»   » ಉಪೇಂದ್ರನ ‘ಓಂಕಾರ’ದ ಹೂಂಕಾರ

ಉಪೇಂದ್ರನ ‘ಓಂಕಾರ’ದ ಹೂಂಕಾರ

Subscribe to Filmibeat Kannada
  • ಎಂ.ಡಿ.
ಆತ ರೌಡಿ. ಭೂಗತ ಲೋಕಕ್ಕೆ ಸಿಂಹಸ್ವಪ್ನ. ಅಂಥವನು ಒಂದು ಕಾಲದಲ್ಲಿ ಭೋಲಾಭಾಲಾ ಹುಡುಗ. ಆಗ ಅವನಿಗೆ ನಾಯಕಿ ಪರಿಚಯವಾಗುತ್ತದೆ. ಅವಳಿಗೆ ಆಟ ಆಡಿಸಲೆಂದು ಆತ ಪ್ರೀತಿಯ ನಾಟಕವಾಡುತ್ತಾನೆ. ಅದು ಗೊತ್ತಾಗಿ ನಾಯಕಿ ಕಣ್ಣೀರುಗರೆಯುತ್ತಾಳೆ. ಆತನೂ ಕಣ್ಣೀರಾಗಿ ಪ್ರೇಮದ ಬಲೆಯಲ್ಲಿ ಬೀಳುತ್ತಾನೆ. ಕೊನೆಗೆ ಅವಳೇ ಬಾಂಬ್‌ ಹಾಕುತ್ತಾಳೆ. ‘ನನಗೆ ಹೀರೊಯಿನ್‌ ಆಗುವ ಆಸೆ. ಅದಕ್ಕೆ ನನ್ನ ಅಭಿನಯ ಸಾಮರ್ಥ್ಯ ಪರೀಕ್ಷಿಸಲು ನಿನ್ನೊಂದಿಗೆ ಪ್ರೀತಿಯ ನಾಟಕವಾಡಿದೆ. ಅದನ್ನು ನೀನು ನಂಬಿದೆ. ನಾನು ಉತ್ತಮ ಅಭಿನೇತ್ರಿ ಅಂತ ಸಾಬೀತಾಯಿತು. ಗುಡ್‌ಬಾಯ್‌’ ಅಂತಾಳೆ. ಆತ ರೌಡಿಯಾಗುತ್ತಾನೆ. ಮುಂದೊಮ್ಮೆ ಅವಳನ್ನೇ ಕರೆಸಿ ತಾನೇ ನಾಯಕನಾಗಿ ಸಿನಿಮಾ ಮಾಡಲು ತೊಡಗುತ್ತಾನೆ. ಮುಂದೇನಾಗುತ್ತೆ.. ತೆರೆ ಮೇಲೆ ನೋಡಿ.

ಹೀಗೆ ಸೀದಾ ಸಾದಾ ಹುಡುಗ ರೌಡಿಯಾಗೋದು ಹೊಸ ವಿಷಯವೇನಲ್ಲ. ಆದರೆ ಹಾಗೆ ರೌಡಿಯಾಗಿ ಸಿನಿಮಾದಲ್ಲಿ ಹೀರೋ ಆಗುವುದಿದೆಯಲ್ಲ.. ಅದಪ್ಪಾ ಹೊಸ ಸಂಗತಿ. ಹೀರೋ ಆಗಿ ಹೀರೋಯಿನ್‌ ಮೇಲಿನ ಸೇಡು ತೀರಿಸಿಕೊಳ್ಳುವುದಿದೆಯಲ್ಲ ಅದು ಹೇಳಬೇಕಾದ ಸಂಗತಿ. ಇಷ್ಟೆಂದರೆ ಇಷ್ಟೇ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಶಿವಮಣಿ. ಅದಕ್ಕೆ ಕಾರಣ ಉಪೇಂದ್ರ. ಉಪ್ಪಿ ಇಮೇಜು ಅವರಿಗೆ ಗೊತ್ತು. ಅದಕ್ಕಾಗಿ ಚಿಕ್ಕ ಎಳೆಯ ಕತೆಗೆ ಪಂಚಿಂಗ್‌ ದೃಶ್ಯಗಳನ್ನು ಹೆಣೆದಿದ್ದಾರೆ. ಅದಕ್ಕೆ ಉಪ್ಪಿ ಅವರಿಂದಲೇ ಹಿತವಚನದ ಸಂಭಾಷಣೆ ಬರೆಸಿದ್ದಾರೆ.

ಸಾಮಾನ್ಯವಾಗಿ ಶಿವಮಣಿ ಚಿತ್ರದಲ್ಲಿ ಸಿಗುವ ಗಂಭೀರತೆ ಇಲ್ಲಿ ಪೂರ್ತಿಯಾಗಿ ಸಿಗುವುದಿಲ್ಲ. ಒನ್ಸ್‌ ಆಗೇನ್‌ ಅದಕ್ಕೆ ಕಾರಣ ಉಪೇಂದ್ರ. ಇಷ್ಟಾದರೂ ಟೇಕಿಂಗ್ಸ್‌ನಲ್ಲಿ ಮಣಿ ತಮ್ಮತನ ಕಾದುಕೊಂಡಿದ್ದಾರೆ. ಹೊಡೆದಾಟದ ದೃಶ್ಯಗಳಲ್ಲೂ ಇದು ಎದ್ದು ಕಾಣುತ್ತದೆ. ಉಪೇಂದ್ರ ಅತಿರೇಕವಿಲ್ಲದೆ ಇಷ್ಟವಾಗುತ್ತಾರೆ. ಅವರ ಸಂಭಾಷಣೆ ಕೆಲವು ಕಡೆ ಚಪ್ಪಾಳೆಗಿಟ್ಟಿಸುತ್ತದೆ. ಗುರುಕಿರಣ್‌ ಸಂಗೀತದಲ್ಲಿ ಮೂರು ಹಾಡುಗಳು ಕೇಳುವಂತಿವೆ. ವೇಣು ಛಾಯಾಗ್ರಹಣ ಕೂಡಾ ಮುಂಬೈ ತೀರದಲ್ಲಿ ಲಕಲಕಿಸುತ್ತದೆ.

ಪ್ರೀತಿ ಜಿಂಗಾನಿಯಾ ಮುದ್ದು ಮುದ್ದಾಗಷ್ಟೇ ಕಾಣುತ್ತಾಳೆ. ದೊಡ್ಡದೊಂದು ಕ್ಯಾನ್ವಾಸಿನ ಮೇಲೆ ನೂರಾರು ಬಣ್ಣಗಳನ್ನು ಒಂದೇ ಸಲಕ್ಕೆ ಚೆಲ್ಲಿದರೆ ಯಾವದನ್ನು ನೋಡಬೇಕೊಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಶ್ರೀಮಂತವಾಗಿ ಮೂಡಿಬಂದಿರುವ ‘ಓಂಕಾರ ’ಅಷ್ಟಕ್ಕೆ ಸೀಮಿತವಾಗಿಲ್ಲ ಅನ್ನುವುದು ಸಮಾಧಾನ. ನೋಡುವವರಿಗೆ ಕೊಂಚ ವ್ಯವಧಾನ.

(ಸ್ನೇಹ ಸೇತು : ವಿಜಯಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada