»   » ಮಂಜಿನ ಹನಿಯೂ, ಕೆಂಡದ ಮಳೆಯೂ

ಮಂಜಿನ ಹನಿಯೂ, ಕೆಂಡದ ಮಳೆಯೂ

Posted By:
Subscribe to Filmibeat Kannada
  • ಮಹಾಂತೇಶ ಬಹಾದುಲೆ
ಸಿನಿಮಾದ ಆರಂಭದಲ್ಲಿ ಮಂಜಿನ ಹನಿಯಂಥ ನಾಯಕಿಯ ಹಾಡು, ನಂತರ ತಮಗಾಗುತ್ತಿರುವ ಅನ್ಯಾಯಕ್ಕಾಗಿ ಹಳ್ಳಿಗರ ಮನದಲ್ಲಿ ಕಳವಳದ ಸುಂಟರಗಾಳಿ, ಇದನ್ನು ಪರಿಹರಿಸಲು ನಾಯಕ ಬಂದಾಗ ಕೆಂಡದ ಮಳೆಯಂತಹ ಸೆಣಸಾಟ, ಕೊನೆಗೆ ವರ್ಷಧಾರೆಯಾಗಿ ಎಲ್ಲವೂ ತಂಪಾಗುವಂತೆ ಸುಖಾಂತ್ಯ.

ಇದು ಉಗ್ರನರಸಿಂಹ ಚಿತ್ರದ ಒನ್‌ಲೈನ್‌ ಸ್ಟೋರಿ. ಉತ್ತರ ಕರ್ನಾಟಕದ ಹಳ್ಳಿಯಾಂದರ ಕಥೆ. ಯಾವುದೋ ಕಾರಣಕ್ಕಾಗಿ ಊರು ಬಿಟ್ಟು ಹೋದ ನಾಯಕ(ಮೋಹನ್‌) 20 ವರ್ಷಗಳ ತನಕ ಹುಟ್ಟೂರಿಗೆ ಬರುವುದೇ ಇಲ್ಲ. ಆಗ ಚಿತ್ರ(ಲಂಬೂ ನಾಗೇಶ್‌) ಎಂಬ ಖೋಜಾನ ಕಪಿಮುಷ್ಟಿಯಲ್ಲಿ ಹಳ್ಳಿಗರ ನರಳಾಟ ಆರಂಭ.

ಅದು ಯಾವ ಮಟ್ಟಕ್ಕೆ ಹೋಗುತ್ತದೆ ಎಂದರೆ ಆ ಊರ ದೇವರ ರಥೋತ್ಸವಕ್ಕೂ ಚಿತ್ರಾಳಿಂದ ಕಂಟಕ ಬಂದೊದಗುತ್ತದೆ. ಇದನ್ನು ಮತ್ತೆ ಯಥಾಸ್ಥಿತಿಗೆ ತರಲು ತಮ್ಮ ಊರ ನಾಯಕನೇ ಬರಬೇಕು. ಅವನು ಮಾತ್ರ ಇದಕ್ಕೆ ಪರಿಹಾರ ನೀಡಬಲ್ಲ ಎಂದು ಅಲ್ಲಿನ ಜನ ನಂಬಿ ಆತನ ಬರುವಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಕೊನೆಗೂ ಆತ ಬರುತ್ತಾನೆ. ಆ ನಂತರ ಏನೇನು ನಡೆಯುತ್ತದೆ ಎಂಬುದು ಕಥೆಯ ಮುಂದಿನ ಭಾಗ.

ಇದರ ನಡುವೆ ಪೊಲೀಸ್‌ ಇಲಾಖೆಯ ಬೇಜವಾಬ್ದಾರಿತನ, ಲಂಚಗುಳಿತನಗಳನ್ನು ತೋರಿಸಲಾಗಿದೆ. ನಿಷ್ಠಾವಂತ ಪೊಲೀಸ್‌ ಅಧಿಕಾರಿಯಾಗಿ ವಿನೋದ್‌ ಆಳ್ವ ಆರಂಭದಲ್ಲಿ ಸೆಣಸಾಟ ಮಾಡಿ ಸತ್ತು ಹೋಗುತ್ತಾರೆ. ಇನ್ನೊಬ್ಬ ಲಂಚಗುಳಿ ಅಧಿಕಾರಿ ಕಾಳಿಂಗ (ಶೋಭರಾಜ್‌) ಸಿನಿಮಾದ ಕೊನೆಯವರೆಗೂ ಮೆರೆಯುತ್ತಾನೆ. ಶರತ್‌ ಮತ್ತೊಬ್ಬ ಪ್ರಾಮಾಣಿಕ ಅಧಿಕಾರಿಯಾಗಿ ಮಿಂಚಿದ್ದಾರೆ.

ಹೇಗಾದರೂ ಮಾಡಿ ಪ್ರೇಕ್ಷಕರನ್ನು ಆಕರ್ಷಿಸಲೆಂದೊ ಏನೋ, ನಾಯಕಿಯೂ ಸೇರಿದಂತೆ ಮೂವರು ನಟಿಯರಿಗೆ ಕನಿಷ್ಠ ಬಟ್ಟೆ ತೊಡಿಸಿ ಅವರನ್ನು ಚೆನ್ನಾಗಿ ಕುಣಿಸಲಾಗಿದೆ. ಇದಕ್ಕಾಗಿ ಮಧ್ಯೆಮಧ್ಯೆ ಹಾಡುಗಳು ಅನವಶ್ಯಕವಾಗಿ ಬಂದುಹೋಗುತ್ತದೆ. ನಾಯಕಿ ಮಧು ಶರ್ಮಳ ಸೌಂದರ್ಯವನ್ನು ಛಾಯಾಗ್ರಹಣದಲ್ಲಿ ಕಲಾತ್ಮಕವಾಗಿ ಸೆರೆಹಿಡಿಯಲಾಗಿದೆ. ಆದರೆ ಅಭಿನಯಕ್ಕೆ ಅವಕಾಶ ಇಲ್ಲ.

ಮತ್ತೊಬ್ಬ ನಾಯಕಿ ಚಾರುಲತಾ ಕಥೆಗೆ ಅನಿವಾರ್ಯ ಎನಿಸುವಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಅವಳ ಗ್ಲ್ಯಾಮರ್‌ತೋರಿಸುವ ಪ್ರಯತ್ನಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಇಷ್ಟೇ ಆಗಿದ್ದರೆ ಸಾಕಿತ್ತು. ಆದರೆ ಹೆಣ್ಣಿನ ಸೌಂದರ್ಯ ಪ್ರದರ್ಶಿಸುವ ಭರದಲ್ಲಿ ಜ್ಯೂನಿಯರ್‌ ಸಿಲ್ಕ್‌ಳ ಪಾತ್ರವನ್ನು ಅನವಶ್ಯಕವಾಗಿ ಎಳೆದುತಂದು ಕುಣಿಸಲಾಗಿದೆ. ಕೇವಲ ನಾಯಕನಿಗಷ್ಟೇ ಅಲ್ಲದೆ ಶರತ್‌, ಶೋಭ ರಾಜ್‌, ವಿನೋದ್‌ ಆಳ್ವ ಹಾಗೂ ನಾಗೇಶ್‌ ಪಾತ್ರಗಳಿಗೂ ಮಹತ್ವ ನೀಡಿದ್ದು ಚಿತ್ರದಲ್ಲಿ ಮೆಚ್ಚುಗೆಯಾಗುವಂಥ ಅಂಶ. ಎಲ್ಲಿಯೂ ಹೀರೋ ಓರಿಯೆಂಟೆಡ್‌ ಚಿತ್ರ ಎನಿಸುವುದಿಲ್ಲ.

ನಾಯಕ ಮೋಹನ್‌ ಮೊದಲ ಬಾರಿಗೆ ರೌದ್ರಾವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೇ ಚಿತ್ರದಲ್ಲಿ ಮೂರ್ನಾಲ್ಕು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಅಜ್ಜಿಯ ಪಾತ್ರಕ್ಕೆ ಜಯಂತಿ ಜೀವ ತುಂಬಿದ್ದಾರೆ. ಚಿತ್ರ ಎಂಬ ಪಾತ್ರದಲ್ಲಿ ಲಂಬೂ ನಾಗೇಶ್‌ ಅಭಿನಯ ಕೌಶಲ್ಯ ಮೆರೆದಿದ್ದಾರೆ. ಚಿತ್ರದ ಮೊದಲರ್ಧ ಭಾಗದಲ್ಲಿ ಛಾಯಾಗ್ರಹಣ ಗಮನ ಸೆಳೆಯುತ್ತದೆ. ಆದರೆ ಬೆಳಗಾವಿ ಜಿಲ್ಲೆಯ ಗೋಕಾಕ್‌ವರೆಗೂ ಹೋಗಿ ಅಲ್ಲಿನ ಜಲಪಾತ ಹಾಗೂ ನಿಸರ್ಗದ ರಮಣೀಯತೆಯನ್ನು ಸಂಪೂರ್ಣವಾಗಿ ತೋರಿಸದೇ ಇರುವುದು ಕೊಂಚ ಅಸಮಾಧಾನ ತರುತ್ತದೆ.

ಮೊದಲ ಹಾಡು, ಅದರ ಸಂಗೀತ ಸಂಯೋಜನೆ ಹಾಗೂ ಕ್ಯಾಮರಾ ಕೆಲಸಕ್ಕೆ ನೂರು ಅಂಕ. ಆದರೆ ನಂತರದ ಗೀತೆಗಳು ನೆನಪಿನಲ್ಲಿ ಉಳಿಯುವುದಿಲ್ಲ. ಸಂಭಾಷಣೆಯಲ್ಲಿ ದ್ವಂದ್ವಾರ್ಥದ ಕಿರಿಕಿರಿಯಿಲ್ಲ. ಕಥೆಯ ನಿರೂಪಣೆಯಲ್ಲಿ ಒಮ್ಮೊಮ್ಮೆ ಗೊಂದಲ ಗೋಚರಿಸುತ್ತದೆ. ಅನೇಕ ನ್ಯೂನತೆಗಳ ನಡುವೆಯೂ ನಿರ್ಮಾಪಕ ಹಾಗೂ ನಿರ್ದೇಶಕ ಸೂರ್ಯ ಅನ್ಯಾಯದ ವಿರುದ್ಧ ನ್ಯಾಯ ಗೆಲ್ಲುವ ಕಥೆಯಾಂದನ್ನು ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಿದ್ದಾರೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada