twitter
    For Quick Alerts
    ALLOW NOTIFICATIONS  
    For Daily Alerts

    ಉಗ್ರಗಾಮಿ, ತಂಗಿಯೆದುರು ಮಂದಗಾಮಿ

    By Staff
    |
    • ವಿನಾಯಕ ಭಟ್‌
    ಇದು ಅಣ್ಣ- ತಂಗಿಯರ ಬಾಂಧವ್ಯದ ಚಿತ್ರ ಅಂತ ಚಿತ್ರದ ಶೀರ್ಷಿಕೆ ನೋಡಿದಾಗ ಅನ್ನಿಸದೇ ಇರುವುದು ಮೊದಲನೆ ಅಚ್ಚರಿ. ಇದುವವರೆಗೂ ಹಾಸ್ಯ ಪಾತ್ರಗಳಿಗೆ ಬ್ರ್ಯಾಂಡ್‌ ಆಗಿದ್ದ ಮೋಹನ್‌ಗೆ ಉಗ್ರನರಸಿಂಹನ ಪಾತ್ರವೂ ಲೀಲಾಜಾಲ ಎಂಬುದು ಎರಡನೆ ಅಚ್ಚರಿ. ಚಿತ್ರದ ಹೆಸರು- ಕಥೆಗೆ ಒಂದೆಳೆಯ ಸಂಬಂಧವೇನಾದರೂ ಇದೆಯಾ ಎಂದು ಹುಡುಕಿದರೂ ಸಿಗದಿರುವುದು ಇನ್ನೊಂದು ಅಚ್ಚರಿ.

    ‘ಶುಕ್ಲಾಂಬರಧರಂ’ ಸಾಗುವುದೇ ಹೀಗೆ. ಕೆಲವೆಡೆ ಡ್ರಾಮಾ, ಇನ್ನು ಕೆಲವೆಡೆ ಮೆಲೊಡ್ರಾಮಾ. ಅಸಹಜ ಎಂದುಕೊಳ್ಳುತ್ತಿರುವಾಗಲೇ ಮೂಡಿಬರುವ ಸಹಜತೆ, ಮಾಮೂಲಿ ಎಂದುಕೊಳ್ಳುತ್ತಿರುವಾಗಲೇ ಪಡೆದುಕೊಳ್ಳುವ ಭಿನ್ನತೆ.

    ನಾಯಕ ನರಸಿಂಹ (ಮೋಹನ್‌) ಎಂದಿನಂತೆ ಅನಾಥ. ವಿದ್ಯೆ ಒಲಿಯದ ಈತನಿಗೆ ಸಂಗೀತ ಒಲಿದಿದೆ. ಕೊಳಲೂದಿ ಭಿಕ್ಷಾಟನೆ, ಗಳಿಸಿದ ಚಿಲ್ಲರೆ-ಪಲ್ಲರೆ ಒಬ್ಬ ರೌಡಿಯ ಪಾಲಿಗೆ. ಚಿಕ್ಕವನಿಂದಲೇ ನರಸಿಂಹ ಸಿಟ್ಟು ಬಂದಾಗ ಉಗ್ರಗಾಮಿ, ಕಷ್ಟದಲ್ಲಿರುವವರಿಗೆ ಕೊಡುಗೈ. ಆ ಉಗ್ರತೆ ವರ್ಣಿಸಲು ಪದಗಳೇ ಸಾಲವು !

    ಸಂಗೀತ ಮಾಸ್ತರರೊಬ್ಬರು ಈತನನ್ನು ಸಾಕುತ್ತಾರೆ. ಮಕ್ಕಳಿಲ್ಲದ ಅವರಿಗೆ ಆಮೇಲೆ ಮಗಳು ಹುಟ್ಟುತ್ತಾಳೆ. ಆ ತಂಗಿಯೂ ಉಗ್ರತೆಯಲ್ಲಿ ಕಮ್ಮಿಇಲ್ಲ ಎಂಬುದರೊಂದಿಗೆ ಶ್ರುತಿ ಹತ್ತಾರ ಸಲ ಮಾಡಿದ ತಂಗಿ ಪಾತ್ರ ನಿವಾಳಿಸಿ ಹೋಗುತ್ತದೆ !

    ಹೀಗೆಲ್ಲ ಕಥೆ ಸಾಗಿ ಕಾಲಾಂತರದಲ್ಲಿ ತಂಗಿ ಲಕ್ಷ್ಮಿ(ದೀಪಾ )ಯೇ ನರಸಿಂಹನನ್ನು ಮನೆಯಿಂದ ಹೊರದಬ್ಬುತ್ತಾಳೆ. ಅದಕ್ಕೆ ಕಾರಣ ಆಕೆಯ ಲವ್ವು, ಲವ್ವರ್‌ ಮತ್ತು ಅವನ ಮೇಲೆ ಅಪಾರ್ಥ ಮಾಡಿಕೊಂಡು ನರಸಿಂಹ ನೀಡಿದ ಧರ್ಮದೇಟು. ಈ ಮಧ್ಯೆ ತಂಗಿಯ ಕಾಲೇಜು ಗೆಳತಿ ಲಾವಣ್ಯ (ದುರ್ಗಾಶೆಟ್ಟಿ) ಈತನ ಪ್ರೀತಿಯ ಬಲೆಗೆ ಬೀಳುತ್ತಾಳೆ. ಅವಳ ಹಿನ್ನಲೆಯೆಂದರೆ, ಅಮ್ಮ ಗೊತ್ತು-ಅಪ್ಪ ಗೊತ್ತಿಲ್ಲ, ಹುಡುಕಲು ಸಾಧ್ಯವೂ ಇಲ್ಲ. ರೌಡಿಗಳನ್ನು ಸಾಕಿಕೊಂಡು ಆಕೆ ತನ್ನ ‘ ವೃತ್ತಿ ’ ಮುಂದುವರಿಸಿದಾಕೆ. ಇಂಥ ಮಗಳು ಅಲ್ಲಿನ ‘ ಕಾಟ ’ ತಪ್ಪಿಸಿಕೊಳ್ಳಲು ನರಸಿಂಹನಿದ್ದಲ್ಲಿಗೇ ಓಡಿ ಬರುತ್ತಾಳೆ. ಮನೆಯಿಂದ ಹೊರದಬ್ಬಲ್ಪಟ್ಟ ನರಸಿಂಹನಿಗೇ ಪಾಳು ಮಂಟಪವೇ ಗತಿ- ಈಕೆಯೂ ಅದೇ ಮಂಟಪದಲ್ಲಿ , ಅವನೊಂದಿಗೆ.. ಮುಂದೆ, ತಂಗಿಗೆ ಜ್ಞಾನೋದಯವಾಯಿತೆ? ನರಸಿಂಹ ಆಕೆಯ ಲವ್ವರ್‌ಗೆ ಹೊಡೆಯಲು ಕಾರಣರಾದವರಾರು? ತಿಳಿಯಬೇಕೆಂದರೆ ಚಿತ್ರ ನೋಡಿ.

    ಚಿತ್ರದ ಹೊರಾಂಗಣ ಅಪರೂಪದ್ದು. ಬೆಳಗಾವಿ ಜಿಲ್ಲೆಯ ಗೋಕಾಕ ಸುತ್ತಮುತ್ತ ಹೆಚ್ಚಿನ ಚಿತ್ರೀಕರಣ. ಹೊಸತನ ಮುದ ನೀಡುತ್ತದೆ. ದೀಪಾ ಅತ್ತರೆ ನೋಡೋದು ಕಷ್ಟ, ಬಾಕಿ ನಟನೆ ಇಷ್ಟ . ದುರ್ಗಾ ಶೆಟ್ಟಿ ಡ್ಯಾನ್ಸ್‌ ಗೆ ಓಕೆ . ಒಂದೆರೆಡು ಹಾಡು ಇಂಪು.

    ಚಿತ್ರಕಥೆ-ಸಂಭಾಷಣೆಯಲ್ಲಿ ಮೋಹನ್‌ ತಮ್ಮ ‘ಛಾಪು ’ ಮೂಡಿಸಿದ್ದಾರೆ. ಸಂಭಾಷಣೆ ಒಂದೆರಡು ಕಡೆ ಚುರುಕಾಗಿದೆ. ತಾಂತ್ರಿಕವಾಗಿ ಉತ್ತಮ ಛಾಯಾಗ್ರಹಣವಿದ್ದರೂ ಸಂಕಲನ ಸ್ವಲ್ಪ ಜಾಳು. ಕೆಲ ಹಾಡು, ಸನ್ನಿವೇಶಗಳಲ್ಲಿ ‘ಫೀಲ್ಢ್‌ ಕ್ಲಿಯರ್‌’ ಮಾಡಿಕೊಳ್ಳದೇ, ಜನರೆಲ್ಲ ಬಾಯಿಬಿಟ್ಟುಕೊಂಡು ಶೂಟಿಂಗ್‌ ನೋಡುತ್ತಿರುವುದು ಹಾಗ್ಹಾಗೇ ಇದೆ. ನಿರ್ದೇಶಕರ ಬಗ್ಗೆ ಇನ್ನೇನು ಹೇಳೋಣ ? ಪ್ರೇಕ್ಷಕ ಮಹಾಶಯರೆ, ಇದನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು ಕನ್ನಡ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಬೇಕೆಂಬುದೇ ಸದ್ಯದ ಮೊರೆ.

    (ಸ್ನೇಹಸೇತು- ವಿಜಯ ಕರ್ನಾಟಕ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 18, 2024, 10:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X