»   » ಹಳೆ ಚಟ; ಹೊಸ ಹಠ ಸಮ್ಮಿಲನದ ಹಠವಾದಿ

ಹಳೆ ಚಟ; ಹೊಸ ಹಠ ಸಮ್ಮಿಲನದ ಹಠವಾದಿ

Subscribe to Filmibeat Kannada


ಸಿಂಪಲ್ಲಾದ ಕತೆಯನ್ನು ಚಿಕ್ಕದಾಗಿ, ಚೊಕ್ಕದಾಗಿ ಹೇಳಿದ್ದರೆ ಅದರ ಕತೆಯೇ ಬೇರೆಯಾಗುತ್ತಿತ್ತು. ಆದರೆ, ರವಿ ಚಂದ್ರನ್‌ ಎರಡು ಗಂಟೆಯಲ್ಲಿ ಹೇಳಬಹುದಾದ ಚಿತ್ರವನ್ನು ಮೂರು ಚಿಲ್ಲರೆ ಗಂಟೆಗಳಲ್ಲಿ ಹೇಳಿದ್ದಾರೆ. ಅಲ್ಲದೇ ಈ ‘ಹಠವಾದಿ’ ಒಂದರ್ಥದಲ್ಲಿ ರವಿಚಂದ್ರನ್‌ ಆತ್ಮ ಚರಿತ್ರೆಯಾ?

  • ಚೇತನ್‌ ನಾಡಿಗೇರ್‌
ರವಿಚಂದ್ರನ್‌ಗೆ ಹೇಳಿಮಾಡಿಸಿದ ಹೆಸರಿದು ಎಂಬ ಮಾತು ‘ಹಠವಾದಿ’ ಬಿಡುಗಡೆಯಾಗುವುದಕ್ಕೆ ಮುಂಚೆ ಕೇಳಿ ಬಂದಿತ್ತು. ಚಿತ್ರ ನೋಡಿದ ನಂತರ ಒಂದು ಕ್ಷಣ ಇದು ಸೂಕ್ತ ಅಷ್ಟೇ ಅಲ್ಲ, ಒಂದರ್ಥದಲ್ಲಿ ರವಿಚಂದ್ರನ್‌ ಆತ್ಮ ಚರಿತ್ರೆಯಾ? ಎಂಬ ಪ್ರಶ್ನೆ ಬರದೇ ಇರುವುದಿಲ್ಲ. ಏಕೆಂದರೆ, ರವಿಚಂದ್ರನ್‌ರ ಹಠ ‘ಮಹಾತ್ಮೆ’ಯನ್ನು ಓದಿ ತಿಳಿದುಕೊಂಡವರಿಗೆ ತೆರೆಯ ಮೇಲೆ ಬರುವ ದೃಶ್ಯಗಳನ್ನು ನೋಡಿ ಅವರ ಜೀವನಕ್ಕೆ ತಾಳೆ ಹಾಕಿ ನೋಡಿದರೆ ಅಶ್ಚರ್ಯವಿಲ್ಲ. ಇದಕ್ಕೆ ಸಂಭಾಷಣೆಗಳೂ ಪೂರಕವಾಗಿದೆ. ಹಾಗಾಗಿ ಹಠವಾದಿ ರವಿಚಂದ್ರನ್‌ ಆತ್ಮಚರಿತ್ರೆಯ ಒಂದು ಭಾಗ ಎಂದು ಹೇಳಲಡ್ಡಿಯಿಲ್ಲ.

ಹಿಂಗೆಲ್ಲಾ ಹೇಳಿದರೆ ಅರ್ಥವಾಗೊಲ್ಲ ಬಿಡಿ. ಅದಕ್ಕೆ ಕತೆ ಕೇಳಿ ಬಿಡಿ. ಬಾಲು(ರವಿಚಂದ್ರನ್‌)ಗೆ ಚಿಕ್ಕಂದಿನಿಂದಲೂ ದೊಡ್ಡ ಸಂಗೀತಗಾರನಾಗಬೇಕೆಂಬ ಆಸೆ. ಈ ಆಸೆಯನ್ನು ಒಮ್ಮೆ ತನ್ನ ಮೇಷ್ಟ್ರು ಬಳಿ ಹೇಳಿಕೊಂಡಾಗ, ಅವರು ಅವಮಾನ ಮಾಡುತ್ತಾರೆ. ಬಾಲು ರಾಂಗ್‌ ಆಗುತ್ತಾನೆ. ಏನಾದರೂ ಆಗುವುದಕ್ಕೆ ಮುಂಚೆಯೇ ಅವನ ತಾಯಿ ಅವನ ಮನಸ್ಸು ಬದಲಾಯಿಸುತ್ತಾಳೆ.

ಸುಮ್ಮನೆ ಕೋಪ ಮಾಡಿಕೊಂಡು ಅಲೆಯುವ ಬದಲು ಏನಾದರೂ ಸಾಧಿಸಿ ತೋರಿಸು ಅಂಥ ಅವನಲ್ಲಿ ಛಲ ಹುಟ್ಟುಹಾಕುತ್ತಾಳೆ. ಇಲ್ಲಿದ್ದರೆ ಏನೂ ಪ್ರಯೋಜನವಲ್ಲ. ಬೆಂಗಳೂರಿಗೆ ಹೋಗಿ ಏನಾದರೂ ಸಾಧಿಸಿ ತೋರಿಸು ಎಂದು ಹೇಳಿ ಅವನನ್ನು ಬಸ್ಸು ಹತ್ತಿಸುತ್ತಾಳೆ.

ಸರಿ, ಬಾಲು ಸಹ ದೊಡ್ಡ ಸಂಗೀತಗಾರನಾಗಬೇಕೆಂದು ಹಠ ಬೆಳೆಸಿಕೊಂಡು ಬೆಂಗಳೂರಿಗೆ ಬರುತ್ತಾನೆ. ಯಾವುದೇ ಗಾಡ್‌ ಫಾದರ್‌ಗಳಿಲ್ಲದೆ ಸಂಗೀತಗಾರನಾಗಬೇಕೆಂದು ಪ್ರಯತ್ನಿಸುತ್ತಾನೆ. ಆದರೆ, ಎಲ್ಲೆಲ್ಲೂ ನಿರಾಸೆ, ಅವಮಾನ... ಈ ನಿರಾಸೆ, ಅವಮಾನವನ್ನು ಅವನಿರುವ ವಠಾರದ ಜನ ತಮ್ಮ ಪ್ರೀತಿಯಿಂದ ಮರೆಸುತ್ತಾರೆ. ಈ ಪ್ರೀತಿ, ಸ್ನೇಹ ಹಾಗೂ ನಿರಾಸೆಗಳಲ್ಲೇ ಸುತ್ತುತ್ತಿದ್ದ ಬಾಲುಗೆ ಒಮ್ಮೆ ತಲೆ ಸುತ್ತಿ ಬರುತ್ತದೆ. ಚೆಕ್‌ ಮಾಡಿಸಿದರೆ ಬ್ರೇನ್‌ ಟ್ಯೂಮರ್‌. ಸಂಗೀತಗಾರನಾಗಬೇಕೆಂದು ಬಂದ ಬಾಲು ಹಠ ಗೆಲ್ಲುತ್ತದೆಯೇ? ಉತ್ತರ ಚಿತ್ರದಲ್ಲಿದೆ. ನೋಡಿ ತಿಳಿದುಕೊಂಡು ಬಿಡಿ.

ಇಷ್ಟೇ ಸಿಂಪಲ್ಲಾದ ಕತೆಯನ್ನು ಚಿಕ್ಕದಾಗಿ, ಚೊಕ್ಕದಾಗಿ ಹೇಳಿದ್ದರೆ ಅದರ ಕತೆಯೇ ಬೇರೆಯಾಗುತ್ತಿತ್ತು. ಆದರೆ, ರವಿ ಚಂದ್ರನ್‌ ಎರಡು ಗಂಟೆಯಲ್ಲಿ ಹೇಳಬಹುದಾದ ಚಿತ್ರವನ್ನು ಮೂರು ಚಿಲ್ಲರೆ ಗಂಟೆಗಳಲ್ಲಿ ಹೇಳಿದ್ದಾರೆ. ಚಿತ್ರ ಸೀರಿಯಸ್ಸಾಗಿ ಬಿಡಬಹುದಾದ ಅಪಾಯವಿದೆ ಎಂದು ಸಾಕಷ್ಟು ಮನರಂಜನೆ ತುರುಕಿದ್ದಾರೆ. ಸಾಲದ್ದಕ್ಕೆ ಚಿತ್ರಕ್ಕೆ ಸಂಬಂಧವೇ ಇರದ ಕಾಮಿಡಿ ಟ್ರಾಕನ್ನು ಜೋಡಿಸಿದ್ದಾರೆ. ಅದೂ ಬೇಜಾರಾದಾಗ ಒಂದೆರೆಡು ಅನವಶ್ಯಕ ಹಾಡುಗಳನ್ನಿಟ್ಟಿದ್ದಾರೆ. ಅದೂ ಬೋರಾದಾಗ ತಾವು ಅತ್ತು, ಚಿತ್ರ ನೋಡುವವರನ್ನೂ ಅಳಿಸುತ್ತಾರೆ. ಇಷ್ಟೇ ಸಾಲದು ಎಂದು ಅಸಂಖ್ಯ ಸ್ಪೆಸಿಮನ್‌ ಪಾತ್ರಗಳನ್ನು ಸೃಷ್ಟಿಸಿ ಅವರಿಂದ ಕಾಡಿಸುತ್ತಾರೆ.

ಇಷ್ಟೆಲ್ಲಾ ಆದರೂ ಹಠವಾದಿ ನಿಜವಾಗಲೂ ನೀಟ್‌ ಚಿತ್ರ. ಇಲ್ಲಿ ಅಶ್ಲೀಲ ಸಂಭಾಷಣೆಗಳಿಲ್ಲ. ರವಿಚಂದ್ರನ್‌ ಚಿತ್ರದ ಮಾಮೂಲಿ ಸರಕಿಲ್ಲ. ಚಿತ್ರದಲ್ಲಿ ಹಠ, ಛಲ, ಪರಿಶ್ರಮವಿದ್ದರೆ ಏನು ಬೇಕಾದರೂ ಸಾಧಿಸಬಹುದೆಂಬ ಒಳ್ಳೆಯ ಸಂದೇಶವಿದೆ. ಅದಕ್ಕೆ ಜತೆಯಾಗಿ ಪವಿತ್ರ ಸ್ನೇಹ, ಪ್ರೇಮವಿದೆ. ಬಾರಿ ಬಾರಿ ಗುನುಗುವಂಥ ಕೆಲವು ಹಾಡುಗಳಿವೆ. ಫೈಟೇ ಇಲ್ಲದ ಒಂದು ಅದ್ಭುತವಾದ ಕ್ಲೈಮ್ಯಾಕ್ಸಿದೆ. ಸಾಮಾಜಿಕ ಕಳಕಳಿಯಿದೆ.

ನಟನೆಯೂ ಸೇರಿದಂತೆ ರವಿಚಂದ್ರನ್‌ ಎಂಟು ವಿಭಾಗಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವುಗಳಲ್ಲಿ ಅವರು ಆಪ್ತರಾಗುವುದು ಸಂಗೀತದಲ್ಲಿ. ಸಂಕಲನದಲ್ಲಿ ಹಾಗೂ ಹಾಡುಗಳ ನಿರ್ದೇಶನದಲ್ಲಿ. ಬ್ರೆಥ್ಲೆಸ್‌ ಹಾಡು ಸೇರಿದಂತೆ ಕೆಲವು ಹಾಡುಗಳನ್ನು ನೋಡೇ ಅನುಭವಿಸಬೇಕು. ಆ ಮಟ್ಟಿಗೆ ರವಿಚಂದ್ರನ್‌ ಇನ್ನೂ ತಮ್ಮ ಹಳೆಯ ಫಾರ್ಮ್‌ ಕಳೆದುಕೊಂಡಿಲ್ಲ. ಆದರೆ, ನಿರೂಪಣೆಯಲ್ಲಿ ಇದೇ ಮಾತು ಹೇಳುವಂತಿಲ್ಲ. ರವಿಚಂದ್ರನ್‌ರ ಮೆಚ್ಚಿನ ಛಾಯಾಗ್ರಹಕ ಸೀತಾರಾಂ ಮೆಚ್ಚುವಂತೆ ಕೆಲಸ ಮಾಡಿದ್ದಾರೆ.

ನಟ ರವಿಚಂದ್ರನ್‌ ಸೆಂಟಿಮೆಂಟ್‌ ದೃಶ್ಯಗಳಲ್ಲಿ ಗುಡ್‌. ತಂದೆ-ತಾಯಿಯ ಜತೆಗೆ ಪೋನ್‌ನಲ್ಲಿ ಮಾತಾಡುವ ರಾಧಿಕಾ ಮುದ್ದಾಗಿ ಕಾಣಿಸುತ್ತಾರೆ. ನಟನೆಯ ಬಗ್ಗೆ ಇದೇ ಮಾತು ಹೇಳುವಂತಿಲ್ಲ. ದೊಡ್ಡಣ್ಣ, ವಿನಯಾ ಪ್ರಕಾಶ್‌ ಅಭಿನಯ ಸಖತ್ತಾಗಿದೆ. ದಾಮಿನಿ ಪಾತ್ರ ಏನು ಅಂಥ ಕೊನೆಯವರೆಗೂ ಗೊತ್ತಾಗುವುದಿಲ್ಲ.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada