»   » ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿ ಪ್ರೇಮ್ ಗೀತೆ

ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿ ಪ್ರೇಮ್ ಗೀತೆ

Subscribe to Filmibeat Kannada

ಆತ ಅವಳ ಮುಖ ನೋಡಿಲ್ಲ. ಆಕೆಯೂ ಅವನ ಮುಖ ನೋಡಿಲ್ಲ. ಆದರೂ ಅವರಿಬ್ಬರು ಒಬ್ಬೊಬ್ಬರಿಗೆ ಒಬ್ಬರು ಕಾಯುತ್ತಾರೆ. ಇಂದಲ್ಲ ನಾಳೆ ಆತ/ಕೆ ಸಿಕ್ಕೇ ಸಿಗುತ್ತಾನೆ/ಳೆ ಎಂದು ನಂಬಿರುತ್ತಾರೆ. ಕಣ್ಣೇದುರೇ ಇದ್ದರೂ ಒಬ್ಬರನ್ನೊಬ್ಬರು ' ಇದು ನನ್ನ ಪ್ರೀತಿ' ಎಂದು ಗೊತ್ತಾಗುವುದಿಲ್ಲ. ಇದು ಹೇಗೆ ಸಾಧ್ಯ ಎಂದು ನೀವು ಕೇಳಬಹುದು. ಅದು ಸಾಧ್ಯ ಎಂದು ಪ್ರೇಮ್ ಹೇಳುತ್ತಾರೆ. ಬೈಕ್ ಹತ್ತಿಸಿ, ಪಿವಿಆರ್ ನಲ್ಲಿ ಸಿನಿಮಾ ನೋಡಿದ ತಕ್ಷಣ ಪ್ರೀತಿ ಹುಟ್ಟುತ್ತದೆ ಎಂದು ತಿಳಿದಿರುವ ಇಂದಿನ ಜಗತ್ತಿನಲ್ಲಿ ಇದು ಹುಚ್ಚುತನ ಎಂದು ಅನ್ನಿಸಬಹುದು. ಆದರೆ ನಿಜವಾದ ಪ್ರೀತಿ 'ಹೀಗೆ ಇರುತ್ತದೆ' ಎಂದು ಅವರು ಹೇಳುತ್ತಾರೆ. ಅದನ್ನೇ ತೋರಿಸಿದ್ದಾರೆ. ಇದು ಪ್ರೀತಿ ಏಕೆ ಭೂಮಿ ಮೆಲಿದೆ ಚಿತ್ರದ ಕತೆಯ ಹಂದರ.

  • ದೇವಶೆಟ್ಟಿ ಮಹೇಶ್

ಪ್ರೇಮ್ ಏನೋ ಹೊಸದನ್ನು ಹೇಳಲು ಹೊರಟಿದ್ದಾರೆ. ಹಣ, ಅಂತಸ್ತು, ಅಧಿಕಾರ, ಕೀರ್ತಿಯಿದ್ದಲ್ಲಿ ಪ್ರೀತಿ ಸಹಜವಾಗಿ ಹುಟ್ಟುತ್ತದೆ ಎನ್ನುವವರು ತಮ್ಮ ಬೆನ್ನನ್ನು ತಾವೇ ನೋಡುಕೊಳ್ಳುವಂತೆ ಮಾಡಿದ್ದಾರೆ. ಸ್ವಾರ್ಥ ಇಲ್ಲದ ಪ್ರೀತಿ ಹೇಗಿರಬೇಕು ಎಂದು ತಿಳಿಸಿದ್ದಾರೆ. ಒಂದು ಗಂಡಿಗೆ ಒಂದು ಹೆಣ್ಣನ್ನು ಸೃಷ್ಟಿ ಮಾಡಿರುವ ದೇವರು ಅದನ್ನು ತಿಳಿಸಲು ಒಂದೊಂದು ಸುಳಿವನ್ನೂ ಕೊಟ್ಟಿರುತ್ತಾನೆ. ಆಗ ಕಣ್ಣು ತೆರೆದು ನೋಡಿ ನಿಮ್ಮ ಪ್ರೀತಿ ಸಿಗುತ್ತದೆ ಎನ್ನುವುದೇ ಅವರ ಫಿಲಾಸಫಿ. ಈ ಕತೆಗೆ ಒಂದಿಷ್ಟು ಫೈಟು, ತಾಯಿ ಸೆಂಟಿಮೆಂಟು ಸೇರಿಸಿದ್ದಾರೆ.

ಮೊದಲಿಂದ ಹಿಡಿದು ಕೊನೆವರೆಗೆ ನಿಮ್ಮನ್ನು ಹಿಡಿದು ಕೂಡಿಸುವುದು ಕಣ್ಣು ಮತ್ತು ಮನಸನ್ನು ತಂಪಾಗಿಸುವ ಲೊಕೇಶನ್ಸ್, ಅದಕ್ಕೆ ಸಾಥ್ ನೀಡಿದ್ದು ಸಂಗೀತ ಮತ್ತು ಅದ್ಭುತ ಛಾಯಾಗ್ರಹಣ, ಆರ್. ಪಿ. ಪಟ್ನಾಯಕ್ ಸಂಗೀತದಲ್ಲಿ ಒಂದೊಂದು ಹಾಡು ಒಂದೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಹಾದಿನ ಸಾಹಿತ್ಯ ಕೂಡ ಎಲೆ ಮೇಲಿನ ಇಬ್ಬನಿ. ನೀನೇನೇ ನೀನೇನೇ , ಚಂದ ಮಾಮಾ ಬಾರೋ, ಪ್ರೀತಿ ಏಕೆ ಭೂಮಿ ಮೇಲೆ.. ಹಾಡುಗಳು ಮನಸಲ್ಲಿ ಉಳಿಯುತ್ತದೆ. ಮಲ್ಲಿಕಾ ಶೆರಾವತ್ ಗೋರಿ ಪಾಳ್ಯದಲ್ಲಿ ಕುಣಿವಾಗ ನಶೆ ಏರುತ್ತದೆ. ಈಜಿಪ್ತ್ ನ ಪಿರಾಮಿಡ್ ಮಧ್ಯ ಪ್ರೇಮ್ ನಿಂತು ಕೈ ಅಗಲಿಸಿದಾಗ ಕಣ್ಣು ದೊಡ್ಡದಾಗುತ್ತದೆ. ನೀರ ನಡುವೆ ಚಂದ್ರನ ಮೇಲೆ ಕುಳಿತ ನಾಯಕಿಯನ್ನು ನೋಡುತ್ತಾ ಕೆಳಗಿನಿಂದ ಹುಡುಗಿಯರು ಮೇಲೆ ಬರುವ ಕಲ್ಪನೆ ಪ್ರೇಮ್ ಗಷ್ಟೆ ಬರಲಿ ಸಾಧ್ಯವೇನೊ ಅನ್ನಿಸುತ್ತದೆ. ನಾಲ್ಕು ನಿಮಿಷದ ಒಂದೇ ಶಾಟ್ ನಲ್ಲಿ ಫೈಟಿಂಗ್ ಮಾಡುವ ವಂಡರ್ ಫುಲ್.

ಪ್ರೇಮ್ ಪ್ರತ್ರಿಯೊಂದು ಶಾಟ್ ಗೂ ಮಗುವಿಗೆ ಸ್ನಾನ ಮಾಡಿಸುವಾಗಿನ ಎಚ್ಚರಿಕೆ ತೆಗೆದುಕೊಂಡಿದ್ದಾರೆ. ಎಲ್ಲವೂ ನೀಟಾಗಿ, ಸ್ವೀಟಾಗಿ ಇರಬೇಕು ಎನ್ನುವುದಕ್ಕೆ ಬದ್ಧರಾಗಿದ್ದಾರೆ. ಮಾತು, ಸಂಗೀತ, ಲೊಕೇಶನ್ ಗೆ ಗುದ್ದಾಡಿದ್ದಾರೆ. ಸೆಟ್ ಗಳನ್ನು ಬಳಸಿದರೂ ಅದರಲ್ಲೂ ಹೊಸತನಕ್ಕೆ ತುಡಿದಿದ್ದಾರೆ. ಸ್ಟಂಟ್ ಗಳು ರಸ್ತೆಯಲ್ಲಿ ಹೊಡೆದಾಡಿಕೊಂಡಷ್ಟು ಸಹಜವಾಗಿವೆ. ಸಂಗೀತದಲ್ಲೇ ಕತೆ ಹೇಳುವ ಯತ್ನ ಮಾಡಿದ್ದಾರೆ. ಇನ್ನು ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿದ ಪ್ರೇಮ್ ನಮ್ಮ ನಿಮ್ಮ ನಡುವಿನ ಹುಡುಗನಂತೆ ಕಾಣುತ್ತಾರೆ. ಹೆಚ್ಚು ಮಾತಿಲ್ಲ , ಕಣ್ಣು ಮತ್ತು ಮುಖದಲ್ಲೇ ಭಾವನೆಗಳನ್ನು ವ್ಯಕ್ತಪಡಿಸಲು ಶ್ರಮಿಸಿದ್ದಾರೆ. ಇದು ಅವರ ಹೊಸ ಸ್ಟೈಲ್ ಇರಬಹುದಾ?!

ಅಂಬರೀಷ್ ಸ್ಮಶಾನ ಕಾಯುತ್ತಾ ಬದುಕಿನ ಸತ್ಯವನ್ನು ಹೇಳುವ ಪಾತ್ರದಲ್ಲಿ ಮಿಂಚಿದ್ದಾರೆ. ರಮೇಶ್ ಭಟ್, ಅರ್ಚನಾ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕಿಯರಾದ ನಮ್ರತಾ ಮತ್ತು ರೋಹಿಣಿ ಜಾಸ್ತಿ ಸ್ಕೋರ್ ಮಾಡದಿದ್ದರೂ ಬೋರ್ ಹೊಡೆಸುವುದಿಲ್ಲ. ಎಂ .ಆರ್ .ಸೀನು ಛಾಯಾಗ್ರಹಣ ಇಡೀ ಚಿತ್ರಕ್ಕೆ ಬುನಾದಿ ಹಾಕಿದೆ. ಲೈಟಿಂಗ್ ಮತ್ತು ಮಳೆ ಚಿತ್ರದ ಪಾತ್ರವೇ ಆಗಿದೆ. ಆದರೂ ಪ್ರೇಮ್ ಚಿತ್ರಕತೆಯಲ್ಲಿ ಇನ್ನಷ್ಟು ಬಿಗಿ ತಂದಿದ್ದರೆ ಚೆನ್ನಾಗಿತ್ತು. ಈ ಕತೆಯ ಎಳೆಯನ್ನು ಎರಡೂವರೆ ಗಂಟೆ ತೋರಿಸಬೇಕಾ ಮತ್ತು ಹಾಗೆ ತೋರಿಸಲು ಈ ಕತೆ ಯೋಗ್ಯವಾ ಎಂದು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳಬೇಕಿತ್ತು. ಯಾಕೊ ಅಲ್ಲೇ ಕೊಂಚ ಭೂಮಿ ಬಿರುಕು ಬಿಟ್ಟಂತಾಗಿದೆ. ಹಿನ್ನೆಲೆ ಸಂಗೀತ ಕೆಲವು ಕಡೆ ಮಾತುಗಳನ್ನೇ ನುಂಗಿ ಹಾಕುವುದು, ಹಾಡುಗಳ ಸಾಲನ್ನು ತಿನ್ನುವುದು ಪಟ್ನಾಯಕ್ ಮಾಡಿದ ಮೊದಲ ಪಾಪ.

ಫೈಟಿಂಗ್ ಏಕಾಏಕಿ ಅಟ್ಯಾಕ್ ಮಾಡುವುದು ,ಅದಕ್ಕೆ ನಿರ್ದಿಷ್ಟ ಕಾರಣ ಇಲ್ಲದಿರುವುದು ಇನ್ನೊಂದು ತಪ್ಪು. ಅಂತಿಮ ದೃಶ್ಯ ನೋಡಿದ ನಂತರ ' ಏನೋ ಮಾಡಲು ಹೋಗಿ ಏನು ಮಾಡಿದೆ ನೀನು. . ' ಎನ್ನುವ ಹಾಡು ನೆನಪಿಗೆ ಬಂದರೆ ಅದಕ್ಕ್ ಪ್ರೇಮ್ ಹೊಣೆಯಾಗುತ್ತಾರೆ.

ಆದರೂ ಪ್ರೀತಿಯ ಹೊಸ ವ್ಯಾಖ್ಯಾನ ತಿಳಿಯುವ ಆಸೆ ಇದ್ದರೆ ಈಚಿತ್ರವನ್ನು ನೋಡಬಹುದು.

ಪೂರಕ ಓದಿಗೆ:
ಪ್ರೀತಿಯ ಹುಡುಕಾಟದಲ್ಲಿ ಭಾಗಿಯಾಗಿರುವ ಪಾತ್ರಗಳು ಇಲ್ಲಿವೆ
ಮುದ್ದುಮುಖದ ನಾಯಕಿ ರೋಹಿಣಿ ಸಾಹ್ನಿ ಗ್ಯಾಲರಿ
ಸುಳ್ಸುಳ್ಳೇ ವಿವಾದ ಹೊತ್ತ 'ಪ್ರೀತಿ' ತೆರೆಯಮೇಲೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada