»   » ‘ತನನಂ ತನನಂ’ ನೋಡಿ ಖುಷಿಪಡಿ!

‘ತನನಂ ತನನಂ’ ನೋಡಿ ಖುಷಿಪಡಿ!

Subscribe to Filmibeat Kannada


ಚಿತ್ರದಲ್ಲಿ ರಕ್ಷಿತಾ ಮತ್ತು ರಮ್ಯಾ ಇಬ್ಬರೂ ಪಕ್ವವಾಗಿದ್ದಾರೆ. ರಕ್ಷಿತಾ ಕೊಂಚ ಜಾಸ್ತಿ! ಜೊತೆಗೆ ಚಿತ್ರವನ್ನು ಚೆಂದ ಮಾಡುವಲ್ಲಿ ಕಲ್ಯಾಣ್‌ ಮತ್ತು ಕವಿತಾ ಕರಾಮತ್ತೇನು ಕಡಿಮೆಯಿಲ್ಲ.

ಚಿತ್ರ : ತನನಂ ತನನಂ
ನಿರ್ದೇಶಕ : ಕವಿತಾ ಲಂಕೇಶ್‌
ನಿರ್ಮಾಪಕ : ಎನ್‌.ಎಂ. ಸುರೇಶ್‌
ಸಂಗೀತ : ಕೆ.ಕಲ್ಯಾಣ್‌
ತಾರಾಗಣ : ರಮ್ಯಾ, ರಕ್ಷಿತಾ, ಶ್ಯಾಮ್‌, ಗಿರೀಶ್‌ ಕಾರ್ನಾಡ್‌, ಭಾರತಿ ಮತ್ತಿತರರು

ಅವನಿಗೆ ಆಕೆ ಬೇಕು. ಆಕೆಗೆ ಇನ್ಯಾರೋ ಬೇಕು. ಅವರ ನಡುವೆ ಬರುವ ಮತ್ತೊಬ್ಬಾಕೆಗೆ ಆತನೇ ಬೇಕು. ಎಲ್ಲರದೂ ಪ್ರೀತಿ ಹುಡುಕಾಟ, ತಡಕಾಟ.

ಯಾವ ಹೂವು ಯಾರ ಮುಡಿಗೊ ಅನ್ನುವಷ್ಟರಲ್ಲಿ ಹೂವು ಅವರವರ ಮುಡಿಗೆ ಏರುತ್ತದೆ. ಹೀಗೆಲ್ಲ ಹೇಳಿದರೆ ಅರ್ಥವಾಗಲು ಸಾಧ್ಯವೆ? ಅದಕ್ಕೆ ಕತೆ ಕೇಳಿಬಿಡಿ. ನಾಯಕ ಶ್ಯಾಮ್‌ಗೆ ರಂಗಭೂಮಿ ನಟಿ ರಕ್ಷಿತಾಳನ್ನು ಕಂಡರೆ ಇಷ್ಟ. ಆದರೆ, ಆಕೆಗೆ ಅದಾಗಲೇ ಒಂದು ಅಫೇರ್‌ ಮುಗಿದಿರುತ್ತದೆ. ಅದಲ್ಲದೆ ರಕ್ಷಿತಾಳನ್ನು ನಂಬಿಕೊಂಡು ನಲವತ್ತು ಮಂದಿಯ ನಾಟಕ ತಂಡ ಇರುತ್ತದೆ. ಅದಕ್ಕಾಗಿ ಆಕೆ ತನ್ನ ಪ್ರೀತಿಯನ್ನು ಬಲಿಕೊಡುತ್ತಾಳೆ. ಶ್ಯಾಮ್‌ನನ್ನು ಅದೇ ಕಾರಣದಿಂದ ದೂರ ಇಡುತ್ತಾಳೆ.

ಇತ್ತ ರಮ್ಯಾಗೆ ಶ್ಯಾಮ್‌ ಮೇಲೆ ಆಸೆ. ಆತನಿಗೆ ರಕ್ಷಿತಾ ಕಂಡರೆ ಅಕ್ಕರೆ. ಕೊನೆಗೆ ಆತ ದಾಸನಾಗುತ್ತಾನೆ. ಕುಡಿದ ಮತ್ತಿನಲ್ಲಿ ಕುರುಡನಾಗುತ್ತಾನೆ. ಆಗ ಆತನಿಗೆ ಕಣ್ಣಾಗುತ್ತಾಳೆ ರಮ್ಯಾ. ಆದರೆ, ಆತನಿಗೆ ರಕ್ಷಿತಾ ಗುಂಗು. ಆ ಗುಂಗನ್ನು ಬಿಡಿಸಲು ರಮ್ಯಾ, ರಕ್ಷಿತಾಳಂತೆ ಅಭಿನಯಿಸುತ್ತಾಳೆ. ಇನ್ನೇನು ಮದುವೆ ಆಗಬೇಕು ಎನ್ನುವಾಗ ತಾನು ರಕ್ಷಿತಾ ಅಲ್ಲ ಎನ್ನುವ ಸತ್ಯ ಹೇಳುತ್ತಾಳೆ. ಆಮೇಲೆ ಏನಾಗುತ್ತದೆ? ಅದನ್ನು ಸಿನಿಮಾ ನೋಡಿ ತಿಳಿಯಿರಿ.

ಇದೊಂದು ಸಾಮಾನ್ಯ ಕತೆ. ತ್ರಿಕೋನ ಪ್ರೇಮ ಕತೆಗಳಿಗೆ ನಮ್ಮಲ್ಲಿ ಬರವಿಲ್ಲ. ಆದರೂ ಆಗಾಗ ಕಾಲಕ್ಕೆ ತಕ್ಕಂತೆ ಅದನ್ನೇ ಆಚೀಚೆ ಮಾಡಿ ಸಿನಿಮಾ ತಯಾರಾಗುತ್ತವೆ. ಆದರೆ ‘ತನನಂ ತನನಂ’ ವಿಭಿನ್ನ ಅನ್ನಿಸೋದು ಸಂಗೀತದ ಹಿನ್ನೆಲೆಯ ಕತೆಯಿಂದ. ನಾಯಕ ಪಿಟೀಲು ವಾದಕನಾಗಿ ಕಾಣಿಸಿದ್ದಾನೆ. ಚಿತ್ರವನ್ನು ಸುಮ್ಮನೆ ನೋಡಿದರೆ ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆ. ಅದಕ್ಕೆ ನಿರೂಪಣೆಗಿಂತ ಸಂಗೀತ ಸಾಥ್‌ ನೀಡುತ್ತದೆ.

ಹಾಡು ಬರೆದು ಸಂಗೀತ ನೀಡಿರುವ ಕೆ. ಕಲ್ಯಾಣ್‌ ಒಂದೊಂದು ಹಾಡನ್ನು ಅಕ್ಷರಶಃ ಭಕ್ತಿಯಿಂದ ರಚಿಸಿದ್ದಾರೆ. ಅಷ್ಟೇ ಶ್ರದ್ಧೆಯಿಂದ ಸಂಗೀತ ಜೋಡಣೆ ಮಾಡಿದ್ದಾರೆ. ಹಾಡುಗಳೇ ಕತೆ ಹೇಳುವಂತಿವೆ. ಭರ್ತಿ ಎಂಟು ಹಾಡುಗಳಲ್ಲಿ ಆರು ಹಾಡುಗಳು ಅಮಲು ಏರಿಸುತ್ತವೆ. ಆದರೆ ಚಪ್ಪದವರೆಕಾಯಿ ಹಾಡು ಕತೆಗೆ ಯಾವ ರೀತಿಯಿಂದಲೂ ಪೂರಕವಾಗಿಲ್ಲ.

ಕಲ್ಯಾಣ್‌ಗೆ ಸರಿಸಾಟಿಯಾಗಿ ನಿಂತವರು ರಮ್ಯಾ ಮತ್ತು ರಕ್ಷಿತಾ. ಚಿತ್ರದಿಂದ ಚಿತ್ರಕ್ಕೆ ರಮ್ಯಾ ಬೆಳೆಯುತ್ತಿರುವ ರೀತಿ ಮಾತ್ರ ಅನನ್ಯ. ನಾಯಕನನ್ನು ಕಾಡುವ ಹುಡುಗಿಯಾಗಿ, ಕೊನೆಯಲ್ಲಿ ಆತನ ಡಮ್ಮಿ ಪ್ರೇಯಸಿಯಾಗಿ ರಮ್ಯಾ ಎಕ್ಸಲೆಂಟ್‌. ಹಳ್ಳಿಗಾಡಿನ ಉಡುಪುಗಳು ಆಕೆಯ ಚೆಂದವನ್ನು ಬೇರೊಂದು ರೀತಿಯಲ್ಲಿ ಬಿಡಿಸಿಟ್ಟಿವೆ.

ರಕ್ಷಿತಾ ಇಂಥ ಪ್ರಬುದ್ಧ ಪಾತ್ರದಲ್ಲಿ ನಟಿಸಿದ್ದು ಇದೇ ಮೊದಲು. ಚೆಲ್ಲುಚೆಲ್ಲುತನವನ್ನು ಬದಿಗಿಟ್ಟು ಗಂಭೀರ ಅಭಿನಯದಿಂದ ಆಕೆ ಹಿಂದಿಯ ಅಂದಿನ ಜಯಾ ಬಾಧುರಿಯನ್ನು ನೆನಪಿಸುತ್ತಾರೆ. ಇಬ್ಬರೂ ಪಕ್ವವಾಗಿದ್ದಾರೆ. ರಕ್ಷಿತಾ ಕೊಂಚ ಜಾಸ್ತಿ! ಆದರೆ, ನಾಯಕನ ಬಗ್ಗೆ ಇದೇ ಮಾತನ್ನು ಹೇಳೋದು ಕಷ್ಟ. ಇಂಥ ಅಭಿನಯಕ್ಕೆ ಆತನನ್ನು ತಮಿಳಿನಿಂದ ಕರೆ ತರುವ ಅಗತ್ಯ ತಿಮ್ಮಪ್ಪನಾಣೆಗೂ ಇರಲಿಲ್ಲ.

ಸಂಭಾಷಣೆ ತುಂಬ ಪೇಲವ. ಎಲ್ಲೊ ಕೇಳಿದಂತೆ ಅನ್ನಿಸುತ್ತದೆ. ಸಂಕಲನದಲ್ಲೂ ಎಡವಟ್ಟು ಕಾಣಿಸುತ್ತದೆ. ಚಿತ್ರಕತೆ ಇನ್ನಷ್ಟು ಬಿಗಿಯಾಗಿ ಇರಬೇಕಾಗಿತ್ತು. ಕವಿತಾ ಲಂಕೇಶ್‌ ಅವರ ನಿರ್ದೇಶನ ಬಿಗಿಯಾಗಿದೆ. ಒಟ್ಟಿನಲ್ಲಿ ರಮ್ಯಾ, ರಕ್ಷಿತಾ ಮತ್ತು ಕಲ್ಯಾಣ್‌ ಕರಾಮತ್ತು ಸವಿಯಲು ನೀವೊಮ್ಮೆ ಇದನ್ನು ನೋಡಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada