»   » ‘ಅರಸು’ : ಸರಳ ಸುಂದರ ಪ್ರೇಮ

‘ಅರಸು’ : ಸರಳ ಸುಂದರ ಪ್ರೇಮ

Subscribe to Filmibeat Kannada


ಪುನೀತ್‌ಗೆ ಚಿತ್ರದಲ್ಲಿ ಸಾಥ್‌ ನೀಡಿರೋದು ಮೀರಾ ಜಾಸ್ಮಿನ್‌ ಎನ್ನುವ ಪಾದರಸ. ಆಕೆಯ ಒಂದೊಂದು ಮಾತಿನ ಶೈಲಿ, ಕಣ್ಣುಗಳಲ್ಲೇ ಎಲ್ಲವನ್ನೂ ಹೇಳುವ ಪ್ರೀತಿ, ತೆರೆ ಮೇಲೆ ಇದ್ದಷ್ಟು ಹೊತ್ತು ಮುಂಜಾನೆ ಮಲ್ಲಿಗೆಯ ಘಮಲು...

ಚಿತ್ರ : ಅರಸು
ನಿರ್ಮಾಣ :ಪಾರ್ವತಮ್ಮ ರಾಜ್‌ಕುಮಾರ್‌
ನಿರ್ದೇಶನ : ಮಹೇಶ್‌ ಬಾಬು
ಸಂಗೀತ : ಜೋಶ್ವಾ ಶ್ರೀಧರ್‌
ತಾರಾಗಣ : ಪುನೀತ್‌ ರಾಜ್‌ಕುಮಾರ್‌, ಮೀರಾ ಜಾಸ್ಮಿನ್‌, ರಮ್ಯಾ, ಆದಿ ಲೋಕೇಶ್‌, ಕೋಮಲ್‌ ಮತ್ತಿತರರು.

ಆತ ಆಗರ್ಭ ಶ್ರೀಮಂತ. ವಿದೇಶದಿಂದ ಭಾರತಕ್ಕೆ ಬಂದಿರುತ್ತಾನೆ. ಚೆಂದುಳ್ಳಿ ಚೆಲುವೆ ಆತನ ಕಣ್ಣಿಗೆ ಬೀಳುತ್ತಾಳೆ. ‘ನಾನು ನಿನ್ನನ್ನು ಮದುವೆಯಾಗುತ್ತೇನೆ’ ಎಂದು ಆತ ಹೇಳುತ್ತಾನೆ. ಅದಕ್ಕೆ ‘ನಿನ್ನ ಬಳಿ ಇರೋದು ನಿನ್ನ ಅಪ್ಪ ಗಳಿಸಿದ ಆಸ್ತಿ. ತಿಂಗಳಲ್ಲಿ ಐದು ಸಾವಿರ ದುಡಿದು ಬಾ. ನೀ ಹೇಳಿದ ಹಾಗೆ ಕೇಳುತ್ತೇನೆ’ ಅಂತಾಳೆ ಆಕೆ.

ನಾಯಕ ಹಠಕ್ಕೆ ಬಿದ್ದು ಕೆಲಸ ಹುಡುಕಲು ಹೊರಡುತ್ತಾನೆ. ಅಲ್ಲಿ ಇನ್ನೊಂದು ಹುಡುಗಿಯ ಪರಿಚಯವಾಗುತ್ತದೆ. ಆಕೆ ಈತನನ್ನು ಪ್ರೀತಿಸುತ್ತಾಳೆ. ಈತ ಮೊದಲು ನೋಡಿದ ಹುಡುಗಿಗೆ ಮನಸು ಕೊಟ್ಟಿರುತ್ತಾನೆ. ಇನ್ನೊಂದು ಟ್ವಿಸ್ಟ್‌ ಅಂದರೆ ಆ ಹುಡುಗಿಯಯರಿಬ್ಬರೂ ಆತ್ಮೀಯ ಗೆಳತಿಯರು. ಕೊನೆಗೆ ಆತ ಯಾರನ್ನು ಮದುವೆಯಾಗುತ್ತಾನೆ ಅನ್ನೋದು ಸಸ್ಪೆನ್ಸ್‌.

ಸಾಕಷ್ಟು ತ್ರೀಕೋನ ಪ್ರೇಮ ಕತೆಗಳು ಬಂದಿವೆ. ಆದರೆ ಇಂಥ ಕತೆಯಲ್ಲಿ ಪುನೀತ್‌ ನಟಿಸಿರುವುದು ಇದೇ ಮೊದಲು. ಅದಕ್ಕೆ ಪೂರಕವಾಗಿ ಅವರು ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಕೆಲವು ದೃಶ್ಯಗಳಲ್ಲಂತೂ ಇದು ಪುನೀತ್‌ಗಾಗಿಯೇ ಕೆತ್ತಿದ ಪಾತ್ರ ಎನ್ನುವಷ್ಟು ತನ್ಮಯವಾಗಿ ಅಭಿನಯಿಸಿದ್ದಾರೆ.

ಬಾಳೆ ಹಣ್ಣು ಮಾರುವ ಅಜ್ಜಿ ಜೊತೆಗಿನ ಸಂಭಾಷಣೆ, ದುಡಿದ ದುಡ್ಡನ್ನು ಕೈಯಲ್ಲಿ ಹಿಡಿದು ನೋಡುವಾಗಿನ ನೋಟ... ವಂಡರ್‌ಫುಲ್‌. ಹಾಗೇ ಹೊಡೆದಾಟದಲ್ಲಿ ಅದ್ಭುತ. ಅವರಿಗೆ ಸಾಥ್‌ ನೀಡಿರೋದು ಮೀರಾ ಜಾಸ್ಮಿನ್‌ ಎನ್ನುವ ಪಾದರಸ. ಆಕೆಯ ಒಂದೊಂದು ಮಾತಿನ ಶೈಲಿ, ಕಣ್ಣುಗಳಲ್ಲೇ ಎಲ್ಲವನ್ನೂ ಹೇಳುವ ಪ್ರೀತಿ, ತೆರೆ ಮೇಲೆ ಇದ್ದಷ್ಟು ಹೊತ್ತು ಮುಂಜಾನೆ ಮಲ್ಲಿಗೆಯ ಘಮಲು... ರಮ್ಯಾ ಕೂಲ್‌ ಪಾತ್ರಕ್ಕೆ ಕೂಲ್‌ ಅಭಿನಯ ನೀಡಿದ್ದಾರೆ.

ಕೋಮಲ್‌ ಕುಮಾರ್‌ ನೋಡಿದರೇ ನಗು ಬರುತ್ತೆ ನೋಡ್ರಿ. ಶ್ರೀನಿವಾಸ ಮೂರ್ತಿ, ಆದಿ ಲೋಕೇಶ್‌ ನ್ಯಾಯ ಸಲ್ಲಿಸಿದ್ದಾರೆ.

ಸರಳವಾದ ಕತೆಗೆ ಫ್ರೆಷ್‌ನೆಸ್‌ ತರಲು ನಿರ್ದೇಶಕ ಮಹೇಶ್‌ ಬಾಬು ಶ್ರಮಿಸಿದ್ದಾರೆ. ಅಲ್ಲಲ್ಲಿ ಸೆಂಟಿಮೆಂಟ್‌ ಲಹರಿ ಹರಿಸಿದ್ದಾರೆ. ಸಂಭಾಷಣೆಯಲಿ ್ಲ ಜೀವ ತುಂಬಿದ್ದಾರೆ. ಎರಡು ಮೂರು ಹಾಡುಗಳು ಕೇಳುವಂತಿವೆ. ಆದರೂ ಏನೋ ಕೊರತೆ ಕಾಡುತ್ತದೆ. ಕತೆ ತೀರಾ ಸರಳವಾಗಿದ್ದು ಇದಕ್ಕೆ ಕಾರಣವಾ? ಅಥವಾ ‘ಆಕಾಶ್‌’ ಚಿತ್ರದ ಮೋಡಿಯನ್ನು ಮಹೇಶ್‌ ಬಾಬು ಮರೆತಿದ್ದಾ? ಗೊತ್ತಿಲ್ಲ.

ಸಿನಿಮಾ ನೋಡುವಾಗ ನಗು ಮತ್ತು ಅಳುವನ್ನು ಮೂಡಿಸುವ ಕತೆ, ಹೊರಬಂದ ಮೇಲೆ ಅದನ್ನೆಲ್ಲ ಮರೆಸುತ್ತದೆ. ‘ಒಂಥರಾ ಖಾಲಿತನ’ ಕಾಡುತ್ತದೆ. ಸುಮ್ಮನೆ ನೋಡಿ ಬಂದರೆ ಸಕತ್‌ ಅನ್ನಿಸುತ್ತೆ. ಬೇಕಾದ್ರೆ ಪರೀಕ್ಷೆ ಮಾಡಲು ಹೋಗಿ...(ಸ್ನೇಹ ಸೇತು : ವಿಜಯ ಕರ್ನಾಟಕ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada