»   » ದ್ವೀಪ : ಮುಳುಗಡೆಯ ಆತಂಕದಲ್ಲಿ ಅರಳುವ ಬದುಕು

ದ್ವೀಪ : ಮುಳುಗಡೆಯ ಆತಂಕದಲ್ಲಿ ಅರಳುವ ಬದುಕು

Posted By:
Subscribe to Filmibeat Kannada

ನಟ್ಟಿರುಳಲ್ಲಿ ನೆಲ ಮುಗಿಲುಗಳನ್ನು ಏಕವಾಗಿಸಿ ಧೋ ಎಂದು ಸುರಿಯುವ ರಾಕ್ಷಸ ಮಳೆ. ಕಾಡ ನಡುವಿನ ಮನೆಯ ಸಮೀಪದಲ್ಲೇ ಮರುದನಿಯಾಗುವ ಹುಲಿಯ ಘರ್ಜನೆ. ಕುಸಿದು ಬಿದ್ದ ಕೊಟ್ಟಿಗೆಯಲ್ಲಿ ಸಿಕ್ಕು ಅರಚಿಕೊಳ್ಳುವ ಕರು. ಭರವಸೆಗಳೆಲ್ಲ ಮಳೆಪಾಲಾಗಿ, ದುಪ್ಪಟಿಯಾಳಗೆ ಮುದುರಿ ಮಲಗಿದ ಗಂಡ. ಇಂಥ ಹತಾಶ ಪರಿಸ್ಥಿತಿಯಲ್ಲೂ ಬದುಕನ್ನು ಉಳಿಸಿಕೊಳ್ಳಲು ನಾಗಿ ಒದ್ದಾಡುತ್ತಾಳೆ.

ಕೊನೆಗೆ ಗೆಲ್ಲುವುದು ನಾಗಿ. ಹರಿಯುವ ಬೆಳಗಿನ ಬೆಳಕಿನೊಂದಿಗೆ ತುಂಬಿದ ಅಣೆಕಟ್ಟಿನಿಂದ ನೀರು ಹೊರಗೆ ಹರಿಯುತ್ತದೆ. ದ್ವೀಪ, ದ್ವೀಪದೊಳಗಿನ ನಾಗಿ ಹಾಗೂ ಗಣಪಯ್ಯನ ಬದುಕು ಮುಳುಗಡೆಯ ಅಂಜಿಕೆಯಿಂದ ಬಚಾವಾಗುತ್ತದೆ. ಮುಳುಗಡೆಯ ಭಯ ನಿವಾರಣೆಯಾದದ್ದೇ ತಡ, ಆವರೆಗೆ ಜೀವಚ್ಛವದಂಥೆ ಬಿದ್ದುಕೊಂಡಿದ್ದ ಗಣಪಯ್ಯ ಮತ್ತೆ ಜೀವನ್ಮುಖಿಯಾಗುತ್ತಾನೆ. ಭತ್ತದ ಸಸಿ, ತೋಟ ನೆನಪಾಗುತ್ತದೆ. ಗಣಪಯ್ಯನ ಪಾಲಿಗೆ ಇದೆಲ್ಲಾ ತಾನು ನಂಬಿದ ದೈವದ ಕೃಪೆ. ಆದರೆ, ನಾಗಿಯ ಪಾಲಿಗೆ ತನ್ನ ಹೋರಾಟದ ಫಲ. ನಾಗಿಯ ಹೋರಾಟವನ್ನು ಸಾರಾ ಸಗಟಾಗಿ ನಿರಾಕರಿಸುವ ಗಣಪಯ್ಯ, ನೀನು ನಿಮಿತ್ತ ಮಾತ್ರ ಎನ್ನುತ್ತಾನೆ. ಗೆದ್ದ ನಾಗಿ ಮತ್ತೆ ಸೋಲುತ್ತಾಳೆ.

*

‘ದ್ವೀಪ’ ಗಿರೀಶ್‌ ಕಾಸರವಳ್ಳಿ ಚಿತ್ರ. ಆದರೆ, ಈ ಚಿತ್ರದಲ್ಲಿ ನಿಮಗೆ ಕಾಣಿಸುವುದು ಬಿರುಮಳೆಯಷ್ಟೇ ಚುರುಕಾದ ಕಾಸರವಳ್ಳಿ. ತಮ್ಮ ಹಳೆಯ ಚಿತ್ರಗಳಂತೆ ಏಕತಾನದ ದೃಶ್ಯಗಳಿಂದ ಕಾಸರವಳ್ಳಿ ಬೋರು ಹೊಡೆಸುವುದಿಲ್ಲ. ಹೆಚ್ಚೂಕಡಿಮೆ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಮಳೆ ಕಾಣಿಸಿಕೊಂಡಿದ್ದರೂ, ಬೇಜಾರು ತರಿಸುವುದಿಲ್ಲ. ಮೋಹಕತೆಯಷ್ಟೇ ಅಲ್ಲದೆ ಮಳೆಯ ಕ್ರೂರ ಮುಖವೂ ‘ದ್ವೀಪ’ದಲ್ಲಿ ಅನಾವರಣಗೊಳ್ಳುತ್ತದೆ. ಬಹುಶಃ ಕ್ರೌರ್ಯದ ಮುಖ ಅದ್ಭುತವಾಗಿ ದೃಶ್ಯರೂಪಕ್ಕೆ ಬಂದ ಮೊದಲ ಕನ್ನಡ ಚಿತ್ರವಿದು.

ಛಾಯಾಗ್ರಾಹಕ ಎಚ್‌.ಎಂ.ರಾಮಚಂದ್ರ ಹಾಗೂ ನಾಗಿಯ ಪಾತ್ರದಲ್ಲಿ ಸೌಂದರ್ಯ, ದ್ವೀಪ ಮುಳುಗದಂತೆ ಎತ್ತಿಹಿಡಿಯುವಲ್ಲಿ ಕಾಸರವಳ್ಳಿಗೆ ಹೆಗಲು ನೀಡಿದ್ದಾರೆ. ರಾಮಚಂದ್ರ ಅವರ ಛಾಯಾಗ್ರಹಣಕ್ಕೆ ರಾಷ್ಟ್ರಪ್ರಶಸ್ತಿ ಬಂದುದು ಸಾರ್ಥಕ. ಸೌಂದರ್ಯಾ ಪಾಲಿಗೆ ಜೀವಮಾನ ಪೂರ ನೆನಪಿಡುವಂಥ ಪಾತ್ರ. ಒಂದೆಡೆ ಬದುಕು ಕಮರುತ್ತಿದ್ದರೆ, ಇನ್ನೊಂದೆಡೆ ಕನಸುಗಳನ್ನು ರೂಢಿಸಿಕೊಳ್ಳುವ ಹೆಣ್ಣುಮಗಳ ಪಾತ್ರದಲ್ಲಿ ಸೌಂದರ್ಯಾ ನಟನೆ ಪ್ರಬುದ್ಧವಾದುದು. ಮಾವನ ಶವ ಸಂಸ್ಕಾರದ ಸಂದರ್ಭದಲ್ಲಿ ಬಿಕ್ಕುವ ದುಃಖಿತೆಯಾಗಿ, ಕಾಡ ನಡುವೆ ಹಸುವನ್ನು ಹುಡುಕುವ ಸಂದರ್ಭ ಅನೇಕ ಪುರಾಣ ಸಂದರ್ಭಗಳನ್ನು ನೆನಪಿಸುತ್ತದೆ. ಗಣಪಯ್ಯನ ಪಾತ್ರದಲ್ಲಿ ಅವಿನಾಶ್‌ ಪರಕಾಯ ಪ್ರವೇಶ ಮಾಡಿದ್ದಾರೆ. ವಾಸುದೇವರಾವ್‌ಗೆ ಚೋಮನಂಥದೇ ಇನ್ನೊಂದು ಪಾತ್ರ. ಆದರೆ, ಅವರ ಭಾವಾವೇಗಕ್ಕೆ ಕಾಸರವಳ್ಳಿ ಸಂಯಮದ ಮುದ್ರೆ ಒತ್ತಿರುವುದು ಎದ್ದು ಕಾಣುತ್ತದೆ. ಗಣಪಯ್ಯ ಹಾಗೂ ನಾಗಿಯ ನಡುವೆ ಮನಸ್ತಾಪಕ್ಕೆ ಪಾತ್ರವಾಗುವ ಹುಡುಗಾಟದ ಹುಡುಗ ಕೃಷ್ಣನ ಪಾತ್ರದಲ್ಲಿ ಹರೀಶ್‌ ರಾಜ್‌ ಅಭಿನಯ ಮೆಚ್ಚುಗೆಗೆ ಅರ್ಹ.

ಇತರ ನಿರ್ದೇಶಕರ ಕೈಗೆ ಸಿಕ್ಕಿದ್ದರೆ ಬರೀ ಮುಳುಗಡೆಯ ಕಥೆಯಾಗುವ ಅಪಾಯವಿದ್ದ ‘ದ್ವೀಪ’ ಕಾಸರವಳ್ಳಿ ಒಳನೋಟಗಳಲ್ಲಿ ಮಾಂತ್ರಿಕ ಸ್ಪರ್ಶ ಪಡೆದುಕೊಳ್ಳುತ್ತದೆ. ಬೆಟ್ಟ ಗುಡ್ಡ, ಭಗವತಿ ನದಿ, ಕಾಡು ಎಲ್ಲವನ್ನೂ ತನ್ನದೆಂದು ಬಗೆಯುವ ದುಗ್ಗಜ್ಜ, ಒಡೆತನಕ್ಕೆ ದಾಖಲೆಗಳನ್ನು ಬೇಡುವ ಸರ್ಕಾರದ ನಿಷ್ಠುರತೆ ಸಾಂಸ್ಕೃತಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಜಮೀನು ತೋಟಗಳನ್ನು ಅಳತೆಗೋಲಿನಿಂದ ಸರ್ಕಾರ ಅಳೆಯುತ್ತದೆ. ದುಗ್ಗಜ್ಜನ ಸಂಸಾರಕ್ಕೆ ಅದ್ಯಾವುದೂ ಇಲ್ಲ. ನಂಬಿಕೊಂಡ ದೈವ ಹಾಗೂ ಊರವರ ತುಂಬು ಗೌರವಗಳಿಗೆ ಸರ್ಕಾರ ಯಾವ ರೀತಿಯ ಪರಿಹಾರ ನೀಡುತ್ತದೆ ? ‘ನಿಮ್ಮ ಅಳತೆಪಟ್ಟಿ ಪ್ರಕಾರ ನಾವು ಬದುಕಬೇಕಾ?’ ಎನ್ನುವ ದುಗ್ಗಜ್ಜನ ಪ್ರಶ್ನೆಗೆ ಏನು ಉತ್ತರ ಹೇಳುವುದು.

ನಾಗಿ ಹಾಗೂ ಕೃಷ್ಣರ ಸಂಬಂಧದ ಕುರಿತು ಗುಮಾನಿ ವ್ಯಕ್ತಪಡಿಸುವ ಗಣಪಯ್ಯನ ನಡವಳಿಕೆಯ ಚಿತ್ರಣದಲ್ಲೂ ಕಾಸರವಳ್ಳಿ ತಮ್ಮತನ ಮೆರೆಯುತ್ತಾರೆ. ತನ್ನ ಕಣ್ಣೆದುರೇ ಕೃಷ್ಣ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೂ ಗಣಪಯ್ಯ ನಿರ್ಲಿಪ್ತ. ಜನರೆಲ್ಲಾ ತೊರೆದ ಊರಿನಲ್ಲಿ ನಾಗಿ ಅನುಭವಿಸುವ ಒಂಟಿತನ ಧ್ವನಿಪೂರ್ಣವಾಗಿದೆ. ಆಕೆಯ ಕನಸುಗಳಿಗೆ ಸಂಗಾತಿಗಳಿಲ್ಲ. ಗಂಡನ ಸಾಂಗತ್ಯವಿದ್ದರೂ ಸಂತಾನವಿಲ್ಲ. ಆಕೆಯ ಬದುಕು ದ್ವೀಪದೊಳಗಿನ ದ್ವೀಪ.

ಜಯಂತ ಕಾಯ್ಕಿಣಿ, ಕಾಸರವಳ್ಳಿ ಹಾಗೂ ಶರ್ಮರ ಸಂಭಾಷಣೆ ಮಲೆನಾಡಿನ ಪರಿಸರದಿಂದ ಆಯ್ದು ತಂದಂತಿದೆ. ಐಸಾಕ್‌ ಥಾಮಸ್‌ ಸಂಗೀತ ಸಿನಿಮಾಕ್ಕೆ ಪೂರಕ. ಇಡೀ ಚಿತ್ರದಲ್ಲಿ ಒಂದೂ ಗೀತೆಯಿಲ್ಲ . ಮಳೆಯಿರುವಾಗ ಹಾಡಿಗೆ ಅರ್ಥವಿಲ್ಲ !

ಇಷ್ಟೆಲ್ಲಾ ಆಗಿಯೂ ‘ದ್ವೀಪ’ ಕೆಲವು ತಕರಾರುಗಳನ್ನೂ ಉಳಿಸುತ್ತದೆ. ದುಗ್ಗಜ್ಜನ ಕುಟುಂಬದ ಬಗೆಗಿನ ಊರವರ ಕಾಷ್ಠ ನಿರ್ಲಿಪ್ತತೆ, ನೀರ ನಡುವೆ ಕುಟುಂಬವೊಂದು ಮುಳುಗಡೆಯಾಗುತ್ತಿರುವ ಸಂದರ್ಭದಲ್ಲೂ - ಇದು ತನಗೆ ಸಂಬಂಧವಿಲ್ಲದಂತೆ ಗೈರುಹಾಜರಾಗುವ ಅಧಿಕಾರಷಾಹಿಯ ವರ್ತನೆಗೆ ಹೆಚ್ಚಿನ ಸಮರ್ಥನೆಗಳಿಲ್ಲ . ಅದೇರೀತಿ ಹೆಚ್ಚಿನ ಪರಿಹಾರಕ್ಕಾಗಿ ಚೌಕಾಸಿ ಮಾಡುವ ದುಗ್ಗಜ್ಜ ಹಾಗೂ ಗಣಪಯ್ಯ ಕೆಲವೊಮ್ಮೆ ಸ್ವಾರ್ಥಿಯಾಗಿಯೂ ಕಾಣಿಸುತ್ತಾರೆ. ಆದರೆ, ಸಿನಿಮಾ ನೋಡಿದ ನಂತರ ಇದಾವುದೂ ನೆನಪಲ್ಲಿ ಉಳಿಯುವುದಿಲ್ಲ. ಅಂತಿಮವಾಗಿ ನೆನಪಲ್ಲುಳಿಯುವುದು- ನಾಗಿ, ಮಳೆ ಮತ್ತು ಮಳೆ.

ಸಿನಿಮಾ ನೋಡಿದ ನಂತರ ಥಿಯೇಟರ್‌ನಿಂದ ಹೊರಬಂದಾಗ, ಬಯಲಲ್ಲಿ ಮಳೆಯ ಪಸೆಯನ್ನು ಕಣ್ಣುಗಳು ಹುಡುಕುತ್ತವೆ. ಅದು ‘ದ್ವೀಪ’ದ ಸಾರ್ಥಕತೆ.

ನಾವು ‘ದ್ವೀಪ’ವನ್ನು ನೋಡಿದ್ದು ಬೆಂಗಳೂರಿನ ಪುಟ್ಟಣ್ಣ ಚಿತ್ರಮಂದಿರದಲ್ಲಿ. ನಿಮ್ಮೂರಿನ ತನಕ ಪ್ರಿಂಟ್‌ ಬಂದರೆ ತಪ್ಪದೆ ನೋಡಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada