800 Movie Review: 800 ವಿಕೆಟ್‌ಗಳ ಮುರಳೀಧರನ್ ಪ್ರತಿ ಹೆಜ್ಜೆಯೂ ಸವಾಲಿನದ್ದೇ.. ಆದರೆ, ಸಿನಿಮಾಗೆ ಫಿಟ್ನೆಸ್ ಬೇಕಿತ್ತು!
800 ವಿಕೆಟ್‌ಗಳ ಸರದಾರ ಮುತ್ತಯ್ಯ ಮುರಳೀಧರನ್ ಯಾರಿಗೆ ಗೊತ್ತಿಲ್ಲ. ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗೂ ಶ್ರೀಲಂಕಾದ ಈ ಸ್ಪಿನ್ ಮಾಂತ್ರಿಕನ ಬಗ್ಗೆ ಪರಿಚಯ ಚೆನ್ನಾಗಿಯೇ ಇರುತ್ತೆ. ಮುತ್ತಯ್ಯ ಮುರಳೀಧರನ್ 800 ವಿಕೆಟ್‌ಗಳ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಿದೆ. ಆ ಜರ್ನಿಯ ಆಳ ಅಗಲ ಬಲ್ಲವರಿಗೆ ಮಾತ್ರ ಗೊತ್ತಿತ್ತು.
ಒಬ್ಬ ಕ್ರಿಕೆಟ್ ಆಟಗಾರನಾಗಿ ವಿವಾದ, ಅವಮಾನ ಎಲ್ಲವನ್ನೂ ಸಹಿಸಿಕೊಂಡು 800 ವಿಕೆಟ್‌ಗಳ ಸಾಧನೆ ಮಾಡಿದ ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಿರ್ಮಾಣಗೊಂಡಿದೆ. ಇದೇ ಮೊದಲ ಬಾರಿಗೆ ವಿದೇಶಿ ಕ್ರಿಕೆಟ್ ಆಟಗಾರ ಮೇಲೆ ಸಿನಿಮಾ ಮಾಡಲಾಗಿದೆ. ವಿಶೇಷ ಅಂದ್ರೆ, ಈ ಸಿನಿಮಾವನ್ನು ಭಾರತದ ತಮಿಳಿರೇ ವಿರೋಧಿಸಿದ್ದರು. ಇದರ ಹೊರತಾಗಿಯೂ ಸಿನಿಮಾ ನಿರ್ಮಾಣ ಆಗಿದೆ. ಹಾಗಿದ್ದರೆ, 800 ವಿಕೆಟ್‌ಗಳ ಸಾಧನೆಗೆ ಮುತ್ತಯ್ಯ ಮುರಳೀಧರನ್ ಸವೆಸಿದ ಹಾದಿ ಹೇಗಿದೆ? ತಿಳಿಯಲು ಮುಂದೆ ಓದಿ..

ಮುತ್ತಯ್ಯ ಮುರಳೀಧರನ್ ಹಿನ್ನೆಲೆಯೇನು?
ಮುತ್ತಯ್ಯ ಮುರಳೀಧರನ್‌ದ್ದು ಶ್ರೀಲಂಕಾದಲ್ಲಿರುವ ತಮಿಳು ಕುಟುಂಬ. ಕಾಫಿ ತೋಟದ ಕೆಲಸಕ್ಕೆ ಅಂತ ಭಾರತದ ತಮಿಳು ಕುಟುಂಬ ಶ್ರೀಲಂಕಾಗೆ ವಲಸೆ ಹೋದವರಲ್ಲಿ ಇವರ ಕುಟುಂಬ ಕೂಡ ಒಂದು. ತಂದೆ ಯಶಸ್ವಿ ಉದ್ಯಮಿ. ಬಿಸ್ಕೆಟ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದರು. ಶ್ರೀಲಂಕಾದಲ್ಲಿ ತಮಿಳರು ಹಾಗೂ ಸಿಂಹಳೀಯರ ನಡುವಿನ ಜನಾಂಗೀಯ ಘರ್ಷಣೆಯಿಂದ ತಪ್ಪಿಸಿಕೊಳ್ಳಲು ಮುತ್ತಯ್ಯನ ಮಗ ಅಂದರೆ, ಮುತ್ತಯ್ಯ ಮುರಳೀಧರನ್ ಕ್ರಿಶ್ಚಿಯನ್ ಶಾಲೆಯೊಂದಕ್ಕೆ ಸೇರುತ್ತಾನೆ. ಈ ಶಾಲೆಯಲ್ಲಿ ಓದುವಾಗ ಕ್ರಿಕೆಟ್ ಆಟಕ್ಕೆ ಆಕರ್ಷಿತನಾಗುತ್ತಾನೆ. ಮುಂದೆ ಶ್ರೀಲಂಕಾ ತಂಡ ಸೇರುವುದಕ್ಕೆ ಎನೆಲ್ಲಾ ಅವಮಾನಗಳನ್ನು ಎದುರಿಸುತ್ತಾನೆ ಅನ್ನೋದನ್ನೇ ಸಿನಿಮಾದಲ್ಲಿ ತೋರಿಸಲಾಗಿದೆ.
ಸಿನಿಮಾದಲ್ಲಿ ಏನೇನಿದೆ?
ಶ್ರೀಲಂಕಾ ತಂಡಕ್ಕೆ ಸೇರ್ಪಡೆಯಾದ ಬಳಿಕ ಮುತ್ತಯ್ಯ ಮುರಳೀಧರನ್ ಎದುರಿಸೋ ಸವಾಲುಗಳೇನು? ಇಂಗ್ಲೆಂಡ್ ಪ್ರವಾಸಕ್ಕೆ ಹೋದಾಗ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದೇಗೆ? ಶ್ರೀಲಂಕಾ ತಂಡಕ್ಕೆ ಮತ್ತೆ ಸೇರ್ಪಡೆಯಾಗಿದ್ದೇಗೆ? ಶ್ರೀಲಂಕಾ ತಂಡದಲ್ಲಿ ಎದುರಿಸಿದ ಅವಮಾನಗಳು, ಆಸ್ಟ್ರೇಲಿಯಾದಲ್ಲಿ ಆದ ಅವಮಾನಗಳು, 800 ವಿಕೆಟ್‌ಗಳ ಜರ್ನಿಯಲ್ಲಿ ಎದುರಿಸಿದ ಆರೋಪಗಳು ಇವೆಲ್ಲದಕ್ಕೂ 800 ಸಿನಿಮಾದಲ್ಲಿ ಉತ್ತರ ಸಿಗಲಿದೆ.

800 ವಿಕೆಟ್‌ಗಳ ಸವಾಲಿನ ಹೆಜ್ಜೆ
ಮುರಳೀಧರನ್ ಬಾಲ್ಯ ಇಂಟ್ರೆಸ್ಟಿಂಗ್ ಆಗಿದೆ. ಶ್ರೀಲಂಕಾದಲ್ಲಿ ತಮಿಳರು ಹಾಗೂ ಸಿಂಹಳೀಯರ ನಡುವಿನ ಸಂಘರ್ಷ, ಅದರ ಮಧ್ಯೆ ಪುಟಿದೆದ್ದು ನಿಲ್ಲುವ ಮುತ್ತಯ್ಯ ಮುರಳೀಧರನ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ಪರಿ ಅದ್ಭುತವಾಗಿದೆ. ಅವಮಾನಗಳನ್ನು ಎದುರಿಸಿ ಪುಟಿದು ನಿಲ್ಲುವ ದೃಶ್ಯಗಳು ಇಂದಿನ ಪೀಳಿಗೆಗೆ ಸ್ಪೂರ್ತಿ. ಹಾಗೇ ಆಸ್ಟ್ರೇಲಿಯಾದಲ್ಲಿ ಚಕಿಂಗ್ ಆರೋಪ, ಆ ವೇಳೆ ಅರ್ಜುನ ರಣತುಂಗ ವರ್ತನೆ ಹೃದಯ ವಿದ್ರಾವಕ ಎನಿಸುತ್ತೆ. ಈ ದೃಶ್ಯಗಳಲ್ಲಿ ಅರ್ಜುನ ರಣತುಂಗ ಪಾತ್ರ ಈ ಸಿನಿಮಾದ ಮತ್ತೊಬ್ಬ ನಾಯಕನಂತೆ ಭಾಸವಾಗುತ್ತೆ. ಮುತ್ತಯ್ಯ ಮುರಳೀಧರ್ 800 ವಿಕೆಟ್‌ಗಳ ಪಯಣದಲ್ಲಿ ಪ್ರತಿಯೊಂದು ಹೆಜ್ಜೆಯೂ ಸವಾಲಿನದ್ದೇ ಅನ್ನೋದನ್ನು ಈ ಸಿನಿಮಾ ಎತ್ತಿ ಹಿಡಿದೆ.
800 ಪಾತ್ರಗಳು ಹೇಗಿವೆ?
ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ಮಧುರ್ ಮಿತ್ತಲ್ ಇಷ್ಟವಾಗುತ್ತಾರೆ. ಮುತ್ತಯ್ಯ ಮುರಳೀಧರ್ ಸಂಕಷ್ಟದ ದಿನಗಳನ್ನು, ಭಾವನೆಗಳನ್ನು ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಮುರಳೀಧರನ್ ಪತ್ನಿಯಾಗಿ ಮಹಿಮಾ ನಂಬಿಯಾರ್ ಚಿಕ್ಕ ಪಾತ್ರದಲ್ಲಿ ನಟಿಸಿದ್ದರೂ ಮಿಂಚಿದ್ದಾರೆ. ಅರ್ಜುನ ರಣತುಂಗ ಪಾತ್ರಧಾರಿ ಶ್ರೀಲಂಕಾ ನಟ ಕಿಂಗ್ ರತ್ನಂ ಗಮನ ಸೆಳೆಯುತ್ತಾರೆ.
ಪ್ಲಸ್ ಏನು?
ಮುತ್ತಯ್ಯ ಮುರಳೀಧರ್ ಜರ್ನಿಯನ್ನು ನಿರ್ದೇಶಕ ಎಂ.ಎಸ್. ಶ್ರೀಪತಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾದ ಕೆಲವು ಸನ್ನಿವೇಶಗಳು ಹೃದಯ ಕಲುಕುತ್ತವೆ. ಕ್ಲಿಷ್ಟಕರವಾದ ಕಥೆಯನ್ನು ತೆರೆ ಮೇಲೆ ನಿರ್ದೇಶಕ ಎಂ.ಎಸ್.ಶ್ರೀಪತಿ ಬ್ಯಾಲೆನ್ಸ್ ಮಾಡಿದ್ದಾರೆ. ಗಿಬ್ರಾನ್ ಸಂಗೀತ, ಆರ್.ಡಿ.ರಾಜಶೇಖರ್ ಛಾಯಾಗ್ರಹಣ ಅದ್ಭುತವಾಗಿದೆ.
ಮೈನಸ್ ಏನು?
ಮುತ್ತಯ್ಯ ಮುರಳೀಧರನ್ ಇಷ್ಟಲ್ಲ ಕಷ್ಟಗಳಿಂದ ಹೇಗೆ ಗೆದ್ದು ಬಂದರು ಅನ್ನೋದನ್ನು ಇನ್ನೂ ಎಫೆಕ್ಟೀವ್ ಆಗಿ ತೋರಿಸಬಹುದಿತ್ತು. ವಿಜ್ಯೂವಲ್ ಎಫೆಕ್ಟ್ಸ್ ಹಾಗೂ ಗ್ರಾಫಿಕ್ಸ್ ಮೇಲೆ ಇನ್ನಷ್ಟು ವರ್ಕ್‌ಔಟ್ ಮಾಡಬೇಕಿತ್ತು. ಕೊನೆಯಲ್ಲಿ ಸಿನಿಮಾ ಚೆನ್ನಾಗಿದೆ ಅಂತ ಅನಿಸಿದ್ದರೂ, ಇನ್ನೊಂದಿಷ್ಟು ಚಿತ್ರಕಥೆ, ತಾಂತ್ರಿಕತೆಯಲ್ಲಿ ಇನ್ನೊಂದಿಷ್ಟು ಫಿಟ್ನೆಸ್ ಬೇಕಿತ್ತು ಅಂತ ಅನಿಸುತ್ತೆ.


Click it and Unblock the Notifications











