»   » ದೇವುಗೆ, ಪಾಟೀಲ್‌ಗೆ ಬಂದಾರೆ ಮುನಿಸು... ಅಳುತಾರೆ...

ದೇವುಗೆ, ಪಾಟೀಲ್‌ಗೆ ಬಂದಾರೆ ಮುನಿಸು... ಅಳುತಾರೆ...

Posted By:
Subscribe to Filmibeat Kannada
  • ಎಂ.ಡಿ.
ಆತ ಹಾಡುತ್ತಿದ್ದಾನೆ. ಆಕೆ ಯಾಕೋ ಮುನಿಸಿಕೊಂಡಿದ್ದಾಳೆ. ಎಳೆ ಎಳೆಯಾದ ಎಳೆನೀರು ತಂದು ಕೊಟ್ಟರೂ ಆಕೆ ಮುಖವನ್ನು ಉಬ್ಬಿಸಿಕೊಂಡೇ ಇರುತ್ತಾಳೆ. ಆಗ ಅವನು ಬರಿಗೈಯಿಂದಲೇ ಮಾಟ-ಮಂತ್ರ ಮಾಡಿ ಎಳೆನೀರನ್ನು ಪಾರಿವಾಳ ಮಾಡುತ್ತಾನೆ. ಅದನ್ನು ನೋಡಿ ಆಕೆ ಮುಖ ಅರಳಿಸುತ್ತಾಳೆ. ಹಾರಿಬಿಟ್ಟು ಗಲಗಲ ನಗುತ್ತಾಳೆ. ಇದರ ಮೂಲಕ ನಿರ್ದೇಶಕ ಏನು ಹೇಳಲು ಹೊರಟಿದ್ದಾನೆಂದು ಚರ್ಚೆ ಮಾಡತೊಡಗಿದರೆ ತಲೆ ಸಾವಿರ ಹೋಳಾದೀತು. ಯಾಕೆಂದರೆ ಇಂತಹ ಹಲವಾರು ದೃಶ್ಯಗಳು ಇದರಲ್ಲಿವೆ. ಭಾವನೆಗಳನ್ನೇ ಕಳೆದುಕೊಂಡ ಮಾತುಗಳು, ಕತೆ ಹೇಳಲೆಂದೇ ತಯಾರಾದ ದೃಶ್ಯಗಳು, ನಾಟಕೀಯ ಅಭಿನಯ... ಇದನ್ನೆಲ್ಲಾ ನೋಡ್ತಾ ನೋಡ್ತಾ ಎಲ್ಲಿದ್ದೇವೆಂದು ತಿಳಿಯದಷ್ಟು ವಾತಾವರಣ ಕಲುಷಿತವಾಗುತ್ತಿದೆ. ಮನಸು ಕಕ್ಕಾಬಿಕ್ಕಿಯಾಗುತ್ತದೆ. ಉಕ್ಕಿ ಬರುವ ದುಃಖಗಳನ್ನು ತಡೆದುಕೊಳ್ಳುವಷ್ಟರಲ್ಲಿ ಎಲ್ಲಿಗೆ ಪಯಣ.. ಯಾವುದೋ ದಾರಿ... ಏಕಾಂಗಿ ಸಂಚಾರಿ...

ಇದು 15 ವರ್ಷಗಳ ಹಿಂದೆ ಮಲಯಾಳಂನಲ್ಲಿ ತೆರೆಕಂಡ ‘ಕೌರವರ್‌’ ಚಿತ್ರದ ರಿಮೇಕು. ಮುಮ್ಮಟ್ಟಿ ಮತ್ತು ವಿಷ್ಣು ಮಾಡಿದ ಪಾತ್ರಗಳನ್ನು ಇಲ್ಲಿ ದೇವರಾಜ್‌ ಮತ್ತು ಬಿ.ಸಿ. ಪಾಟೀಲ್‌ ಮಾಡಿದ್ದಾರೆ. ಅಲ್ಲಿಗೆ ಹೆಚ್ಚಿನ ವಿವರಣೆ ನೀಡುವ ಅಗತ್ಯ ಕಾಣುವುದಿಲ್ಲ. ಇದೊಂದು ಸೇಡಿನ ಕತೆ. ದತ್ತಣ್ಣ ದೊಡ್ಡ ಡಾನ್‌. ದೇವರಾಜ್‌ ಆತನ ಬಲಗೈ ಬಂಟ. ಇನ್ಸ್‌ಪೆಕ್ಟರ್‌ ಬಿ.ಸಿ. ಪಾಟೀಲ್‌ ಆ ಊರಿಗೆ ಬಂದು ಅವರನ್ನು ಮಟ್ಟಹಾಕಲು ಯತ್ನಿಸುತ್ತಾನೆ. ಆ ಹೊಡೆದಾಟದಲ್ಲಿ ದತ್ತಣ್ಣನ ಕಾಲು ತುಂಡಾಗುತ್ತದೆ. ಹೆಂಡತಿ ಮಕ್ಕಳ ಕಾಲವಶವಾಗುತ್ತದೆ. ದತ್ತಣ್ಣ ಜೈಲಿಗೆ ಹೋಗಿಬಂದ ಮೇಲೂ ಪಾಟೀಲ್‌ ಮೇಲೆ ಸೇಡು ತೀರಿಸಿಕೊಳ್ಳಲು ಆತನ ಹುಡುಕಾಟದಲ್ಲಿ ತೊಡಗುತ್ತಾನೆ. ಹೇಳ್ತಾ ಹೋದರೆ ಕತೆ ಬೆಳೀತಾನೆ ಹೋಗುತ್ತೆ.

ಬರೀ ಘಟನೆಗಳನ್ನು ಜೊಡಿಸಿಟ್ಟರೆ ಸಿನಿಮಾ ರೆಡಿಯಾಗುತ್ತೆ ಎನ್ನುವ ಭ್ರಮೆಯಲ್ಲಿ ನಿರ್ದೇಶಕನಿದ್ದಾನೆ. ಅವರಿಗೆ ಒಂದು ಉತ್ತಮ ಚಿತ್ರವನ್ನು ಹ್ಯಾಗೆ ರಿಮೇಕ್‌ ಮಾಡಬೇಕೆನ್ನುವುದೂ ಗೊತ್ತಿಲ್ಲ. ಯಾವುದೋ ಒಂದು ಭಾವವನ್ನು ಹಿಡಿದಿಡಲೂ ಅವರಿಗೆ ಸಾಧ್ಯವಾಗಿಲ್ಲ. ದೇವರಾಜ್‌, ಬಿ.ಸಿ. ಪಾಟೀಲ್‌ ಮತ್ತು ತಾರಾ ತಮ್ಮ ಪಾತ್ರಗಳಿಗೆ ಏನು ಬೇಕೋ ಅದನ್ನು ತುಂಬಿದ್ದಾರೆ. ಆದರೆ ನಿರ್ದೇಶಕನ ತಲೆಯಲ್ಲಿ ಏನೇನೋ ತುಂಬಿರುವುದರಿಂದ ಎಲ್ಲವೂ ತೂತು ಬಿದ್ದ ಕೊಡವಾಗಿದೆ. ಡಾನ್‌ ರೂಪದಲ್ಲಿ ಕಾಣಿಸಿಕೊಂಡಿರುವ ದತ್ತಣ್ಣನ ಅಭಿನಯ ನೋಡಿದರೆ ಅವರು ಕಾಮಿಡಿ ಪಾತ್ರದಲ್ಲಿ ಮಿಂಚುವ ಸೂಚನೆ ಕಾಣಿಸುತ್ತದೆ.

(ಸ್ನೇಹಸೇತು: ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada