For Quick Alerts
  ALLOW NOTIFICATIONS  
  For Daily Alerts

  ಮೆಲ್ಲುಸಿರಾಯಿತೇ ನಿಟ್ಟುಸಿರು?

  By Staff
  |
  • ಮಹೇಶ್‌ ದೇವಶೆಟ್ಟಿ
  ಮೂರುವರ್ಷ ಪ್ರೀತಿಸಿ ಮದುವೆಯಾದರೂ ಮೂರೇ ತಿಂಗಳಿಗೆ ಯಾಕೆ ಸೋಡ ಚೀಟಿ ಕೊಡುತ್ತಾರೆ ? ಉದಾಹರಣೆಯಾಂದಿಗೆ ವಿವರಿಸಿ.

  ಪ್ರೇಮದಲ್ಲಿ ತೇಲಾಡುವಾಗ ಆತನ ರಾತ್ರಿ ‘ಓಲಾಟ’ ಆಕೆ ಗಮನಕ್ಕೆ ಬರುವುದಿಲ್ಲ. ಅವಳ ಹುಟ್ಟು ಕಿರುಚಾಟ ಅವನ ಕಿವಿಗೆ ನಾಟುವುದೇ ಇಲ್ಲ. ಆದರೆ ಮದುವೆಯಾದ ಒಂದು ತಿಂಗಳಿಗೆ, ಅವನ ಸಿಗರೇಟು ಹೊಗೆಗೆ ಅವಳು ‘ಕಕ್ಕಾ’ ಅಂತಾಳೆ. ಅವಳ ಸಿಡುಕುತನಕ್ಕೆ ಆತ ‘ಇಸ್ಸಿ ’ಅಂತಾನೆ. ಅಲ್ಲಿಗೆ ಹತ್ತು ಪರ್ಸೆಂಟು ಪ್ರೀತಿ ಓಂ ನಮಃ ಶಿವಾಯ!

  ಹೀಗೆ ಅವರವರ ಒಂದೊಂದು ಕಲ್ಯಾಣ ಗುಣ ಹೊರಬಿದ್ದಂತೆ ಮನೆ ಇಂಟರ್‌ನೆಟ್‌ ಆಗುತ್ತದೆ. ಅಲ್ಲಿಂದ ಪರ್ಸೆಂಟುಗಳ ಲೆಕ್ಕದಲ್ಲಿ ಪ್ರೀತಿ ಚುಕ್ತಾ ಆಗತೊಡಗುತ್ತದೆ. ಹೀಗಾಗದಿರಲು ಏನು ಮಾಡಬೇಕು? ಅವನು ಕೇಳಿದ ಪ್ರಶ್ನೆಗೆ ಮೋಹನ್‌ ಗಾಂಧಿ ಹೇಳುತ್ತಾನೆ. ಮುಖ ನೋಡಿ ಪ್ರೀತಿಸಬೇಡಿ. ಮನಸ್ಸು ನೋಡಿ ಕನಸು ಕೊಡಿ. ಇಂತಹ ಪ್ರೇಮಿಗಳನ್ನು ಗಾಂಧಿ ಟೆಸ್ಟ್‌ ಮಾಡುತ್ತಾನೆ. ಅವರಿಬ್ಬರೂ ಮುಖ ನೋಡದೇ ಕಂಡಾಪಟ್ಟೆ ಪ್ರೀತಿಸುತ್ತಾರೆ ಅಂತ ಗೊತ್ತಾದಾಗ ಅವರಿಬ್ಬರನ್ನೂ ಭೇಟಿ ಮಾಡಲು ನಿರ್ಧರಿಸುತ್ತಾನೆ. ಅದೇ ಹೊತ್ತಿಗೆ ಗಾಡಿಯಡಿಗೆ ಸಿಕ್ಕಿ ಸಾಯುತ್ತಾನೆ. ಈ ಕಡೆ ಪ್ರೇಮಿಗಳಿಬ್ಬರೂ ವಿರಹ ವೇದನೆಯಲ್ಲಿ ಒದ್ದಾಡುತ್ತಾರೆ. ಆಕಸ್ಮಿಕವಾಗಿ ತಾನು ಪ್ರೇಮಿಸಿದ ಹುಡುಗ/ ಹುಡುಗಿ ಇವಳೇ/ನೇ ಎಂದು ಗೊತ್ತಿರದೆ ಮದುವೆಯಾಗುತ್ತಾರೆ...

  ಕತೇನೇ ಯಾಕೋ ಜಾಸ್ತಿಯಾಯ್ತು. ಅಲ್ಲಿಗೆ ಬಿಟ್ಟಾಕಿ ಉಳಿದದ್ದನ್ನು ತಿಳಿಯುವ ಆಸೆ ಇದ್ದರೆ ಸಿನಿಮಾ ನೋಡುವ ಧೈರ್ಯ ಮಾಡಿ. ಕನ್ನಡದ ಮಟ್ಟಿಗೆ ಇದೊಂದು ಹೊಸ ಕಲ್ಪನೆ. ಆರಂಭದಲ್ಲಿ ಏನೋ ಇದೆ ಎಂಬ ಕುತೂಹಲ ಮೂಡಿಸಿದರೂ ಬರ್ತಾಬರ್ತಾ ಪುಟ್‌ಪಾತ್‌. ನಿರೂಪಣೆ ಚೆನ್ನಾಗಿದೆ ಅನಿಸಿದರೂ ಅನೇಕ ದೃಶ್ಯಗಳ ಜಾಳುತನವೇ ಕತೆಯ ಓಟಕ್ಕೆ ತೊಡರುಗಾಲು ಹಾಕಿವೆ. ನಿರ್ದೇಶಕ ರಮೇಶ್‌ ಕೃಷ್ಣ ತಮ್ಮ ಪೂರ್ವ ಇತಿಹಾಸ ಹ್ಯಾಂಗೋವರ್‌ನಿಂದ ಹೊರಬಂದಿಲ್ಲ. ಹೀಗಾಗಿ ದ್ವಿತೀಯಾರ್ಧ ಅಕ್ಷರಶಃ ಮೆಗಾ ಸೀರಿಯಲ್‌. ಆದರೂ ಲವಲವಿಕೆಯನ್ನು ಕಾಯ್ದುಕೊಳ್ಳಲು ಯತ್ನಿಸಿದ್ದು ಕಾಣಿಸುತ್ತದೆ. ಸಂಭಾಷಣೆ ಬರೆದ ರಾಜೇಂದ್ರ ಕಾರಂತ್‌ ಹೊಸ ಹೊಸ ಶಬ್ದಗಳನ್ನು ತಂದು ಅಚ್ಚರಿ ಮೂಡಿಸುವ ಮಾತು ಬರೆದಿದ್ದಾರೆ. ಉದಾಹರಣೆಗೆ ಸಿಗರೇಟು ಸೇದುವ ಗಂಡನಿಗೆ ಆಕೆ ಹೇಳುತ್ತಾಳೆ ‘ರೈಲ್ವೇ ಎಂಜಿನ್‌’.

  ಸಿನಿಮಾ ಕತೆ ಅಂದರೆ ಕಲ್ಪನೆ ಅಂತನ್ನುವ ಕಲ್ಪನೆಯಿಂದ ನೋಡಿದರೂ ಕತೆ ತೀರಾ ಕಾಲ್ಪನಿಕವಾಗಿದೆ. ಮುಖವನ್ನೇ ನೋಡದವಳಿಗಾಗಿ ನಾಯಕ ಶೆರೆ ಕುಡಿಯುತ್ತಾ ಅಲೆಯುವುದು, ಆಕೆ ಬಾಂಡ್‌ ಪೇಪರ್‌ ಮದುವೆಗೆ ಒಪ್ಪಿಗೆ ಕೊಡುವುದು, ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬರ ನೆನಪಿನಲ್ಲಿ ಒಬ್ಬರು ಕೊರಗುತ್ತಾ, ಕರಗುತ್ತಾ ಕೂಡೋದಿದೆಯಲ್ಲ...

  ಅಲ್ರೀ, ವರ್ಷಗಟ್ಟಲೆ ಮುಖ ನೋಡಿ ಪ್ರೀತಿಸಿದವನು/ಳು ದೂರವಾದರೇ ಅದರ ಋಣ ಅಷ್ಟಿಷ್ಟು ಅಂತ ಮತ್ತೋಂದು ಬೈಕು ಹತ್ತುವ ಯುಗದಲ್ಲಿ ಇದೆಲ್ಲಾ ನಡೆಯುತ್ತಾ?

  ಇನ್ನು ಸಂಗೀತದ ಕಡೆ ಬಂದರೆ ಸ್ವಲ್ಪ ರಿಲ್ಯಾಕ್ಸ್‌ ಆಗುತ್ತೀರಿ. ವಿ. ಮನೋಹರ್‌ ಬರೆದ ‘ಹೊಂಬಾಳೆ ಹೊಂಬಾಳೆ’ ಹಾಡು ಹೊಗೇನ್‌ಕಲ್‌ ಫಾಲ್ಸ್‌ನಂತೆ ಎದೆಯಲ್ಲಿ ಸುರಿಯುತ್ತದೆ. ಸಂಗೀತ ಮನಸ್ಸಿನಲ್ಲಿ ಸುಳಿಯುತ್ತದೆ. ಫೋಟೋಗ್ರಫಿ ಕಣ್ಣು ತುಂಬುತ್ತದೆ. ಮೋಹನ್‌ ಗಾಂಧಿ ಪಾತ್ರದ ವಿಲಕ್ಷಣತೆಯಿಂದ ಅನಂತ್‌ನಾಗ್‌ ಏನೋ ಕಾಡುತ್ತಾರೆ. ದುರಂತವೆಂದರೆ ಇದನ್ನೆಲ್ಲಾ ನೀವು ದಿಲೀಪ್‌ ಎನ್ನುವ ಅಂಗನವಾಡಿ ಹೀರೋ, ರಶ್ಮಿ ಕುಲಕರ್ಣಿ ಎಂಬ ಹೀರೋಯಿನ್‌ ಸಹಿತ ನೋಡಬೇಕಾಗಿರುವುದೇ ಕನ್ನಡಿಗರಿಗೆ ಬಯಸದೇ ಬಂದ ಭಾಗ್ಯ.

  ಏನೇ ಆದರೂ ನಿರ್ದೇಶಕ ರಮೇಶ್‌ ಕೃಷ್ಣ ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ. ನಿರ್ದೇಶಕನಿಗಿರಬೇಕಾದ ಮಿತಿಯಲ್ಲಿ ನೀಟಾದ ಸ್ವೀಟಾದ ಚಿತ್ರ ಕೊಡಲು ಒಲೆ ಹೊತ್ತಿಸಿದ್ದಾರೆ. ಅಡುಗೆಯನ್ನು ಅಲ್ಲಲ್ಲಿ ಸೀಯಿಸಿದ್ದಾರೆ.

  ಮೆಲ್ಲುಸಿರು ಎಲ್ಲೋ...ನಿ...ನಿ...ನಿ...ನಿಟ್ಟುಸಿರಾಯ್ತೇನೋ...

  (ಸ್ನೇಹಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X