»   » ಪ್ರೇಮ ರಸಗವಳದ ‘ಕಾಂಚನಗಂಗಾ’

ಪ್ರೇಮ ರಸಗವಳದ ‘ಕಾಂಚನಗಂಗಾ’

Posted By:
Subscribe to Filmibeat Kannada
  • ಮಹಾಂತೇಶ ಬಹಾದುಲೆ
ಸೌಂದರ್ಯ ಸ್ಪರ್ಧೆಯನ್ನು ವಿರೋಧಿಸಲು ಬಂದ ಹುಡುಗಿಯೇ ಆ ಸ್ಪರ್ಧೆಯನ್ನು ಗೆದ್ದು, ಅದರ ಪರವಾದಿಯ ಪ್ರೇಮಪಾಶಕ್ಕೆ ಬೀಳುವ ಕಥಾ ಹಂದರವೆ- ಕಾಂಚನಗಂಗಾ.

ಐಟಂ ಸಾಂಗು, ಲಾಂಗು, ರಕ್ತ ಇದಾವುದೂ ಇಲ್ಲದ ನವಿರು ಪ್ರೇಮ ಇದ್ದಿರಬಹುದು ಎಂದು ಚಿತ್ರದ ಹೆಸರು ಕೇಳಿದಾಗ ಅನಿಸಿದ್ದು, ತೆರೆಯ ಮೇಲೆ ಕಂಡಾಗ ನಿಜವಾಗುತ್ತದೆ. ಪ್ರೇಮಚಿಗುರುವುದು, ಬೆಳೆಯುವುದರಲ್ಲಿ ಹೊಸತನ ಇಲ್ಲವೆನಿಸಿದರೂ, ಅದಕ್ಕೆ ಬಂದೆರಗುವ ಎಡರು ತೊಡರುಗಳಲ್ಲಿ ಕೊಂಚ ನವೀನತೆ ಕಾಣುವಂತೆ ಮಾಡಲಾಗಿದೆ.

ಫ್ಯಾಶನ್‌ ಡಿಸೈನರ್‌ ಸೂರ್ಯ(ಶಿವರಾಜ್‌ಕುಮಾರ್‌) ಸೌಂದರ್ಯ ಸ್ಪರ್ಧೆಗೆ ಕೆಲಸ ಮಾಡುವ ವೇಳೆ ಅದನ್ನು ವಿರೋಧಿಸಿ ಮಹಿಳೆಯರ ಪ್ರತಿಭಟನೆ. ಆ ಗುಂಪಿನಲ್ಲಿದ್ದ ಊರ್ಮಿಳಾ(ಶ್ರೀದೇವಿ) ಕಡೆಗೆ ಸೂರ್ಯನ ಕಣ್ಣು. ಕೊನೆಗೆ ಇವಳೇ ನೈಜ ಸುಂದರಿ ಅಂದುಕೊಂಡು ಬಲವಂತವಾಗಿ ಅವಳನ್ನು ಸ್ಫರ್ಧಾಳುವಾಗಿಸುವಲ್ಲಿ ಸಫಲನಾಗುತ್ತಾನೆ. ‘ಮಿಸ್‌ ಸ್ಯಾಂಡಲ್‌ವುಡ್‌- 2004’ ಕಿರೀಟ ಕಡೆಗೆ ಇವಳ ಮುಡಿಗೆ. ನಂತರ ಇವಳ ಸೆಳೆತ ಅವನೆಡೆಗೆ.

ಇವರಿಬ್ಬರ ಪ್ರೀತಿಗೆ ಊರ್ಮಿಳಾ ತಾಯಿ(ಸುಮಲತಾ) ವಿರೋಧ. ಅದಕ್ಕೊಂದು ಹಿನ್ನೆಲೆಯನ್ನು ಇಡಲಾಗಿದೆ. ಆಮೇಲೆ ನಾಯಿಕಿಯ ಮದುವೆ ಬೇರೆಯವನ ಜತೆಗೆ. ಮದುವೆಯ ಗಂಡಿಗೆ ನಿಜ ಸ್ವರೂಪ ತಿಳಿದಾಗ ಚಿತ್ರಕಥೆಗೆ ಹೊಸ ತಿರುವು. ಕೊನೆಗೆ ಅದಾವ ತೆರೆಯಲ್ಲಿ ತೇಲಿಹೋಗಿ ನಾಯಕ-ನಾಯಕಿ ದಡ ಸೇರುತ್ತಾರೆ ಎಂಬುದನ್ನು ಬೆಳ್ಳಿತೆರೆಯ ಮೇಲೆಯೇ ನೋಡಬೇಕು. ಹಲವು ಲೋಪದೋಷಗಳ ನಡುವೆಯೇ ಸಂಪೂರ್ಣ ಚಿತ್ರವನ್ನು ಸಹ್ಯವಾಗುವಂತೆ ಮಾಡುವಲ್ಲಿ ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಯಶಸ್ವಿಯಾಗಿದ್ದಾರೆ.

ಸ್ವರ್ಗ ಸದೃಶ ಹಿಮಾಚಲ ಪ್ರದೇಶದವರೆಗೂ ಹೋಗಿ, ಕೇವಲ ರೆಸ್ಟೋರೆಂಟೋದನ್ನು ಚಿತ್ರೀಕರಿಸುವ ಬದಲು, ಅದರೊಂದಿಗೆ ಅಲ್ಲಿನ ಅಪರೂಪದ ರಮಣೀಯ ತಾಣಗಳನ್ನು ಸೆರೆ ಹಿಡಿದಿದ್ದರೆ ಪ್ರೇಕ್ಷಕರ ಕಣ್ಣುಗಳಾದರೂ ತಂಪಾಗುತ್ತಿದ್ದವು. ಶಿವಣ್ಣ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶ್ರೀದೇವಿ ಭಾವನೆಗಳನ್ನು ಕಷ್ಟಪಟ್ಟು ವ್ಯಕ್ತಮಾಡುತ್ತಾರೆ ಅನಿಸುತ್ತದೆ. ನಾಯಕಿ ತಾಯಿಯ ಪಾತ್ರದಲ್ಲಿ ಕಾಣಿಸಿ ಕೊಂಡ ಸುಮಲತಾ ಅವರದು ಸಮತೂಕದ ಅಭಿನಯ. ಸಾಧು ಕೋಕಿಲಾ ಅವರ ಹಾಸ್ಯವಂತೂ ಕಿಲಕಿಲ.

ನಿರ್ಮಾಪಕರಾದ ಜೈಜಗದೀಶ್‌, ವಿಜಯಲಕ್ಷ್ಮಿ ಸಿಂಗ್‌ ತಮ್ಮ ಮಕ್ಕಳ ಸಹಿತ ತೆರೆಯ ಮೇಲೆ ಪ್ರತ್ಯಕ್ಷರಾಗುತ್ತಾರೆ. ಎಲ್ಲಿಯೂ ಅಶ್ಲೀಲತೆಗೆ ಆಸ್ಪದ ನೀಡದೇ ಕುಟುಂಬ ಸಮೇತ ಒಂದು ಬಾರಿ ನೋಡುವಂತಹ ಚಿತ್ರ ನೀಡಿದ್ದಕ್ಕೆ ಅವರಿಗೆ ಅಭಿನಂದನೆ ಹೇಳುವುದರಲ್ಲಿ ತಪ್ಪೇನಿಲ್ಲ.

(ಸ್ನೇಹಸೇತು: ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada