twitter
    For Quick Alerts
    ALLOW NOTIFICATIONS  
    For Daily Alerts

    'ಆ ದಿನಗಳು' ಈ ದಿನಗಳಲ್ಲಿ ಎಷ್ಟು ಪ್ರಸ್ತುತ?

    By Staff
    |

    ಅಂತೂ ಕನ್ನಡಕೊಂದು ರಾಮ್‌ಗೋಪಾಲ್ ವರ್ಮ ಮಾದರಿಯ ಚಿತ್ರ ದೊರಕಿದೆ. 'ದಾದಾಗಿರಿಯ ದಿನಗಳು" ಓದಿದವರು ಅದೇ ಕತೆ ತಾನೇ ಎಂದು ನಿರಾಸೆಪಡುವ ಅಗತ್ಯವಿಲ್ಲ. 'ಕೃತಿ" ಸಿನಿಮಾ ಆಗಿ ಮೂಡಿರುವುದನ್ನು ಪರದೆಯ ಮೇಲೆ ನೋಡಿ ಎಂಜಾಯ್ ಮಾಡುವವರಿಗೆ ನಿರಾಸೆ ಮೂಡಿಸುವುದಿಲ್ಲ.


    'ಆ ದಿನಗಳು" ಈ ದಿನಗಳಲ್ಲಿ ಎಷ್ಟು ಪ್ರಸ್ತುತ ಎಂದು ಕೇಳುವುದು ಮೂರ್ಖತನವಾಗುತ್ತದೇನೊ? ಹಾಗೆಯೇ ಇದು ಯಾವ ತರಹದ ಸಿನಿಮಾ? ಕಮರ್ಷಿಯಲ್ ಅಥವಾ ಕಲಾತ್ಮಕ ಚಿತ್ರವಾ? ಎಂದು ಕೇಳುವವರಿಗೆ ಕಲಾತ್ಮಕ ಮೌಲ್ಯಗಳುಳ್ಳ ಕಮರ್ಷಿಯಲ್ ಚಿತ್ರ ಎಂದು ಹೇಳಬಹುದು. ಇನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಆರೋಪಿಸಿದಂತೆ ಚಿತ್ರದಲ್ಲಿ ಆ ರೀತಿಯ ಯಾವುದೇ ದೃಶ್ಯಗಳೂ ಇಲ್ಲ. ಐಟಂ ಸಾಂಗ್ ಇಲ್ಲದ, ಹೊಡಿ, ಬಡಿ, ಕಡಿ ಡೈಲಾಗ್‌ಗಳಿಲ್ಲದ ಪಡ್ಡೆಗಳಿಗೆ ರುಚಿಸದ ಉತ್ತಮ ಚಿತ್ರ ಎಂದು ಹೇಳಬಹುದು. ಒಟ್ಟಿನಲ್ಲಿ ಕನ್ನಡ ಚಿತ್ರರಂಗ ಪ್ರಕಾಶಿಸುತ್ತಿದೆ, ಕ್ಷಮಿಸಿ ಗಾಂಧಿನಗರ ಪ್ರಕಾಶಿಸುತ್ತಿದೆ!

    ಚಿತ್ರದ ಆರಂಭದಲ್ಲಿ ಪ್ರೇಮಿಗಳಿಬ್ಬರು ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ಹುಡುಗ ನನ್ನ ಹೆಸರು ಚೇತನ್ ಅಂತ ಉಡುಪಿ ಬ್ರಾಹ್ಮಣ ಮನೆತನಕ್ಕೆ ಸೇರಿದವನೆಂದೂ, ಹುಡುಗಿ (ಅರ್ಚನಾ) ಒಕ್ಕಲಿಗ ಜನಾಂಗಕ್ಕೆ ಸೇರಿದವಳೆಂದೂ ಪರಿಚಯಿಸಿಕೊಳ್ಳುತ್ತಾರೆ. ಪ್ರೇಕ್ಷಕನಿಗೆ ಮತ್ತೆ ಇಲ್ಲಿ ಜಾತಿ ಸಂಘರ್ಷಗಳು ಮೊದಲಾಗುತ್ತವಾ ಎಂಬ ಅನುಮಾನ ಹುಟ್ಟುತ್ತದೆ. ಆದರೆ ಕತೆ ಭೂಗತ ಜಗತ್ತಿಗೆ ಪ್ರವೇಶಿಸುವ ಮೂಲಕ ಆ ಅನುಮಾನಕ್ಕೆ ತೆರೆ ಎಳೆಯುತ್ತದೆ.

    ಪ್ರೇಮಿಗಳ ಜೀವನದಲ್ಲಿ ವಿಲನ್ ಆಗಿ ಬರುವ ಕೊತ್ವಾಲ್, ಇಲ್ಲಿ ಪೂರ್ಣಪ್ರಮಾಣದ ಖಳನಾಯಕನಲ್ಲ. ಹುಡುಗನ ತಂದೆ (ಗಿರೀಶ್ ಕಾರ್ನಾಡ್), ಕೊತ್ವಾಲ್‌ಗೆ ದುಡ್ಡು ಕೊಟ್ಟು ಇಬ್ಬರನ್ನೂ ಬೆದರಿಸಲು ಹೇಳಿರುತ್ತಾನೆ. ಆದರೆ ಒಂದು ಸಂದರ್ಭದಲ್ಲಿ 'ಹುಡುಗಿಯನ್ನೊಮ್ಮೆ ಸರಿಯಾಗಿ ನೋಡಿದ್ದೀರಾ?" ಎಂದು ಕೊತ್ವಾಲ್ ಹುಡುಗನ ತಂದೆಯನ್ನು ಪ್ರಶ್ನಿಸುತ್ತಾನೆ. ಆದರೆ ಹುಡುಗನ ತಂದೆಗೆ ಇದೆಲ್ಲಾ ಇಷ್ಟವಿರುವುದಿಲ್ಲ. ಪ್ರೇಮಿಗಳಿಬ್ಬರೂ ಕೊತ್ವಾಲ್‌ನನ್ನು ಹೆದರಿಸಲಾಗದೇ ದೂರ ಓಡಿಹೋಗಲು ಯೋಚಿಸುತ್ತಾರೆ. ಕಡೆಗೆ ಕೊತ್ವಾಲ್‌ನನ್ನು ಮುಗಿಸಲು ನಾಯಕ ಪಣತೊಡುತ್ತಾನೆ. ಇತ್ತ ಕೊತ್ವಾಲ್‌ನನ್ನು ಮುಗಿಸಲು ಕಾಯುತ್ತಿರುವ ಶ್ರೀಧರ್ ಮತ್ತು ಬಚ್ಚನ್‌ರ ಗ್ಯಾಂಗ್ ಸೇರುತ್ತಾನೆ ನಾಯಕ.

    ***

    ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಐದಾರು ಕಾರುಗಳಲ್ಲಿ ಹೊಸೂರಿನ ಕಡೆ ಹೊರಟೆವು. ಐದು ಗಂಟೆಯ ಹೊತ್ತಿಗೆ ಸಂಪಂಗೆರೆ ಎನ್ನುವ ಹಳ್ಳಿಯನ್ನು ತಲುಪಿದೆವು. ಊರಿನ ಆಚೆ ಇದ್ದ ಒಂದು ಮಾವಿನ ತೋಪಿನಲ್ಲಿ ಬೀಡುಬಿಟ್ಟೆವು. ಸ್ವಲ್ಪ ದೂರದಲ್ಲಿ ಸುಮಾರು ಇಪ್ಪತ್ತು ಅಡಿಗಿಂತಲೂ ಹೆಚ್ಚು ಆಳವಿದ್ದ, ಸಾಕಷ್ಟು ಅಗಲವಾಗಿದ್ದ ಹಳ್ಳವೊಂದಿತ್ತು. ಅಲ್ಲಿ ಹೆಣವನ್ನು ಬರ್ನ್ ಮಾಡಲು ತೀರ್ಮಾನ ತೆಗೆದುಕೊಂಡ ಜಯರಾಜ್.

    ಒಂದು ಗಾಡಿಯಷ್ಟು ಸೌದೆ, ಹಲವಾರು ಟಿನ್ ಸೀಮೆ ಎಣ್ಣೆ ಡಬ್ಬಗಳು ಬಂದವು. ಕತ್ತಲೆ ಚೆನ್ನಾಗಿ ಕವಿದ ನಂತರ ಕೊತ್ವಾಲ್‌ನ ಹೆಣವನ್ನು ಸೌದೆಗಳ ಮೇಲಿಟ್ಟು ಬೆಂಕಿ ಗೀಚಿದೆವು. ಹಚ್ಚುವುದಕ್ಕೆ ಮುಂಚೆ ಹೆಣವನ್ನು ತದೇಕವಾಗಿ ದಿಟ್ಟಿಸಿ ಜಯರಾಜ್ 'ಥೂ ನಿನ್ನ..." ಎಂದ. ಆದರೆ ಅದು ಸಿಟ್ಟಿಗಿಂತಲೂ ಹೆಚ್ಚು ಬೇಸರದಿಂದ ಹೇಳಿದ ಹಾಗೆ ತೋರುತ್ತಿತ್ತು. ಅನ್ಯಾಯವಾಗಿ ಒಳ್ಳೆಯ ಜೀವನ ಹಾಳು ಮಾಡಿಕೊಂಡುಬಿಟ್ಟೆಯಲ್ಲೊ ಎಂದು ಕೊರಗಿನಿಂದ ಹೇಳುತ್ತಿರುವ ಹಾಗೆ ಧ್ವನಿಸುತ್ತಿತ್ತು.

    ಸೀತಾರಾಂ ಶೆಟ್ಟಿ ಒಂದೇ ಸಮನೆ ಕಣ್ಣೀರು ಹಾಕುತ್ತಿದ್ದ. ಯಾರೂ ಆ ಕೊಲೆಯನ್ನು ಎಂಜಾಯ್ ಮಾಡುತ್ತಿರಲಿಲ್ಲ.

    -ಹೀಗೆ ಪತ್ರಕರ್ತ, ಅಗ್ನಿ ವಾರಪತ್ರಿಕೆಯ ಸಂಪಾದಕ ಶ್ರೀಧರ್ ಬರೆದಿರುವ 'ದಾದಾಗಿರಿಯ ದಿನಗಳು" ಪುಸ್ತಕ ಕೊನೆಯಾಗುತ್ತದೆ. ಹೌದು 'ಆ ದಿನಗಳು" ಚಿತ್ರದಲ್ಲೂ ಅಷ್ಟೇ ಯಾರೂ ಕೊತ್ವಾಲ್‌ನ ಕೊಲೆಯನ್ನು ಎಂಜಾಯ್ ಮಾಡುವುದಿಲ್ಲ. 'ದಾದಾಗಿರಿಯ..." ಓದಿದವರಿಗೆ ಇದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

    ***

    ಇಂದಿನ ಪ್ರೇಕ್ಷಕನಿಗೆ ಈ ಕೊತ್ವಾಲ ಯಾರು ಜಯರಾಜ್‌ಗೂ ಅವನಿಗೂ ಏನು ಸಂಬಂಧ ಅಂತ ಅನ್ನಿಸುತ್ತದೆ. ಅಲ್ಲದೆ ಲಾಂಗು, ಮಚ್ಚು, ಐಟಂ ಸಾಂಗು ವಗೈರೆ ಮಸಾಲೆಗಳನ್ನು ಊಹಿಸಿಕೊಂಡು ಹೋದ ಪಡ್ಡೆಗಳಿಗೆ ಶ್ರೀಧರ್‌ರ 'ದಾದಾಗಿರಿಯ ದಿನಗಳು" ಕೃತಿ ಆಧಾರಿತ 'ಆ ದಿನಗಳು" ಚಿತ್ರ ಒಂದು ಸಿನಿಮಾ ಅನ್ನಿಸುವುದಿಲ್ಲ. ಇಂದಿನ ಪ್ರೇಕ್ಷಕನಿಗೆ ಈ ಚಿತ್ರ ಸಪ್ಪೆ ಅನ್ನಿಸುತ್ತದೆ. ಹಾಗೆಯೇ 'ದಾದಾಗಿರಿಯ ದಿನಗಳು" ಪುಸ್ತಕ ಓದಿದವರಿಗೆ ಚಿತ್ರ ಕತೆ ಹೇಳಬೇಕಾಗಿಲ್ಲ. ನಿಜವಾಗಿಯೂ ಈ ಚಿತ್ರ ಗೆಲ್ಲುವುದು ಇಂತಹ ಪ್ರೇಕ್ಷಕರ ಮನದಲ್ಲಿ ಮಾತ್ರ. ಈ ಪಾತ್ರಗಳೆಲ್ಲಾ ಆ ಕೃತಿಯಲ್ಲಿ ಬಂದಿರುವಂತಹವೆ. ಆದರೆ ಕೃತಿಯಲ್ಲಿನ ಪಾತ್ರಗಳು ಹೇಗೆ ಚಿತ್ರದಲ್ಲಿ ಜೀವ ತುಂಬಿಕೊಂಡಿವೆ ಅನ್ನುವುದಕ್ಕೆ ಸಿನಿಮಾ ನೋಡಲೇ ಬೇಕು.

    ಚಿತ್ರದಲ್ಲಿ ಬರುವ ಮುಸ್ಲಿಂ ಭೂಗತ ಜಗತ್ತಿನ ಪಾತ್ರಗಳು ಅಪ್ಪಟ ಕನ್ನಡದಲ್ಲೇ ಮಾತನಾಡುತ್ತವೆ. ಅಲ್ಪ ಸ್ವಲ್ಪ ಉರ್ದು ಮಿಶ್ರಿತ ಕನ್ನಡವೇ ಇವರ ನಾಲಿಗೆಯಲ್ಲಿ ಉಲಿಯುತ್ತದೆ. ಆದರೆ ಮುಸ್ಲಿಂ ಭೂಗತ ಜಗತ್ತಿನಲ್ಲಿ ಎಷ್ಟು ಜನ ಕನ್ನಡದಲ್ಲಿ ಮಾತನಾಡುತ್ತಾರೆ? ಈ ಪ್ರಶ್ನೆ ಕಾಡುತ್ತದೆ. ಇಲ್ಲಿ ಅವರ ಆಡುಭಾಷೆ ಉರ್ದುವನ್ನೇ ಬಳಸಿದ್ದರೆ ಚಿತ್ರ ಮತ್ತಷ್ಟು ನೈಜವಾಗಿ ಮೂಡಿಬರುತ್ತಿತ್ತು.

    ಒಂದು ಸಂದರ್ಭದಲ್ಲಿ ಕೊತ್ವಾಲ್, ನಮ್ಮ ಸಾಮ್ರಾಜ್ಯವನ್ನು ಸಾಕೋದಕ್ಕೆ ಎಷ್ಟು ದುಡ್ಡಿದ್ರೂ ಸಾಲಲ್ಲ ಎಂದು ನಾಯಕನಿಗೆ ಹೇಳುತ್ತಾನೆ. ಈ ರೀತಿಯ ಎಷ್ಟೋ ಡೈಲಾಗ್‌ಗಳು 'ಆ ದಿನಗಳು'ಚಿತ್ರದಲ್ಲಿ ಇರುವುದರಿಂದಲೇ ಪ್ರೇಕ್ಷಕನಿಗೆ ಭೂಗತ ಜಗತ್ತೂ ಆಪ್ಯಾಯಮಾನವಾಗಿ ಕಾಣುತ್ತದೆ. ಶರತ್ ಲೋಹಿತಾಶ್ವರ ನಟನೆ ಕೊತ್ವಾಲನನ್ನೇ ಆವಾಹಿಸಿಕೊಂಡಂತಿದೆ. ಅವರ ತೀಕ್ಷ್ಣ ನೋಟ. ಸದಾ ಜಾಗೃತವಾಗಿರುವ ಮನಸ್ಸು. ಭಿಕ್ಷುಕರನ್ನು ಕಂಡಾಗ ವಿಚಲಿತನಾಗುವ ದೃಶ್ಯಗಳು ಕೊತ್ವಾಲನ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ.

    ಭೂಗತ ಜಗತ್ತಿನೊಂದಿಗೆ ಪೋಲೀಸ್ ವ್ಯವಸ್ಥೆ ಹೇಗೆ ತಳುಕು ಹಾಕಿಕೊಂಡಿದೆ ಎಂಬ ಸತ್ಯವೂ ಚಿತ್ರದಲ್ಲಿ ಹಾಸುಹೊಕ್ಕಾಗಿದೆ. ಭೂಗತ ನಾಯಕರನ್ನು ಹತ್ಯೆ ಮಾಡಲು ಪೋಲೀಸರೇ ಕುಮ್ಮಕ್ಕು ನೀಡುತ್ತಾರೆ. ಕ್ಷಣಕ್ಷಣಕ್ಕೂ ಬದಲಾಗುವ ಪೋಲೀಸ್ ಮನಸ್ಥಿತಿಯ ಇನ್ಸ್‌ಪೆಕ್ಟರ್ ಶಿವರಾಜ್‌ರ ಪಾತ್ರ ಗಮನ ಸೆಳೆಯುತ್ತದೆ. ಹಾಗೆಯೇ ಭೂಗತ ಜಗತ್ತಿನ ಧ್ವನಿಯಾಗಿ ಇಳರಾಜಾರ ಸಂಗೀತ ಎದೆಯಲ್ಲಿ ತವುಡು ಕುಟ್ಟಿದಂತೆ ಮಾಡುತ್ತದೆ. ಇನ್ನು ಎಚ್.ಸಿ.ವೇಣು ಅವರ ಕ್ಯಾಮೆರಾ ವರ್ಕ್ ಬಗ್ಗೆ ಎರಡನೇ ಮಾತಿಲ್ಲ.

    ಜಯರಾಜ್ ಆಗಿ ಅಶೀಶ್ ವಿದ್ಯಾರ್ಥಿ, ಶ್ರೀಧರ್ ಪಾತ್ರದಾರಿಯಾಗಿ ಅತುಲ್ ಕುಲಕರ್ಣಿ ಅವರ ನಟನೆ ಸಹಜವೇನೋ ಅನ್ನಿಸುತ್ತದೆ. ಆಸೀಫ್, ದಿನೇಶ್ ಮಂಗ್ಳೂರು, ಅಚ್ಯುತ, ಸತ್ಯರ ಪಾತ್ರಗಳಲ್ಲಿ ಸತ್ವವಿದೆ. ಅಂತೂ ಕನ್ನಡಕೊಂದು ರಾಮ್‌ಗೋಪಾಲ್ ವರ್ಮ ಮಾದರಿಯ ಚಿತ್ರ ದೊರಕಿದೆ. 'ದಾದಾಗಿರಿಯ ದಿನಗಳು" ಓದಿದವರು ಅದೇ ಕತೆ ತಾನೇ ಎಂದು ನಿರಾಸೆಪಡುವ ಅಗತ್ಯವಿಲ್ಲ. 'ಕೃತಿ" ಸಿನಿಮಾ ಆಗಿ ಮೂಡಿರುವುದನ್ನು ಪರದೆಯ ಮೇಲೆ ನೋಡಿ ಎಂಜಾಯ್ ಮಾಡುವವರಿಗೆ ನಿರಾಸೆ ಮೂಡಿಸುವುದಿಲ್ಲ.

    'ಆ ದಿನಗಳಲ್ಲಿ" ಬದುಕುಳಿದವರು ಇಂದೇನು ಮಾಡುತ್ತಿದ್ದಾರೆ ಎಂಬುದನ್ನೂ ಚಿತ್ರದ ಕೊನೆಯಲ್ಲಿ ತೋರಿಸುತ್ತಾರೆ. ಇದನ್ನು ಶ್ರೀಧರ್ 'ದಾದಾಗಿರಿಯ ದಿನಗಳು" ಕೃತಿಯಲ್ಲೂ ಹೇಳಿದ್ದಾರೆ.

    Friday, March 29, 2024, 19:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X