»   » ಪಟ್ರೆ, ಪದ್ಮರ ಲವ್ ಹಾಳು ಕೆಡವಿದ ನಿರ್ದೇಶಕ

ಪಟ್ರೆ, ಪದ್ಮರ ಲವ್ ಹಾಳು ಕೆಡವಿದ ನಿರ್ದೇಶಕ

Subscribe to Filmibeat Kannada

ಅಂಕಲ್ ಲೋಕನಾಥ್, ವೈದ್ಯರೊಬ್ಬರ ಎದುರು ಕುಳಿತು: ಸ್ವಾಮಿ, ನಾನು ಹೇಳುತ್ತಿರುವುದು ನಿಮಗೆ ಬೋರ್ ಆಗುತ್ತಿದೆಯಾ?' ಎನ್ನುತ್ತಾರೆ. ಆಗ ಎದುರಿಗಿದ್ದ ಪ್ರೇಕ್ಷಕರು ಒಮ್ಮೆ ಕಣ್ಣು ಉಜ್ಜಿಕೊಳ್ಳುತ್ತಾರೆ. ಅಂಕಲ್ ಮಾತು ಮುಂದುವರಿಸುತ್ತಾರೆ: ನನ್ನ ಮಗ ಚಿಕ್ಕವಯಸ್ಸಿನಲ್ಲೇ ಪದ್ಮ ಎಂಬ ಹುಡುಗಿಯನ್ನು ತುಂಬಾ ಹಚ್ಚಿಕೊಂಡಿದ್ದ. ಆದರೆ ಅವಳು ಟಿವಿಎಸ್ ಆಕ್ಸಿಡೆಂಟ್‌ನಲ್ಲಿ ತೀರಿಕೊಂಡಳು. ಅಷ್ಟಾಗಿದ್ದೇ ತಡ ನೋಡಿ. ಅವ ಒಂದಿಷ್ಟು ಪಡ್ಡೆ ಹುಡುಗರ ಜತೆ ಸೇರಿ, ಪದ್ಮ ಎಂಬ ಹೆಸರಿನ ಹಿಂದೆ ಬಿದ್ದಿದ್ದಾನೆ.

ಮನೇಗ್ ಬರೊಲ್ಲ. ಉದ್ಯೋಗ ಇಲ್ಲ. ಮಾತೆತ್ತಿದರೆ ಪದ್ಮಾ ಪದ್ಮಾ. ಮರೆವು ಜಾಸ್ತಿ ಅಂತ ಕೈಮೇಲೆ ಹಚ್ಚೆ ಬೇರೆ ಹಾಕಿಸಿ ಕೊಂಡಿದ್ದಾನೆ. ಈಗಾಗಲೇ ಇಬ್ಬರು ಪದ್ಮನ ಹಿಂದೆ ತಿರುಗುತ್ತಿದ್ದಾನೆ. ಬಹುಶಃ ಅದು ಹುಚ್ಚು ಅಂತ ಅನ್ನಿಸುತ್ತೆ. ದಯವಿಟ್ಟು ಒಮ್ಮೆ ಪರೀಕ್ಷೆ ಮಾಡಿ. ಒಳ್ಳೆ ಟ್ರೀಟ್‌ಮೆಂಟ್ ಕೊಡಿ...' ಎಂದು ಬೇಡಿಕೊಳ್ಳುತ್ತಾರೆ. ಆಗ ಎದುರಿಗೆ ಕುಳಿತವರು ಮನಸ್ಸಿನಲ್ಲೇ 'ಅಂಕಲ್, ಡಾಕ್ಟ್ರಿಗಷ್ಟೇ ಅಲ್ಲ, ನಮಗೂ ಬೋರಾಗುತ್ತಿದೆ. ಇದೇನು ಸಿನಿಮಾನಾ, ಅಥವಾ ಹುಚ್ಚರ ಸಂತೇನಾ? ಅಂತ ಕೇಳಿದರೂ ಆಶ್ಚರ್ಯವಿಲ್ಲ.

ಪಟ್ರೆ ಲವ್ಸ್ ಪದ್ಮ ಚಿತ್ರ ಮಾಡುವ ಮುನ್ನ ನಿರ್ದೇಶಕ ಚಂದ್ರಶೇಖರ್ ಶ್ರೀವಾಸ್ತವ್ ಕೆಲವು ಸಿನಿಮಾರಂಗದ ವಾಸ್ತವಗಳನ್ನು ಅರಿಯಬೇಕಿತ್ತು. ತಲೆಯಲ್ಲಿ ಒಂದಷ್ಟು ಇದೆ ಎಂದು ಅದನ್ನು ಪ್ರೇಕ್ಷಕರ ಮೇಲೆ ಪ್ರಯೋಗ ಮಾಡುವಾತ ಶತಮೂರ್ಖ ಹಾಗೂ ದಡ್ಡ. ಈ ಮುಂದಿನದನ್ನು ಓದಿ ನಿಮಗೆ ಆಶ್ಚರ್ಯವಾಗಬಹುದು. ಮೊದಲಬಾರಿಗೆ ನಾಯಕನಾಗಿರುವ ಅಜೀತ್, ಅತ್ಯಂತ ಅಚ್ಚುಕಟ್ಟಾಗಿ ಅಭಿನಯಿಸಿದ್ದಾನೆ.

ನಾಯಕಿಯರಾಗಿ ಮೂರು ಜನ ಶ್ರದ್ಧೆಯಿಂದ ನಟಿಸಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣ ಮಧು ಅಂಬಟ್‌ರನ್ನು ನೆನಪಿಸುತ್ತದೆ. ಅರ್ಜುನ್ ಸಂಗೀತದಲ್ಲಿ ಪ್ರತೀ ಹಾಡುಗಳೂ ಪದೇ ಪದೆ ಕಾಡುತ್ತವೆ. ಆದರೆ ಇಡೀ ಸಿನಿಮಾ ನುಸಿರೋಗ ಪೀಡಿತ ತೆಂಗಿನಮರದಂತಿದೆ. ಕಾರಣ ನಿರ್ದೇಶಕರು. ಪೇಲವ ನಿರೂಪಣೆ, ಜೊಳ್ಳು ಜೊಳ್ಳಾದ ಕತೆ, ಮಾನಸಿಕ ಅಸ್ವಸ್ಥಳಾದ ಹುಡುಗಿಯನ್ನು ಎತ್ತಾಕಿಕೊಂಡು ಹೋಗಿ, ಮದುವೆ ಯಾಗೋದೇ ವಾಸಿ ಎನ್ನುವ ಯೋಗ್ಯ ಸಂದೇಶ' ಸಾರುವ ದ್ಯಶ್ಯಗಳು, ಗ್ರಾಂಥಿಕ ಪ್ಲಸ್ ಮಾರುದ್ದದ ಸಂಭಾಷಣೆ, ಗಟ್ಟಿತನವಿಲ್ಲದ ಪಾತ್ರ ಪೋಷಣೆ.... ಎಲ್ಲವೂ ಸೇರಿ ಪಕ್ವಾನ್ನವಾಗಬೇಕಿದ್ದ ಚಿತ್ರವನ್ನು ಚಿತ್ರಾನ್ನ ಮಾಡಿವೆ.

ತಾನೇ ಅತಿ ಬುದ್ಧಿವಂತ ಎಂದು ತಿಪ್ಪೇ ಸಾರಿಸುವ ನಿರ್ದೇಶಕ ಯಾರಿಗೂ ಕ್ಯಾರೆ ಎನ್ನಲಾರೆ' ಎನ್ನುವ ಮುನ್ನ ಚಿತ್ರ ಹೇಗೆ ಮೂಡಿಬಂದಿದೆ ಎಂದು ಇನ್ನೂ ಹತ್ತು ಬಾರಿ ನೋಡಿಕೊಂಡರೆ, ಅವರೂ ಬಚಾವ್, ಪ್ರೇಕ್ಷಕರೂ ಬಚಾವ್. ಅಂದ ಹಾಗೆ ಸಿನಿಮಾದ ಅಡಿ ಬರಹ ಈ ಚಿತ್ರ ಅವಳೊಬ್ಬಳಿಗಾಗಿ ಮಾತ್ರ' ಎಂದಿದೆ. ಅದು ಈ ಮಟ್ಟಿಗೆ ನಿಜ ಆಗಬಾರದಿತ್ತು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada