»   » ಕಾರಂತರಿಗೆ ಖಾರ ಪತ್ರ:ನಿಮ್‌ ‘ಸ್ಮೈಲ್‌’ ಹಿಂಗೇನ್ರೀ ?

ಕಾರಂತರಿಗೆ ಖಾರ ಪತ್ರ:ನಿಮ್‌ ‘ಸ್ಮೈಲ್‌’ ಹಿಂಗೇನ್ರೀ ?

Posted By:
Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ಸೀತಾರಾಮ್‌ ಕಾರಂತರಿಗೆ ದೀಡು ನಮಸ್ಕಾರ.

ನಿಮ್ಮ ಹೆಸರಿನ ಹಿಂದೆ ಪ್ರೀತಿಯ ವಿಶೇಷಣ ಬಳಸಲು ಮನಸಾಗುತ್ತಿಲ್ಲ. ಯಾಕೆಂದರೆ ನೀವು ಮೋಸ ಮಾಡಿದ್ದೀರಿ. ಶುರುವಿನಲ್ಲಿಯೇ ಹೀಗೆ ಹೇಳಿದ್ದಕ್ಕೆ ಸೆಟಗೊಳ್ಳಬೇಡಿ. ಇಷ್ಟು ಮುನಿಸಿನಿಂದ ಬರೆಯಲು ಇರುವ ಒಂದೇ ಕಾರಣ ನೀವು ನಿರ್ದೇಶಿಸಿದ ಸ್ಮೈಲ್‌ ಚಿತ್ರ.

ಹೆಸರಿಗಷ್ಟೇ ಅದು ‘ಸ್ಮೈಲ್‌’. ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ತಡಕಾಡಿದರೂ ತುಟಿಯ ಮೇಲೆ ನಗು ಮೂಡಿಸುವ ಒಂದೇ ಒಂದು ದೃಶ್ಯ ಸಿಗಲಿಲ್ಲ. ನೀವು ತಮಾಷೆ ಅಂದುಕೊಂಡಿರುವುದು ಪ್ರೇಕ್ಷಕರ ಆಕಳಿಕೆಗೆ ಕಾರಣವಾಗಿದೆ. ಅದು ಒತ್ತಟ್ಟಿಗಿಟ್ಟು , ಕತೆ ಎಲ್ಲಾದರೂ ಸಿಗುತ್ತವೆಂದರೆ ಅದು ಬುರ್‌ಬುಶ್‌. ಹಾಗೆ ನೋಡಿದರೆ ಇದು ಪ್ರೇಮಕತೆಯಾ ಅಥವಾ ಸಾಂಸಾರಿಕ ಕತೆಯಾ ಅಥವಾ ಕಾಮಿಡಿ ಚಿತ್ರವಾ... ಊಹೂಂ, ತಿಪ್ಪರಲಾಗ ಹಾಕಿದರೂ ಏನೂಂತ ಗೊತ್ತಾಗಲಿಲ್ಲ.

ಇನ್ನು ಕತೆ ಅಂತ ನೀವೇನು ತಿಳಿದುಕೊಂಡಿದ್ದೀರೋ ಅಲ್ಲಿಗೆ ಬರೋಣ.

ನಾಯಕ ನಾಯಕಿ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಳ್ಳದೇ ಪ್ರೇಮಿಗಳಾಗುತ್ತಾರೆ. ಲವ್‌ ಜಸ್ಟ್‌ ಹ್ಯಾಪನ್ಸ್‌. ಹಾಗಂತಲೇ ಇಟ್ಟುಕೊಳ್ಳೋಣ. ಆದರೆ ಅಂತಹ ಪ್ರೀತಿಗೆ ಇರಬೇಕಾದ ಮನೋಜ್ಞತೆ ಮತ್ತು ನವಿರತೆಯೇ ಮಂಗಮಾಯವಾಗಿದ್ದಕ್ಕೆ ಏನು ಹೇಳ್ತೀರಿ ? ನಾಯಕನ ಬಗ್ಗೆ ನಾಯಕಿ ಅನುಮಾನ ಪಡಲು ತೋರಿಸಿದ ಕಾರಣ ನಿಜವೆನಿಸಿದರೂ, ಆತ ಹಕೀಕತ್ತನ್ನು ಹೇಳದೆ ಯಾಕೆ ಮುಚ್ಚಿದ ಹಲ್ಲು ಮೂಗುದಾರ ಹಾಕಿಕೊಂಡಂತೆ ಸುಮ್ಮನಿರಬೇಕು ? ಆತನ ಮೇಲೆ ಅನುಮಾನ ಪಡಲು ಇರುವ ಘಟನೆಗಳಿಗೆ ತಲೆಬುಡವಿಲ್ಲ.

ಮಾತು ಬರೆದ ಕುಮಾರನಿಗೆ ಸಿನೆಮಾದ ಎಬಿಸಿಡಿ ಕಲಿಸಿಕೊಡಿ. ಮನೋಹರ್‌ ಹಾಡುಗಳಿಗೆ ಅವರ ಸಂಗೀತವೇ ಶತ್ರು. ಲಯವಿಲ್ಲದ ವಾಚ್ಯವಾಗಿರುವ ಹಾಡುಗಳಲ್ಲಿ ಏನೂ ಇಲ್ಲ. ಯಕ್ಷಗಾನ ಬಳಸಿಕೊಂಡ ಹಾಡು ಮಾತ್ರ ಅವರನ್ನು ಸಂಗೀತ ನಿರ್ದೇಶಕನೆನ್ನಲು ಇರುವ ಒನ್‌ ಆ್ಯಂಡ್‌ ಓನ್ಲಿ ಕಾರಣ. ನಿಜಕ್ಕೂ ಇಡೀ ಚಿತ್ರದಲ್ಲಿ ರಾಜನ್‌ ಛಾಯಾಗ್ರಹಣ, ಶಿವರಾಜ್‌ಕುಮಾರ್‌ ಅಭಿನಯವೆರಡೇ ನೋಡಲು ಅರ್ಹವಾಗಿವೆ. ಹಾಗೆಯೇ ಹೊಸ ಹುಡುಗಿ ಖುಷಿ, ನಾಯಕನ ಗೆಳೆಯರು ಸಹನೀಯವೆನಿಸುತ್ತಾರೆ.

ಇಷ್ಟುದ್ದ ಪತ್ರ ಬರೆಯಲು ಇದ್ದದ್ದು ಎರಡೇ ಕಾರಣ. ನೀವು ಗಾಂಧೀ ನಗರದ ಮಾಮೂಲಿ ನಿರ್ದೇಶಕ ಅಲ್ಲ. ಎರಡು, ಕೆಲವು ವರ್ಷಗಳ ಹಿಂದೆ ‘ಚಂದ್ರಮುಖಿ ಪ್ರಾಣ ಸಖಿ’ಯಂತಹ ಸದಭಿರುಚಿ ಚಿತ್ರ ನಿರ್ದೇಶನ ಮಾಡಿದ್ದು. ಈಗ್ಯಾಕೋ ನೀವು ಸುಸ್ತಾಗಿದ್ದೀರಿ. ಇನ್ನೇನು ಹೇಳುವುದು ? ಮತ್ತೊಂದು ‘ಚಂದ್ರಮುಖಿ...’ಗಾಗಿ ಕಾಯುತ್ತಿರುವ ಜನರಿಗೆ ಮುಂದಿನ ಚಿತ್ರದಲ್ಲಾದರೂ ಉತ್ತರಿಸಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X