Adipurush Review: ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ಕಂಪ್ಲೀಟ್ ರಿವ್ಯೂ & ರೇಟಿಂಗ್

Rating:
3.0/5
Star Cast: ಪ್ರಭಾಸ್, ಕೃತಿ ಸನೂನ್, ಸೈಫ್ ಅಲಿಖಾನ್, ದೇವದತ್ತ, ಸನ್ನಿಸಿಂಗ್ ಮುಂತಾದವರು
Director: ಓಂ ರಾವುತ್

ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ರಾಮಾಯಣ ಕಾವ್ಯ ಆಧರಿಸಿ ಓ ರಾವುತ್ ಈ ಚಿತ್ರವನ್ನ ತಿದ್ದಿ ತೀಡಿದ್ದಾರೆ. ವಾಲ್ಮೀಕಿ ಬರೆದ ರಾಮಾಯಣ ಕಾವ್ಯವನ್ನು ಇವತ್ತಿನ ಪ್ರೇಕ್ಷಕರಿಗೆ ಕನೆಕ್ಟ್ ಆಗುವಂತೆ ಕ್ರಿಯೇಟಿವ್ ಲಿಬರ್ಟಿ ತೆಗೆದುಕೊಂಡು ಬಹಳ ಮಾರ್ಡನ್ ಆಗಿ ಮಾತ್ರವಲ್ಲದೇ ಇವತ್ತಿನ ತಂತ್ರಜ್ಞಾನ ಬಳಸಿ ಅದ್ಭುತ ಎನ್ನುವಂತೆ ತೋರಿಸೋ ಪ್ರಯತ್ನ ಮಾಡಲಾಗಿದೆ.

ನಾವು ಈಗಾಗಲೇ ಪುಸ್ತಕಗಳಲ್ಲಿ ಓದಿರುವಂತೆ, ನಾಟಕ, ಸಿನಿಮಾ, ಧಾರಾವಾಹಿಗಳಲ್ಲಿ ನೋಡಿರುವಂತೆ ರಾಮಾಯಣದ ಒಂದು ಚಿತ್ರಣ ನಮ್ಮ ಕಲ್ಪನೆಯಲ್ಲಿದೆ. ಆದರೆ ಅದನ್ನೆಲ್ಲಾ ಮೀರಿ ಓಂ ರಾವುತ್ ಸಿನಿಮಾ ಬಹಳ ಹೊಸದರಂತೆ ಕಾಣುತ್ತಿದೆ. ಹಾಲಿವುಡ್, ಬಾಲಿವುಡ್, ಕಾರ್ಟೂನ್, ವಿಡಿಯೋ ಗೇಮ್ ಎಲ್ಲಾ ಸ್ಟೈಲ್ ಮಿಕ್ಸ್ ಮಾಡಿ ಪೌರಾಣಿಕ ಕಥೆಯನ್ನು ತೆರೆಗೆ ತರಲಾಗಿದೆ. ಗ್ರಾಫಿಕ್ಸ್ ಮಾಯಾಜಾಲದಲ್ಲಿ ಅಬ್ಬಬ್ಬಾ ಅನಿಸಿದರೂ ಸಂಪೂರ್ಣವಾಗಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಿನಿಮಾ ವಿಫಲವಾಗಿದೆ.

Adipurush Review in Kannada

'ಆದಿಪುರುಷ್' ಚಿತ್ರ ಕಥೆ

ವಾಲ್ಮೀಕಿ ಬರೆದ ಮೂಲ ರಾಮಾಯಣ ಕಥೆಯನ್ನೇ 'ಆದಿಪುರುಷ್' ಚಿತ್ರದಲ್ಲಿ ತೆರೆಗೆ ತರಲಾಗಿದೆ. ಕಥೆ ಎಲ್ಲರಿಗೂ ಗೊತ್ತೇಯಿದೆ. ಆದರೆ ಓಂ ರಾವುತ್ ಎಲ್ಲಿಂದ ಆರಂಭಿಸಿ, ಎಲ್ಲಿ ಮುಗಿಸಿದ್ದಾರೆ ಅನ್ನುವುದನ್ನು ನೋಡುವುದಾದರೆ ರಾಮ, ಸೀತಾ, ಲಕ್ಷ್ಮಣರು ವನವಾಸದಿಂದ ಕಥೆ ಶುರುವಾಗುತ್ತದೆ. ರಾಮನ ಮೇಲೆ ಶೂರ್ಪನಖಿ ವ್ಯಾಮೋಹ, ರಾಮ ಅದನ್ನು ತಿರಸ್ಕರಿಸುವುದು. ಕೋಪದಿಂದ ಆಕೆ ಸೀತೆಯ ಮೇಲೆ ದಾಳಿ ಮಾಡಲು ಹೋದಾಗ ಲಕ್ಷ್ಮಣ ಬಾಣಕ್ಕೆ ಆಕೆಉ ಮೂಗು ಕತ್ತರಿಸಿ ಹೋಗುವುದು, ಈ ಅವಮಾನಕ್ಕೆ ಬದಲಾಗಿ ರಾವಣ ಸೀತೆಯನ್ನು ಅಪಹರಿಸುವ ಮೂಲಕ ಕಥೆ ತೆರೆದುಕೊಳ್ಳುತ್ತದೆ.

ಸೀತೆಯನ್ನು ರಾವಣ ಅಶೋಕವನದಲ್ಲಿ ಬಂಧಿಯಾಗಿಸುತ್ತಾನೆ. ಸೀತಾಪರಣದ ನಂತರ ಶ್ರೀರಾಮನ ಆವೇದನೆ, ಸೀತೆ ಸುಳಿವು ಹೇಗೆ ಕಂಡುಕೊಳ್ಳುತ್ತಾನೆ? ಅಲ್ಲಿಂದ ಮುಂದೆ ಲಂಕೆ ಕಡೆಗೆ ಆತನ ಪಯಣ ಹೇಗೆ ಸಾಗುತ್ತದೆ. ವಾನರ ಸೈನ್ಯ ಹೇಗೆ ಜೊತೆಯಾಗುತ್ತದೆ? ರಾಮಸೇತು ಹೇಗೆ ನಿರ್ಮಾಣ ಆಗುತ್ತದೆ? ವಿಭೀಷಣ ಶ್ರೀರಾಮನ ಪರ ನಿಲ್ಲುವುದು ಯಾಕೆ? ರಾಮ, ಲಕ್ಷ್ಮಣ ಹಾಗೂ ವಾನರ ಸೈನ್ಯದ ಮೇಲೆ ರಾವಣ, ಇಂದ್ರಜಿತ್ ತಮ್ಮ ಮಾಯೆಗಳಿಂದ ಹೇಗೆಲ್ಲಾ ತಿಣುಕಾಡುವಂತೆ ಮಾಡುತ್ತಾರೆ? ಕೊನೆಗೆ ರಾವಣ ಸಂಹಾರ ಹೇಗಾಯಿತು? ಅನ್ನೋದನ್ನೆಲ್ಲಾ ಸಿನಿಮಾದಲ್ಲಿ ನೋಡಬಹುದು.

'ಆದಿಪುರುಷ್' ಸಿನಿಮಾ ಹೇಗಿದೆ?

ಸಾವನ್ನು ಜಯಿಸಲು ರಾವಣ ತಪಸ್ಸು ಮಾಡುವ ದೃಶ್ಯದೊಂದಿಗೆ 'ಆದಿಪುರುಷ್' ಸಿನಿಮಾ ಶುರುವಾಗುತ್ತದೆ. ರಾವಣನ ವೇಷಭೂಷಣ ಹಾಗೂ ಲುಕ್ ಟೀಸರ್‌ನಲ್ಲಿ ನೋಡಿದಂತೆಯೇ ಇದೆ. ಯಾವುದೇ ಬದಲಾವಣೆ ಮಾಡಿಲ್ಲ. ಫಸ್ಟ್‌ ಹಾಫ್‌ನಲ್ಲಿ ಸೀತೆಯ ಅಪಹರಣದ ಸನ್ನಿವೇಶದಲ್ಲಿ ಬರುವ ರಾವಣ- ಜಟಾಯು ನಡುವಿನ ಕಾದಾಟದ ದೃಶ್ಯ ತೆರೆಮೇಲೆ ಚೆನ್ನಾಗಿ ಕಾಣುತ್ತಿದೆ. ಇನ್ನು ವಾಲಿ- ಸುಗ್ರೀವದ ಯುದ್ಧ, ರಾಮಸೇತು ನಿರ್ಮಾಣದ ಸನ್ನಿವೇಶಗಳು ಸೊಗಸಾಗಿವೆ. ಟೆಕ್ನಿಕಲಿ ಸಿನಿಮಾ ಅದ್ಭುತ ಅನ್ನಿಸಿದರೂ ಎನೋ ಮಿಸ್ ಆಗಿದೆ ಎನ್ನಿಸದೇ ಇರದು.

Adipurush Review in Kannada

ರಾಮಸೇತು ನಿರ್ಮಾಣಕ್ಕೆ ಮುಂದಾಗುವ ಸನ್ನಿವೇಶದೊಂದಿಗೆ ಫಸ್ಟ್‌ಹಾಫ್ ಕೊನೆಗೊಳ್ಳುತ್ತದೆ. ಸೆಕೆಂಡ್ ಹಾಫ್‌ನಲ್ಲಿ ಲಕ್ಷ್ಮಣ ಜೀವ ಉಳಿಸಲು ದ್ರೋಣಗಿರಿ ಶ್ರೇಣಿಯಲ್ಲಿರುವ ಸಂಜೀವಿನಿ ಬೆಟ್ಟವನ್ನು ಹನುಮಂತ ಹೊತ್ತುತರುವ ಸನ್ನಿವೇಶ ಅದ್ಭುತ ಎನಿಸುವಂತಿದೆ. ರಾಮ, ಲಕ್ಷ್ಮಣ ಹಾಗೂ ವಾನರ ಸೈನ್ಯಕ್ಕೆ ಇಂದ್ರಜಿತು ಕಾಟ ಕೊಡುವ ದೃಶ್ಯಗಳು ಸೊಗಸಾಗಿದೆ. ಟೆಕ್ನಿಕಲಿ ಚಿತ್ರವನ್ನು ಕಟ್ಟಿಕೊಡಲು ಹೋಗಿ ಕಥೆ, ಚಿತ್ರಕಥೆ, ರಾಮಾಯಣ ಕಾವ್ಯಕ್ಕೆ ಹತ್ತಿರವಾಗುವಂತೆ ಚಿತ್ರಿಸುವಲ್ಲಿ ತಂಡ ವಿಫಲವಾಗಿದೆ ಎನ್ನಬಹುದು. ಎಮೋಷನ್ ಹಾಗೂ ಎಕ್ಸೈಟ್‌ಮೆಂಟ್ ಅಷ್ಟಾಗಿ ಕಾಣಿಸಲ್ಲ.

ಆದಿಪುರುಷ್ ಸಿನಿಮಾ ಕಲಾವಿದರ ಅಭಿನಯ ಹೇಗಿದೆ?

ಪುರಾಣಗಳಲ್ಲಿ ರಾಮ, ಕೃಷ್ಣ, ಶಿವನ ಮೈಬಣ್ಣ ನೀಲಿ ಎಂದು ಬಣ್ಣಿಸಲಾಗಿದೆ. ಆದರೆ 'ಆದಿಪುರುಷ್' ಚಿತ್ರದಲ್ಲಿ ಶ್ರೀರಾಮ ಹಾಗಿಲ್ಲದಿರುವುದು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಬಹಳಷ್ಟು ಸನ್ನಿವೇಶಗಳಲ್ಲಿ ಪ್ರಭಾಸ್, ರಾಜಮೌಳಿಯ 'ಬಾಹುಬಲಿ'ಯನ್ನು ನೆನಪಿಸುತ್ತಾರೆ. ರಾಮನ ಮುಖದಲ್ಲಿ ಆ ತೇಜಸ್ಸು ಕಾಣಿಸುವುದೇ ಇಲ್ಲ. ಶ್ರೀರಾಮನಾಗಿ ಪ್ರಭಾಸ್ ಒಂದುಮಟ್ಟದಕ್ಕೆ ಗೆದ್ದಿದ್ದಾರೆ. ರಾವಣನಾಗಿ ಸೈಫ್ ಅಲಿಖಾನ್ ಹೆಚ್ಚು ಗಮನ ಸೆಳೆಯುತ್ತಾರೆ. ರಾವಣನಾಗಿ ಸೈಫ್ ಮ್ಯಾನರಿಸಂ, ಬಾಡಿ ಲಾಂಗ್ವೇಜ್ ಚೆನ್ನಾಗಿದೆ. ಸೀತೆಯಾಗಿ ಕೃತಿ ಸನೂನ್ ಸಿಕ್ಕ ಅವಕಾಶವನ್ನು ಸದುಪಯೋಗಡಿಸಿಕೊಂಡಿದ್ದಾರೆ.

ಲಕ್ಷ್ಮಣನಾಗಿ ಸನ್ನಿಸಿಂಗ್, ಹನುಮಂತನಾಗಿ ದೇವದತ್ತ, ಶೂರ್ಪನಕಿಯಾಗಿ ತೃಪ್ತಿ ತೋಡರ್‌ಮಲ್, ಮಂಡೋಸರಿಯಾಗಿ ಸೋನಾಲ್ ಚೌಹಾಣ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹನುಮಂತನ ಪಾತ್ರದಿಂದ ಒಂದೆರಡು ಸನ್ನಿವೇಶಗಳಲ್ಲಿ ಹಾಸ್ಯರಸವನ್ನು ತರುವ ಪ್ರಯತ್ನ ಮಾಡಲಾಗಿದೆ.

ಟೆಕ್ನಿಕಲಿ ಸಿನಿಮಾ ಹೇಗಿದೆ?

'ಆದಿಪುರುಷ್' ಸಿನಿಮಾ ಗ್ರಾಫಿಕ್ಸ್ ನಿಜಕ್ಕೂ ಚೆನ್ನಾಗಿದೆ. ಕೆಲವೆಡೆ ಅತಿ ಅನ್ನಿಸಿದರೂ ಚಿತ್ರತಂಡದ ಶ್ರಮ ಎದ್ದು ಕಾಣುತ್ತದೆ. ಟ್ರೀಡಿ ಎಫೆಕ್ಟ್‌ನಲ್ಲಿ ಸಿನಿಮಾ ಒಳ್ಳೆ ಅನುಭವ ನೀಡುತ್ತದೆ. ಈ ಚಿತ್ರವನ್ನು ಟುಡಿಯಲ್ಲಿ ನೋಡದೇ ಇರುವುದು ಒಳಿತು. ಬಹುತೇಕ ಗ್ರೀನ್‌ಮ್ಯಾಟ್‌ನಲ್ಲೇ ಸಿನಿಮಾ ಚಿತ್ರೀಕರಣ ಮಾಡಿ ಅದನ್ನು ಗ್ರಾಫಿಕ್ಸ್‌ನಲ್ಲಿ ತೆರೆಮೇಲೆ ತೋರಿಸಲಾಗಿದೆ. ಇನ್ನು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಮ್ಯೂಸಿಕ್. ಸಣ್ಣ ಸಣ್ಣ ಬಿಟ್‌ಗಳಾಗಿ ಹಾಡುಗಳನ್ನೂ ತೋರಿಸಿ ಚಿತ್ರದ ಕಾಲಾವಧಿ ಹೆಚ್ಚಾಗದಂತೆ ನೋಡಿಕೊಂಡಿದ್ದಾರೆ. ಇನ್ನು ಅಜಯ್- ಅತುಲ್ ಹಿನ್ನೆಲೆ ಸಂಗೀತ ಹೈಲೆಟ್ ಅನ್ನಿಸಿಕೊಂಡಿದೆ.

ರಾಮ, ಸೀತಾ, ಲಕ್ಷ್ಮಣ, ಹನುಮಂತ, ರಾವಣ ಸೇರಿದಂತೆ ಒಂದು ಐದಾರು ಪಾತ್ರಗಳು ಬಿಟ್ಟರೆ ಹೆಚ್ಚು ಪಾತ್ರಗಳಿಲ್ಲ. ಇನ್ನು ವಾನರ ಸೈನ್ಯ, ರಾವಣದ ಸೈನ್ಯ ಎಲ್ಲವರನ್ನು ಗ್ರಾಫಿಕ್ಸ್‌ನಲ್ಲಿ ಚಿತ್ರಿಸಲಾಗಿದೆ. ಲಂಕೆಯ ರಾಕ್ಷಸರ ಸೈನ್ಯವನ್ನು ಹಾಲಿವುಡ್‌ನ ಥಾನೋಸ್, ಹಲ್ಕ್‌ ಹಾಗೂ ಗೋಸ್ಟ್ ಮಾಸ್ಕ್ ಧರಿಸಿದ ಹಾರರ್ ಸಿನಿಮಾ ಪಾತ್ರಗಳಂತೆ ಇನ್ನು ವಾರನ ಸೈನ್ಯದಲ್ಲಿ ಬಹುತೇಕರನ್ನು ಕಿಂಗ್‌ಕಾಂಗ್ ರೀತಿಯ ಚಿಂಪಾಜಿಗಳಂತೆ ಚಿತ್ರಿಸಿರೋದು ಅಷ್ಟಾಗಿ ಇಷ್ಟವಾಗಲ್ಲ. ಇನ್ನು ರಾಮಾಯಣದಲ್ಲಿ ಪುಷ್ಪಕ ವಿಮಾನದ ಬಗ್ಗೆ ಒಳ್ಳೆಯ ವಿವರಣೆ ಇದೆ. ಆದರೆ ಚಿತ್ರದಲ್ಲಿ ಅದು ಇಲ್ಲ. ಬದಲಿಗೆ ರಾವಣ ದೊಡ್ಡ ಬಾವಲಿಯನ್ನು ಸಾಕಿರುತ್ತಾನೆ. ಅದರ ಮೇಲೆಯೇ ಸೀತೆಯನ್ನು ಹೊತ್ತೊಯ್ಯುತ್ತಾನೆ. ಪದೇ ಪದೇ ಅದನ್ನು ಏರಿ ಬರುತ್ತಾನೆ.

"ನಾವು ವಾಲ್ಮೀಕಿ ರಾಮಾಯಣ ಆಧರಿಸಿ ಆದಿಪುರುಷ್ ಸಿನಿಮಾ ಮಾಡಿದ್ದೇವೆ, ಒಂದಷ್ಟು ಬದಲಾವಣೆಗಳನ್ನು ಮಾಡಕೊಂಡಿದ್ದೇವೆ. ರಾಮಾಯಣವನ್ನು ಯತಾವತ್ತಾಗಿ ಚಿತ್ರಿಸಿಲ್ಲ. ನಿರೂಪಣೆಯಲ್ಲಿ, ಪಾತ್ರಗಳ ಚಿತ್ರಣದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ಯಾರ ಮನಸ್ಸಿಗೂ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರಲು ಬಯಸುವುದಿಲ್ಲ" ಎಂದು ಸಿನಿಮಾ ಆರಂಭಕ್ಕೂ ಮುನ್ನವೇ ಚಿತ್ರತಂಡ ವಿಶೇಷ ಸೂಚನೆ ಒಟ್ಟಿದೆ. ಆ ಮೂಲಕ ಒಂದರ್ಥದಲ್ಲಿ ನಿರೀಕ್ಷಣ ಜಾಮೀನು ತೆಗೆದುಕೊಂಡು ಸಿನಿಮಾ 'ಆದಿಪುರುಷ್' ಸಿನಿಮಾ ತೆರೆಗೆ ತರಲಾಗಿದೆ. ಹಾಗಾಗಿ ಕೆಲವೊಂದನ್ನು ಯಾಕೆ ಹೀಗೆ? ಯಾಕೆ ಹಾಗೆ? ಎಂದು ಕೇಳಬಾರದು ಎಂದುಬಿಟ್ಟಿದೆ.

ಕೊನೆಯ ಮಾತು

'ಆದಿಪುರುಷ್' ಸಿನಿಮಾ ವಿಷ್ಯುವಲಿ ಒಳ್ಳೆ ಸಿನಿಮಾ. ತ್ರೀಡಿಯಲ್ಲಿ ಅದ್ಭುತ ಅನುಭವ ನೀಡುತ್ತದೆ. ರಾಮಾಯಣ ಅಂದ್ರೆ ಈಗಾಗಲೇ ಒಂದು ಚಿತ್ರಣ ಮನಸ್ಸಿನಲ್ಲಿ ಇರುವವರಿಗೆ ಸಿನಿಮಾ ಅಷ್ಟಾಗಿ ರುಚಿಸುವುದಿಲ್ಲ. ಆದರೆ ಮಕ್ಕಳಿಗೆ ಇಷ್ಟವಾಗುತ್ತೆ ಅಂದರೆ ತಪ್ಪಾಗಲ್ಲ. ಅತಿಯಾದ ನಿರೀಕ್ಷೆ ಇಲ್ಲದೇ ಚಿತ್ರಮಂದಿರಕ್ಕೆ ಹೋದರೆ ಒಂದು ಹಂತಕ್ಕೆ ಸಿನಿಮಾ ಇಷ್ಟವಾಗುತ್ತದೆ.

More from Filmibeat

English summary
Adipurush Review in Kannada: Check the Kriti Sanon, Prabhas, Saif Ali Khan Starrer Adipurush Movie Review and Rating. PAN India Movie directed by Om Raut Know more at Filmibeat Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X