»   » ಜೋಡಿಯಾಗಿ ಬಂದು ನೋಡಿ

ಜೋಡಿಯಾಗಿ ಬಂದು ನೋಡಿ

Subscribe to Filmibeat Kannada


ವಿಜಯ್ ರಾಘವೇಂದ್ರ, ಮಧುಮಿತಾ ಜೋಡಿ ಮನಸ್ಸಿಗೆ ಇನ್ನಷ್ಟು ಹತ್ತಿರವಾಗ್ತಾರೆ. ಇನ್ನು ಸುಂದರ್ ರಾಜಾ, ಬ್ಯಾಂಕ್ ಜನಾರ್ದನ್, ಜಯಮ್ಮ... ಕಚಗುಳಿಯಿಟ್ಟು ಕಥೆ ಸಾಗಲು ಸಹಕರಿಸಿದ್ದಾರೆ. ಮೈಲಾರ್‌ಲಿಂಗನಾಗಿ ಚಿದಾನಂದ್ ಇಷ್ಟ ಆಗ್ತಾರೆ. ಒಟ್ಟಾರೆಯಾಗಿ ಮನೆಮಂದಿಯೆಲ್ಲಾ ಕುಳಿತು ನೋಡಲು ಖಂಡಿತಾ ಯಾವ ಅಡ್ಡಿಯೂ ಇಲ್ಲ. ಕೊಟ್ಟ ಕಾಸಿಗಂತೂ ಮೋಸವಿಲ್ಲ. ಜೋಡಿಯಾಗಿ ಬಂದು ನೋಡಲು ಮುಜುಗರ ಪಡುವ ಅಗತ್ಯವೂ ಇಲ್ಲ.

  • ವಿನಾಯಕರಾಮ್ ಕಲಗಾರು

ಅದು ಶಿವಮೊಗ್ಗದ ಮೊಗ್ಗೇಹಳ್ಳಿ ಕಲ್ಯಾಣಮಂಟಪ. ಅಲ್ಲಿ ಅರ್ಜುನ್ ಹಾಗೂ ಗೌರಿ ಹಸೆಮಣೆ ಏರಿರುತ್ತಾರೆ. ಆದರೆ ಅದು ಬಲವಂತದ ಮದುವೆಯಾದ್ದರಿಂದ ಅರ್ಜುನ್‌ಗೆ ಮದುವೆ ಆಗಲು ಇಷ್ಟವಿಲ್ಲ. ಒಂದಿಷ್ಟು ಪಾರ್ಕು, ಥಿಯೇಟರು ಅಂತ ಓಡಾಡಬೇಕು. ಅಲ್ಲಿ ಅವಳನ್ನು ಸಂಪೂರ್ಣ ಅರ್ಥ ಮಾಡಿಕೊಂಡು ನಂತರ ಮದುವೆಯಾಗಬೇಕು. ಅದರಲ್ಲೇ ಹೆಚ್ಚು ಥ್ರಿಲ್ ಇರುತ್ತೆ ಎಂಬ ಅಲಿಖಿತ ಸಿದ್ಧಾಂತಕ್ಕೆ ಜೋತುಬಿದ್ದಿರುವ ಅವನಿಗೆ ಮುಂದೇನು ಎಂಬ ಯೋಚನೆ. ಹೇಗೆ ಮದುವೆ ನಿಲ್ಲಿಸೋದು ಅಂತ ಅವನು ತಲೆ ಕೆರೆದುಕೊಳ್ಳುತ್ತಿರುತ್ತಾನೆ. ಮುಂದೆ 'ಮಿಂಚಿನ ಓಟ'ವೊಂದೇ ಪರಿಹಾರ ಎಂದುಕೊಳ್ಳುತ್ತಿರುವಾಗ ಅಚಾನಕ್ ಎಂಬಂತೆ ಗೌರಿ ಎದುರಾಗುತ್ತಾಳೆ. ಆದರೆ ಅವಳ ವರಸೆಯೇ ಬೇರೆಯದಾಗಿರುತ್ತದೆ. ತಾನು ಕಾರ್ತಿಕ್ ಎಂಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿ ಹೇಳ್ತಾಳೆ. ಇದಕ್ಕೆಲ್ಲಾ ಒಂದೇ ಪರಿಹಾರ ಎಂದು ಅಲ್ಲಿಂದ ಇಬ್ಬರೂ ಓಡಲಾರಂಭಿಸುತ್ತಾರೆ. 270 ಕಿ.ಮೀ ದೂರದ ಬೆಂಗಳೂರಿನ ಬಾಡಿಗೆ ಮನೆ ಸೇರುತ್ತಾರೆ. ಕಾರ್ತಿಕ್ ಇರುವ ದಡಕ್ಕೆ ಗೌರಿಯನ್ನು ಸೇರಿಸುವ ತನಕ ಗೌರಿಯನ್ನು ಮನೇಲಿಟ್ಟುಕೊಳ್ಳುವ ಧೈರ್ಯ ತೋರ್ತಾನೆ ಅರ್ಜುನ್. ಕಾರ್ತಿಕ್‌ನ ಹುಡುಕಾಟದಲ್ಲಿ ಮೊದಲಾರ್ಧವನ್ನು ವ್ಯಯಿಸುತ್ತಾನೆ. ಹುಡುಕಿ ಹೈರಾಣಾಗುತ್ತಾನೆ. ಕೊನೆಯಲ್ಲಿ ಗೌರಿ ಕಾರ್ತಿಕ್ ಇರುವ ದಡ ಸೇರ್ತಾಳಾ? ಅರ್ಜುನ್ 'ನಾನು ನೀನು ಜೋಡಿ' ಅಂತ ಯಾರಿಗೆ ಹೇಳ್ತಾನೆ ಅನ್ನೋದನ್ನು ತೆರೆಯ ಮೇಲೆ ನೋಡಿದ್ರೇನೇ ಚೆನ್ನ. ಆದರೆ ಕಥೆ ಮುಕ್ತಾಯವಾಗೋದು ಮಾತ್ರ ಅದೇ ಮೊಗ್ಗೇನಹಳ್ಳಿಯ ಕಲ್ಯಾಣಮಂಟಪದಲ್ಲಿ!

ಇಡೀ ಚಿತ್ರದ ಜೀವಾಳವೆಂದರೆ ಹಂಸಲೇಖಾರ ಮನೋಜ್ಞ ಸಂಗೀತ. ಕಾಗದ ದೋಣಿ ನಮ್ಮ ಸಂಸಾರ... ನವಿಲೆ, ನವಿಲೇ... ಹಾಡುಗಳಂತೂ ಚಿರನೂತನ. ಜತೆಗೆ 'ಹಂಸರಾಗ'ವನ್ನು ಸರಿದೂಗಿಸಿಕೊಂಡು ಹೋಗುವ ಪರಿಪಕ್ವ ನಿರೂಪಣಾ ಶೈಲಿ ಕಥೆಗೆ ಇನ್ನಷ್ಟು ಪೌಷ್ಠಿಕತೆ ತುಂಬಿದೆ. ಹಾಗಂತ ಕಥೆಯಲ್ಲಿ ಹೇಳುವಂತಹ ಹೊಸತನವೇನೂ ಇಲ್ಲ. ಹತ್ತಾರು ಸಿನಿಮಾಗಳ 'ಸಮ್ಮಿಲ'ನದಂತಿದೆ. ಕೆಲವೊಂದು ಘಟನೆಗಳು ವಾಸ್ತವಕ್ಕೆ ದೂರವೆನಿಸುತ್ತವೆ. ಅದೇನೇ ಇದ್ದರೂ ನವಿರಾದ ಸಂಭಾಷಣೆ, ಅಲ್ಲಲ್ಲಿ ಸೇರಿಸಲಾದ ತಿಳಿಹಾಸ್ಯ, ಕಣ್ಣು ತಂಪಾಗಿಸುವ ಅದ್ಬುತ ತಾಣಗಳು ಕಥೆಗೆ ಜೀವ ತುಂಬಿವೆ. ಕೆಲವೆಡೆ ಸುಖಾಸುಮ್ಮನೆ ಹೊಡೆದಾಡುವ ದೃಶ್ಯಗಳು ಅನಗತ್ಯ ಎನಿಸುತ್ತೆ. ಮೊದಲಾರ್ಧಕ್ಕಿರುವ ಧಮ್ ಹಾಗೂ ರಿದಮ್ ಇನ್ನರ್ಧಕ್ಕಿಲ್ಲ. ಪ್ರತಿ ದೃಶ್ಯದಲ್ಲೂ ಅಲುಗಾಡದಂತೆ ಕಟ್ಟಿಹಾಕುವ ಸಂಭಾಷಣೆಗೆ ನೂರಕ್ಕೆ ನೂರು ಅಂಕ ನೀಡಲೇಬೇಕು. ಸಂಭಾಷಣೆಕಾರ ಪ್ರಸನ್ನ ಅವರಿಗೆ ಉತ್ತಮ ಭವಿಷ್ಯವಿದೆ.

ವಿಜಯ್ ರಾಘವೇಂದ್ರ, ಮಧುಮಿತಾ ಜೋಡಿ ಮನಸ್ಸಿಗೆ ಇನ್ನಷ್ಟು ಹತ್ತಿರವಾಗ್ತಾರೆ. ಇನ್ನು ಸುಂದರ್ ರಾಜಾ, ಬ್ಯಾಂಕ್ ಜನಾರ್ದನ್, ಜಯಮ್ಮ... ಕಚಗುಳಿಯಿಟ್ಟು ಕಥೆ ಸಾಗಲು ಸಹಕರಿಸಿದ್ದಾರೆ. ಮೈಲಾರ್‌ಲಿಂಗನಾಗಿ ಚಿದಾನಂದ್ ಇಷ್ಟ ಆಗ್ತಾರೆ. ಒಟ್ಟಾರೆಯಾಗಿ ಮನೆಮಂದಿಯೆಲ್ಲಾ ಕುಳಿತು ನೋಡಲು ಖಂಡಿತಾ ಯಾವ ಅಡ್ಡಿಯೂ ಇಲ್ಲ. ಕೊಟ್ಟ ಕಾಸಿಗಂತೂ ಮೋಸವಿಲ್ಲ. ಜೋಡಿಯಾಗಿ ಬಂದು ನೋಡಲು ಮುಜುಗರ ಪಡುವ ಅಗತ್ಯವೂ ಇಲ್ಲ.

ಗ್ಯಾಲರಿ: 'ನಾನು ನೀನು ಜೋಡಿ' ನಾಯಕಿ ನೋಡಿ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada