»   » ‘ಲವ್‌ ಸ್ಟೋರಿ’ : ಹೈಟೆಕ್‌ಯುಗದ ರೊಮ್ಯಾಂಟಿಕ್‌ ಕಾವ್ಯ

‘ಲವ್‌ ಸ್ಟೋರಿ’ : ಹೈಟೆಕ್‌ಯುಗದ ರೊಮ್ಯಾಂಟಿಕ್‌ ಕಾವ್ಯ

Posted By:
Subscribe to Filmibeat Kannada
  • ದೇವಶೆಟ್ಟಿ ಮಹೇಶ್‌
ಆತ ಒಂದು ಜಾತಿ, ಆಕೆ ಮತ್ತೊಂದು. ಇಬ್ಬರೂ ಪ್ರೇಮಿಸುತ್ತಾರೆ. ಇಬ್ಬರ ಕುಟುಂಬ ಅದಕ್ಕೆ ಅಡ್ಡಿಯಾಗುತ್ತದೆ. ಸಾಮಾನ್ಯವಾಗಿ ಹೀಗಾದಾಗ ಹುಡುಗ-ಹುಡುಗಿ ಓಡಿ ಹೋಗುತ್ತಾರೆ. ಅಥವಾ ಸಾಯುತ್ತಾರೆ. ಆದರೆ ಇಲ್ಲಿ ಹಾಗಾಗುವುದಿಲ್ಲ. ಆಗುವುದು ಅಗ್ರಿಮೆಂಟ್‌. ಇಬ್ಬರ ಪ್ರೀತಿ ಪಕ್ಕಾ ಅನ್ನೋದನ್ನು ನಿಕ್ಕಿ ಮಾಡುತ್ತದೆ ಬಾಂಡ್‌ ಪೇಪರ್‌.

ಇಬ್ಬರೂ ಒಂದು ವರ್ಷ ನೋಡದೆ, ಮಾತಾಡದೆ ದೂರ ಇರಬೇಕು. ಆಮೇಲೂ ಪರಸ್ಪರ ನಿಯತ್ತಾಗಿದ್ದರೆ ಮದುವೆ ಮಾಡಿಸಬೇಕು. ಇಂಥ ಕತೆ ಕನ್ನಡಕ್ಕೆ ಹೊಸದು. ಆದರೆ ಇದು ತೆಲುಗು ಮತ್ತು ಹಿಂದಿಗೆ ಇಪ್ಪತ್ತು ವರ್ಷಗಳಷ್ಟು ಹಳೆಯದು. ಯಾಕೆಂದರೆ ಈ‘ಲವ್‌ ಸ್ಟೋರಿ’ ರಿಮೇಕು. ಕೆ.ಬಾಲಚಂದರ್‌ ನಿರ್ದೇಶನದ ‘ಮರೋ ಚರಿತ್ರ’ ಕನ್ನಡದಲ್ಲಿ ‘ಲವ್‌ ಸ್ಟೋರಿ’ ಆಗಿದೆ. ಅಚ್ಚರಿ ಅಂದರೆ ಈಗಲೂ ಈ ಕತೆ ಅಷ್ಟೇ ರಿಲೆವೆಂಟ್‌. ಸಂತೋಷವೆಂದರೆ ಅದನ್ನು ಅಷ್ಟೇ ನೀಟಾಗಿ ಕನ್ನಡಕ್ಕೆ ತರಲಾಗಿದೆ.

ಸಾಮಾನ್ಯ ಅನ್ನಿಸುವ ಕತೆಯನ್ನು ಅಸಾಮಾನ್ಯವಾಗುವಂತೆ ಮಾಡಿದ್ದು ಚಿತ್ರಕತೆ. ಸಣ್ಣ ಸಣ್ಣ ವಿವರ ಮನೋಜ್ಞವಾಗಿ ರೂಪಿಸಿದ, ಮುಗ್ಧವಾಗಿ ಚಿತ್ರಿಸಿದ ರೀತಿಯೇ ಆಪ್ತವಾಗಿಸುತ್ತದೆ. ಪ್ರೇಮಿಗಳ ವಿರಹದ ಚಡಪಡಿಕೆ, ಅವರ ಜಗಳ, ಮುನಿಸು, ಕೋಪ... ನಿಮ್ಮ ನಿಮ್ಮ ಲವ್‌ಸ್ಟೋರಿ ನೆನಪಿಗೆ ತಂದರೆ ಅಚ್ಚರಿ ಇಲ್ಲ. ಒಂದು ಹಿಟ್‌ ಹಾಡಿಗೆ ಅದೇ ಟ್ಯೂನ್‌ ಉಳಿಸಲಾಗಿದೆ. ಉಳಿದುದೆಲ್ಲ ಫ್ರೆಶ್‌ ಫ್ರೆಶ್‌. ಅವು ಮೂಲ ಚಿತ್ರದ ಹಾಡುಗಳನ್ನು ಮರೆಸುವುದು ಗೀತೆ ರಚನೆಕಾರ, ಸಂಗೀತ ನಿರ್ದೇಶಕನಿಗೆ ಸಲ್ಲುವ ಕ್ರೆಡಿಟ್ಟು.

‘ಹಗಲುಂಟು ಸೂರ್ಯನಿಗೆ ಇರುಳುಂಟು ಚಂದ್ರನಿಗೆ’ ಹಾಡಿನ ಸಾಹಿತ್ಯ ಬಹುಕಾಲ ಗುನು ಗುನು ಗುನು. ಅದಕ್ಕೆ ಸಾಥ್‌ ನೀಡಿದ್ದು ಕ್ಯಾಮೆರಾ ಮೆನ್‌ನ ಕಲಾ ಪ್ರೀತಿ. ಸಮುದ್ರದ ತೀರವಾಗಲಿ, ಪಾಳು ಮನೆಯ ಮೆಟ್ಟಿಲಾಗಲಿ, ಹುಟ್ಟುವ ಸೂರ್ಯನಿರಲಿ, ಹಾರುವ ಹಕ್ಕಿ ಇರಲಿ... ಎಲ್ಲವೂ ಆತನ ಕಣ್ಣಿನಲ್ಲಿ ಕಾಮನಬಿಲ್ಲು.

ಇನ್ನು ಮಯೂರ್‌ಪಟೇಲ್‌, ಕಮಲ್‌ಹಾಸನ್‌ನನ್ನು ಮರೆಸುವಂತೆ ತನ್ನದೇ ಆದ ರೀತಿಯಲ್ಲಿ ಸರಾಗವಾಗಿ ಪಾತ್ರಕ್ಕೆ ಜೀವ ತುಂಬುತ್ತಾ ಹೋಗುತ್ತಾನೆ. ಒಟ್ಟಿನಲ್ಲಿ ಮಯೂರ್‌, ಮಯೂರ್‌ ಆಗಿಯೇ ಉಳಿದಿದ್ದಾನೆ, ಪ್ಲಸ್‌ ಗೆದ್ದಿದ್ದಾನೆ. ಇದೇ ಮಾತನ್ನು ನಾವು ನಾಯಕಿ ತನುರಾಯ್‌ಗೆ ಹೇಳಿದರೆ ತಲೆ ಸಾವಿರ ಹೋಳಾದೀತು. ಒಂದೊಳ್ಳೆ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ಕೆಡಿಸಿದ್ದಾಳೆ. ತುಟಿ ಚಲನೆ ಮತ್ತು ಬಾಡಿ ಲ್ಯಾಂಗ್ವೇಜ್‌ಗೆ ಎಂಜಿ ರೋಡ್‌ ಮತ್ತು ಕಲಾಸಿಪಾಳ್ಯಕ್ಕಿರುವಷ್ಟು ವ್ಯತ್ಯಾಸವಿದೆ. ಅಳುವುದಕ್ಕೆ ಮಾತ್ರವಲ್ಲ ನಗುವುದಕ್ಕೂ ಈಯಮ್ಮ ಗ್ಲಿಸರಿನ್‌ ಬೇಕಂದ್ರೆ ಏನ್ರೀ ಮಾಡೋದು?

ಅಚ್ಚರಿ ಮೂಡಿಸುವುದು ಎರಡನೇ ನಾಯಕಿ ವಿಂಧ್ಯಾ. ಹೀಗೆ ಬಂದು ಹಾಗೆ ಹೋಗುವ ಹುಡುಗಿ ತನ್ನ ಮೌನ ಮತ್ತು ಅರಳು ಕಣ್ಣುಗಳಿಂದ ಆಕರ್ಷಿ ಸುತ್ತಾಳೆ.

ಪ್ರಮೀಳಾ ಜೋಷಾಯ್‌ ಗಯ್ಯಾಳಿ ಅಮ್ಮನಾಗಿ ಅಪ್ಪಟ ಗಯ್ಯಾಳಿಯೇ. ತುಂಬ ದಿನದ ನಂತರ ಅವರು ತಮ್ಮೊಳಗಿನ ಕಲಾವಿದೆಗೆ ಫುಲ್‌ಮೀಲ್ಸ್‌ ಬಡಿಸಿದ್ದಾರೆ. ಆದರೆ ಸಂಭಾಷಣೆಯನ್ನು ನೇರವಾಗಿ ಕಾಪಿ ಮಾಡಿದುದರ ಫಲವೋ ಏನೋ... ಸೀರಿಯಸ್‌ ದೃಶ್ಯಗಳು ಕೆಲವೊಮ್ಮೆ ಕಾಮಿಡಿ ಟೈಂ ಆಗುತ್ತದೆ. ಅಳು ಬರಬೇಕಾದ ಜಾಗದಲ್ಲಿ ತುಟಿಯ ಮೇಲೆ ತುಂಟ ಕಿರುನಗೆ... ಸಂಕಲನವೂ ಸರಕ್‌ ಸರಕ್‌ ಅಂತ ಮೂತಿ ತಿರುವಿದೆ.

ಅದೆಲ್ಲ ಬದಿಗಿಟ್ಟು ನೋಡಿದರೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ ‘ಲವ್‌ಸ್ಟೋರಿ. ಕಾಸು ಕೊಟ್ಟಿದ್ದಕ್ಕೆ ಇಷ್ಟು ಸಾಕಲ್ವೇನ್ರಿ?

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada