»   » ಆ ತೀರ ಈ ತೀರದ ನಡುವೆ...

ಆ ತೀರ ಈ ತೀರದ ನಡುವೆ...

Subscribe to Filmibeat Kannada
  • ರಮೇಶ್‌ ಕುಮಾರ್‌ ನಾಯಕ್‌
ಪ್ರೀತಿಯ ‘ಎಡಕಲ್ಲು ಗುಡ್ಡದ ಮೇಲೆ’ ಚಂದ್ರ ಶೇಖರ್‌,

ವಿದೇಶದಲ್ಲಿ ಹಗಲಿರುಳು ದುಡಿಯುತ್ತ, ಕೈತುಂಬ ಸಂಪಾದಿಸುತ್ತ ನಮ್ಮ ಯುವ ಜನ ಮೂಲಬೇರನ್ನು ಮರೆತಿದ್ದಾರೆ. ಪೂರ್ವಜರೊಂದಿಗಿನ ಕೊಂಡಿ ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾತು ಸಾಮಾನ್ಯ. ಆದರೆ ಇವತ್ತು, ಬೆಂಗಳೂರಿನ ಜಯನಗರದಲ್ಲಿದ್ದವರು ವಿಜಯನಗರದಲ್ಲಿರುವ ತಮ್ಮವರಿಂದ ದೂರವಾಗಿದ್ದಾರೆ. ಫಾಸ್ಟ್‌ ಲೈಫ್‌ ನಡುವೆ ಸಿಕ್ಕಿಹಾಕಿಕೊಂಡಿದ್ದು ತಾಯಿನಾಡಿನಲ್ಲಿದ್ದರೂ ಪರದೇಶಿಗಳಂತಾಗಿದ್ದಾರೆ. ಮನುಷ್ಯ-ಮನುಷ್ಯ ನಡುವಿನ ಮಾನಸಿಕ ದೂರ ಹೆಚ್ಚುತ್ತಿದೆ...

ನಿಮ್ಮ ನಿರ್ಮಾಣ, ನಿರ್ದೇಶನದ ‘ಪೂರ್ವಪರ’ ಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಕತೆಗಾರ, ಸಂಭಾಷಣೆಗಾರ ಜಯಂತ್‌ ಕಾಯ್ಕಿಣಿ ಹೀಗೆ ಹೇಳಿದ್ದರು. ಚಿತ್ರ ನೋಡಿದಾಗ ಹೌದಲ್ಲವಾ ಎನಿಸಿತು. ಅನಿವಾಸಿ ಭಾರತೀಯರ ಬಗ್ಗೆ, ಅವರ ಮತ್ತು ಅವರ ಕುಟುಂಬಗಳ ಬಗ್ಗೆ ನಾನಾ ಭಾಷೆಗಳಲ್ಲಿ ಹಲವಾರು ಚಿತ್ರಗಳು ಬಂದಿವೆ. ಆದರೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ’ ‘ ಈ ಮನೆ ಸುಮ್ಮನೆ, ಅಲ್ಲಿದೆ ನಮ್ಮನೆ ’ ಎಂಬ ಹೊಯ್ದಾಟವನ್ನು ‘ಪೂರ್ವಾಪರ ’ ಸಮರ್ಥವಾಗಿ ಪ್ರತಿಬಿಂಬಿಸಿದೆ.

ಚಿತ್ರದಲ್ಲಿ ಸಂಗೀತದ ಆರ್ಭಟವಿಲ್ಲ. ಹಾಡಿನ ಆಡಂಬರವಿಲ್ಲ. ಸಂಭಾಷಣೆಯ ಅಬ್ಬರವಿಲ್ಲ. ಅನಗತ್ಯ ದೃಶ್ಯಗಳ ಕಿರಿಕಿರಿಯಿಲ್ಲ . ನೈಜತೆಯೇ ಚಿತ್ರದ ಜೀವಾಳ. ಆರಂಭದಿಂದ ಕೊನೆಯವರೆಗೆ ತುಂಗಾ ನದಿಯಂತೆ ಶಾಂತವಾಗಿ ಹರಿಯುವ ದೃಶ್ಯಾವಳಿಗಳು ಪ್ರೇಕ್ಷಕರ ಹೃದಯದ ತಂತಿ ಮೀಟುವಲ್ಲಿ ಯಶಸ್ವಿಯಾಗಿವೆ. ಹಲವು ದೃಶ್ಯಗಳು ಮತ್ತು ಸಂಭಾಷಣೆಗಳು ಮನಸ್ಸಿನ ಒಳಕೋಣೆಯಲ್ಲಿ ಕೂತು ಬಿಡುತ್ತವೆ. ಚಿತ್ರದ ಓಘ ನಿಧಾನವೆನಿಸಿದರೂ ಮಾತು-ಮೌನಗಳ, ಭಾವನೆ ಅದಲು ಬದಲು, ಇದಕ್ಕೆ ಪೂರಕ ಸನ್ನಿವೇಶಗಳು ಚಿತ್ರವನ್ನು ಲವಲವಿಕೆಯಿಂದ ಇರಿಸಿವೆ. ಇದು ನಿರ್ದೇಶಕನಾಗಿ ನಿಮಗೆ ಸಲ್ಲುವ ಕ್ರೆಡಿಟ್‌.

ಕೊನೆಗೂ ಶಾರದೆ (ಗೀತಾ) ಅಮೆರಿಕದಲ್ಲಿರುವ ಮಗ, ಸೊಸೆ, ಮೊಮ್ಮಗಳನ್ನು ನೋಡಲು ಶೃಂಗೇರಿಯಿಂದ ಹೊರಟು ನಿಲ್ಲುತ್ತಾಳಲ್ಲ.... ಕಟ್ಟಕಡೆ ಕ್ಷಣಗಳಲ್ಲಿ ಸುಂದರ (ನವೀನ್‌ ಮಯೂರ್‌) ನ ಅತ್ತೇ ತಾನೇ ಹೊಲಿದ ಲಂಗ ದಾವಣಿ ಕೈಗಿಡುತ್ತಾಳೆ. ‘ಶಾರದೆ, ಈ ಬಟ್ಟೆ ಹಾಕಿಸಿ ಮೊಮ್ಮಗಳ ಒಂದು ಫೋಟೋ ತೆಗೆದುಕೊಂಡು ಬಾರೆ’ ಅಂತಾಳೆ. ಸುಂದರನ ಅಪ್ಪ (ಶ್ರಿನಾಥ್‌) ತಾನು ಸತ್ತರೆ ಮಗನಿಗೆ ತಕ್ಷಣ ವಿಷಯ ತಿಳಿಸಬೇಡ. ನಿಧಾನವಾಗಿ ತಿಳಿಸು. ಸೊಸೆ ಹಸಿ ಬಾಣಂತಿ. ಈಗಿನ ಸ್ಥಿತಿಯಲ್ಲಿ ಹೆಂಡತಿ ಮಗುವನ್ನು ಬಿಟ್ಟು ಮಗ ಇಲ್ಲಿಗೆ ಬರುವಂತಿಲ್ಲ. ವಿಷಯ ಗೊತ್ತಾಗಿಯೂ ಅಲ್ಲಿ ಇರುವಂತಿಲ್ಲ. ಈ ಧರ್ಮ ಸಂಕಟ ಆತನಿಗೆ ಬೇಡ ಎನ್ನುತ್ತಾನೆ. ಅಮೆರಿಕದ ಜೀವನಕ್ಕೆ ಹೊಂದಿಕೊಳ್ಳಲು ಶಾರದೆ ಪರಿದಾಡುವ ಪರಿ, ತನ್ನ ಮೂಲದತ್ತ ಅನಿವಾಸಿ ಭಾರತೀಯ ನರೇಂದ್ರನ ತುಡಿತ ಇತ್ಯಾದಿ ದೃಶ್ಯಗಳು ಮನಮುಟ್ಟುತ್ತವೆ.

ಮಗನನ್ನು ನೋಡಲು ಶಾರದೆ ಹಪಹಪಿಸುತ್ತಾಳಲ್ಲ, ಆಗ ಆಕೆಯ ಗಂಡ ಹೇಳುತ್ತಾನೆ- ಮಗ ನಮ್ಮೂರ ಜಾತ್ರೆಯಲ್ಲಿ ತಪ್ಪಿಸಿಕೊಂಡಿದ್ದರೆ ಹುಡುಕಿ ತರಬಹುದಿತ್ತು ಶಾರದೆ. ಆದರೆ ಆತ ಈಗ ಕಳೆದು ಹೋಗಿರುವುದು ಅಮೆರಿಕೆಯ ಸಂತೆಯಲ್ಲಿ...

ತನಗೆ ಕಂಪೆನಿಯಲ್ಲಿ ಜವಾಬ್ದಾರಿಯುತ ಕೆಲಸವಿರುವುದರಿಂದ ತುಂಬಾ ದಿನ ರಜೆ ಹಾಕಿ ಊರಿಗೆ ಬರಲು ಸಾಧ್ಯವಾಗಲಿಲ್ಲ ಎಂದು ಮಗ ಸಮಜಾಯಿಸಿ ನೀಡುತ್ತಾನೆ. ಆಗ ಹತಾಶೆಯಿಂದ ಶಾರದೆ ಹೇಳುವ ಮಾತು - ನಮ್ಮ ಮನೆ ಉದ್ಧಾರ ಮಾಡೋಕೆ ಬೇರೆಯವರ ಮೊರೆ ಹೋಗಬೇಕು. ಬೇರೆಯವರ ಮನೆ ಉದ್ಧಾರ ಮಾಡೋಕೆ ನಾವು...

ಇಂಥ ಹಲವಾರು ಸಂಭಾಷಣೆಗಳು ಚುರುಕು ಮುಟ್ಟಿಸುತ್ತವೆ. ಜಯಂತ್‌ ಕಾಯ್ಕಿಣಿಯವರ ಸೃಜನಶೀಲ ಮನಸ್ಸನ್ನು ನೀವು ಪರಿಣಾಮಕಾರಿಯಾಗಿ ಬಸಿಕೊಂಡಿದ್ದೀರಿ. ಗೀತಾ ನೈಜ ಅಭಿನಯದಿಂದ ತುಂಬಾ ಇಷ್ಟವಾಗುತ್ತಾರೆ. ಎಷ್ಟೋ ಸನ್ನಿವೇಶಗಳಲ್ಲಿ ಅವರ ಅಬೋಧ ಕಣ್ಣುಗಳೇ ಹೇಳಬೇಕಾದನ್ನು ಹೇಳಿವೆ. ಮುಜುಗರ, ಗಾಬರಿ, ಹತಾಶೆ, ಆಶಯಗಳುಅವರ ವಿಶಿಷ್ಟ ನಗುವಿನ ಪರದೆ ಮೇಲೆ ಮೂಡಿ ಬಂದಿವೆ.

ಸುಂದರನ ಪತ್ನಿಯಾಗಿ ಲಕ್ಷ್ಮಿಗೋಪಾಲಸ್ವಾಮಿ, ಅಪ್ಪನಾಗಿ ಶ್ರಿನಾಥ್‌ ಸೇರಿದಂತೆ ಎಲ್ಲ ಪಾತ್ರಗಳು ಚಿತ್ರಕ್ಕೆ ಜೀವ ತುಂಬಿವೆ. ವಿದೇಶದಲ್ಲಿ ಸುಂದರನ ಗೆಳೆಯನಾಗಿ, ಹೆತ್ತವರ ಪ್ರೀತಿ ವಂಚಿತನಾಗಿ, ತಾಯ್ನಾಡಿನತ್ತ ಮುಖಮಾಡಿ ನಿಲ್ಲುವ ನೀವು(ನರೇಂದ್ರ) ಆಪ್ತರಾಗುತ್ತೀರಿ. ಆದರೆ ನಿಮ್ಮ ತಾಯಿ ಸಮಾನಂತಿರುವ ಶಾರದೆಯನ್ನು ನೀವು ಪದೇ ಪದೇ ಶಾರದೆ ಎಂದು ಕರೆಯುವುದು ಮಾತ್ರ ಅಸಹಜ ಎನಿಸುತ್ತದೆ. ಹಾಗೆಯೇ, ಆ ಪುಟಾಣಿ ಚಿಟ್ಟಿ ಪಾತ್ರಕ್ಕೆ ಒಂದಿಷ್ಟು ಮಾತು ತುಂಬಬೇಕಿತ್ತು.

ವಿಜಯ್‌ ಭಾಸ್ಕರ್‌ ಸಂಯೋಜಿಸಿದ ಹಾಡುಗಳಿಗಿಂತ ‘ಪ್ರಯೋಗ್‌ ’ ಅವರ ಹಿನ್ನೆಲೆ ಸಂಗೀತ ಸೊಗಸಾಗಿದೆ. ಶೃಂಗೇರಿಯ ಕಾಲು ಹಾದಿಗಳಿಂದ ಹಿಡಿದು ಅಮೇರಿಕಾದ ವಾಯು ಮಾರ್ಗದ ತನಕದ ‘ಚಿತ್ರ’ವನ್ನು ಜಿ.ಎಸ್‌.ಭಾಸ್ಕರ್‌ ಪರಿಣಾಮಕಾರಿಯಾಗಿ ಸೆರೆಹಿಡಿದಿದ್ದಾರೆ.

ಆರ್ಥಿಕ ದೃಷ್ಟಿಕೋನದಿಂದ ಚಿತ್ರ ಸೋಲಬಹುದು ಅಥವಾ ಗೆಲ್ಲಬಹುದು. ಪ್ರಶಸ್ತಿಗಳ್ಫುಸಿಗಬಹುದು, ಸಿಗದೇ ಇರಬಹುದು. ಆದರೆ ನಿಮ್ಮ ಪರಿಶ್ರಮದ ‘ಪೂರ್ವಾಪರ’ ಸಾರ್ಥಕ ಪ್ರಯೋಗವಂತೂ ಖರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada