ಸಿಂಪ್ಲಿ ಲೈಕ್ಡ್ ಜೋಗಯ್ಯ ಗುಡ್ ಅಂತೀರಾ ಥೂ ಅಂತೀರಾ?
ಕಟ್ಟಾ ಸಂಸಾರದ ಅನಾರೋಗ್ಯ, ಯಡಿಯೂರಪ್ಪ ಕುಟುಂಬದ ಕೋರ್ಟ್ ಅಲೆದಾಟ, ಅಣ್ಣ ಹಜಾರಾಗಿ ದಹಿಸುತ್ತಿದ್ದ ಬೆಂಕಿ ಇವೆಲ್ಲದರ ನಡುವೆಯೇ ಹೊತ್ತಿ ಉರಿಯೋ ರೋಮಿನಲ್ಲಿ ಅದ್ಯಾರೊ ಪಿಟೀಲು ನುಡಿಸಿದ ಹಾಗೆ ನಾನು ಹೊರಟಿದ್ದೆ ಸಿನೆಮಾ ನೋಡಲು. ಅದೂ ಕನ್ನಡ ಸಿನೆಮಾ ! ಮಲ್ಟಿಪ್ಲೆಕ್ಸ್ನಿಂದ ದೂರ ತವರೂರಿನ “ಟಾಕೀಸ್" ಒಂದರಲ್ಲಿ.
“ನಮೋ ವೆಂಕಟೇಶ ನಮೋ ತಿರುಮಲೇಶ" ಅನ್ನುತ್ತಾ ಪರದೆ ಮೇಲೆದ್ದಿತು, ಸ್ವಲ್ಪ ಬಾಲ್ಯ, ಪೂರ್ತಿ ಮೈಸೂರು! ಓಹ್, ನಾನಂತೂ ಫುಲ್ ಖುಷ್. ಸಂತೋಷನಾ ಯಾವಾಗ್ಲೂ ಹಂಚಿಕೊಳ್ಳಬೇಕನ್ನೋ ಅಮ್ಮ ಹೇಳಿಕೊಟ್ಟ ಪಾಠ ಅವಳೂರಿನಲ್ಲೆ ಮರೆಯಲಾಗುತ್ತಾ? ಹಾಗಾಗಿ, ನನಗೆ ಬೇಕು ಅನಿಸಿದವರಿಗೆಲ್ಲಾ ಎಸೆಂಎಸ್ ರವಾನಿಸಿದೆ ಏನಂತ? “ನಾನೀಗ ತವರೂರಿನ ಟಾಕೀಸಿನಲ್ಲಿ "ಜೋಗಯ್ಯ"ನ ಮುಂದೆ" ಅಂತ.
ಹದಿನೇಳು ಉತ್ತರಗಳು ರಪ ರಪ ಬಂದು ಬಿದ್ದವು ಇನ್ಬಾಕ್ಸ್ಗೆ! ಉಹುಂ, ಅವರ್ಯಾರೂ ನನ್ನ ಸಂತೋಷ, ತವರಿಗೆ ಮರಳಿದ ಮಗಳು, ಅವಳಿಗೆ ಸಿಕ್ಕ ಹುಡುಗಿತನ, ಬಾಲ್ಯ ಇದ್ಯಾವುದರ ಬಗ್ಗೆಯೂ ಏನೂ ಹೇಳಿರಲಿಲ್ಲ. ಬದಲಿಗೆ ಎಲ್ಲರದೂ ಒಂದೇ ಪ್ರಶ್ನೆ “ಅಮ್ಮ ತಾಯೀ ಕನ್ನಡ ಸಿನೆಮಾನಾ? ಅದರಲ್ಲೂ ಜೋಗಯ್ಯಾ ಸಿನೆಮಾನಾ? ಇನ್ನ್ಯಾವುದೂ ಸಿಗಲ್ಲಿಲ್ಲ್ವಾ?".
ಅದಕ್ಕೆ ಕಾರಣವಿಷ್ಟೆ. ಕಳೆದ 15 ವರ್ಷಗಳಿಂದ ನಾನು ನೋಡಿರುವ ಕನ್ನಡ ಸಿನೆಮಾಗಳು ಒಂದ್ಹತ್ತಿರಬಹುದು. ಅದರಲ್ಲಿ “ದರಿದ್ರ" ಅಂದುಕೊಂಡು ಅರ್ಧಕ್ಕೆ ಎದ್ದುಬಂದದ್ದು ಹೆಚ್ಚು, ಉಳಿದವುಗಳು ಮಾಧ್ಯಮ ತೋಪು ಅಂತ ಬ್ರ್ಯಾಂಡ್ ಮಾಡಿದ್ದರೂ ನನಗೆ ಇಷ್ಟವಾಗಿ ಸ್ನೇಹ ಬಳಗದ ಕೆಂಗಣ್ಣಿಗೆ ಬಿದ್ದದ್ದು! ಮೈಸೂರಿನಲ್ಲಿದ್ದೆನಲ್ಲ ಅದಕ್ಕೇ ಇರಬೇಕು ಮನಸ್ಸು ಸ್ವಲ್ಪ ಹಿಂದೋಡಿತು.
ಹೈಸ್ಕೂಲಿನಲ್ಲಿದ್ದಾಗ ಎಲ್ಲರೆದುರು “ನನಗೆ ರವಿಚಂದ್ರನ್ ಸಿನೆಮಾಗಳು (ನೋಡಿದ್ದೇ ಒಂದೋ ಎರಡೋ) ಇಷ್ಟವಾಗುತ್ತ್ವೆ" ಅಂತ ಹೇಳಿದ್ದಕ್ಕೆ ಕೆಲವರು ನನ್ನ ಮೇಲಿನ ಶಂಕೆಯಿಂದ ಮಾತು ಬಿಟ್ಟಿದ್ದರು! ಆಮೇಲೆ "ಎ" ಸಿನೆಮಾ ಇಷ್ಟವಾಗಿ “ ಉಪೇಂದ್ರನ ಪರಿಕಲ್ಪನೆಗಳು ಯಾಕೋ ಅದ್ಭುತ" ಅನಿಸುತ್ತೆ ಅಂತ ಕೆಲವರೆದುರು ಹೇಳಿದಕ್ಕೆ, ಮುಂದಿನ ಸರ್ತಿ ಇಂಗ್ಲೀಷ್ ಸಿನೆಮಾಗಳಿಗೆ ಟಿಕೇಟು ಬುಕ್ಕ್ ಮಾಡಿಸುವಾಗ ನನ್ನ ಕೈಬಿಟ್ಟಿದ್ದ್ರು! ನೆನಪಿನ ಬಂಡಿ ಮುಂದೆ ಹರಿಯೋದಕ್ಕೆ ಮುಂಚೆ ಜೋಗಯ್ಯ ಶುರುವಾಗಿದ್ದರಿಂದ ನನ್ನ ಗಮನ ಅತ್ತ ಕಡೆಗೆ.


Click it and Unblock the Notifications











