»   » ಎಲ್ಲಿಗೆ ಬಂದ್ಯೋ ದೇವಣ್ಣ ? ಅಲ್ಲೇ ಇದ್ದೀನಿ ಕೇಳಣ್ಣಾ...

ಎಲ್ಲಿಗೆ ಬಂದ್ಯೋ ದೇವಣ್ಣ ? ಅಲ್ಲೇ ಇದ್ದೀನಿ ಕೇಳಣ್ಣಾ...

Posted By:
Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

‘ಭಪ್ಪರೆ ಗಂಡೇ’ ಥೇಟರಿನ ಹೆಬ್ಬಾಗಿಲಲ್ಲಿ ನಿಂತವರು ಹೀಗೊಂದು ಉದ್ಗಾರ ತೆಗೆವುದಂತೂ ಖಂಡಿತ. ಅಂತೂ ದೇವರಾಜ್‌ ಚಿತ್ರ ನೋಡಲು ಮತ್ತೆ ಜನರು ಮುಗಿಬೀಳುತ್ತಿದ್ದಾರಲ್ಲ ಎಂದು ಅಂದುಕೊಳ್ಳುತ್ತಾ ಎರಡು ಹೆಜ್ಜೆ ಇಟ್ಟರೆ ಪುಟ್ಟದೊಂದು ಶಾಕ್‌ ಟ್ರೀಟ್‌ಮೆಂಟ್‌. ಜನರು ಸೇರಿದ್ದು ದೇವು ಸಿನಿಮಾಗಲ್ಲ. ಪಕ್ಕದಲ್ಲಿ ನಡೆಯುತ್ತಿದ್ದ ‘ರಕ್ತ ಕಣ್ಣೀರು’ ಚಿತ್ರಕ್ಕಾಗಿ. ಛಿದ್ರವಾದ ಕನಸು ಹೊತ್ತು ಥಿಯೇಟರ್‌ ಬಾಗಿಲ ಬಳಿ ಬಂದರೆ ಬರುವವರಿಗೇ ಕಾದಿದ್ದವನಂತೆ ಗೇಟ್‌ಕೀಪರ್‌ ಎರಡೂ ಕೈಯಿಂದ ಸ್ವಾಗತಿಸಿದ. ಒಂದು ಸಾಲಿನ ಸೀಟಾದರೂ ತುಂಬುತ್ತದೆಯಲ್ಲ ಎನ್ನುವ ಭಯಂಕರ ಖುಷಿ ಆತನ ಕಣ್ಣಲ್ಲಿ ಫಡಫಡಿಸಿತ್ತು. ‘ನಂಬರ್‌ ಇಲ್ಲ, ಎಲ್ಲಿ ಬೇಕಾದರೂ ಕೂಡಬಹುದು’ ಅಂತ ಸೌಜನ್ಯದಿಂದ ದಾರಿ ತೋರಿದ. ಒಳಗಡಿ ಇಡುವಷ್ಟರಲ್ಲಿ ಡೈನಾಮಿಕ್‌ ದೇವು ಆಕಾಶದಲ್ಲಿ ಹಾರಿ ಹಾರಿ ರೌಡಿಗಳನ್ನು ಸದೆಬಡಿಯುತ್ತಿದ್ದ. ಅದು ಮುಗಿದ ತಕ್ಷಣ ತೊಡೆ ಕಾಣುವಂತೆ ಮಿಡಿ ತೊಟ್ಟ ಚೆಲುವೆ (?)ಯಾಬ್ಬಳು ಆತನಿದ್ದಲ್ಲಿಗೆ ಬರುತ್ತಾಳೆ. ‘ನೀವು ಗ್ರೇಟ್‌’ ಅಂತ ಹೂಗುಚ್ಛ ಕೊಡ್ತಾಳೆ. ಅದೆಲ್ಲ ಇಷ್ಟವಿಲ್ಲವೆಂದು ನಾಯಕ ನಖರಾ ಮಾಡುತ್ತಾನೆ. ಜತೆಗೊಂದು ಸಲಹೆ ಕೊಡುತ್ತಾನೆ, ‘ಮಾಡ್‌ ಡ್ರೆಸ್‌ ಹಾಕೋದು ತಪ್ಪಲ್ಲ, ಆದರೆ ಪ್ರಚೋದಕ ಬಟ್ಟೆ ಹಾಕ್ಯಾಳಾದು ನಂಗಿಷ್ಟವಿಲ್ಲ’. ಆತನ ಇಷ್ಟವನ್ನೇ ಕೇಳಲು ಬಂದವಳಂತೆ ಅವಳು ಚೂಡಿ ಹಾಕ್ಕೊಂಡು ಬಂದು ‘ಐ ಲವ್‌ ಯು’ಅಂತಾಳೆ. ಈತ ಮೊದಲಸಲವೇನೋ ಎಂಬಂತೆ ನಾಚಿ ನೀರಾಗಿ ಬಳಲಿ... ಬೆಂಡಾಗಿ...

ಹೀಗೆ ಸಾಗುತ್ತದೆ ‘ಇನ್ಸ್‌ಪೆಕ್ಟರ್‌ ಜಯಸಿಂಹ’ ಎಂಬ ಸಿನಿಮಾ. ಖಾಕಿ ತೊಟ್ಟ ದೇವರಾಜ್‌ ಸಮಾಜಘಾತುಕರಿಗೆ ಸಿಂಹಸ್ವಪ್ನ. ಊರಿಗೆ ಉಪಕಾರಿ. ವರದಕ್ಷಿಣೆಗಾಗಿ ಸೊಸೆಯನ್ನು ಸುಡುವ ಯತ್ನ ಮಾಡಿದವರನ್ನು ಈತನ ಒಂದು ಡೈಲಾಗು ಸುಧಾರಿಸಬಲ್ಲುದು. ಕಳ್ಳಭಟ್ಟಿ ಶೆರೆ ಮಾರುವವರನ್ನು ಈತ ನಿಮಿಷಾರ್ಧದಲ್ಲಿ ಪತ್ತೆ ಹಚ್ಚಿ ಒದೆ ನೀಡುವ ತಾಕತ್ತೂ ಇದೆ. ಈತನಿಗೆ ನಾಯಕಿ ಗಂಟುಬೀಳುತ್ತಾಳೆ. ಲವ್‌ ಮಾಡ್ತೀನಿ ಅಂತಾಳೆ. ಎಷ್ಟಾದರೂ ಉಪ್ಪು ಹುಳಿ ತಿನ್ನುವ ದೇಹ. ಪಡಪೋಸಿ ಕವಲೆತ್ತಿನಂತೆ ಗೋಣು ಹಾಕುತ್ತೆ. ಒಂದು ರಾತ್ರಿ ಪಾರ್ಕಿಗೆ ಕರೆದ ಅವಳು, ಅವನಿಗೆ ಗುಂಡು ಹಾರಿಸುತ್ತಾಳೆ. ಕಾರಣ, ಅವಳ ಅಣ್ಣನನ್ನು ದೇವರಾಜ್‌ ಕೊಂದಿರುವನೆಂಬ ಭ್ರಮೆ ಆಕೆಗಿರುತ್ತದೆ. ಆಗ ಅವಳ ಅಣ್ಣನಾಗಿ ಬರುವ ನಟ ಭಯಂಕರನ ಹೆಸರು ಅಭಿಜಿತ್‌ ಕಣ್ರೀ.. ಅಭಿಜೀತು...

ದೇವರಾಜ್‌ ಖಾಕಿ ಡ್ರೆಸ್ಸಿನಲ್ಲಿ ಈ ಹಿಂದೆ ಸಾಕಷ್ಟು ಸರ್ತಿ ಕಾಣಿಸಿಕೊಂಡಿದ್ದಾರೆಂದರೆ, ಇಂತಹ ಕತೆ ತುಂಬಾ ಹಳೆಯದಾಯಿತೆಂದರೆ, ಇವರೇಕೆ ಸವಕಲಾದ ಕತೆ ಆರಿಸಿಕೊಳ್ಳುತ್ತಾರೆಂದು ಚರ್ಚಿಸಲು ಹೊರಟರೆ ತಲೆ ಅನ್ನೋದು ್ಫಛಿದ್ರವಾದೀತು.

ಹ.ಸೂ.ರಾಜಶೇಖರ್‌ ಎಂಬ ನಿರ್ದೇಶಕ ಕೇವಲ ಹದಿನೇಳು ದಿನಗಳಲ್ಲಿ ಈ ಸಿನಿಮಾ ಸುತ್ತಿ ಕೊಟ್ಟಿದ್ದಾರೆಂದರೆ ಅವರ ಕಲಾ ಪರಿಣತಿ ಬಗ್ಗೆ ಏನು ಹೇಳೋದು? ಅವರೊಂದಿಗೆ ಸ್ವಸ್ತಿಕ್‌ ಶಂಕರ್‌ ಹೆಸರಿನ ನಿರ್ಮಾಪಕ ಜೋಡು ತೆಂಗಿನಕಾಯಿಯಂತೆ ಸದಾ ಇರುತ್ತಾರೆ. ಮೂವತ್ತು ಲಕ್ಷ ಸುರಿಯುತ್ತಾರೆ. ತಮ್ಮ ಮಕವನ್ನು ಸಿನಿಮಾದಲ್ಲಿ ತೋರಿಸುತ್ತಾರೆ. ಹಾಕಿದ ದುಡ್ಡಿನ ಜೊತೆಗೆ ಐದಾರು ಲಕ್ಷ ಕೈಸೇರಿದರೂ ಸಾಕಲ್ಲವೆ? ಹೇಗೊ ಲಾಭ ಬರುತ್ತೆ ಎನ್ನುವ ಕಾರಣಕ್ಕೆ ನಾಲ್ಕು ಫೈಟು, ಒಂದೆರಡು ಹಸಿಬಿಸಿ ಹಾಡು, ಹಸಿಹಸಿ ಹುಡುಗಿಯರನ್ನು ಸೇರಿಸಿ ಸಿನಿಮಾ ಮಾಡುತ್ತಾರೆ. ಹೊರಗಿನವರು ಕನ್ನಡ ಸಿನಿಮಾ ಅಂದ್ರೆ ಹಿಂಗಾ ಅಂತ ಇಡೀ ಚಿತ್ರರಂಗವನ್ನೇ ಉಗಿಯುತ್ತಾರೆ. ರಾಜಶೇಖ್ರು, ಸ್ವಸ್ತಿಕ್‌ ಶಂಕ್ರು ನಾವಿರೋದು ಹಿಂಗೇಯಾ ಎನ್ನುತ್ತಾ ಎಡಗೈಯಿಂದ ಮುಖವನ್ನು ...

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada