»   » ಸಮಯ ಕಳೆಯಲೊಂದು ಹೃದಯಾ ಚಿತ್ರ

ಸಮಯ ಕಳೆಯಲೊಂದು ಹೃದಯಾ ಚಿತ್ರ

Posted By:
Subscribe to Filmibeat Kannada

ಸಿನಿಮಾ ಶುರುವಾಗುತ್ತಿದ್ದಂತೆ, ಇವತ್ತು ನಾವೇನೋ ಮಿಸ್ ಮಾಡಿಕೊಳ್ಳುತ್ತಿದ್ದೇವೆ' ಎಂಬ ಅನುಮಾನ ಶುರುವಾಗುತ್ತದೆ. ಏನದು? ಉತ್ತರ ಮಾತ್ರ ಅಸ್ಪಷ್ಟ. ಆಗ ಮೊದಲ ದೃಶ್ಯಕ್ಕೆ ಚಾಲನೆ ಕೊಡುವ ದೈತ್ಯ' ಪ್ರತಿಭೆಯೊಬ್ಬ, ತನ್ನ ಬೊಂ'ಬಾಟ್ ಬಾಯಿ' ತೆರೆದು, ಇಡೀ ದೇಹ ಶೇಕ್ ಮಾಡುತ್ತಾ, ವೀಕ್ಷಕರಿಗೆ ಸಡನ್ ಶಾಕ್ ಕೊಡುತ್ತಾನೆ. ಅದನ್ನು ಕಾಮಿಡಿ ಎಂದು ಅರಗಿಸಿಕೊಳ್ಳುವವರು ಮಾತ್ರ ಬಚಾವ್. ಹತ್ತು ನಿಮಿಷ ಹಾಗೇ ಕಳೆಯುತ್ತದೆ. ಕತೆಯ ಕಾಗುಣಿತ ಏನು? ಎಂಬ ಪ್ರಶ್ನೆಯನ್ನು ಮತ್ತೆಮತ್ತೆ ಮೆಲುಕು ಹಾಕತೊಡಗುತ್ತಾನೆ ಕಾಸುಕೊಟ್ಟು ಬಂದ ಪ್ರೇಕ್ಷಕ ಪ್ರಭು! ಆತ ತನ್ನ ಕುರ್ಚಿಯನ್ನು ಮತ್ತೊಮ್ಮೆ ಮುಟ್ಟಿನೋಡಿಕೊಳ್ಳುತ್ತಿರುವಾಗ: ಒಂದಿಷ್ಟು ಕಾಲೇಜು ಹುಡುಗರ ಮಧ್ಯೆ ಚೆಲ್ಲಾಟ, ಕಿತ್ತಾಟ ಶುರುವಾಗುತ್ತದೆ. ಆಗ, ಓ... ಇದು ಲವ್ ಸ್ಟೋರಿ' ಇರಬಹುದು ಎಂದು ಅರೆಬರೆ ಖಾತ್ರಿಯಾಗುತ್ತದೆ.

*ವಿನಾಯಕರಾಮ್

ಆದರೂ ಮಿಸ್ ಆಗುತ್ತಿರುವುದು ಏನೆಂದು ಗೊತ್ತಾಗುವುದಿಲ್ಲ. ಸಿನಿಮಾ ಮುಂದು ವರಿಯುತ್ತದೆ: ಒಬ್ಬ ನಾಯಕ, ಮೆಡಿಕಲ್ ವಿದ್ಯಾರ್ಥಿ. ಅವನಿಗೊಂದಿಷ್ಟು ದುಶ್ಮನ್‌ಗಳು. ಅವರೆಲ್ಲ ಕಾಸಿನ ಕುಳಗಳು;ಎದುರಿಗೆ ಕುಳಿತವರ ತಲೆ ತಿನ್ನುವ ಹುಳಗಳು. ಹೀರೊ ಹಿಗ್ಗಾಮಗ್ಗಾ ವೀಕು. ಏತನ್ಮಧ್ಯೆ ಒಂದಿಷ್ಟು ಕುಣಿದಾಟ. ಅಲ್ಲಿ ಮಾತ್ರ ಡ್ಯಾನ್ಸ್ ಮೇಷ್ಟ್ರು ಹರಿಸಿದ ಬೆವರಿನ ಸೊಗಡು ಘಂ' ಎನ್ನತೊಡಗುತ್ತದೆ. ಆ ಮೇಲೆ ನಾಯಕಿ ನಾಚುತ್ತ, ಬಳುಕುತ್ತಾ ಬರುತ್ತಾಳೆ. ಅವಳೂ ಅದೇ ಕ್ಲಾಸು. ನಾಯಕನ ಮೊದಲ ನೋಟಕ್ಕೇ ಆಕೆ ಕ್ಲೀನ್ ಬೋಲ್ಡ್ . ಅದಾದ ತಕ್ಷಣ ನಾಯಕನ ಸ್ವವಿವರ: ಅಮ್ಮ-ಮಗನ ಸೆಂಟಿಮೆಂಟ್. ಬಡತನ, ಮೆಡಿಕಲ್‌ಅನ್ನೇ ಓದಲು ಏನು ಕಾರಣ ಅದು ಇದು.

ಆಮೇಲೆ ಒಂದು ಡ್ಯೂಯಟ್ ಸಾಂಗು. ಇಬ್ಬರಿಗೂ ಲವ್ ಆಗಿ, ಇನ್ನೇನು ಮದುವೆಯಾಗಬೇಕು; ರಾಕಿ ಎಂಬ ಅರೆಪಿರ್ಕಿಯಿಂದ ನಾಯಕಿಯ ಅಪಹರಣ ಪ್ರಯತ್ನ. ರಾಕಿಯ ಕಾರು, ನಾಯಕನ ಬೈಕ್ ಚೇಸಿಂಗ್. ಮುಂದಿನ ದೃಶ್ಯದಲ್ಲಿ ಆಕ್ಸಿಡೆಂಟ್ ಆಗುತ್ತದೆ... ಮೂವರೂ ಮಟಾಷ್ ಆದವರಂತೆ ರಸ್ತೆಮಧ್ಯೆ ಮಲಗಿರುತ್ತಾರೆ; ಅಲ್ಲಿಗೆ ವಿರಾಮ... ಹೀಗೆ ಕತೆ ಸಾಗಿ ಸಾಗಿ ಸಾಗಿ, ಎದುರಿಗಿದ್ದವರಿಗೆ ಸಾಕಾಗಿಹೋಗಿ, ಕೊನೆಗೂ ಮಿಸ್ ಆಗಿದ್ದು ಏನು ಎಂಬುದು ಗೊತ್ತಾಗಿರುತ್ತದೆ. ಅಷ್ಟೊತ್ತಿಗಾಗಲೇ ಎರಡೂವರೆ ತಾಸು ಕಳೆದುಹೋಗಿರುತ್ತದೆ!

ಚಿತ್ರ ಎಷ್ಟೇ ಚಿತ್ರಾನ್ನವಾಗಿದ್ದರೂ ಅದು ಹಳಸಿಲ್ಲ. ಕಾರಣ ಕತೆಯ ತಿರುಳು ಹಾಗೂ ತಿರುವು. ಇದೊಂಥರಾ ತ್ರಿಕೋನ ಪ್ರೇಮಕತೆ. ಜತೆಗೆ ಸಮಾಜಕ್ಕೆ ನೀವು ಇಷ್ಟ ಪಡುವವರಿಗೆ ಹಪಹಪಿಸುವ ಬದಲು, ನಿಮಗಾಗಿ ಜಪಿಸುವವರನ್ನು ಇಷ್ಟಪಡಿ' ಎಂಬ ಸಂದೇಶ ಸಾರುವ ಕತೆ. ಪಕ್ಕಾ ಕಮರ್ಷಿಯಲ್ ಆಗಿ ಹೇಳಲು ಹೋದ ನಿರ್ದೇಶಕರು ವಿಲವಿಲ ಒದ್ದಾಡಿದ್ದಾರೆ. ಆದರೂ ಅದು ಪ್ರಯೋಜನವಾಗಿಲ್ಲ. ಕಾರಣ ನಾಯಕ ನಟ ಶ್ರೇಯಸ್‌ನ ನಟನೆಯಲ್ಲಿರುವ ಅವಗುಣ.

ಒಂದು ದೃಶ್ಯದಲ್ಲಾದರೂ ಸರಿಯಾಗಿ ತುಟಿ ಬಿರಿದು ಮಾತನಾಡಿದ್ದರೆ ಚಿತ್ರಕತೆಯ ಬಗ್ಗೆ ವ್ಯಥೆ ಪಡುವ ಅವಶ್ಯಕತೆ ಇರುತ್ತಿರಲಿಲ್ಲ. ಅವರಿಗಿಂತ ಅವರ ಬಾಲ್ಯದ ಪಾತ್ರ ಮಾಡಿರುವ ಮಾಸ್ಟರ್ ಗಗನ್ ಸಾವಿರ ಪಾಲು ವಾಸಿ! ಇನ್ನೊಬ್ಬ ನಾಯಕ ಸಾಗರ್ ನಟನೆ ಖಳನಟ ಹರೀಶ್ ರೈ ಅಭಿನಯವನ್ನೇ ಮೀರಿಸು ವಂತಿದೆ(!) ಕಣ್ ಕಣ್ ಬಿಡುವುದೇ ಆಕ್ಟಿಂಗು ಎಂದು ಕೊಂಡವರಿಗೆಲ್ಲ ಸಾಗರ್ ಮಾದರಿ'ಯಾಗುತ್ತಾರೆ. ನಾಯಕಿ ಮೈತ್ರೇಯಿ ನಾನು ಆಡಿದ್ದೇ ಆಟ' ಎಂದುಕೊಂಡು ಹ್ಯಾಗ್ಹ್ಯಾಗೋ ಆಡುತ್ತಾಳೆ. ನಟಿಸುವುದು ಎಂದರೆ ಸಿಪ್ಪೆ ಸುಲಿದಿಟ್ಟ ಬಾಳೆ ಹಣ್ಣನ್ನು ಗುಳುಂ ಎನಿಸಿದಷ್ಟು ಸುಲಭ ಎಂದುಕೊಂಡಿದ್ದರೆ ಅದು ಅವರ ಮೂರ್ಖತನ. ಈಕೆಯ ಕುಣಿತಕ್ಕೆ ಆ ನಾಟ್ಯಮಯೂರಿಯೂ ನಾಚಿ ನೀರಾಗುವ ಸಾಧ್ಯತೆಯೇ ಹೆಚ್ಚು !

ಕ್ಯಾಮೆರಾಮನ್ ಸಾಹೇಬ್ರು ಶೂಟಿಂಗ್ ಸಮಯದಲ್ಲಿ ನಾನು ಕ್ಯಾಮೆರಾ ಆನ್ ಮಾಡಿಟ್ಟಿದ್ದೇನೆ. ನೀವು ಏನ್ ಬೇಕಾದ್ರೂ ಮಾಡಿಕೊಳ್ಳಿ' ಎಂದು ನಿದ್ದೆಗೆ ಜಾರಿದ್ದರಾ ಎಂಬ ಪ್ರಶ್ನೆಗೆ ನಿರ್ದೇಶಕರೇ ಉತ್ತರಿಸಬೇಕು. ವಿನಯಾ ಪ್ರಸಾದ್ ಅಭಿನಯದ ಬಗ್ಗೆ ಚಕಾರವೆತ್ತುವ ಹಾಗಿಲ್ಲ. ಸೆಂಟಿಮೆಂಟ್ ದೃಶ್ಯಗಳಲ್ಲಿ ಕೆಲವೊಂದು ಅರ್ಥ ಹಾಗೂ ಭಾವಭರಿತವಾಗಿದೆ. ದುನಿಯಾ ರಶ್ಮಿ ಹಾಗೂ ಯೋಗೀಶ್ ಬರುವ ಹೊತ್ತಿಗೆ, ಪ್ರೇಕ್ಷಕರ ಹೃದಯ'ಕ್ಕೆ ಸಾಕಷ್ಟು ಸುತ್ತಿಗೆ ಏಟು ಬಿದ್ದಿರುತ್ತವೆ !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada