»   » ಗೂಂಡಾಗಿರಿಗೆ ಸಾವಿಲ್ಲ , ಪ್ರೇಕ್ಷಕರಿಗೆ ಸುಖವಿಲ್ಲ!

ಗೂಂಡಾಗಿರಿಗೆ ಸಾವಿಲ್ಲ , ಪ್ರೇಕ್ಷಕರಿಗೆ ಸುಖವಿಲ್ಲ!

Subscribe to Filmibeat Kannada
  • ವಿನಾಯಕ ತದ್ದಲಸೆ
ಈ ಚಿತ್ರದ ನಿಜವಾದ ನಾಯಕ ಮಾ. ಹಿರಣ್ಣಯ್ಯ.

ಹೀಗೆಂದರೆ ಅಚ್ಚರಿ, ಸಂತೋಷ ಎರಡೂ ಆಗಬಹುದು. ಚುನಾವಣೆ ಕಾವಿನಲ್ಲಿ ರಾಜಕೀಯ ವಿಡಂಬನೆಯ ಸಂಭಾಷಣೆಗಳು ಮತ್ತೆ ಹಿರಣ್ಣಯ್ಯನವರ ಮಾತಿನಲ್ಲಿ ಕೇಳಬಹುದೇ ಎಂದುಕೊಳ್ಳಲೂಬಹುದು.

ಕ್ಷಮಿಸಿ. ಹಿಂಗೆಲ್ಲಾ ಆಗಿದ್ದರೆ ‘ದಿ ಸಿಟಿ’ ರೈಟ್‌ಟೈಮ್‌ನಲ್ಲಿ ರೈಟ್‌ ಪ್ಲೇಸ್‌ನಲ್ಲಿ (ಪಾತ್ರಧಾರಿಯಾಬ್ಬ ಪದೇಪದೇ ಹೇಳುವಂತೆ) ಬಿಡುಗಡೆ ಆದಂತಾಗುತ್ತಿತ್ತು . ಆದರೆ ಇಲ್ಲಿ ಮುಂದೆ ಅರ್ಜುನನಾಗಿ ಸಾಯಿಕುಮಾರ್‌ ಇದ್ದಾರೆ. ಹಿಂದೆ ಗುರುವಾಗಿ ಜೆ.ಜಿ.ಕೃಷ್ಣ ಇದ್ದಾರೆ. ಇಬ್ಬರದೂ ಒಂದೇ ಗುರಿ, ಮಾರಾಮಾರಿ!

ಹೌದು, ಸಾಯಿಕುಮಾರ್‌ ಇದ್ದಾರೆ ಅಂದಮೇಲೆ ರಕ್ತ, ಮಚ್ಚು, ಕೊಲೆಗಳ ಲೆಕ್ಕ ಇಡುವುದು ಆಕಾಶದಲ್ಲಿ ಚುಕ್ಕಿ ಎಣಿಸಿದಂತೆಯೇ. ಆದರಿಲ್ಲಿ ಒಂದು ವಿಶೇಷವೆಂದರಪೆ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು (ಅರ್ಜುನ ಉವಾಚ) ಪಾಳುಜಾಗದಲ್ಲಿ ಫೈಟಿಂಗ್‌ ನಡೆಯುತ್ತದೆ. ಹೀಗಾಗಿ ತರಕಾರಿ, ಹಣ್ಣು, ಕುಂಕುಮದ ಗಾಡಿಗಳನ್ನು ಉಡಾಯಿಸುವುದಿಲ್ಲ .

‘ದಿ ಸಿಟಿ’ ಏನು ಹೇಳಲು ಹೊರಟಿದೆ ಎಂದರೆ- ಹಳ್ಳಿಯಲ್ಲಿ ಇರುವ ಆತ್ಮೀಯತೆ, ಅಭಿಮಾನ, ಕೃತಜ್ಞತೆ ಬೆಂಗಳೂರಂಥ ನಗರಗಳಲ್ಲಿ ಕಾಣಲು ಸಾಧ್ಯವೇ ಇಲ್ಲ .

ಸಿಟಿಯಲ್ಲಿ ಏನಿದ್ದರೂ ಗೂಂಡಾಗಿರಿ, ಮೋಸ, ದಗಾ, ವ್ಯಭಿಚಾರಗಳದೇ ಕಾರುಬಾರು. ಇಲ್ಲಿಯ ಪರಿಸ್ಥಿತಿಗೆ ಹೊಂದಿಕೊಳ್ಳದೇ ಸಿಡಿದೆದ್ದರೆ ಸಾಯಬೇಕು ಇಲ್ಲವೇ ರೌಡಿಯಾಗಬೇಕು. ಕೊನೆಗೆ ರೌಡಿಯಾದವನು ಸುಖ ಸಂತೋಷದಿಂದ ಬಾಳುತ್ತಾನೆ.

ಈ ಸಂದೇಶ ಹೇಳಲು ಬಡ ಮೇಷ್ಟ್ರ ಕುಟುಂಬದ ಹಿನ್ನೆಲೆ ಇದೆ. ಹಳ್ಳಿ ರಾಜಕೀಯಕ್ಕೆ ಬಲಿಯಾಗಿ ನಗರಕ್ಕೆ ವರ್ಗವಾಗುವ ಸತ್ಯ, ಧರ್ಮ, ನ್ಯಾಯನಿಷ್ಠ ಮೇಷ್ಟ್ರು ಹಿರಣ್ಣಯ್ಯ ನಗರದಲ್ಲೂ ಅದನ್ನೇ ಮುಂದುವರಿಸಲು ಹೆಣಗಾಡುತ್ತಾರೆ.

ಆದರೆ ಮಗ ಅರ್ಜುನ್‌ (ಸಾಯಿಕುಮಾರ್‌) ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ರೌಡಿಯಾಗುತ್ತಾನೆ. ತಂದೆ-ಮಗನ ಮಧ್ಯೆ ಧರ್ಮ-ಅಧರ್ಮ, ಸತ್ಯ-ಅಸತ್ಯಗಳ ವಾದ-ವಿವಾದಗಳ ಸರಣಿಯೇ ನಡೆಯುತ್ತದೆ. ಇಲ್ಲಿ ಸಂಭಾಷಣೆ ಬರೆದವರ ಪಾಂಡಿತ್ಯಕ್ಕೆ ತಲೆದೂಗಲೇಬೇಕು.

ಕೊನೆಗೂ ಯಾರಿಗೂ ಕೇಡು ಬಯಸದ ಆದರ್ಶ ಶಿಕ್ಷಕ ಆಪಾದನೆ ಹೊತ್ತು ಪೊಲೀಸ್‌ ಟಾರ್ಚರ್‌ಗೆ ಒಳಗಾಗುತ್ತಾರೆ. ಅವಮಾನ ತಾಳಲಾಗದೇ ನೇಣಿಗೆ ಕೊರಳೊಡ್ಡುತ್ತಾರೆ. ಇಲ್ಲಿಗೆ ಚಿತ್ರ ಮುಗಿದರೆ ಹಿರಣ್ಣಯ್ಯನವರು ಹೀರೋ ಆಗಿಬಿಡುತ್ತಾರೆ!

ಆದರೆ ಸಾಯಿಕುಮಾರ್‌ ಇದ್ದಾರಲ್ಲ, ಹೀಗಾಗಿ ಕ್ಲೈಮ್ಯಾಕ್ಸ್‌ ಬದಲಾಗಲೇಬೇಕು. ಭೂಮಿಯ ಮೇಲೆ ಸಂಭವಿಸದ ಘಟನೆಗಳೆಲ್ಲ ನಡೆದು, ನ್ಯಾಯಾಲಯವೇ ಬೀದಿಗೆ ಬಂದು, ರೌಡಿ ಅರ್ಜುನ್‌ ಸ್ವತಃ ವಾದ ಮಾಡಿ ಖಾದಿ, ಖಾಕಿಯವರಿಂದ ತಪ್ಪೊಪ್ಪಿಗೆ ಹೇಳಿಸಿ ಶಿಕ್ಷೆಯಾಗುವಂತೆ ಮಾಡುತ್ತಾನೆ. ಅರ್ಜುನ್‌ ತುಂಬಾ ಒಳ್ಳೆಯ ನಡವಳಿಕೆ ತೋರುವುದರಿಂದ ಅವನು ರೌಡಿಯಿಸಂ, ಕೊಲೆ ಸುಲಿಗೆ ಮಾಡಿದರೂ ಕಮ್ಮಿ ಶಿಕ್ಷೆ. ವಿಶೇಷವೆಂದರೆ ಈ ಚಿತ್ರದಲ್ಲಿ ನಾಯಕಿ ಎಂಬಾಕೆ ಇದ್ದರೂ ಇಲ್ಲದಂತೆ ; ಲೆಕ್ಕ ಮಾಡಿದರೆ ನಾಲ್ಕು ದೃಶ್ಯಗಳಲ್ಲಿ ಬಂದು ಹೋಗುತ್ತಾಳೆ.

ಕನ್ನಡ ಚಿತ್ರವೊಂದಕ್ಕೆ ಹಾಸ್ಯ ದೃಶ್ಯ ಬೇಕೆ? ಸಾಧು ಕೋಕಿಲ, ಬ್ಯಾಂಕ್‌ ಜನಾರ್ಧನ, ಬಿರಾದರ್‌ರನ್ನು ಸೇರಿಸಿ ಒಂದ್ಹತ್ತಿಪ್ಪತ್ತು ಹಾಸ್ಯ ದೃಶ್ಯಗಳನ್ನು ಚಿತ್ರೀಕರಿಸಿ ಯಾವುದೇ ಚಿತ್ರದೊಳಕ್ಕೂ ತೂರಿಸಬಹುದು. ಇಂದೊಂದು ಹಾಸ್ಯಬ್ಯಾಂಕ್‌ ಮಾಡುವ ಆಲೋಚನೆ ಈ ಚಿತ್ರ ನೋಡಿದ ಮೇಲೆ ಕಾರ್ಯಗತವಾದರೆ ಗಂಡಾಂತರವೇ ಕಾದಿದೆ. ಮಾಂಸದ ಪರ್ವತವೇ ಮೈವೆತ್ತ ಕ್ಯಾಬರೆ ಕುಣಿತವೂ ಇದೆ.

ಮೊದಲೇ ಹೇಳಿದಂತೆ ಹಿರಣ್ಣಯ್ಯನವರು ಸಿನಿಮಾವೊಂದರಲ್ಲಿ ನಟಿಸಿದ ಅತಿ ಹೆಚ್ಚು ಉದ್ದದ ಪಾತ್ರ ಇದಾಗಿರಬಹುದು. ಭಾವನಾತ್ಮಕ ದೃಶ್ಯಗಳಲ್ಲಂತೂ ಥರಥರ ನಡುಗಿ ಹೋಗಿದ್ದಾರವರು. ಆದರೆ ಅವರ ಪತ್ನಿಯ ಪಾತ್ರಧಾರಿ ಕಂಬಕ್ಕೆ ಸೀರೆ ಉಡಿಸಿ ನಿಲ್ಲಿಸಿದಂತೆ ನಿಶ್ಚೇಷ್ಟಿತ.

ಸೋದರ ಅಯ್ಯಪ್ಪ ಶರ್ಮರಿಗೆ, ಆಯುಧ, ದುರ್ಗದ ಹುಲಿ ಚಿತ್ರಗಳ ಮೂಲಕ ನಿರ್ದೇಶಕನ ಪಟ್ಟ ಕಟ್ಟುವಲ್ಲಿ ಸೋತ ಸಾಯಿಕುಮಾರ್‌, ಇಲ್ಲಿ ನೆಗೆಟಿವ್‌ ಪಾತ್ರಕ್ಕೆ ಎಳೆತಂದಿರುವುದು ನಮ್ಮ ಸೌಭಾಗ್ಯವೆನ್ನಲೆ? ಉಳಿದವರು ನಟಿಸಿದರೂ, ನಟಿಸದಿದ್ದರೂ ಒಂದೇ ಎಂಬಂತಿರುವುದು ಸಿನಿಮಾದ ನಿಜವಾದ ಸತ್ವ.

ಸಾಧು ಕೋಕಿಲ ಸಂಗೀತವೆಂದರೆ ಇದೇನಾ? ಸಂಕಲನ ಎಂದರೆ ಹೀಗೆ ಕತ್ತರಿ ಆಡಿಸುವುದಾ? ಕೊನೆಯದಾಗಿ ಛಾಯಾಗ್ರಹಣಕ್ಕೆ ರಾಜ್ಯ ಪ್ರಶಸ್ತಿ ಪಡೆದ (ನನ್ನಾಸೆಯ ಹೂವೆ ಚಿತ್ರಕ್ಕೆ) ಜೆ.ಜಿ.ಕೃಷ್ಣ ನಿಜಕ್ಕೂ ಇದರಲ್ಲಿ ಕ್ಯಾಮರಾ ಹಿಡಿದಿದ್ದಾರಾ? ಇಷ್ಟೆಲ್ಲ ಪ್ರಶ್ನೆಗಳನ್ನು ಕೇಳಬಾರದು. ಯಾಕೆಂದರೆ ಇದು ದಿ ಸಿಟಿ- ರೌಡಿಗಳ ರಾಜ್ಯ.

ಚಿತ್ರ ನೋಡಿದ ಮೇಲೆ ಹಿರಣ್ಣಯ್ಯನವರು ಅಭಿನಯಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದರೆ ಅದೊಂದೇ ಸಹಜ.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada