»   » ಒಂದು ಮುತ್ತಿನಂಥ ಕತೆ : ಸುದೀಪನೆಂಬ ಸಾಗರದಲ್ಲಿ

ಒಂದು ಮುತ್ತಿನಂಥ ಕತೆ : ಸುದೀಪನೆಂಬ ಸಾಗರದಲ್ಲಿ

Subscribe to Filmibeat Kannada
  • ಮಹೇಶ್‌ ದೇವಶೆಟ್ಟಿ
ಚಿತ್ರ : ಸ್ವಾತಿ ಮುತ್ತುನಿರ್ದೇಶನ : ಡಿ.ರಾಜೇಂದ್ರ ಬಾಬುತಾರಾಗಣ : ಸುದೀಪ್‌, ಮೀನಾ, ಲೀಲಾವತಿ, ದೊಡ್ಡಣ್ಣ. ಮಾ । ಕಿಶನ್‌ ಮುಂತಾದವರು.
ಅವಳ ಸಾವಿನ ಗಳಿಗೆ ಹತ್ತಿರ ಬಂದಿದೆ. ತುಳಸಿ ಕಟ್ಟೆ ಹತ್ತಿರ ಕರಕೊಂಡು ಹೋಗಿ. ಅಲ್ಲಿ ಸತ್ತರೆ ಮುಂದಿನ ಜನ್ಮದಲ್ಲಿ ನೀವೇ ಗಂಡನಾಗ್ತೀರಿ ಅಂತಾಳೆ. ಅವಳನ್ನು ಎದೆಗವಚಿಕೊಂಡು ಆತ ಹೇಳುತ್ತಾನೆ. ಇನ್ನು ಎರಡು ತಿಂಗಳು ಬಿಟ್ಟು ಹೋಗೇ ಏಕಾದಶಿ ಬರುತ್ತೆ. ಆಗ ಸತ್ತರೆ ನೇರವಾಗಿ ಸ್ವರ್ಗಕ್ಕೇ ಹೋಗ್ತೀಯಾ. ಅದಕ್ಕವಳು ಅಷ್ಟು ದಿನ ದೇವರು ಬಿಡೋಲ್ಲ ಅಂತಾಳೆ. ಹೋಗ್ಲಿ ಒಂದು ತಿಂಗಳು ತಡೆದುಕೊ. ಮೊಮ್ಮಗು ಮುಖ ನೋಡಿ ಹೋಗುವೆಯಂತೆ... ಸಾವಿನ ಅರ್ಥವೇ ಗೊತ್ತಿಲ್ಲದ ಆತ ಹೀಗೆ ಹೇಳುತ್ತಾ ಅವಳನ್ನು ತುಳಸೀಕಟ್ಟೆ ಮೇಲೆ ಮಲಗಿಸುತ್ತಾನೆ.

ಇದನ್ನು ನೋಡ್ತಾ ನೋಡ್ತಾ ಸತ್ತ ಅಮ್ಮನೊ, ಇರುವ ಹೆಂಡತಿಯಾ, ಎದೆತುಂಬ ನಗುವಿನ ಹೂಕುಂಡ ತುಂಬಿಕೊಂಡ ಮಗುವೊ ನೆನಪಾದರೆ, ಎದೆ ತುಂಬಿ ಬಂದರೆ, ಎಲ್ಲ ದೊಡ್ಡತನ, ಸ್ವಾಭಿಮಾನ ಮರೆಸುವಂತೆ ಕಣ್ಣು ತೇವವಾದರೆ ಜಸ್ಟ್‌ಸೇ, ಕಂಗ್ರಾಟ್ಸ್‌ ಟು ಸುದೀಪ್‌. ಯಾಕೆಂದರೆ ಒಂದೊಂದು ಮಾತು ಒಂದೊಂದು ಕತೆಯಾಗಿ, ಒಂದೊಂದು ದೃಶ್ಯ ಒಂದೊಂದು ಕೃತಿಯಾಗಿ, ಚಿತ್ರವೇ ಒಂದು ಕಾವ್ಯವಾಗಿ, ಎರಡೂವರೆ ಗಂಟೆ ಪಕ್ಕದಲ್ಲಿ ಕುಳಿತವರ ನೆನಪೇ ಆಗದಂತೆ ನೋಡಿಸಿಕೊಂಡು ಹೋಗುವುದಿದೆಯಲ್ಲಾ... ಅದು ಮತ್ತು ಅದೇ ಇದಕ್ಕೆಲ್ಲ ಏಕೈಕ ಕಾರಣ. ಎಲ್ಲದಕ್ಕೂ ಸುದೀಪನೇ ಬೆಲ್ಲದ ಹೂರಣ.

ಕಮಲ ಹಾಸನ್‌ ಮಾಡಿದ ಪಾತ್ರವನ್ನು ಯಾರಿಗೂ ನಿಭಾಯಿಸೋದು ಸಾಧ್ಯವಿಲ್ಲ ಬಿಡಿ. ಹೀಗಂದವರು, ಹೀಗೆನ್ನುವವರು ಒಮ್ಮೆ ಇದನ್ನು ನೋಡಿ. ಕನ್ನಡಕ್ಕೊಬ್ಬ ಕಮಲ್‌ ಬಂದಿರೋದು ಗೊತ್ತಾಗುತ್ತದೆ. ಎಷ್ಟೋ ನಟರು ಕಮಲ್‌ ಪಾತ್ರಗಳನ್ನು ನಿರ್ವಹಿಸಿ ಸೋತಿದ್ದಾರೆ. ಕೆಲವರು ಸೋಲೆಂಬ ಶಬ್ದದ ಆಚೆ ಕಡೆಗೇ ನಿಂತಿದ್ದಾರೆ. ಆದರೆ ಒಬ್ಬ ಸುದೀಪ್‌ ಎಲ್ಲರ ತಲೆಸವರಿ ಎಲ್ಲವನ್ನೂ ಮಾಡಿ ತೋರಿಸಿ ಏನೂ ಆಗಿಲ್ಲವೆಂಬಂತೆ ನಿಂತಿದ್ದಾರೆ. ಇದುವರೆಗೆ ಇವರು ನಟಿಸಿದ ಚಿತ್ರಗಳಲ್ಲಿ ಇದಕ್ಕೇ ಫಸ್ಟ್‌ಪ್ರೆೃಜು !

ಬಹುಶಃ ಚಿತ್ರದ ಕತೆ ಎಲ್ಲರಿಗೂ ಗೊತ್ತಿರುತ್ತದೆ. ಮುಗ್ಧ ಮನುಷ್ಯನೊಬ್ಬನ ಬದುಕಿನ ನೋವು, ಸಂತೋಷ, ಮಾನವೀಯತೆ ಸುತ್ತ ಕತೆ ಹೆಣೆಯಲಾಗಿದೆ. ವಿಧವೆಯಾಬ್ಬಳ ಯಾತನೆ ನೋಡಲಾರದೆ ಅವಳಿಗೆ ನಾಯಕ ಬಾಳುಕೊಡುತ್ತಾನೆ. ಆದರೆ ಆ ಸಂಬಂಧದ ಅರಿವೇ ಆತನಿಗಿರುವುದಿಲ್ಲ.

ನಿಧಾನವಾಗಿ ಪತಿಯ ಸ್ಥಾನ, ಅಪ್ಪನ ಜವಾಬ್ದಾರಿ ಏನೆಂದು ತಿಳಿಯುತ್ತಾನೆ. ಇಂಥದೊಂದು ಚಿಕ್ಕ ಎಳೆಯ ಕತೆಗೆ ಸೆನ್ಸಿಟಿವ್‌ ಚಿತ್ರಕತೆಯೇ ಜೀವಾಳ. ನವಿರಾದ ನಿರೂಪಣೆಯೇ ಬಂಡವಾಳ. ಬದುಕಿಗೆ ಮತ್ತು ಮನಸ್ಸಿಗೆ ಹತ್ತಿರವೆನಿಸುವ, ಆಪ್ತವೆನಿಸುವ, ಅಗತ್ಯಕ್ಕಿಂತ ಹೆಚ್ಚಲ್ಲದ ಮಧುರವಾದ ಸೆಂಟಿಮೆಂಟಿನ ದೃಶ್ಯ ಹಾಗೂ ಮಾತುಗಳು ಒಂದರ ಹಿಂದೊಂದು ಬಂದು ಕದ ತಟ್ಟಿ ನಗಿಸುತ್ತವೆ. ಕೆಲವೊಮ್ಮೆ ಅಳಿಸುತ್ತವೆ. ಮಾತಿನಿಂದ ಹೆಚ್ಚಾಗಿ ಮೌನದಿಂದಲೇ ತೆರೆಮೇಲೆ ವಿಜೃಂಭಿಸುವ ಸುದೀಪ್‌ ಬಗ್ಗೆ ಏನು ಹೇಳೋದು? ಆ ಮುಗ್ಧ ನಗು, ದೇವರಿಗೂ ಹೊಡೆಯುವಂತೆ ಕೈ ಮೇಲೆತ್ತುವ ರೀತಿ, ಪತ್ನಿಯಿಂದ ದೂರವಾಗಬೇಕಲ್ಲ ಎನ್ನುವ ಸಂಕಟದಲ್ಲಿ ಕಣ್ಣಿನಲ್ಲಿಯೇ ಬಿಕ್ಕಳಿಕೆ ತೋರುವ ಮನೋಜ್ಞತೆ, ಅರ್ಧರ್ಧ ಸಂಭಾಷಣೆ ಹೇಳಿ ಮುಂದೇನು ಹೇಳಬೇಕೆಂದು ತಿಳಿಯದೆ ಅಷ್ಟೆ ಎನ್ನುವ ಭಾಷೆಯ ಮೇಲಿನ ಹಿಡಿತ, ಹುಚ್ಚ ಮತ್ತು ಮುಗ್ಧ ಎರಡರ ನಡುವಿನ ತೆಳ್ಳನೆಯ ಗೆರೆಯನ್ನು ಉದ್ದಕ್ಕೂ ಕಾಪಾಡಿದ ಕೌಶಲ... ಎಲ್ಲವೂ ಅವರಿಗಷ್ಟೇ ಸಾಧ್ಯವೆನಿಸುವಂತಿದೆ. ಇದು ತೆಲುಗಿನ ಸ್ವಾತಿಮುತ್ಯಂ ಚಿತ್ರದ ರೀಮೇಕು. ಮೂಲಕ್ಕೆ ಮೋಸ ಮಾಡುವುದಿರಲಿ, ಅದಕ್ಕಿಂತ ಒಂದು ಗುಂಜಿ ಹೆಚ್ಚೇ ಶ್ರಮ ಹಾಕಿ ಮರು ಚಿತ್ರಿಸಿದ್ದು ಕಣ್ಣಿಗೆ ಹೊಡೆಯುತ್ತದೆ. ಕತೆಗೆ ಪೂರಕವಲ್ಲದ ಹಲವು ದೃಶ್ಯಗಳನ್ನು ಕತ್ತರಿಸಲಾಗಿದೆ. ಅದು ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರಿಗೆ ಸಿಗುವ ಕ್ರೆಡಿಟ್ಟು. ರಾಮಾಚಾರಿ ಚಿತ್ರದ ನಂತರ ಮತ್ತೊಮ್ಮೆ ಅವರ ಹಣೆಯ ಒಂದೊಂದು ಬೆವರ ಹನಿ ಮುತ್ತಾಯ್ತದೊ...

ಅಜ್ಜಿಯಂತ ಅಜ್ಜಿಯಾಗಿರುವ ಲೀಲಾವತಿ, ಅಗಸರ ಹುಡುಗಿಯಾದ ಪವಿತ್ರಾ ಲೋಕೇಶ್‌, ಶಾಪಗ್ರಸ್ತ ದೇವತೆಯಂತೆ ಕಾಣುವ ಮೀನಾ, ಕಿರಾತಕ ದೊಡ್ಡಣ್ಣ, ಮೊಮ್ಮಗನಿಗಾಗಿ ಚಡಪಡಿಸುವ ಬಿ.ವಿ.ರಾಧಾ, ಕರುಣಾಮಯಿ ಲೋಕನಾಥ್‌, ಬಾಲಕನೆಂದರೆ ಹಿಂಗಿರಬೇಕೆನ್ನುವ ಮಾ । ಕಿಶನ್‌. ಇವರಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ಬಂದು ನಿಲ್ಲುತ್ತಾರೆ ಹಾಡು ಬರೆದ ನಾಗೇಂದ್ರ ಪ್ರಸಾದ್‌, ಕ್ಯಾಮರಾ ಹಸಿವಿಗೆ ಫುಲ್‌ಮೀಲ್ಸ್‌ ನೀಡಿರುವ ಎಚ್‌.ಎಂ.ರಾಮಚಂದ್ರ, ಸಂಗೀತದಿಂದಲೇ ಕತೆ ಹೇಳುವ ರಾಜೇಶ್‌ ರಾಮನಾಥ್‌.

ಇವನ್ನೆಲ್ಲ ಒಂದೇ ಗುಕ್ಕಿನಲ್ಲಿ ಅನುಭವಿಸಬೇಕಾದರೆ ಕಣ್ಣಾರೆ ಒಮ್ಮೆ ಚಿತ್ರವನ್ನು ನೋಡಬೇಕು. ಸುದೀಪನೆಂಬ ಸ್ವಾತಿಮುತ್ತಿಗೆ ಹರಸಬೇಕು. ಮೆತ್ತಗೆ ಉಸುರಬೇಕು. ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇಬಕು ಒಳ್ಳೆತನ....

(ಸ್ನೇಹಸೇತು- ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...