45 X (Twitter) Review : ಕಿಕ್ಕೇರಿಸುತ್ತಾ ಅಪೂರ್ವ ಸಂಗಮ? ಹೇಗಿದೆ ಶಿವತಾಂಡವ? ಪ್ರೇಕ್ಷಕರ ಮನದ ಮಾತೇನು?
ಮಲ್ಟಿಸ್ಟಾರ್ ಸಿನಿಮಾ ಮಾಡುವುದು ಸುಲಭ ಅಲ್ಲ. ಅದಕ್ಕೆ ಅದರದ್ದೇ ಆದ ಅಡೆತಡೆಗಳಿರುತ್ತವೆ. ಒಂದು ಕಡೆ ಅಭಿಮಾನಿಗಳ ನಿರೀಕ್ಷೆಯಾದರೆ ಮತ್ತೊಂದು ಕಡೆ ಸ್ಟಾರ್‌ಗಳನ್ನು ಸಂಭಾಳಿಸುವ, ನಿಭಾಯಿಸುವ ಸವಾಲು. ಚೂರು ಯಾಮಾರಿದರೂ ಕೂಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ. ಹೀಗಾಗಿಯೇ ಹಲವರು ಅದರಲ್ಲಿಯೂ ಕನ್ನಡದಲ್ಲಿ ಮಲ್ಟಿ ಸ್ಟಾರ್ ಸಿನಿಮಾ ಸಹವಾಸಕ್ಕೆ ಹೋಗುವುದಿಲ್ಲ. ಹೀಗಿರುವಾಗ ನಿರ್ದೇಶಕನಾಗಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಅರ್ಜುನ್ ಜನ್ಯ...
ಕನ್ನಡದ ಮೂರು ಮುತ್ತುಗಳನ್ನು ಒಂದು ಕಡೆ ಗುಡ್ಡೆ ಹಾಕಿ ಚಿತ್ರ ಮಾಡುವ ಪ್ರಯತ್ನ ಮಾಡಿದ್ದಾರೆ. ಆ ಪ್ರಯತ್ನದ ಹೆಸರು ''45''. ಹಾಗಿದ್ದರೆ ಇಂದು ಬಿಡುಗಡೆಯಾದ ''45'' ಚಿತ್ರ ಹೇಗಿದೆ ..? ಚಿತ್ರವನ್ನು ಮೊದಲ ದಿನದ ಮೊದಲ ಪ್ರದರ್ಶನದಲ್ಲಿ ಕಣ್ತುಂಬಿಕೊಂಡ ಪ್ರೇಕ್ಷಕರು ಚಿತ್ರದ ಬಗ್ಗೆ ಹೇಳಿದ್ದೇನು..? ಚಿತ್ರ ಒಮ್ಮೆ ನೋಡಬಹುದಾ..? ಅಥವಾ ಪದೇ ಪದೇ ನೋಡುವಂತಹ ಸಿನಿಮಾನಾ ..? ಅರ್ಜುನ್ ಜನ್ಯ ತಮ್ಮ ಮೊದಲ ಪ್ರಯತ್ನದಲ್ಲಿ ಗೆದ್ದರಾ..? ಎಡವಿದರಾ..? ಎಂದು ತಿಳಿಯಲು ಮುಂದೆ ಓದಿ.

ಅರ್ಜುನ್ ಜನ್ಯಗೆ ಅಭಿನಂದನೆ
ಅರ್ಜುನ್ ಜನ್ಯ ನೀವು ಮೊದಲ ಚಿತ್ರದಲ್ಲಿಯೇ ಗೆದ್ದಿದ್ದೀರಾ. ರಾಜ್ ಬಿ ಶೆಟ್ಟಿ ಮತ್ತು ಉಪೇಂದ್ರ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಶಿವಣ್ಣ ಬಗ್ಗೆ ಹೇಳೋದೇ ಬೇಡ. ಇವರ ಎಂಟ್ರಿಗೆ ಚಿತ್ರಮಂದಿರವೇ ಅಬ್ಬರಿಸಿತು. ಕ್ಲೈಮ್ಯಾಕ್ಸ್ ಮತ್ತೊಂದು ಲೆವಲ್‌ನಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಒಬ್ಬರು ಚಿತ್ರಕ್ಕೆ ನಾಲ್ಕು ಸ್ಟಾರ್ ನೀಡಿದ್ದಾರೆ.
ಉತ್ತಮ ಪ್ರಯತ್ನ
ಅರ್ಜುನ್ ಜನ್ಯ ಉತ್ತಮ ಪ್ರಯತ್ನ ಮಾಡಿದ್ದಾರೆ. ಶಿವಣ್ಣ ಅಭಿನಯ ಅದ್ಭುತ. ವಿಶೇಷವಾಗಿ ಕ್ಲೈಮ್ಯಾಕ್ಸ್‌ನಲ್ಲಿ. ಉಪೇಂದ್ರ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ನೋಡಲು ಯೋಗ್ಯವಾದ ಚಿತ್ರ ''45'' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಸೆಕೆಂಡ್ ಹಾಫ್ ಮಾತ್ರ ಬೆಂಕಿ
ಚಿತ್ರದ ದ್ವೀತಿಯಾರ್ಧ ತುಂಬಾ ಚೆನ್ನಾಗಿದೆ. ಸೆಕೆಂಡ್ ಹಾಫ್‌ನಲ್ಲಿ ಶಿವರಾಜ್ ಕುಮಾರ್ ಅವರದ್ದೇ ಪ್ರಾಬಲ್ಯ. ಕ್ಲೈಮ್ಯಾಕ್ಸ್‌ಗಿಂತ ಮುನ್ನದ ಸನ್ನಿವೇಶವನ್ನು ಚೆನ್ನಾಗಿ ಬರೆಯಲಾಗಿದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಎಡವಿದ್ದಾರೆ. ವಿಎಫ್‌ಎಕ್ಸ್ ನಿರಾಸೆ ಮೂಡಿಸುತ್ತೆ. ಕ್ಲೈಮ್ಯಾಕ್ಸ್‌ನ ತಿರುವು ನಿಜಕ್ಕೂ ಚೆನ್ನಾಗಿದೆ. ಮನುಷ್ಯನ ಕಣ್ಣು ತೆರೆಸುತ್ತೆ. ತಮ್ಮ ಮೊದಲ ಪ್ರಯತ್ನದಲ್ಲಿಯೇ ಅರ್ಜುನ್ ಜನ್ಯ ಉತ್ತಮವಾದ ಅಂಕ ಪಡೆದಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು. ಶಿವರಾಜ್ ಕುಮಾರ್ ಅಭಿಮಾನಿಗಳು ತಪ್ಪದೇ ನೋಡಲೇಬೇಕು. ಉಪ್ಪಿ ಮತ್ತು ರಾಜ್ ಬಿ ಶೆಟ್ಟಿ ಅವರಿಗೆ ಒಳ್ಳೆಯ ಪಾತ್ರ ಎಂದು ಮತ್ತೊಬ್ಬರು ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.
ಕಲ್ಪನೆ ಮತ್ತು ಸಂದೇಶ ಚೆನ್ನಾಗಿದೆ
ಹುಟ್ಟು ಸಾವಿನ ಕಲ್ಪನೆಯ ಕಥಾಹಂದರದ ಹೊಸ ಬಗೆಯ ಚಿತ್ರ ಇದು. ಕಲ್ಪನೆ ಮತ್ತು ಕ್ಲೈಮ್ಯಾಕ್ಸ್‌ನಲ್ಲಿರುವ ಸಂದೇಶ ತುಂಬಾ ಚೆನ್ನಾಗಿದೆ. ಹಳೆಯ ಸಂಭಾಷಣೆ ಮತ್ತು ಹಾಡು ನೆನಪಿಸಿಕೊಂಡಿದ್ದು ಖುಷಿಯಾಯ್ತು. ಶಿವಣ್ಣ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ''ಕಾಂತಾರ'' ಅಂತಹ ಚಿತ್ರಗಳನ್ನು ನೋಡಿದವರಿಗೆ ಕ್ಲೈಮ್ಯಾಕ್ಸ್‌ನಲ್ಲಿನ ವಿಎಫ್‌ಎಕ್ಸ್ ನಿರಾಸೆ ಮೂಡಿಸುತ್ತೆ. ದ್ವೀತಿಯಾರ್ಧದಲ್ಲಿ ಕೆಲ ಅನಗತ್ಯ ದೃಶ್ಯಗಳಿವೆ. ಒಟ್ಟಾರೆಯಾಗಿ ನೋಡಬಹುದಾದ ಸಿನಿಮಾ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಮೂರು ಸ್ಟಾರ್‌ಗಳನ್ನು ನೀಡಿದ್ದಾರೆ.
ಹೀಗೆ ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆಯನ್ನು ''45'' ಚಿತ್ರ ಮೊದಲ ದಿನ ಪಡೆದಿದೆ. ಚಿತ್ರ ನೋಡಿದ ಬಹುತೇಕರು ಶಿವಣ್ಣ ಅವರಿಗೆ ಬಹುಪರಾಕ್ ಹಾಕಿದ್ದಾರೆ. ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಕೂಡ ಮೊದಲ ದಿನ ಚಿತ್ರವನ್ನು ನೋಡಿ ಹುಚ್ಚೆದ್ದು ಕುಣಿದಿದ್ದಾರೆ. ಇಂದು (ಡಿಸೆಂಬರ್ 25) ರಾಜ್ಯದೆಲ್ಲೆಡೆ ಹೌಸ್‌ಫುಲ್ ಪ್ರದರ್ಶನವನ್ನು ಚಿತ್ರ ಕಂಡಿದ್ದು ಚಿತ್ರ ಬಾಕ್ಸಾಫೀಸ್‌ನಲ್ಲಿ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











