twitter
    For Quick Alerts
    ALLOW NOTIFICATIONS  
    For Daily Alerts

    ಮಾಯವಾಗಿದೆ ಪ್ರೀತಂ ಗುಬ್ಬಿ ಮ್ಯಾಜಿಕ್ ಸ್ಪರ್ಶ

    By Super
    |

    Suhasi and Kiran in Haage Summane
    ಮುಂಗಾರು ಮಳೆಗೆ ಚಿತ್ರಕಥೆಗೆ ಮಾಂತ್ರಿಕ ಸ್ಪರ್ಶ ನೀಡಿದ್ದ ಪ್ರೀತಂ ಗುಬ್ಬಿ ನಿರ್ದೇಶಿಕ ಪ್ರಥಮ ಚಿತ್ರ 'ಹಾಗೆ ಸುಮ್ಮನೆ 'ಚಿತ್ರ ಕೆಲವರಿಗೆ ಇಷ್ಟವಾಗಿದ್ದರೆ, ವಿಪರೀತ ನಿರೀಕ್ಷೆ ಇಟ್ಟುಕೊಂಡು ಬಂದಿದ್ದ ಹಲವರಿಗೆ ಕಷ್ಟವಾಗುತ್ತಿದೆ. ಮುಂಗಾರು ಗುಂಗಿನಿಂದ ಪ್ರೀತಂ ಹೊರಬಂದಿಲ್ಲ. ತೀರಾ ಹೊಸತನ್ನು ನೀಡಲು ಹೋಗಿ ಮತ್ತೆ ಹಳತನ್ನೇ ಉಣಬಡಿಸಿದ್ದಾರೆ ಎನ್ನುವುದು ಸಿನಿ ಪಂಡಿತರ ಅಭಿಪ್ರಾಯ. ಎಂದಿನಂತೆ ಹೃದಯಕ್ಕೆ ಮುದ ನೀಡುವ ಜಯಂತ್ ಕಾಯ್ಕಿಣಿ ಹಾಡುಗಳು ಚಿತ್ರ ಮಾಯವಾಗದಂತೆ ಹಾಗೆ ಸುಮ್ಮನೆ ತಡೆಹಿಡಿದಿವೆ.

    * ವಿನಾಯಕರಾಮ್ ಕಲಗಾರು

    ಲೈಟ್ ಬಾಯ್ ಒಬ್ಬ ಏಕಾಏಕಿ ಛಾಯಾಗ್ರಾಹಕನ ಪಟ್ಟಕ್ಕೆ ಬಂದರೆ, ಕ್ಲ್ಯಾಪ್ ಬಾಯ್ ಒಬ್ಬ ನಿರ್ದೇಶಕನ ಸ್ಥಾನ ಅಲಂಕರಿಸಿದರೆ, ಸರಿಗಮಪದನಿಸ ಎನ್ನಲೂ ಬರದ ಗಮಾರನೊಬ್ಬ ಸಂಗೀತ ನಿರ್ದೇಶಕನಾದರೆ ಹೇಗಿರುತ್ತೆ? ಅದು ಹಾಗೆ ಸುಮ್ಮನೆ ಚಿತ್ರದಂತಿರುತ್ತೆ ಎಂದರೆ ಯೋಗರಾಜ್ ಭಟ್ ನಕ್ಕಾರು!

    ಹೌದು, ಇದು ಮುಂಗಾರುಮಳೆಯ ಸ್ವಯಂ ಘೋಷಿತ ಮಾಂತ್ರಿಕ ಪ್ರೀತಂ ಗುಬ್ಬಿಯ ಚಿತ್ರ. ವಿಚಿತ್ರ ತಿರುವುಗಳು, ಕರಗಿಸಿಕೊಳ್ಳಲು ಕಷ್ಟವಾಗುವ ಸಂಭಾಷಣೆ, ಮನೋಮೂರ್ತಿ ಎಂಬ ಗೀತ ಪಂಡಿತನ ಅದೇ ರಾಗ, ಅದೇ ರೋಗದಂತಿರುವ ಸಂಗೀತ, ಚಳಿಗೆ ಮುದುರಿಕೊಂಡಿರುವಂತೆ ಇರುವ ಚಿತ್ರಕತೆಯ ಸರಮಾಲೆಯೇ ಹಾಗೆ ಸುಮ್ಮನೆ ಎಂಬ ದೃಶ್ಯಕಾವ್ಯ!

    ಒಂದು ಕತೆ ಹೆಣೆದಾಗ ಅದಕ್ಕೆ ಪೂರಕವಾದ ಅಂಶಗಳನ್ನು ಸೇರಿಸಿಕೊಂಡು, ನಿದಿರೆ ಬಾರದಂತೆ ನಿರೂಪಿಸುವುದು ಒಬ್ಬ ನಿರ್ದೇಶಕನ ಜವಾಬ್ದಾರಿ ಹಾಗೂ ಕರ್ತವ್ಯ. ಅದನ್ನು ಹಾಕಲು ಪ್ರೀತಂಗೆ ತಾಕತ್ತಿಲ್ಲ ಎನ್ನುವುದು ಮುಂಗಾರು ಮಳೆ ಆಣೆಗೂ ಸತ್ಯ. ತಮಾಷೆಗೆ ಹೇಳುವುದಾದರೆ...ಇದು ಹಿಂಗಾರು ಮಳೆ. ಮತ್ತದೇ ಎಳೆ, ಕಳೆಯಿಲ್ಲದ ಕಲೆ!

    ಸಿನಿಮಾ ಎಂದ ಮೇಲೆ ಅಲ್ಲಿ ಕೆಲವು ಮನರಂಜನಾತ್ಮಕ ಮಾಲುಗಳು ಇರಬೇಕಾಗುತ್ತದೆ. ಆದರೆ ಇಲ್ಲಿ ಹಾಗಲ್ಲ. ಕತೆಗೆ ಒಂದು ಚೌಕಟ್ಟೂ ಇಲ್ಲ. ಲಾಜಿಕ್ ಅಂತೂ ಮೊದಲೇ ಇಲ್ಲ. ಎಲ್ಲಾ ಹನಿಗಳ ಲೀಲೆ. ಹುಡುಗಿಗಾಗಿ ಹಪಹಪಿಸುವ ಪ್ರೀತಂ. ಪ್ರೀತಿ ಇದ್ದರೂ ಅದನ್ನು ಎದೆಗೂಡಿನಲ್ಲಿ ಬಚ್ಚಿಡುವ ಖುಷಿ. ಅನಗತ್ಯವಾಗಿ ತೂರಿಕೊಳ್ಳುವ ಅದೇ ಪೂಜಾಗಾಂಧಿ. ಕಾಕತಾಳಿಯದ ಪರಮಾವಧಿ ಎನ್ನುವಂತೆ ಇಲ್ಲಿಯೂ ಅವಳ ಹೆಸರು ನಂದಿನಿ... ! ಹೀಗೆ ಹ್ಯಾಂಗೋವರ್ ಇದ್ದರೆ ಅದು ಓಡುವುದು ಹ್ಯಾಂಗೆ? ನಾಯಕ ಕಿರಣ್ ಮಾಡಲ್ ಮೂಲದಾತ. ಇಲ್ಲಿ ಒಂಥರಾ ಮ್ಯಾಗಿ ನ್ಯೂಡಲ್ ಇದ್ದ ಹಾಗೆ. ಅದನ್ನು ತಿಂದು ಅರಗಿಸಿಕೊಳ್ಳಲು ನಿಮಗೆ ತಾಕತ್ತು ಬೇಕು. ಅಳುವಾಗ, ನಗುವಾಗ, ವಿಧಿ ಮುಳುವಾದಾಗ ಪರಿತಪಿಸುವಾಗ, ಕುಡಿದು ತಡಕಾಡುವಾಗ, ನಾಯಕಿ ನಗು ಬೀರಿದಾಗ... ಎಲ್ಲಾ ಕಡೆ ಒಂದೇ ಥರ ಇರುತ್ತಾನೆ. ಆತ ಆಡಿದ ಮಾತುಗಳು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಹಚ್ಚಿದವರಿಗೆ ಪ್ರೀತಂ ಗುಬ್ಬಿ ಪ್ರಶಸ್ತಿ ಕೊಡಲಾಗುವುದಂತೆ!

    ನಾಯಕಿ ಸುಹಾಸಿ ಬಣ್ಣ ಮೆತ್ತಿಕೊಂಡ ಗ್ಲಾಮರ್ ಗೊಂಬೆ. ಮಾತು-ಅಭಿನಯ-ಭಾವನೆಗಳಿಗೆ ಅಲ್ಲಿ ಜಾಗವಿಲ್ಲ. ಶರತ್ ಬಾಬು ಕುಡಿದ ಅಮಲಿನಲ್ಲಿ ಮಾತನಾಡುವುದು ಅವರ ಪ್ರತಿಭೆಗೆ ಹಿಡಿದ ಕನ್ನಡಿ. ಚಂದ್ರಶೇಖರ್ ನಟನೆ ಎಡಕಲ್ಲು ಗುಡ್ಡದ ಮೇಲೆ ಪಾಳುಬಿದ್ದ ಕಲ್ಲಿನಂತಿದೆ. ಕೆ.ಎಸ್.ಎಲ್. ಸ್ವಾಮಿಯವರ ತಾತನ ಪಾತ್ರ ತಳ್ಳಿಹಾಕುವಂತಿಲ್ಲ. ಪವನ್ ಕಾಮಿಡಿ ಅರ್ಧಕ್ಕೆ ಮಾಯವಾಗುತ್ತದೆ. ಪುಟ್ಟ ಮಗುವೊಂದು ಅರ್ಧದ ನಂತರ ಬಂದು ಗಮನ ಸೆಳೆಯುತ್ತದೆ.

    ಮನೋಮೂರ್ತಿ ಬತ್ತಳಿಕೆಯಲ್ಲಿದ್ದ ಎಲ್ಲಾ ರಾಗಾಸ್ತ್ರಗಳೂ ಖಾಲಿಯಾಗಿವೆ. ಹಿಂದೆ ಬಳಸಿದ ಅಸ್ತ್ರವನ್ನು ಇಲ್ಲಿ ಇನ್ನೊಂದು ರೂಪದಲ್ಲಿ ಬಳಸಿದ್ದಾರೆ ಎನ್ನುವುದು ಹಾಡಿನ ಧಾಟಿ ಕೇಳಿದರೆ ಗೊತ್ತಾಗುತ್ತದೆ. ಒಂದು ಹಾಡಂತೂ ಕಿವಿಗೆ ತಲುಪುವ ಮುನ್ನವೇ ಮಿಲನ'ವಾಗುತ್ತದೆ. ಆದರೂ ಟೈಟಲ್ ಸಾಂಗ್ ಇಷ್ಟವಾಗುತ್ತದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಎಂದಿನಂತೆ ಮನ ಮೋಹಕ. ಕೃಷ್ಣ ಛಾಯಾಗ್ರಹಣ ಮುಂಗಾರುಮಳೆಯ ದೃಶ್ಯಗಳನ್ನು ನೆನಪಿಸುತ್ತವೆ. ಕೆಲವು ಕಡೆ ಸೆಟ್ ಹಾಕಿರುವುದು ಎಡವಟ್ಟಾಗಿದೆ. ನನ್ನ ಸಿನಿಮಾ ಸ್ವಮೇಕ್ , ಘಜನಿ ರಿಮೇಕು. ಹೀಗಾಗಿ ಅದು ಸ್ಪರ್ಧಿಯಲ್ಲ. ನನ್ನ ಸಿನಿಮಾ ನೋಡಲು ಜನರು ಕಾಯುತ್ತಿದ್ದಾರೆ...' ಎಂದು ತೆರೆ ಕಾಣುವ ಮುನ್ನವೇ ಗುಬ್ಬಿ ಕಚ ಪಚ ಎಂದಿತ್ತು. ಅದೇ ಮಾತನ್ನು ಈಗ ಹೇಳಿದರೆ ಪ್ರೇಕ್ಷಕರು ಕ್ಯಾಕರಿಸಿ ನಗುತ್ತಾರೆ...

    (ಸ್ನೇಹಸೇತು : ವಿಜಯ ಕರ್ನಾಟಕ)

    Monday, July 2, 2012, 12:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X