»   » ಚಿತ್ರವಿಮರ್ಶೆ: ಅದ್ಧೂರಿ ಇಲ್ಲದ ಪ್ರಜ್ಚ್ವಲ್ ಮೆರವಣಿಗೆ

ಚಿತ್ರವಿಮರ್ಶೆ: ಅದ್ಧೂರಿ ಇಲ್ಲದ ಪ್ರಜ್ಚ್ವಲ್ ಮೆರವಣಿಗೆ

Subscribe to Filmibeat Kannada

ಒಂದಿಷ್ಟು ಜನ ಭಯೋತ್ಪಾದಕರಿರುತ್ತಾರೆ. ಅವರು ಇಡೀ ಊರನ್ನು ಉಡೀಸ್ ಮಾಡಬೇಕೆಂದಿರುತ್ತಾರೆ. ಇದ್ದಕ್ಕಿದ್ದಂತೇ ಪೊಲೀಸ್ ಆಫೀಸರ್ಸ್ ಕೈಗೆ ಸಿಕ್ಕಿಬೀಳುತ್ತಾರೆ. ಅವರಿಗೊಬ್ಬ ಮುಖಂಡ ಇರುತ್ತಾನೆ. ಅವ ಯಾವುದೋ ಕಾಡಿನಲ್ಲಿ ಅಡಗಿಕೊಂಡು ಇನ್ಯಾರನ್ನೋ ಕಿಡ್ನ್ಯಾಪ್ ಮಾಡುತ್ತಾನೆ. ತನ್ನ ಕಡೆಯವರನ್ನು ಬಿಡದಿದ್ದರೆ ನಿಮ್ಮವರನ್ನು ಮುಗಿಸುತ್ತೇನೆ ಎನ್ನುತ್ತಾನೆ...

*ವಿನಾಯಕ ಕಲಗಾರು

ನಿಮಗೆ ಈ ಕತೆಯನ್ನು ಎಲ್ಲಿಯೋ ಕೇಳಿದ ಅನುಭವವಾದರೆ ಅದು ಕತೆಗಾರ ಜನಾರ್ದನ್ ಮಹರ್ಷಿಗಳ ಮಹಿಮೆ! ಇದು ಮೆರವಣಿಗೆ ಚಿತ್ರದ ಒನ್ ಲೈನ್ ಸ್ಟೋರಿ. ಈ ಕತೆಯ ಜತೆಗೆ ನಾಯಕ, ನಾಯಕಿ, ಕಾಲೇಜು, ಹುಡುಗಿಯರು, ಪಡ್ಡೆ ಹುಡುಗರು, ಕಪಿಚೇಷ್ಟೆ , ಸಸ್ಪೆನ್ಸ್, ಹಾಡುಗಳು ಲವ್ವು-ಪವ್ವು, ಹೊಡೆದಾಟ, ಜಿಗಿದಾಟ.... ಇತ್ಯಾದಿ ಇತ್ಯಾದಿ ಸೇರಿದರೆ ಎರಡೂವರೆ ತಾಸಿನ ಸಿನಿಮಾ.

ಹಾಗಂತ ಇರುವ ಕತೆಗೆ ಏನೇನು ಬೇಕೋ ಅವೆಲ್ಲವನ್ನೂ ನಿಷ್ಟೆಯಿಂದ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮಹೇಶ್ ಬಾಬು. ಅದು ಬಾಬು ಅವರಿಗಿರುವ ತಾಕತ್ತು ಎಂದರೂ ತಪ್ಪಾಗಲಿಕ್ಕಿಲ್ಲ. ಅವರ ಆಕಾಶ್, ಅರಸು ಚಿತ್ರಗಳನ್ನೇ ತಗೊಳ್ಳಿ. ಪಕ್ಕಾ ಕಮರ್ಷಿಯಲ್ ಚಿತ್ರಕ್ಕೆ ಏನೇನು ಬೇಕು ಎನ್ನುವುದು ಬಾಬುಗೆ ಬಿಲ್‌ಕುಲ್ ಗೊತ್ತಿದೆ. ಆ ಮಟ್ಟಿಗೆ ಮಾತ್ರ ಅವರದ್ದು ನೋ ರಾಜಿ. ಮೆರವಣಿಗೆಯಲ್ಲೂ ಹಾಗೇ. ಇಡೀ ಸಿನಿಮಾ ಎಲ್ಲಿಯೂ ಬೇಸರ ಎನಿಸುವುದಿಲ್ಲ. ಹಾಗಂತ ಕುರ್ಚಿ ತುದಿಗೆ ತಂದು ಕೂರಿಸುವಂತೇಯೂ ಮಾಡುವುದಿಲ್ಲ. ಕಾರಣ ಕತೆ.

ನಾಯಕ ವಿಜಯ್ ಕಾಲೇಜು ಹುಡುಗ. ಅಪ್ಪ ಪೊಲೀಸ್ ಅಕಾರಿ. ನಾಯಕಿ ನಂದಿನಿ ಅದೇ ಕಾಲೇಜು, ಅದೇ ಕ್ಲಾಸು. ಅವಳಪ್ಪಂದೂ ಅದೇ ಉದ್ಯೋಗ. ಭಯೋತ್ಪಾದಕ ಬಷೀರ್ ತಮ್ಮನನ್ನು ವಿಜಯ್ ನಂದಿನಿ ಅಪ್ಪಂದಿರು ಆರೆಸ್ಟ್ ಮಾಡುತ್ತಾರೆ. ತಮ್ಮನಿಗೋಸ್ಕ ರ ಬಷೀರ್ ಈ ಇಬ್ಬರು ಹುಡುಗರನ್ನು ಕಿಡ್ನ್ಯಾಪ್ ಮಾಡುತ್ತಾನೆ.... ಉಳಿದ ಭಾಗ ಕಾಡಿನಲ್ಲಿ ...

ಮೊದಲರ್ಧ ಏನಿದ್ದರೂ ಕಾಮಿಡಿ, ಕಿತ್ತಾಟ, ಕುಣಿದಾಟಗಳಿಗೆ ಮೀಸಲು. ಕೋಮಲ್, ಸಾಧು ಕೋಕಿಲಾ ಕೊಂಚ ರಿಲ್ಯಾಕ್ಸ್ ನೀಡುತ್ತಾರೆ. ಆದರೆ ದ್ವಿತೀಯಾರ್ಧದಲ್ಲಿ ಏನಿದ್ದರೂ ಕಾಮಿಡಿಯ ಬದಲು ಕಾಡು ಬರುತ್ತದೆ. ಹುಲಿ, ಆನೆ, ಹೆಬ್ಬಾವು....ಗಳನ್ನು ನೋಡಿ ತೃಪ್ತಿಪಟ್ಟುಕೊಳ್ಳಬೇಕು. ಪ್ರಜ್ವಲ್ ದೇವರಾಜ್‌ಗಿದು ನಾಲ್ಕನೇ ಸಿನಿಮಾ. ಮೊದಲ ಮೂರು ಚಿತ್ರಗಳಲ್ಲಿ ಮಾಡಿದ್ದನ್ನೇ ಇಲ್ಲೂ ಮಾಡಿದ್ದಾರೆ. ಅಂದ್ರಿತಾ ರೇ ಅಭಿನಯ ಕೆಲವುಕಡೆ ಅತಿಯಾದರೂ ಎಲ್ಲೋ ಒಂದು ಕಡೆ ಇಷ್ಟವಾಗುತ್ತಾರೆ.

ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡರೆ ಕನ್ನಡದಲ್ಲಿರುವ ನಾಯಕಿಯರ ಕೊರತೆಯನ್ನು ನೀಗಿಸಬಹುದು. ವಿ. ಮನೋಹರ್ ಸಂಗೀತ ಅಲ್ಲಲ್ಲಿ ಮನಸಿಗೆ ಮುದ ನೀಡುತ್ತದೆ. ನನ್ನೊಲವೇ..., ಪತಂಗವಾಗಿ..., ಹಾಡುಗಳು ಚೆನ್ನಾಗಿವೆ. ರವಿಕಾಳೆ, ಅವಿನಾಶ್, ಬಾನುಚಂದರ್ ಮೆರವಣಿಗೆಯ ಪ್ರಮುಖ ರೂವಾರಿಗಳು. ಮಹೇಶ್ ತಲಕಾಡು ಕ್ಯಾಮೆರಾ ಕೈಚಳಕ ದ್ವಿತಿಯಾರ್ಧದಲ್ಲಿ ಹೆಚ್ಚು ಕೆಲಸ ಮಾಡಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada