»   » ಮೊದಲ ಸಲ ರವಿಚಂದ್ರನ್‌ ತಮ್ಮ ಅಂತರಂಗದ ದ್ವಂದ್ವಗಳಿಗೆ ಮಾತಾಗಿದ್ದಾರೆ. ಭ್ರಮೆಯ ಲೋಕದಿಂದ ವಾಸ್ತವದ ನಗ್ನ ಸತ್ಯಗಳಿಗೆ ಶಿಲ್ಪಿಯಾಗಿದ್ದಾರೆ. ‘ಏಕಾಂಗಿ’ ಅಪರೂಪದ ಚಿತ್ರ. ಕನ್ನಡ ಪ್ರೇಕ್ಷಕನ ಅಭಿರುಚಿಯನ್ನು ಉನ್ನತ ಮಟ್ಟಕ್ಕೇರಿಸಿದ ರವಿಗೆ ಹ್ಯಾಟ್ಸಾಫ್‌!

ಮೊದಲ ಸಲ ರವಿಚಂದ್ರನ್‌ ತಮ್ಮ ಅಂತರಂಗದ ದ್ವಂದ್ವಗಳಿಗೆ ಮಾತಾಗಿದ್ದಾರೆ. ಭ್ರಮೆಯ ಲೋಕದಿಂದ ವಾಸ್ತವದ ನಗ್ನ ಸತ್ಯಗಳಿಗೆ ಶಿಲ್ಪಿಯಾಗಿದ್ದಾರೆ. ‘ಏಕಾಂಗಿ’ ಅಪರೂಪದ ಚಿತ್ರ. ಕನ್ನಡ ಪ್ರೇಕ್ಷಕನ ಅಭಿರುಚಿಯನ್ನು ಉನ್ನತ ಮಟ್ಟಕ್ಕೇರಿಸಿದ ರವಿಗೆ ಹ್ಯಾಟ್ಸಾಫ್‌!

Subscribe to Filmibeat Kannada

ಪ್ರೇಮಕ್ಕಿಂತ ಜೀವ ಅಮೂಲ್ಯ. ಮನುಷ್ಯನಿಗಿಂತ ಮಾನವೀಯತೆ ಮುಖ್ಯ ಅನ್ನುವುದನ್ನು ಸಾಂಕೇತಿಕವಾಗಿ ವ್ಯಕ್ತಪಡಿಸಲಾಗಿದೆ. ಕುತೂಹಲದ ಸಂಗತಿಯೆಂದರೆ ಈ ರೀತಿ ಮನುಷ್ಯ ಸಂಬಂಧಗಳ ಸೂಕ್ಷ್ಮತೆಯನ್ನು ರವಿಚಂದ್ರನ್‌ ತೋರಿಸಿರುವುದು.

ಪ್ರತಿನಿತ್ಯ ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ನಡೆಯುವುದನ್ನೇ ತೋರಿಸಿದರೂ, ಅದು ಹೀಗೂ ಇರಬಹುದಲ್ವಾ ಅಂತನ್ನಿಸಿ ಬೆಚ್ಚಿ ಬೀಳಿಸುತ್ತಾರೆ. ಅದಕ್ಕೊಂದು ಪುಟ್ಟ ಉದಾಹರಣೆ ನೋಡಿ. ಅದೊಂದು ಸೂಪರ್‌ ಮಾರ್ಕೆಟ್‌ ಅಂಗಡಿ. ಹೆಣ್ಣೊಬ್ಬಳು ಒಂದು ಕೈಯಲ್ಲಿ ಮಗುವೆತ್ತಿಕೊಂಡು, ಮತ್ತೊಂದು ಕೈಯಲ್ಲಿ ಹಿಡಿದ ಬ್ಯಾಗಿನ ಸಾಮಾನುಗಳನ್ನು ಕೆಳಗೆ ಬೀಳಿಸುತ್ತಾಳೆ. ಪಕ್ಕದಲ್ಲಿ ನಿಂತಿದ್ದ ನಾಯಕನಿಗೆ ಅದನ್ನು ಎತ್ತಿಕೊಡುವಂತೆ ಕೇಳುತ್ತಾಳೆ. ಆತ ಕಿವುಡನಂತೆ ತನ್ನ ಕೆಲಸ ಮಾಡುತ್ತಿರುತ್ತಾನೆ. ಆಗ ಮಂಡ್ಯ ರಮೇಶ್‌ ಸಹಾಯ ಮಾಡಲು ಬಗ್ಗಿದಾಗ ಆಕೆ ಅವನ ದುಡ್ಡು ತುಂಬಿದ ಸೂಟ್‌ಕೇಸ್‌ ಎತ್ತಿಕೊಂಡು ಪರಾರಿ. ಹಾಗಾದರೆ ಇನ್ನೊಬ್ಬರಿಗೆ ಸಹಾಯ ಮಾಡೋದೆ ತಪ್ಪಾ? ಹೌದು, ಏಕಾಂಗಿ ಹೇಳುವುದು ಅದನ್ನೇ. ಸಮಾಜದಲ್ಲಿ ಇರಬೇಕಾದರೆ ಕೆಲವೊಮ್ಮೆ ಕುರುಡನಾಗು. ಕಿವುಡನಾಗು ಮತ್ತು ಮೂಗನಾಗು. ಆಗ ನಿನ್ನಷ್ಟಕ್ಕೆ ನೀನು ಬದುಕಬಹುದು.

ಹೀಗೆ ಒಂಟಿಯಾಗಿದ್ದಾಗಲೇ ನೀನು ನಿನ್ನತನ ಉಳಿಸಿಕೊಳ್ಳಲು ಸಾಧ್ಯ ಎನ್ನುವ ತಂದೆಯ ಮಾತಿನಂತೆ ರವಿ ಬದುಕುತ್ತಿರುತ್ತಾನೆ ಅದೇ ಗಾಜಿನರಮನೆಯಲ್ಲಿ . ಆಗ ಕ್ಲಬ್ಬಿನಲ್ಲಿ ಪರಿಚಯವಾಗುವ ರಮ್ಯಕೃಷ್ಣಳನ್ನು ಮೊದಲ ನೋಟದಲ್ಲೇ ಪ್ರೀತಿಸುತ್ತಾನೆ. ಅಲ್ಲಿಂದ ಆತನ ಜೀವನದ ಹೊಸ ಅಧ್ಯಾಯ ಶುರುವಾಗುತ್ತದೆ. ಅವಳು ಒಂಥರಾ ಸ್ಯಾಡಿಸ್ಟ್‌ ಹುಡುಗಿ. ಅವನನ್ನು ನೋಯಿಸುವುದರಲ್ಲಿ ಖುಷಿಪಡುವ ಮನಸ್ಸು . ಆತನೋ ನೋವಿನಲ್ಲೇ ಪ್ರೀತಿಗಾಗಿ ಹಪಹಪಿಸುವ ಜೀವಿ.

ಆಕೆಗಾಗಿ ಗಂಟೆಗಟ್ಟಲೆ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾನೆ. ಕಣ್ಣಲ್ಲಿ ನೀರು ಬರುವವರೆಗೆ ಉಸಿರು ಬಿಗಿ ಹಿಡಿಯುತ್ತಾನೆ. ಆಕೆ ಕಾಲಿನಿಂದ ಹೇಳಿದ್ದನ್ನು ಕೈಯಿಂದ ಮಾಡಿ ಪುನೀತನಾಗುತ್ತಾನೆ. ಇಷ್ಟೆಲ್ಲಾ ಮಾಡುವ ನಾಯಕನಿಗೆ ಆಕೆಯ ಪ್ರೀತಿ ಬರೀ ನಟನೆ ಅನ್ನುವುದು ಗೊತ್ತಾಗುತ್ತದೆ. ಜೊತೆಗೆ ಆಕೆಯಾಬ್ಬಳು ವೇಶ್ಯೆಯೆಂಬುದೂ ಕೂಡಾ...

ಕನ್ನಡದಲ್ಲಿ ಈ ಮಟ್ಟದ ಚಿತ್ರ ಮಾಡಲು ಸಾಧ್ಯವೇ ಅನ್ನಿಸುವಷ್ಟು ಕತೆ ಮತ್ತು ನಿರೂಪಣೆ ಬೆರಗುಗೊಳಿಸುತ್ತದೆ. ಅಪರೂಪದ ಕತೆಗಾರನೊಬ್ಬನನ್ನ ರವಿ ನೀಡಿದ್ದಾರೆ. ನಿರೂಪಣೆಯಲ್ಲಿ ಮೌನಕ್ಕೆ ಅವರು ನೀಡಿದ ಪ್ರಾಶಸ್ತ್ಯ ಅರ್ಥಪೂರ್ಣವಾಗಿದೆ. ಅನಗತ್ಯ ಸಂಗೀತ ಇಲ್ಲಿಲ್ಲ . ಮಾತು ಇದ್ದಲ್ಲಿ ಸಂಗೀತ ಕಡಿಮೆ. ಸಂಗೀತವಿದ್ದಲ್ಲಿ ಮಾತಿಗೆ ಅವಕಾಶವಿಲ್ಲ . ಒಂದೇ ಮನೆಯಲ್ಲಿ ಬಹುತೇಕ ಎರಡೇ ಪಾತ್ರಗಳು ಚಿತ್ರದುದ್ದಕ್ಕೆ ಇದ್ದರೂ ಅದನ್ನು ನೋಡೇಬಲ್‌ ಆಗಿಸುವುದು ಬಿಗಿಯಾದ ನಿರೂಪಣೆ. ಒಂದು ಹಾಡನ್ನು ಬಿಟ್ಟರೆ ಉಳಿದೆಲ್ಲವೂ ಒಂದೇ ಮನೆಯಲ್ಲಿ ಶೂಟ್‌ ಮಾಡಲಾಗಿದೆ. ಆದರೆ ಒಂದು ಫ್ರೇಮ್‌ನಲ್ಲಿ ಕಂಡ ದೃಶ್ಯ ಇನ್ನೊಂದರಲ್ಲಿ ಕಾಣದಂತೆ ರವಿ ಎಚ್ಚರ ವಹಿಸಿದ್ದಾರೆ. ನೆರಳು ಬೆಳಕಿನಾಟವೂ ಸಮ್ಮೋಹನಗೊಳಿಸುತ್ತದೆ. ಸೀತಾರಾಂ ಕೆಲಸವಂತೂ ನಿಮ್ಮನ್ನು ಆ ಗಾಜಿನ ಮನೆಯಾಳಗೆ ಒಯ್ದು ನಿಲ್ಲಿಸುತ್ತದೆ.

‘ಆಟಗಾರನ ಕೈಯಲ್ಲಿನ ಫುಟ್‌ಬಾಲ್‌ ಆಗಬೇಡ, ಆಟಗಾರನಾಗು...’
‘ಸೋಲು, ಛಲಕ್ಕೆ ಮೂಲವಾಗಬೇಕೇ ಹೊರತು ಸೇಡಿಗೆ ಕಾರಣವಾಗಬಾರದು’
‘ಓ ದೀಪವೇ, ನೀನು ಉರೀತಾ ಅಳ್ತಿದೀಯಾ, ಅಳುತ್ತಾ ಉರೀತಿದ್ದಿಯಾ’
‘ನಾನು ಪ್ರೀತಿ ಮಾಡ್ತಾ ಕಾಯ್ತಾ ಇದ್ದೀನಿ. ಕಾಯ್ತಾ ಪ್ರೀತಿ ಮಾಡ್ತಾ ಇದ್ದೀನಿ.’

ಇವು ಮಾತು ಕೊಟ್ಟ ರವಿಯವರ ಕೆಲವು ಸಂಭಾಷಣೆ ಸಾಲುಗಳು. ಸಾಹಿತ್ಯದ ಬಗ್ಗೆ ತಿಳಿದವರಿಗೆ ಇದು ಸ್ವಲ್ಪ ಹಳೆಯದೆನ್ನಿಸಿದರೂ, ದೃಶ್ಯಗಳಿಗೆ ತಕ್ಕಂತೆ ಇವುಗಳನ್ನು ಮೂಡಿಸಿದ ರವಿಯ ದೂರದೃಷ್ಟಿಯನ್ನು ಇದು ತೋರಿಸುತ್ತದೆ. ರವಿ ಮೊದಲ ಬಾರಿಗೆ ಪ್ರೇಕ್ಷಕರ ನಾಡಿ ಮಿಡಿತ ಅರಿತಂತೆ ಹಾಡುಗಳನ್ನು ರಚಿಸಿದ್ದಾರೆ. ‘ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೇ ಹಳೇದನ್ನ ಮರೀಬೇಡ ಅಂತ ಹೇಳೋಕೆ’ ಎನ್ನುವ ಸಾಲು ಅನುಭವಿಸಿದಾತನಿಗೆ ಮಾತ್ರ ಬರೆಯಲು ಸಾಧ್ಯ.

ಹದಿನೈದು ನಿಮಿಷದ ಕ್ಲೈಮಾಕ್ಸ್‌ ಹಾಡಿನಲ್ಲಿ ಹೆಣ (?)ವನ್ನು ಬಳಸಿ ಚಿತ್ರಿಸಿದ ರೀತಿ ರೋಮಾಂಚನ ಮೂಡಿಸುತ್ತದೆ. ಪ್ರೀತಿಗೆ ಜೀವವಿದ್ದ ದೇಹವೇ ಬೇಕಾಗಿಲ್ಲ ಅನ್ನುವುದು ರವಿ ಉದ್ದೇಶವೇ? ಯಾವುದೇ ಭಾಷೆಯ ಚಿತ್ರದಲ್ಲಿ ಈ ರೀತಿಯ ಕಲ್ಪನೆ ಬಂದಿಲ್ಲ . ಮೊದಲಿಗಿಂತ ಮುದ್ದುಮುದ್ದಾಗಿ ಕಾಣುವ ರವಿಚಂದ್ರನ್‌ ಸಂಯಮದಿಂದ ನಟಿಸಿದ್ದಾರೆ. ಮೆಲುದನಿಯಲ್ಲಿ ಸಂಭಾಷಣೆ ಹೇಳುವ ರೀತಿಯೂ ಕತೆಗೊಂದು ಖದರ್‌ ತಂದಿದೆ. ರಮ್ಯಕೃಷ್ಣ ತನಗೆ ಸಿಕ್ಕ ಪಾತ್ರವನ್ನು ನೀಟಾಗಿ ಅಭಿನಯಿಸಿದ್ದಾಳೆ. ಪ್ರಕಾಶ್‌ ರೈ ಮತ್ತೆ ತಮ್ಮ ನಾಟಕದ ದಿನಗಳನ್ನು ನೆನಪಿಸಿಕೊಂಡು ಅಭಿನಯಿಸಿದಂತಿದೆ. ಅವರ ಗಂಭೀರ ಮಾತುಗಳ ಧಾಟಿ ನಗು ಉಕ್ಕಿಸಿದ್ದರಿಂದ ಇದನ್ನು ಹೇಳಬೇಕಾಯಿತು. ಬಾಲ್ಯದ ದ್ವೇಷ ಒಬ್ಬನನ್ನು ಕೊಲ್ಲುವ ಮಟ್ಟಕ್ಕೆ ಬೆಳೆಯುತ್ತದೆ ಅನ್ನುವುದನ್ನು ನಂಬಲು ಸ್ವಲ್ಪ ಕಷ್ಟವಾಗುತ್ತದೆ. ಹಾಗೆಯೇ ಕ್ಲೈಮಾಕ್ಸ್‌ನಲ್ಲಿ ಇನ್ನಷ್ಟು ಬದಲಾವಣೆ ಮತ್ತು ಬಿಗಿ ತಂದಿದ್ದರೆ ಒಳ್ಳೆಯದಿತ್ತೇನೋ.

ಕನ್ನಡ ಪ್ರೇಕ್ಷಕನ ಅಭಿರುಚಿಯನ್ನು ಉನ್ನತ ಮಟ್ಟಕ್ಕೇರಿಸಿದ ರವಿಗೆ ಹ್ಯಾಟ್ಸಾಫ್‌ ಹೇಳಲೇಬೇಕು. ಕನಿಷ್ಠ ಒಂದು ದಿನವಾದರೂ ಮನಸ್ಸನ್ನು ಕದಡುವ ‘ಏಕಾಂಗಿ’ ಕನ್ನಡಕ್ಕೆ-ಕನ್ನಡಕ್ಕಷ್ಟೇ ಅಲ್ಲ- ಅಪರೂಪದ ಕೊಡುಗೆ... ಅಂದಹಾಗೆ, ಇದು ಅಪ್ಪಟ ಸ್ವಮೇಕ್‌ ಕತೆಯ ಚಿತ್ರ.

Post Your Views?

ವಾರ್ತಾ ಸಂಚಯ
ದಾವಣಗೆರೆಯಲ್ಲಿ ಬಣ್ಣದ ತಣ್ಣನೆಯ ಸಂಜೆ
ಏಕಾಂಗಿ: ಹಿಂದಿಗೆ ರಿಮೇಕ್‌, ತಮಿಳು-ತೆಲುಗಿಗೆ ಡಬ್ಬಿಂಗ್‌
ಕನಸುಗಾರ ರವಿಯ ಇನ್ನೊಂದು ಮುಖ : ಈಗ ಈತ ಲೇಖಕ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada