»   » ಪಕ್ಕದ ಮನೆ ಹಾಗಲಕಾಯಿಯೂ ಸಿಹಿ, ಮನೆ ಸೇಬು ಕಹಿ!

ಪಕ್ಕದ ಮನೆ ಹಾಗಲಕಾಯಿಯೂ ಸಿಹಿ, ಮನೆ ಸೇಬು ಕಹಿ!

Posted By:
Subscribe to Filmibeat Kannada
  • ಮಹೇಶ್‌ ದೇವಶೆಟ್ಟಿ
ಮದುವೆಯಾದ ಏಳು ವರ್ಷಗಳ ನಂತರ ಒಂದು ಗಂಡಿಗೆ ಏನನಿಸುತ್ತದೆ? ಮನೆಯಲ್ಲಿರುವ ಮಾವಿನ ಹಣ್ಣು ಒಗರಾಗುತ್ತದೆ. ಪಕ್ಕದ ಮನೆಯ ಹಾಗಲಕಾಯಿಯಲ್ಲೂ ಜೇನು ಸುರಿಯುತ್ತದೆ. ಹಾಗೆ ಸುರಿಯುವುದನ್ನು ತಿನ್ನಲು ಯತ್ನಿಸುವ ಆಸೆ ಪ್ರತಿಯಾಬ್ಬ ಗಂಡಸಲ್ಲೂ ಇರುತ್ತದೆ. ಆದರೆ ಅವರದನ್ನು ಹೇಳಿಕೊಳ್ಳುವುದಿಲ್ಲ. ಅವರ ಮುಚ್ಚಿಟ್ಟ ಆಸೆಯನ್ನು ಇಲ್ಲಿ ಬಿಚ್ಚಿ ತೋರಿಸಲಾಗಿದೆ. ಅದಕ್ಕೊಂದು ಹಾಸ್ಯದ ಹಾಸಿಗೆ ಹಾಸಲಾಗಿದೆ. ನಗೆಯ ಚಾದರ ಹೊಚ್ಚಲಾಗಿದೆ. ಸೆಂಟಿಮೆಂಟು, ಆಸೆ, ಅನುಮಾನ ಮತ್ತು ಪ್ರೀತಿ ಎಂಬ ಕಾಲುಗಳಿಂದ ಮಂಚವನ್ನು ನಿಲ್ಲಿಸಲಾಗಿದೆ. ಅದರ ಸುತ್ತವೇ ಸೊಂಟದ ವಿಷ್ಯಾ... ಕೇಳಪಾ... ಶಿಷ್ಯಾ...

ಅವರದು ಚೆಂದದ ಸಂಸಾರ. ಗಂಡ-ಹೆಂಡತಿ ಜತೆಗೊಬ್ಬ ಮಗಳು. ಸುಂದರಪತ್ನಿ ಇದ್ದರೂ ಆತನಿಗೆ ‘ಹಗ್ಗ ಕಡಿಯುವ’ ಚಟ. ಅಂಥವರ ಬದುಕಿನಲ್ಲಿ ಹುಡುಗಿಯಾಬ್ಬಳ ಪ್ರವೇಶವಾಗುತ್ತದೆ. ಹೇಗಾದರೂ ಮಾಡಿ ಅವಳನ್ನು ಒಲಿಸಿಕೊಳ್ಳಲು ಯತ್ನಿಸುತ್ತಾನೆ. ಇನ್ನೇನು ಅವಳು ಕೈಗೆ ಸಿಕ್ಕೇ ಬಿಟ್ಟಳು ಎನ್ನುವಾಗ ಗಾಂಧಿನಗರಕ್ಕೆ ಬಂದಿಳಿಯುತ್ತಾನೆ. ಅಂದರೆ ಎಲ್ಲ ಚಿತ್ರಗಳ ನಾಯಕನಂತೆ ಪತ್ನಿಯನ್ನು ನೆನೆದು ಅವಳ ಅಮರ ಪ್ರೀತಿಯನ್ನು ನೆನೆದು ಕಣ್ಣೀರಾಗುತ್ತಾನೆ, ಮಗಳ ಮುಖ ನೆನಪಾಗಿ ಮೂಗೊರೆಸಿಕೊಳ್ಳುತ್ತಾನೆ, ಕರ್ಚಿಪ್‌ ಕೊಡಲು ಅದೇ ಆಕೆ ಬರುತ್ತಾಳೆ...

ನಲವತ್ತರ ಆಸುಪಾಸಿನ ಗಂಡಸು ಹೆದ್ದಾರಿ ಬಿಟ್ಟು ಆಗಾಗ ಫುಟ್‌ಪಾತಿನಲ್ಲಿ ಮೇವು ಹುಡುಕಲು ಹೋಗುವ ಕಲ್ಪನೆ ತುಂಬಾ ಹಳೆಯದು. ಅನಂತನಾಗ್‌, ಕಾಶೀನಾಥ್‌ ಇಂಥ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಹೆಂಡ್ತಿಗ್ಹೇಳ್ಬೇಡಿ’ ಚಿತ್ರ ಕೂಡಾ ಇದೇ ರೀತಿಯ ಕತೆ ಹೊಂದಿತ್ತು. ಆದರೆ ಅಲ್ಲಿ ಕೊಲೆಗಿಲೆ ಸೇರಿಸಲಾಗಿತ್ತು. ಇಲ್ಲಿ ಮನೋರಂಜನೆ ನೀಡುವುದನ್ನೇ ಮುಖ್ಯ ಉದ್ದೇಶ ಮಾಡಿಕೊಳ್ಳಲಾಗಿದೆ. ಈ ರೀತಿಯ ಕತೆಗಳಲ್ಲಿ ಅಶ್ಲೀಲತೆಗೆ, ಬಿಸಿಬಿಸಿ ದೃಶ್ಯಗಳಿಗೆ ಸಾಕಷ್ಟು ಅವಕಾಶವಿರುತ್ತದೆ. ಆದರೆ ನಿರ್ದೇಶಕ ರಾಮನಾಥ್‌ ಋಗ್ವೇದಿ ಲಗಾಮನ್ನು ಬಿಗಿ ಹಿಡಿದಿದ್ದಾರೆ. ಕುದುರೆಯನ್ನು ತಮ್ಮ ಹತೋಟಿಯಲ್ಲಿಟ್ಟಿಕೊಂಡು ಓಡಿಸಿದ್ದಾರೆ. ಹೀಗಾಗಿ ಮುಜುಗರ ಪಡುವ ಅಗತ್ಯವೇ ಇಲ್ಲ. ರಮೇಶ್‌ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಅವರೇ ಚಿತ್ರಕತೆ ಬರೆದದ್ದು ಎಷ್ಟು ನೀಟಾಗಿದೆಯೆಂದರೆ ಶಂಕರ್‌ರಾವ್‌ರ ಒಂದು ಚಿಕ್ಕ ಜೋಕ್‌ ಬಿಟ್ಟರೆ ಉಳಿದ್ಯಾವುದೂ ಅನಗತ್ಯವೆನಿಸುವುದಿಲ್ಲ. ತೆರೆಯ ಮೇಲೆ ತಾಜಾ ತರಕಾರಿಯಂತೆ ಕಾಣುವ ರಮೇಶ್‌ ತಮ್ಮ ಕಮ್‌ಬ್ಯಾಕ್‌ ಚಿತ್ರದಲ್ಲಿ ಗೆದ್ದಿದ್ದಾರೆ. ಪಾದರಸದಂತೆ ಕುಣಿದಿದ್ದಾರೆ.

ಪಾತ್ರವನ್ನು ಆಸೆ ಪಟ್ಟಿದ್ದಾರೆ. ನಲವತ್ತರ ಗಂಡಸನ್ನ ಮೈಯಾಳಗೆ ಆವಾಹಿಸಿಕೊಂಡಿದ್ದಾರೆ. ಅನುಪ್ರಭಾಕರ್‌ಗೆ ನೀರಿನ ಗುಣ ಇದ್ದಂತಿದೆ. ಯಾವ ಪಾತ್ರೆಯಲ್ಲಿ ಹಾಕಿದರೂ ತಟ್ಟನೆ ಅದರ ಆಕಾರಕ್ಕೆ ಹೊಂದಿಕೊಳ್ಳುತ್ತಾರೆ. ಹೆಂಡತಿ ಇದ್ದರೆ ಹೀಗಿರಬೇಕು ಅನಿಸಿದರೆ ಅದು ಅನು ತಪ್ಪು. ನಮ್ಮದಲ್ಲ.

ಹುಣಸೆ ಮುಪ್ಪಾದರೂ ಹುಳಿಗೆ ಮುಪ್ಪಿಲ್ಲ ಅನ್ನುವ ಸಿದ್ಧಾಂತಕ್ಕೆ ‘ಹಗಲೂರಾತ್ರಿ’ ದುಡಿಯುವ ಶಂಕರರಾವ್‌, ಮೆಣಸಿನಕಾಯಿಯನ್ನು ವಿಸ್ಕಿಗೆ ಸೇರಿಸಿ ಕುಡಿದು ಅದರಷ್ಟೇ ಮತ್ತೇರಿಸುವ ಮಾಧುರಿ ಭಟ್ಟಾಚಾರ್ಯ, ಆ ಕಡೆ- ಈ ಕಡೆ ನೋಡುವುದನ್ನೇ ಜನ್ಮಸಿದ್ಧ ಹಕ್ಕು ಮಾಡಿಕೊಂಡಿರುವ ಪ್ರವೀಣ್‌ನಾಯಕ್‌ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

‘ಹೆಂಡತಿ ಇಲ್ಲದ ಮನೆ ಹಿಟ್ಲರ್‌ ಇಲ್ಲದ ಜರ್ಮನಿಯಂತೆ’ ಎನ್ನುವ ಮಾತು ಬರೆದಿರುವ ರಾಜೇಂದ್ರ ಕಾರಂತ ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಮೂರು ಹಾಡುಗಳನ್ನು ಕೇಳುವಂತೆ ಮಾಡಿರುವ ಸಂಗೀತ ನಿರ್ದೇಶಕ ಧರ್ಮಸೇನ, ಹಾಡಿಗೆ ಏನು ಬೇಕೋ ಅದನ್ನು ಕೊಟ್ಟಿರುವ ನೃತ್ಯ ನಿರ್ದೇಶಕ ಇಮ್ರಾನ್‌ ಸರ್ದಾರಿಯಾ, ಕಾಸ್ಟ್ಯೂಂ ರೂಪಿಸಿದವರು ಇವರೆಲ್ಲರೂ ನಗೆಯ ಫಸಲಿಗೆ ಗೊಬ್ಬರ ಹಾಕಿದ್ದಾರೆ. ತುಟಿ ಮೇಲೆ ಸಂಪಿಗೆ ನಗು ಇಟ್ಟುಕೊಂಡೇ ಎರಡೂವರೆ ಗಂಟೆ ನೋಡುವಂತೆ ಮಾಡಿದ್ದಾರೆ. ಒಂದು ಸುಂದರ ಸಂಜೆ, ಸುಂದರ ಹುಡುಗಿಯಾಂದಿಗೆ ಬೈಕ್‌ ಹತ್ತಿ ಯಾರೂ ಇಲ್ಲದ ಜಾಗದಲ್ಲಿ ಸುತ್ತಾಡುವ ಅನುಭವ ಕೊಡುವ ‘ಬಿಸಿಬಿಸಿ’ಯನ್ನು ಖಂಡಿತ ನೋಡಿ. ಆದರೆ ಪತ್ನಿಯನ್ನು ಸಪರೇಟಾಗಿ ನೋಡಲು ಕಳಿಸಿಕೊಡಿ!

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada