»   » ರಕ್ಕಸ ರೂಪದಲ್ಲೊಬ್ಬ ರಕ್ಷಕ ಈ ರಾಕ್ಷಸ

ರಕ್ಕಸ ರೂಪದಲ್ಲೊಬ್ಬ ರಕ್ಷಕ ಈ ರಾಕ್ಷಸ

Posted By:
Subscribe to Filmibeat Kannada
  • ಹ.ಚ.ನಟೇಶ್‌ ಬಾಬು
    natesh.hc@greynium.com
‘ಅದೇ ರಾಗ, ಅದೇ ಹಾಡು’ ಎಂಬಂತೆ ಮತ್ತೆ ಕಳ್ಳ-ಪೊಲೀಸ್‌ ಕಥೆಯನ್ನು ‘ರಾಕ್ಷಸ’ ಚಿತ್ರಕ್ಕಾಗಿ ಸಾಧು ಕೋಕಿಲ ಸುತ್ತಿಟ್ಟಿದ್ದಾರೆ. ಅಂಬರೀಷ್‌, ದೇವರಾಜ್‌, ಸಾಯಿಕುಮಾರ್‌ರ ಸುಮಾರು ಚಿತ್ರಗಳ ಜಾಡಿನಲ್ಲಿಯೇ ರಾಕ್ಷಸ ಸಾಗಿದೆ. ಚಿತ್ರ ನೋಡುತ್ತಾ ಕಥೆಯಲ್ಲಿ ಹೊಸತನವಿಲ್ಲ ಎಂದು ಗೊಣಗುವುದಕ್ಕೆ ಸಮಯವೇ ಸಿಗದಷ್ಟು ವೇಗವಾಗಿದೆ ಚಿತ್ರದ ನಿರೂಪಣೆ. ಆದರೂ, ಸಾಹಸ ಪ್ರಿಯರಿಗಂತೂ ಚಿತ್ರ ಭಲೇ ಇಷ್ಟವಾಗುತ್ತದೆ. ಆರಂಭ ಹಾಗೂ ಕ್ಲೈಮ್ಯಾಕ್ಸ್‌ನಲ್ಲಿನ ಚೇಸಿಂಗ್‌ ದೃಶ್ಯಗಳು ರೋಮಾಂಚನಗೊಳಿಸುತ್ತವೆ.

‘ನಾನ್‌ ಸರಿ ಇಲ್ಲ ಸೈಲೆಂಟಾಗಿ ಸೈಡಲಿದ್ಬಿಡಿ’ ಎನ್ನುವ ಎಸಿಪಿ ಹರೀಶ್‌ ಚಂದ್ರ(ಶಿವರಾಜ್‌ಕುಮಾರ್‌)ನಿಗೆ ರೌಡಿಗಳನ್ನು ಕಂಡರೇ ಕೆಂಡದಂತಹ ಕೋಪ. ಮಾನವೀಯತೆಯನ್ನು ಪಕ್ಕಕ್ಕಿಟ್ಟು ರಾಕ್ಷಸನಂತೆ ಸಿಕ್ಕಸಿಕ್ಕ ರೌಡಿಗಳನ್ನು ದಯೆದಾಕ್ಷಿಣ್ಯವಿಲ್ಲದೇ ಬೇಟೆಯಾಡುತ್ತಾನೆ. ಚಾಕು-ಚೂರಿ ಮತ್ತು ಲಾಂಗ್‌ ಮಾತನಾಡುವ ಮೊದಲೇ ರಾಕ್ಷಸನ ಗನ್ನು ಬಾಯಿಬಿಚ್ಚುತ್ತದೆ. ಆದರೆ ಯಾರಾದರೂ ರಾಕ್ಷಸ ಅಂದ್ರೆ ಮತ್ತೆ ಡೈಲಾಗ್‌ ಹೊರ ಬರುತ್ತೆ -‘ನಾನು ರಾಕ್ಷಸನಲ್ಲ, ರಕ್ಷಕ. ಆರಕ್ಷಕ’ ಮಾಮೂಲಿನಂತೆಯೇ ದುಷ್ಟರು ಈತನ ಹೆಂಡತಿ(ಅಮೃತಾ)ಮಕ್ಕಳನ್ನು ಕೊಲ್ಲುತ್ತಾರೆ. ಕಡೆಗೆ ಅವರನ್ನೆಲ್ಲ ಕೊಂದು ಸೇಡು ತೀರಿಸಿಕೊಳ್ಳುವ ಮೂಲಕ ಚಿತ್ರ ಮುಕ್ತಾಯವಾಗುತ್ತದೆ.

ಸಾಧು ಕೋಕಿಲರಂತೆಯೇ ಚಿತ್ರದ ಕಥೆಗೆ ಒಂದು ಸ್ಪಷ್ಟ ಆಕಾರವಿಲ್ಲ. ಅಂಡರ್‌ವಲ್ಡ್‌ನಿಂದ ಗಲ್ಲಿ ರೌಡಿಗಳವರೆಗೆ ಕಥೆ ಸಾಗುತ್ತದೆ. ಕೆಜಿಎಫ್‌ನ ತಂಗಂ ಮತ್ತು ಆತನ ತಮ್ಮ ಪಳನಿ ಕಥೆಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಬಾಲಿವುಡ್‌ ಒಳಗುಟ್ಟುಗಳನ್ನು ಮಂದಾಕಿನಿ ಪಾತ್ರದ ಮೂಲಕ ಬಿಚ್ಚಿಡಲಾಗಿದೆ. ಲೈವ್‌ಬ್ಯಾಂಡ್‌, ಮಾಸಾಜ್‌ ಪಾರ್ಲರ್‌ ಸೇರಿದಂತೆ ಅನೇಕ ಬಿಡಿಬಿಡಿ ಘಟನೆಗಳನ್ನು ಹಾರವನ್ನಾಗಿಸುವ ಪ್ರಯತ್ನದಲ್ಲಿ ಸಾಧು ಗೆದ್ದಿದ್ದಾರೆ.

ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುವ ಗಜಾಲಾ, ಕನಸಿನಲ್ಲಿ ಡ್ಯೂಯೆಟ್‌ ಹಾಡುವುದಕ್ಕಷ್ಟೇ ಸೀಮಿತವಾಗಿದ್ದಾರೆ. ಅವಿನಾಶ್‌, ಜಿ.ಕೆ.ಗೋವಿಂದರಾಜ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಎಲ್ಲಾ ಸರಿ ಕಾಮಿಡಿ ಕುಖ್ಯಾತಿಯ ಸಾಧು ಚಿತ್ರದಲ್ಲಿ ಹಾಸ್ಯವನ್ನೇ ಮರೆತು ಬಿಟ್ಟರಲ್ಲ ಎನ್ನುವ ಕೊರತೆಯನ್ನು ರಂಗಾಯಣದ ರಘು ಪೊಲೀಸ್‌ ಪಾತ್ರದಲ್ಲಿ ತುಂಬಿಕೊಟ್ಟಿದ್ದಾರೆ. ಅಂಡರ್‌ವರ್ಲ್ಡ್‌ ಡಾನ್‌ ಶಬ್ಬೀರ್‌ ಪಾತ್ರದಲ್ಲಿ ಕಿಶೋರ್‌ ಮಿಂಚಿದ್ದಾರೆ.

ಕೆಲವೆಡೆ ಸಂಭಾಷಣೆ ಮನಕ್ಕೆ ತಟ್ಟಿದರೆ, ಕೆಲವೆಡೆ ಕೈತಟ್ಟುವಂತಿದೆ. ಶಿವರಾಜ್‌ ಕುಮಾರ್‌ ತಮ್ಮ ಅಭಿನಯ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಅವರ ಅಭಿಮಾನಿಗಳಿಗೆ ಚಿತ್ರ ಥ್ರಿಲ್‌ ನೀಡುವಂತಿದೆ.

ಹಾಲಿವುಡ್‌ ನಂತರ ಸೋಲಿನ ಸಂಕಷ್ಟಕ್ಕೆ ಸಿಲುಕಿದ್ದ ನಿರ್ಮಾಪಕ ರಾಮುಗೆ ಮಲ್ಲ, ದುರ್ಗಿ, ಕಲಾಸಿಪಾಳ್ಯ ಯಶಸ್ಸಿನ ರುಚಿ ತೋರಿಸಿದ್ದವು. ಇದರ ಬೆನ್ನಲ್ಲಿಯೇ ರಾಕ್ಷಸ ತೆರೆಕಂಡಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada