»   » ಚಿತ್ರ ವಿಮರ್ಶೆ: ನೀ ಟಾಟಾ ನಾ ಬಿರ್ಲಾ

ಚಿತ್ರ ವಿಮರ್ಶೆ: ನೀ ಟಾಟಾ ನಾ ಬಿರ್ಲಾ

Posted By: Staff
Subscribe to Filmibeat Kannada

ಇವರು ಹ್ಯಾಟ್ರಿಕ್ ನಿರ್ದೇಶಕ' ಎಂದೇ ಬಿರುದಾಂಕಿತರು. ಅದಕ್ಕೆ ಕಾರಣ ಓಳು ಸಾರ್ ಓಳು, ಹನಿಮೂನ್ ಎಕ್ಸ್‌ಪ್ರೆಸ್ ಹಾಗೂ ತೆನಾಲಿರಾಮ ಚಿತ್ರಗಳು. ಮೊದಲು ಹ್ಯಾಟ್ರಿಕ್ ನಿರ್ದೇಶಕ. ಆಮೇಲೆ ನಾಗೇಂದ್ರ ಮಾಗಡಿ. ಆ ಬಿರುದಿಗೆ ಸರಿಸಮನಾದ ನಿರೀಕ್ಷೆಯೊಂದಿಗೆ ನೀವು ಟಾಟಾ ಬಿರ್ಲಾ'ಗೆಂದು ಟಾಕೀಸ್‌ಗೆ ಹೋದರೆ ಆಘಾತವಾಗೋದಂತೂ ಗ್ಯಾರಂಟಿ!

*ವಿನಾಯಕರಾಮ್ ಕಲಗಾರು

ಒಬ್ಬ ಕ್ರೇಜಿ ಸ್ಟಾರ್. ಇನ್ನೊಬ್ಬ ನವರಸ ನಾಯಕ. ಇಬ್ಬರೂ ಸೇರಿ ನೀ ಟಾಟಾ ನಾ ಬಿರ್ಲಾ. ಇವರ ಜತೆ ಮತ್ತಿಬ್ಬರು ಗ್ಲಾಮರ್ ಬೊಂಬೆಗಳು: ಜನ್ನಿಫರ್ ಕೊತ್ವಾಲ್ ಹಾಗೂ ಪೂಜಾ ಗಾಂ. ಅವರಷ್ಟೇ ಅಲ್ಲ. ದೊಡ್ಡಣ್ಣ, ಸತ್ಯಜಿತ್, ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ರೇಖಾದಾಸ್ ... ಅಬ್ಬಬ್ಬಾ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸ್ಟಾರ್‌ಗಳೇ. ಇವರೆಲ್ಲ ಇದ್ದೂ ಸಿನಿಮಾದಲ್ಲಿ ಕತೆ, ಚಿತ್ರಕತೆ, ಹಾಗೂ ನವಿರಾದ ನಿರೂಪಣೆ ಇಲ್ಲದಿದ್ದರೆ ಏನಾಗುತ್ತೆ? ಅದು ಟಾಟಾ ಬಿರ್ಲಾ ಆಗುತ್ತೆ. ಹೌದು.

ಕನಸುಗಾರ'ರಿಗೆ ಇದು ದುಸ್ವಪ್ನವಾಗಿ ಕಾಡುತ್ತದೆ. ಬರೀ ಕಾಲೇಜ್ ಲವ್ ಸ್ಟೋರಿ, ಮಚ್ಚು ಲಾಂಗುಗಳ ಗುಂಗಿನ ಬದಲಾಗಿ ಹಿಂಗೊಂದು ಹೊಸತನ ಸಿಗಬಹುದು. ಅದನ್ನು ರವಿ-ಜಗ್ಗಿ' ಕೊಡಬಹುದು ಎಂದುಕೊಂಡು ಬಂದರೆ, ಮೊದಲನೇ ದೃಶ್ಯದಲ್ಲೇ ಛಡಿ ಏಟು ಬೀಳುತ್ತದೆ. ಆ ಕೀರ್ತಿ'ತೆಲುಗಿನ ರಾವಂತಿ ದೇವ್ ಅವರಿಗಷ್ಟೇ ಸಲ್ಲಬೇಕು. ರೇಂದ್ರ ಗೋಪಾಲ್ ಥರ ಮಿಮಿಕ್ರಿ ಮಾಡ್ತೀನಿ. ಸಿಕ್ಕಾಪಟ್ಟೆ ಮಜಾ ಕೊಡುತ್ತೀನಿ ಅಂತ ಆತ ಅರಚುತ್ತಾನೆ; ಕಿರುಚುತ್ತಾನೆ. ಅಲ್ಲಿಗೆ ಪ್ರಥಮ ಚುಂಬನಂ...'
ಅದು ಹೋದರೆ ಹೋಗಲಿ, ಇನ್ನೇನು ಕ್ರೇಜಿಸ್ಟಾರ್ ಹಾಗೂ ನವರಸ ನಾಯಕನ ಜೋಡಿ ಬರುತ್ತಲ್ಲ ಅಂತ ಕಾದು ಕುಳಿತರೆ...ಅವರಿಂದ ಸಿಗೋದು, ರಾಮ'ರಾಮಾ ಕೃಷ್ಣ'ಕೃಷ್ಣಾ, ಕಾಮಿಡಿ ಎಂಬ ಹೆಸರಿನಲ್ಲಿ ರವಿಚಂದ್ರನ್ ಸ್ತುತಿಪುರಾಣ. ಜಗ್ಗೇಶ್ ಕಾಕಾ...'ಕಾಗೆ ಪುರಾಣ.

ರವಿಚಂದ್ರನ್ ವಾರೆನೋಟದಲ್ಲಿ ಮಲ್ಲ, ಅಂಜದ ಗಂಡು, ರಸಿಕ... ಎಂದು ಒಂದೇ ಸಮನೆ ಮಾತಿನ ಮಳೆಗರೆಯುತ್ತಾರೆ. ಆ ರವಿಗಿಂತ ಈ ಜಗ್ಗಿಗೇನು ಕಮ್ಮಿ ಎನ್ನುವಂತೆ-ಸೊಯ್ ಟಪಕ್, ಆ ಸರಕ್, ಕಚಕ್' ಅಂತ ನುಲಿಯುತ್ತಾರೆ ನಮ್ಮ ನವರಸ ನಾಯಕ...

ಇದು ವಿಜಯ ಮಲ್ಯರ ಆಣೆಗೂ ರವಿಚಂದ್ರನ್-ಜಗ್ಗೇಶ್ ಅವರಿಂದ ಆದ ತಪ್ಪಲ್ಲ. ನಿರ್ದೇಶಕರ ಅತಿ ಬುದ್ಧಿವಂತಿಕೆಯೇ ಈ ಎಲ್ಲಾ ಕಚ-ಪಚಗಳಿಗೂ ಕಾರಣ. ಅಥವಾ ಕತೆಯಲ್ಲಿ ತಾಕತ್ತು ಇಲ್ಲದೇ ಇರುವುದೂ ಇರಬಹುದು. ಬಿಲ್ ಗೇಟ್ಸ್ ಆಣೆಗೂ 'ಟಾಟಾ ಬಿರ್ಲಾ'ದಲ್ಲಿ ಕತೆ ಇಲ್ಲ. ಅಥವಾ ಇದನ್ನು ಹತ್ತಿಪ್ಪತ್ತು ಚಿತ್ರಗಳ ಕಥಾಸಂಗಮ ಎನ್ನಬಹುದು. ಅದಕ್ಕೆ ಪಕ್ಕಾ ಉದಾಹರಣೆ ಕೋತಿಗಳು ಸಾರ್ ಕೋತಿಗಳು.  

420ಗಳು ಸಾರ್ 420ಗಳು... ರವಿ, ಜಗ್ಗು ಬಾಯಿಬಾಯಿ. ಶುದ್ಧ ತರಲೆಗಳು; ಒಬ್ಬ ಉಡಾಳ, ಇನ್ನೊಬ್ಬ ಮುಠ್ಠಾಳ. ಮಾತಿನಲ್ಲೇ ಮರಿ ವಿಧಾನಸೌಧ ಕಟ್ಟುವ ಚಾಲಾಕಿಗಳು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ' ಎನ್ನುವುದು ಅವರು ಪಾಲಿಸಿಕೊಂಡು ಬಂದ ಪಾಲಿಸಿ. ಅಪ್ಪ , ಮಕ್ಕಳಿಗೆ ಮೂಗುದಾರ ಹಾಕಿದರೆ ಹಾದಿಗೆ ಬರಬಹುದು ಎಂದು ಮದುವೆ ಮಾಡುತ್ತಾನೆ. ಆದರೂ ಅದೇ ರಾಗ, ಅದೇ ತಾಳ. ಅದಕ್ಕೆ ಅಪ್ಪ,ಮಕ್ಕಳೆ ನೀವು ದುಡಿದು ತಂದ ಮೇಲೆ ಶೋಭನ' ಎಂದು ಷರತ್ತು ಹಾಕುತ್ತಾನೆ. ಇಬ್ಬರೂ ಊರುಬಿಟ್ಟು ಪಟ್ಟಣ ಸೇರ್‍ತಾರೆ. ದುಡ್ಡಿಗೋಸ್ಕರ ಯಾರಿಗೋ ಸಹಾಯ ಮಾಡಲು ಹೋಗಿ, ಹುಡುಗಿಯರಿಬ್ಬರಿಗೆ ನಾವು ಟಾಟಾ ಬಿರ್ಲಾ ಫ್ಯಾಮಿಲಿಯವರು' ಎಂದು ಬುರುಡೆ ಬಿಡುತ್ತಾರೆ. ಇನ್ನೇನು ಅವರನ್ನು ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ ಅಸಲಿ ಹೆಂಡಂದಿರು ಅಟಕಾಯಿಸಿಕೊಳ್ಳುತ್ತಾರೆ...

ರವಿಚಂದ್ರನ್, ನಾನು ತುಂಬಾ ಬದಲಾಗಿದ್ದೀನಿ...' ಎಂದು ಡೈಲಾಗ್ ಹೊಡೆದರೂ ಅದು ಸುಳ್ಳು ಎಂದು ಸಿನಿಮಾ ಮುಗಿಯುವಷ್ಟರಲ್ಲಿ ಗೊತ್ತಾಗಿಬಿಡುತ್ತದೆ. ಅದರ ಬದಲು ಇಂಥ ಪಾತ್ರಗಳನ್ನು ಒಪ್ಪಿಕೊಳ್ಳುವ ಮೊದಲೇ ಯೋಚಿಸಬಹುದಿತ್ತು. ಜಗ್ಗೇಶ್ ಕಾಮಿಡಿ ಕೆಲವು ಕಡೆ ಇಷ್ಟವಾಗುತ್ತೆ. ಆದರೆ ಅವರ ಎಲ್ಲ ರಸಗಳಿಗಿಂತ ಒಂಬತ್ತನೇ'ನಂಬರಿನ ಅವತಾರ' ಅತಿಯಾಯಿತು ಎಂದೆನಿಸುತ್ತದೆ. ಇನ್ನು ಕೆಲವು ಕಡೆ ಮಾತನಾಡದೇ ಬರೀ ಸನ್ನೆಯಲ್ಲೇ ಕಚ-ಪಚ ಕಚ-ಪಚ ಎನ್ನುವುದು ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ನಾಯಕಿ ಪೂಜಾ ಗಾಂ ಜಗ್ಗೇಶ್ ಜತೆ ಕಾ... ಕಾ... ಎಂದು ಕುಣಿಯುವುದನ್ನು ಮಾತ್ರ ನೋಡಬಹುದು. ಜನ್ನಿಫರ್‌ಗೆ ಜಾಸ್ತಿ ಪ್ರತಿಭಾ ಪ್ರದರ್ಶನ'ಕ್ಕೆ ಅವಕಾಶ ಸಿಕ್ಕಿಲ್ಲ. ಇನ್ನಿಬ್ಬರು ನಾಯಕಿಯರು ಅರ್ಧದ ನಂತರ ಬಂದು ಒಂದಿಷ್ಟು ಆಟ' ಆಡುತ್ತಾರೆ. ಸಾಧು ಕೋಕಿಲಾ ಕೆಲವು ಕಡೆ ಬಂದು ಮಂಗಮಾಯವಾಗುತ್ತಾರೆ.

ಬುಲೆಟ್ ಪ್ರಕಾಶ್, ಸತ್ಯಜಿತ್ ಕಾಮಿಡಿ ವರ್ಕ್‌ಔಟ್ ಆಗಿಲ್ಲ. ಏಕೆಂದರೆ ಜಗ್ಗೇಶ್ ಕಾಮಿಡಿಯೇ ಔಟ್ ಆಫ್ ಆರ್ಡರ್ ಆಗಿದೆ. ಗುರುಕಿರಣ್ ಸಂಗೀತದಲ್ಲಿ ಮುತ್ತುಕೊಡಲಾ...' ಹಾಡು ಪರವಾಗಿಲ್ಲ. ಸಖೀ ಸಖೀ ಗಗನ ಸಖಿ...' ಹಾಡಿನ ಟ್ಯೂನನ್ನು ಗಂಡುಗಲಿ ಕುಮಾರರಾಮ ಚಿತ್ರದ ಗಿಣಿರಾಮ...'(ಸಂಗೀತ: ಗುರುಕಿರಣ್) ಹಾಡಿನಿಂದ ಕದ್ದಿದ್ದಾರೆ.

ಅಯ್ಯೋ ಕತೆ, ಚಿತ್ರಕತೆ, ನಿರೂಪಣೆ...ಇತ್ಯಾದಿ ಇತ್ಯಾದಿಗಳನ್ನೆಲ್ಲ ಕಟ್ಟಿಕೊಂಡು ನಮಗೇನಾಗಬೇಕು? ನಮಗೇನಿದ್ದರೂ ಕಾಮಿಡಿ ಬೇಕು ಕಾಮಿಡಿ' ಈ ಪಾಲಿಸಿಯನ್ನು ಪಾಲಿಸಿಕೊಂಡುಬಂದವರು ಖಂಡಿತಾ ಈ ಸಿನಿಮಾ ನೋಡಬೇಕು. ನೋಡಿ ಧನ್ಯ'ರಾಗಬೇಕು!

English summary
The film 'Nee Tata Naa Birla' is about two guys, who were irresponsible

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada