Yuddhakaanda Review: ನ್ಯಾಯ- ಅನ್ಯಾಯದ ನಡುವೆ ಲಾಯರ್ ಭರತ್ 'ಯುದ್ಧಕಾಂಡ'
ಅಜಯ್ ರಾವ್ ನಿರ್ಮಿಸಿ, ನಟಿಸಿರುವ ಸಿನಿಮಾ ಕೋರ್ಟ್ ಡ್ರಾಮಾ ಸಿನಿಮಾ 'ಯುದ್ಧಕಾಂಡ' ಚಾಪ್ಟರ್-2 ರಾಜ್ಯಾದ್ಯಂತ ತೆರೆಗೆ ಬಂದಿದೆ. ಪವನ್ ಭಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಹೆಣ್ಣಿಗೆ ಆಗಿರುವ ಅನ್ಯಾಯದ ವಿರುದ್ಧ ಕೋರ್ಟ್‌ನಲ್ಲಿ ನಾಯಕ ಹೋರಾಡುವ ಕತೆ ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ. ಈ ಚಿತ್ರದಲ್ಲಿ ಕೂಡ ಅದೇ ಕೇಂದ್ರಬಿಂದು.
ಒಂದೊಳ್ಳೆ ಸಂದೇಶವನ್ನು ಹೊತ್ತು 'ಯುದ್ಧಕಾಂಡ' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಇದೇ ಮೊದಲ ಬಾರಿಗೆ ವಕೀಲನ ಪಾತ್ರದಲ್ಲಿ ಅಜಯ್ ರಾವ್ ಮಿಂಚಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಾಕಷ್ಟು ವಿಚಾರಗಳನ್ನು ಚಿತ್ರದಲ್ಲಿ ಚರ್ಚಿಸುವ ಪ್ರಯತ್ನ ಮಾಡಲಾಗಿದೆ. ಅಪರಾಧಿಗಳಿಗೆ ಅಷ್ಟು ಸುಲಭವಾಗಿ ಶಿಕ್ಷೆ ಸಿಗಲ್ಲ, ಹಣ ಇರುವವರು, ಪ್ರಭಾವಿಗಳು ಎಲ್ಲರನ್ನು ಕೊಂಡುಕೊಳ್ಳುತ್ತಾರೆ. ಕೋರ್ಟ್‌ಗೆ ಸಾಕ್ಷಿಯೇ ಮುಖ್ಯ ಎನ್ನುವ ಆರೋಪಗಳು ಪದೇ ಪದೆ ಕೇಳಿಬರುತ್ತದೆ. ಅಂತಹ ವಿಚಾರಗಳನ್ನೆಲ್ಲಾ ಚಿತ್ರದಲ್ಲಿ ಹೇಳಲಾಗ್ತಿದೆ.

'ಯುದ್ಧಕಾಂಡ-2' ಕಥೆ
ಕಥೆ ಬಹಳ ಸಿಂಪಲ್. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಯುತ್ತದೆ. ನ್ಯಾಯ ಕೇಳಿ ಕೋರ್ಟ್‌ಗೆ ಹೋಗುವ ಆ ಬಾಲಕಿಯ ತಾಯಿ ನಿವೇದಿತಾ(ಅರ್ಚನಾ ಜೋಯಿಸ್)ಗೆ ಅಷ್ಟ ಸುಲಭಕ್ಕೆ ನ್ಯಾಯ ಸಿಗಲ್ಲ. ಹಾಗಾಗಿ ಆಕೆ ಕೋರ್ಟ್ ಆವರಣದಲ್ಲೇ ಅತ್ಯಾಚಾರಿಯನ್ನು ಗುಂಡಿಕ್ಕಿ ಕೊಲ್ಲುತ್ತಾಳೆ. ನಿವೇದಿತಾ ಬಂಧನವಾಗುತ್ತದೆ. ಆಕೆಗೆ ಶಿಕ್ಷೆ ಆಗುತ್ತಾ? ವಕೀಲ ಭರತ್(ಅಜಯ್ ರಾವ್) ಕೋರ್ಟ್‌ನಲ್ಲಿ ವಾದ ಮಾಡಿ ಆಕೆಯನ್ನು ನಿರಪರಾಧಿ ಎಂದು ಬಿಡಿಸುತ್ತಾನಾ? ಈ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ ಸಿನಿಮಾ ನೋಡಬೇಕು.
ಸಿನಿಮಾ ಹೇಗಿದೆ?
ಕನ್ನಡದಲ್ಲಿ ಕೋರ್ಟ್ ರೂಮ್ ಡ್ರಾಮಾ ಸಿನಿಮಾಗಳ ಸಂಖ್ಯೆ ಬಹಳ ಕಮ್ಮಿಯಿದೆ. 'ಯುದ್ಧಕಾಂಡ' ಆ ಬರವನ್ನು ನೀಗಿಸುವಂತಿದೆ. ಚಿಕ್ಕ ಕಥೆಯನ್ನು ಪರಿಣಾಮಕಾರಿಯಾಗಿ ಹೇಳಲು ಚಿತ್ರತಂಡ ಬಹಳ ಶ್ರಮಿಸಿದೆ. ದಿನದಿಂದ ದಿನಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. ಸಾಕಷ್ಟು ಪ್ರಕರಣಗಳು ಬಯಲಿಗೆ ಬರುವುದು ಇಲ್ಲ. ಇನ್ನು ಕೆಲ ಪ್ರಕರಣಗಳು ಹಳ್ಳ ಹಿಡಿಯುತ್ತಿದೆ. ಇಂತಾದೊಂದು ಗಂಭೀರ ವಿಚಾರವನ್ನು ಚಿತ್ರದಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕ ಪವನ್ ಭಟ್ ಮಾಡಿದ್ದಾರೆ. ಅದಕ್ಕೆ ಅಜಯ್ ರಾವ್ ಸೇರಿದಂತೆ ಇತರೆ ಕಲಾವಿದರು ಸಾಥ್ ಕೊಟ್ಟಿದ್ದಾರೆ.
ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರುವ ಕಥೆ, ಹೇಳಲು ಬಯಸಿರುವ ಸಂದೇಶ, ಎಲ್ಲವೂ ಚೆನ್ನಾಗಿದೆ. ಆದರೆ ಅಷ್ಟು ಪರಿಣಾಮಕಾರಿಯಾಗಿ ಅದು ತೆರೆಮೇಲೆ ಮೂಡಿ ಬಂದಿಲ್ಲ. ಸಣ್ಣ ಪುಟ್ಟ ತಪ್ಪುಗಳು ಸಾಕಷ್ಟು ಭಾಗಗಳಲ್ಲಿ ಸಿಗುತ್ತದೆ. ಗುರು ಸಮಾನರಾದ ವಕೀಲರ ಮುಂದೆಯೇ ಭರತ್ ವಾದ ಮಾಡಿ ಗೆಲ್ಲುವ ಹಠಕ್ಕೆ ಬೀಳುತ್ತಾನೆ. ಕೋರ್ಟ್ ಒಳಗೆ ನಡೆಯುವ ವಾದ- ಪ್ರತಿವಾದದ ಸನ್ನಿವೇಶಗಳು ಚೆನ್ನಾಗಿದೆ. ಇನ್ನುಳಿದಂತೆ ಕೆಲವರು ಕಡೆ ಲಾಜಿಕ್ ಮಿಸ್ ಆಗುತ್ತದೆ. ಬರವಣಿಗೆ ಇನ್ನು ಚೆನ್ನಾಗಿ ಇರಬೇಕಿತ್ತು.

ಕಲಾವಿದರು ನಟನೆ
ವಕೀಲನ ಪಾತ್ರದಲ್ಲಿ ಅಜಯ್ ರಾವ್ ವಿಭಿನ್ನವಾಗಿ ತೆರೆಮೇಲೆ ಕಾಣುತ್ತಾರೆ. ತಮ್ಮ ಪಾತ್ರಕ್ಕೆ ನ್ಯಾಯ ಒದಿಗಿಸಿದ್ದಾರೆ. ಅರ್ಚನಾ ಜೋಯಿಸ್ ಹೆಚ್ಚು ಅಂಕ ಗಿಟ್ಟಿಸುತ್ತಾರೆ. ಭರತ್ ಎದುರು ನಿಲ್ಲುವ ವಕೀಲರಾಗಿ ಪ್ರಕಾಶ್ ಬೆಳವಾಡಿ ಕೂಡ ಗಮನ ಸೆಳೆಯುತ್ತಾರೆ. ಹಾಡು ಅಷ್ಟೇನು ಸದ್ದು ಮಾಡಲ್ಲ. ಬಿಜಿಎಂ ಚಿತ್ರಕ್ಕೆ ಪೂರಕವಾಗಿದೆ.
ಕೊನೆ ಮಾತು
ಒಟ್ಟಾರೆ ಚಿತ್ರತಂಡ ಒಂದು ವಿಭಿನ್ನ ಪ್ರಯತ್ನದ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ. ಚಿತ್ರದಲ್ಲಿರುವ ಸಂದೇಶವನ್ನು ಸಾಕಷ್ಟು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಕೋರ್ಟ್ ರೂಮ್ ಡ್ರಾಮಾ ಇಷ್ಟಪಡುವವರಿಗೆ 'ಯುದ್ಧಕಾಂಡ'-2 ಸಿನಿಮಾ ಇಷ್ಟವಾಗುತ್ತದೆ. ಚಿತ್ರದಲ್ಲಿರುವ ಸಂದೇಶ ಎಲ್ಲರಿಗೂ ತಲುಪಬೇಕಿದೆ.


Click it and Unblock the Notifications











