ಸಿಗೆ ಹಬ್ಬ. ಇದರಲ್ಲಿರುವ ನಟ- ನಟಿಯರನ್ನು ಲೆಕ್ಕಹಾಕಲು ಜನಗಣತಿಯೇ ಮಾಡಬೇಕೇನೋ. ಕೆಲವೊಮ್ಮೆ ಒಬ್ಬರಿಗೊಬ್ಬರು ಸಂಬಂಧದಲ್ಲಿ ಏನಾಗಬೇಕೆಂದು ಗೊಂದಲವೂ ಆಗುತ್ತದೆ. ಅವರಲ್ಲಿ ಹೆಚ್ಚು ಇಷ್ಟವಾಗುವುದು, ತೆರೆಮೇಲೆ ಕಾಣಿಸೋದು ಸೋಮಿಯಾಜಿಲು, ಕೆ.ಆರ್‌.ವಿಜಯಾ, ಶಿವರಾಂ, ದೊಡ್ಡಣ್ಣ ಮತ್ತು ವನಿತಾವಾಸು ಮಾತ್ರ.

ಶಿಲ್ಪಾಶೆಟ್ಟಿಯನ್ನು ನೋಡಿದ ಮೇಲೆ ಕನ್ನಡದಲ್ಲಿ ‘ನಟಿ’ಯರು ಇಲ್ಲವೆನ್ನೋದು ಖಾತ್ರಿಯಾಗುತ್ತದೆ. ಆ ಹುಡುಗಿ ಒಂದು ಸಾರಿ ಸೊಂಟ ತಿರುವಿದರೆ ಸಾಕೆನಿಸುತ್ತದೆ. ಅದರೊಂದಿಗೆ ಅಭಿನಯವೂ ಬೆರೆತರೆ ಸುಭಾನಲ್ಲಾ ! ಆದರೆ ಇದೇ ಮಾತನ್ನು ರವಿಚಂದ್ರನ್‌ಗೆ ಹೇಳಲು ಸಾಧ್ಯವಿಲ್ಲ. ಅವರು ತಮ್ಮ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಮಾಡಿದ್ದಾರೆ ನಿಜ. ಕೊಂಚ ಶ್ರಮಪಟ್ಟಿದ್ದರೆ ಇನ್ನಷ್ಟು ಜೀವಂತಿಕೆ ತರಬಹುದಿತ್ತು. ಹಾಗೆ ಶ್ರಮಪಟ್ಟಿಲ್ಲ ಅನ್ನುವುದಕ್ಕೆ ಊದಿಕೊಂಡ ಅವರ ಹೊಟ್ಟೆಯೇ ಸಾಕ್ಷಿ. ಅವರೀಗ ‘ಕ್ರೇಜಿಸ್ಟಾರ್‌’ ಆಗುವ ಬದಲು ‘ಕೇಜಿ’ ಸ್ಟಾರ್‌ ಆಗುತ್ತಿದ್ದಾರೆ.

ಹೀಗಿದ್ದರೂ ಮೊದಲರ್ಧಗಂಟೆಯಲ್ಲಿ ನಿರ್ದೇಶಕ ಚಿತ್ರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿಲ್ಲ. ದೊಡ್ಡ ಮನೆಯ ದೊಡ್ಡ ಸಂಸಾರವನ್ನು ಒಂದೇ ಎಳೆಯಲ್ಲಿ ಹಿಡಿಯುವುದು ಅವರಿಗೆ ಸಾಧ್ಯವಾಗಿಲ್ಲ.

ಅದಹಾಗೆ ಇದರಲ್ಲಿ ಒಟ್ಟು ನಾಲ್ಕು ಚಿತ್ರಗಳ ಛಾಯೆ ಇದೆ. ಹಿಂದಿ ಭಾಷೆಯ ‘ಹಮ್‌ ಆಪ್‌ ಕೆ ಹೈ ಕೌನ್‌’, ‘ದಿಲ್‌ವಾಲೆ ದುಲ್ಹನಿಯ ಲೇ ಜಾಯೇಂಗೆ’, ತಮಿಳಿನ ‘ತೇವರ್‌ಮಗನ್‌’ ಮತ್ತು ತೆಲುಗಿನ ‘ಸೀತಾರಾಮಯ್ಯಗಾರು ಮನವರಾಲು’. ಇವುಗಳ ಮೂಲ ಎಳೆಯನ್ನು ತಮ್ಮ ಕತೆಯಲ್ಲಿ ಅಳವಡಿಸಿದ್ದು ಅಚ್ಚರಿಯಾಗುವಷ್ಟು ಸಶಕ್ತವಾಗಿದೆ. ಕದ್ದರೂ ಅದಕ್ಕೆ ಹೊಸ ಮೆರುಗನ್ನು ಕೊಡುವುದು ಚಿಕ್ಕಮಾತಲ್ಲ. ಆದರೆ ಅಷ್ಟಕ್ಕೆ ತೃಪ್ತಿಪಡಬೇಕಾದ, ಅದನ್ನೇ ಮೃಷ್ಟಾನ್ನವೆಂದು ತಿನ್ನಬೇಕಾದ ಸ್ಥಿತಿ ಕನ್ನಡಿಗರಿಗೆ ಬಂದಿರೋದು ಮಾತ್ರ ಕರ್ಮವಲ್ಲದೆ ಮತ್ತೇನು?

(ಸ್ನೇಹಸೇತು- ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada