»   » ಕೊನೆಗೂ ನನಸಾ(ಗ)ದ ಕನಸು

ಕೊನೆಗೂ ನನಸಾ(ಗ)ದ ಕನಸು

Subscribe to Filmibeat Kannada
  • ವಿನಾಯಕ ಭಟ್‌
‘ಬಾಲ್ಯದ ಕನಸು ಕಂಡೆ; ಅಪ್ಪ ಹಾಳ್‌ ಮಾಡ್ಬುಟ, ದುಡಿಯೋ ಕನಸು ಕಂಡೆ; ಸಮಾಜ ಹಾಳ್‌ ಮಾಡ್ತು, ಪ್ರೀತಿಯ ಕನಸು ಕಂಡೆ; ನೀನು ಹಾಳ್‌ ಮಾಡ್ಬುಟೆ. ಕನಸುಗಳನ್ನು ಕಾಣೋದೇ ತಪ್ಪು’, ಕ್ಲೈಮ್ಯಾಕ್ಸ್‌ನಲ್ಲಿ ನಾಯಕಿಯನ್ನುದ್ದೇಶಿಸಿ ನಾಯಕ ಹೇಳುವ ಈ ಸಂಭಾಷಣೆ ಚಿತ್ರಕ್ಕೆ ಮುನ್ನುಡಿಯೂ ಬೆನ್ನುಡಿಯೂ ಏಕಕಾಲಕ್ಕೆ ಆಗುವುದರೊಂದಿಗೆ ಚಿತ್ರ ಮುಗಿಯುತ್ತದೆ. ಇದು ಇಡೀ ಚಿತ್ರದ ಸಾರವನ್ನು ಒಂದೇ ಉಸಿರಿನಲ್ಲಿ ಹೇಳುತ್ತದೆ ಕೂಡ. ನಾಯಕ ಪಾತ್ರದ ಕನಸು ನನಸಾಗದಿದ್ದರೂ, ನಾಯಕ ನಟ ಸುಶೀಲ್‌ ಮೊಕಾಶಿಯ ಹೀರೋ ಕಂ ಡೈರಕ್ಟರ್‌ ಕನಸು ಒಂದೇ ಸಲಕ್ಕೆ ನನಸಾಗಿದ್ದು ಈ ‘ಕನಸು’ ಚಿತ್ರದಿಂದ; ನಿರ್ಮಾಪಕ ಆನಂದ್‌ ಕುಲಕರ್ಣಿಯವರ ಕೃಪೆಯಿಂದ.

ತನ್ನ ಚರ್ಯೆ ಒರಟು ಪಾತ್ರಕ್ಕೆ ಮಾತ್ರ ಲಾಯಕ್ಕು ಎಂದು ನಿರ್ಧರಿಸಿದಂತಿರುವ ಮೊಕಾಶಿ, ಚಿತ್ರದುದ್ದಕ್ಕೂ ನಾಯಕನಲ್ಲಿ ಬಿರುಸಿನ ಗುಣ ಆವಾಹಿಸಿದ್ದಾರೆ. ಸ್ಲಂನಲ್ಲಿ ಹುಟ್ಟಿ ಬೆಳೆದು ಸಮಾಜದ ತಿರಸ್ಕಾರಕ್ಕೊಳಗಾದ ಹುಡುಗ ರೌಡಿಯೇ ಆಗುತ್ತಾನೆ ಎಂಬ ತರ್ಕದ ಮೇಲೆ ಇದು ನಿಂತಿದೆ. ಚಿತ್ರ ಶುರುವಾಗುವುದು ನಾಯಕನ ಬಾಲ್ಯದಿಂದ. ಬಸುರಿ ಹೆಂಡತಿಯನ್ನು ಸಾಯಿಸಿದ ನಾಯಕನ ತಂದೆ ನಾದಿನಿಯನ್ನೇ ಬಲಾತ್ಕರಿಸುವ ಯತ್ನ ಮಾಡುತ್ತಾನೆ. ಆಗ ಉರುಳುತ್ತದೆ ಮೊದಲ ಹೆಣ; ನಾಯಕ ಬಾಲಾಪರಾಧಿಯಾಗುತ್ತಾನೆ. ಒಮ್ಮೆ ಕ್ರಿಕೆಟ್‌ ಕೋಚ್‌ ಒಬ್ಬ ತನ್ನ ಮಗನನ್ನು ಬೌಲ್ಡ್‌ ಮಾಡುವವರು ಇಲ್ಲವೆಂದು ಸವಾಲು ಹಾಕಿದಾಗ, ಬಾಲನಾಯಕ ಬೌಲ್ಡ್‌ ಮಾಡುತ್ತಾನೆ. ಆದರೆ ‘ಭಿಕಾರಿಗಳೆಲ್ಲ ಬಂದ್ರೆ ಹಿಂಗೆ ಆಗೋದು’ ಎಂದಿದ್ದಕ್ಕೆ ಅವನ ಕಾರಿನ ಸೀಟ್‌ ಮೇಲೆ ಬಿದ್ದಿದ್ದ ಪಿಸ್ತೂಲ್‌ನಿಂದ ಆತನನ್ನೆ ಕೊಲ್ಲುತ್ತಾನೆ. ಹೀಗೆ ಬೆಳೆದು ದೊಡ್ಡವನಾದವ ರೌಡಿಯಾಗದೇ ಇನ್ನೇನಾಗುತ್ತಾನೆ? ಇಡೀ ಚಿತ್ರ ಇದೇ ಅಂಶದ ಮೇಲೆ ನಿಂತಿದೆ.

ಚಿತ್ರ ಆರೇಳು ಹೊಡೆದಾಟ, ಐದಾರು ಹಾಡು-ಬ್ರೇಕ್‌, ಡಾಬಾ, ಶೇಕ್‌, ರೊಮ್ಯಾಂಟಿಕ್‌-ವೈವಿಧ್ಯಗಳೊಂದಿಗೆ ಮೂಡಿಬಂದಿದೆ. ‘ಯು-ಎ’ ಸರ್ಟಿಫಿಕೇಟ್‌ ಸಿಕ್ಕಿದೆ ಅಂತ ರಸಗವಳ ನಿರೀಕ್ಷಿಸಿದವರಿಗೆ ಇಲ್ಲಿ ಸಂಜನಾ ಇದ್ದಾಳೆ, ಆದರೆ ಆಕೆ ಎ ಸರ್ಟಿಫಿಕೇಟ್‌ ಕೊಡುವಂಥದ್ದೇನೂ ಮಾಡಿಲ್ಲ.

ಚಿತ್ರದುದ್ದಕ್ಕೂ ತಲೆಗಳು ಉರುಳುತ್ತವೆ, ಕೈಗಳು ಕರಕರ ತಿರುಚುತ್ತವೆ, ನಾಯಕ ಮಸಮಸ ಹಲ್ಲು ಮಸೆದರೆ ಯಾರೋ ಗಂಡ ತನ್ನ ಹೆಂಡತಿಗೆ ಹೊಡೆಯುವುದು ಬಿಟ್ಟು ಆಕೆಯ ಕಾಲಿಗೇ ಬೀಳುತ್ತಾನೆ. ಮಾತೆತ್ತಿದರೆ ಪಿಸ್ತೂಲ್‌, ಮಚ್ಚು, ಚೈನು ಝಳಪಿಸುತ್ತವೆ. ಐಎಎಸ್‌, ಐಪಿಎಸ್‌, ಮಡಿರೌಡಿ, ವಿರೋಧಿ ಪಡೆಯ ರೌಡಿ ಎಲ್ಲರೂ ಒಂದೇ ರೀತಿ ವರ್ತಿಸುತ್ತಾರೆಂಬುದೇ ಚಿತ್ರದ ವಿಸ್ಮಯ.

ಆ ಮಟ್ಟಿಗೆ ನಾಯಕಿಯ ಭೇಟಿಯಾದ ಮೇಲೆ ನಾಯಕ ಸೌಮ್ಯ. ಕೋಪಿಸಿಕೊಳ್ಳುವಲ್ಲೂ-ಲವ್‌ ಮಾಡುವಲ್ಲೂ ಸ್ಥಿತಪ್ರಜ್ಞತೆ ವ್ಯಕ್ತಪಡಿಸುವ ಸುಶೀಲ್‌ ಮೊಕಾಶಿ ಇತರರಷ್ಟು ಆರ್ಭಟಿಸುವುದಿಲ್ಲ ಎಂಬುದೇ ಸಮಾಧಾನ. ಐಎಎಸ್‌-ಐಪಿಎಸ್‌ ಅಧಿಕಾರಿಗಳಾಗಿರುವ ಅಣ್ಣ-ತಮ್ಮ(ನಾಯಕಿಯ ಭಾವಂದಿರು) ಹೆಂಡತಿಯನ್ನೇ ಕೊಂದು ನಾಯಕಿಯನ್ನು ಉಡಾಯಿಸುವ ಸಂಚು ಮಾಡುವಷ್ಟು ಧೂರ್ತರಾಗಿರುವುದು ಸಮಂಜಸ ಎಂದರೆ ನಿಮ್ಮಾಣೆ. ಚಿತ್ರದ ಕತೆಗೇ ಸಂಬಂಧವಿಲ್ಲದ ಹಾಸ್ಯ ದೃಶ್ಯಗಳನ್ನು ತುರುಕಿದ್ದೇಕೋ ಸುಶೀಲ್‌ ಉತ್ತರಿಸಬಹುದು. ಹಾಗೆಯೇ ಹಾಸ್ಯದೃಶ್ಯಗಳಲ್ಲಿ ಯಾರಾದರೂ ನಕ್ಕರೆ ದಂಡ ವಿಧಿಸಲಾಗುವುದು ಎಂಬ ಬೋರ್ಡ್‌ ಹಾಕಿಟ್ಟಿರಬಹುದು, ಗಮನಿಸಿ! ಸಂಜನಾ ತನ್ನ ಆಳ್ತನದಷ್ಟೆತ್ತರದ ಅಭಿನಯ ನೀಡಲು ಇನ್ನೂ ಹಲವಾರು ಚಿತ್ರಗಳೇ ಬೇಕಾಗಬಹುದು.

(ಸ್ನೇಹಸೇತು: ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada