ಪ್ರೇಮಿಗಳಿಗೆ ಇಷ್ಟವಾಗುವ ರೊಮ್ಯಾಂಟಿಕ್ 'ಪುನೀತ್'
ಎ ರೊಮ್ಯಾಂಟಿಕ್ ಬಾಯ್ ಎಂಬ ಅಡಿಬರಹ ಹೊಂದಿರುವ 'ಪುನೀತ್' ಚಿತ್ರ ಕರ್ನಾಟಕದಾದ್ಯಂತ ಮಾರ್ಚ್ 2, 2012ರಂದು ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ನೀಲ್ ಕಮಲ್ ಮೊದಲ ನಿರ್ದೇಶನದ ಚಿತ್ರ ಪುನೀತ್ ಗೆ ನಾಯಕರಾಗಿರುವ 'ರೋಡ್ ರೋಮೊಯೋ' ದಿಲೀಪ್ ಅವರಿಗೆ ಇದು ಎರಡನೇ ಚಿತ್ರ. ನಿಶಾ ಶೆಟ್ಟಿ ಚಿತ್ರದ ನಾಯಕಿ. ಈ ಚಿತ್ರದ ಮೂಲಕ ಚಿತ್ರತಂಡ, ತಮ್ಮ ಕನಸನ್ನು ನನಸಾಗಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಎನ್ನಬಹುದು.
'ಪ್ರೀತಿ ನಿರಂತರ, ಮಧುರ; ತ್ಯಾಗ ಅಮರ' ಎಂಬ ಸಿದ್ಧಾಂತಕ್ಕೆ ಜೋತುಬಿದ್ದಿರುವ ಇನ್ನೊಂದು ಚಿತ್ರ ಪುನೀತ್. ಆದರೆ ನಿರೂಪಣೆ ಸರಳವಾಗಿದ್ದು ಹೊಸತನದೊಂದಿಗೆ ಲವಲವಿಕೆ ಕಾಯ್ದುಕೊಂಡಿದೆ. ನೀಲ್ ಕಮಲ್ ಇನ್ನೂ ಸ್ವಲ್ಪ ಪ್ರಯತ್ನಪಟ್ಟರೆ ಯಶಸ್ವೀ ನಿರ್ದೇಶಕರ ಸೀಟಲ್ಲಿ ಕೂಡ್ರಬಹುದು ಎಂಬುದನ್ನು ಪ್ರಥಮ ಪ್ರಯತ್ನದಲ್ಲೇ ಸಾಬೀತುಪಡಿಸಿದ್ದಾರೆ. ಚಿಕ್ಕ, ಚೊಕ್ಕ ಸಂಸಾರದಲ್ಲಿ ಪ್ರೀತಿಯ ತೇರನ್ನು ಎಳೆಯುವ ಚಿತ್ರಕಥೆಯನ್ನು ಚೆನ್ನಾಗಿ ಹೆಣೆದಿದ್ದಾರೆ. ಆದರೆ ನಿರೂಪಣೆಯಲ್ಲಿ ನಿಧಾನಗತಿ ಅನುಸರಿಸಿರುವುದು ಚಿತ್ರಕ್ಕೆ ಮೈನಸ್ ಪಾಯಿಂಟ್ ಆಗಿದೆ.
ಸಂಭಾಷಣೆಯಲ್ಲಿ ಮಿಂಚಿದಷ್ಟು ದೃಶ್ಯಗಳ ಜೋಡಣೆಯಲ್ಲಿ ಮಿಂಚಲು ನೀಲ್ ಕಮಲ್ ಅವರಿಗೆ ಸಾಧ್ಯವಾಗಿಲ್ಲ. ಆದರೂ ಪ್ರಯತ್ನವಂತೂ ಚೆನ್ನಾಗಿಯೇ ಇದೆ. ನಾಯಕ ಹಾಗೂ ನಾಯಕಿ ಇಬ್ಬರೂ ಅಭಿನಯದಲ್ಲಿ ಇನ್ನಷ್ಟು ಮಾಗಬೇಕು. ಪೋಷಕವರ್ಗದಲ್ಲಿರುವ ರಾಮಕೃಷ್ಣ, ಭವ್ಯಾ, ಚಂದ್ರಶೇಖರ್ ಅವರದು ಅನುಭವಕ್ಕೆ ತಕ್ಕ ಅಭಿನಯ. ಒಟ್ಟಿನಲ್ಲಿ ಪ್ರೇಮಿಗಳು ಹಾಗೂ ವಿರಹಿಗಳು ನೋಡಿದರೆ ಇಷ್ಟವಾಗುವಂತಿದೆ ಪುನೀತ್ ಸಿನಿಮಾ.


Click it and Unblock the Notifications











