twitter
    For Quick Alerts
    ALLOW NOTIFICATIONS  
    For Daily Alerts

    Valimai Movie Review In Kannada: ಕಥೆಯಲ್ಲ, ಬೈಕುಗಳದ್ದೇ ಅಬ್ಬರ

    By ಶ್ರುತಿ ಹೇಮಚಂದ್ರನ್
    |

    ಅಜಿತ್ ನಟನೆಯ ತಮಿಳಿನ ಬಹುನಿರೀಕ್ಷಿತ ಸಿನಿಮಾ 'ವಲಿಮೈ' ಇಂದು (ಫೆಬ್ರವರಿ 24) ಬಿಡುಗಡೆ ಆಗಿದೆ. ಬಾಲಿವುಡ್‌ನ ಬೋನಿ ಕಪೂರ್ ಬಂಡವಾಳ ಹೂಡಿರುವ ಈ ಸಿನಿಮಾಕ್ಕೆ ಜೀ ಸ್ಟುಡಿಯೋಸ್‌ನ ಸಹಭಾಗಿತ್ವ ಇದೆ. ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಅಜಿತ್ ಜೊತೆಗೆ ಇದು ಅವರ ಎರಡನೇ ಸಿನಿಮಾ.

    2019 ರ ಬಳಿಕ ಇದೇ ಮೊದಲ ಬಾರಿಗೆ ಅಜಿತ್ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಕಾರ್ತಿಕೇಯ ಗುಮ್ಮಕೊಂಡ, ಹುಮಾ ಖುರೇಷಿ ಸಹ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರತಿಭಾನ್ವಿತ, ಅನುಭವಿ ತಂತ್ರಜ್ಞರ ತಂಡವೇ ಇದೆ. ನೀರವ್ ಶಾ ಕ್ಯಾಮೆರಾ, ಯುವನ್ ಶಂಕರ್ ರಾಜಾ ಸಂಗೀತ. ವಿಜಯ್ ವೇಲುಕುಟ್ಟಿ ಸಂಕಲನ ಸಿನಿಮಾಕ್ಕಿದೆ.

    Rating:
    3.0/5

    ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದ್ದ 'ವಲಿಮೈ' ಸಿನಿಮಾ ಹೇಗಿದೆ. ಅಭಿಮಾನಿಗಳ ನಿರೀಕ್ಷೆಗಳನ್ನು ತಲುಪಿದೆಯೇ ಸಿನಿಮಾ? ಅಥವಾ ನಿರಾಸೆ ಮುಡಿಸಿದ್ದಾರೆಯೇ? ನೋಡೋಣ ಬನ್ನಿ...

    Ajith Starer Valimai Tamil Movie Review In Kannada
    ಕಥೆ ಏನು?

    ಅರ್ಜುನ್ (ಅಜಿತ್ ಕುಮಾರ್) ಮಧುರೈನಲ್ಲಿ ಅಸಿಸ್ಟೆಂಟ್ ಪೊಲೀಸ್ ಕಮೀಷನರ್. ಚೆನ್ನೈನಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಚೆನ್ನೈಗೆ ಬರುತ್ತಾನೆ. ಚೆನ್ನೈನಲ್ಲಿ ಒಂದು ಭೀಕರ ಬೈಕರ್ ಗ್ಯಾಂಗ್‌ ಒಂದು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಅಮಾನುಷವಾಗಿ ಕೊಲೆ, ಕಳ್ಳತನಗಳನ್ನು ಮಾಡುವ ಈ ಬೈಕರ್‌ ತಂಡದ ನಾಯಕ ವುಲ್ಫ್‌ರಂಗ (ಕಾರ್ತಿಕೇಯ). ಆ ನಟೋರಿಯಸ್ ಬೈಕರ್ಸ್ ತಂಡವನ್ನು ಅರ್ಜುನ್ ತಡೆಯುತ್ತಾನೆಯೇ? ಈ ಕಳ್ಳ-ಪೊಲೀಸ್ ಆಟದಲ್ಲಿ ಮೇಲುಗೈ ಯಾರದ್ದಾಗುತ್ತದೆ. ಬೈಕರ್ಸ್ ತಂಡವನ್ನು ತಡೆಯಲು ಅರ್ಜುನ್ ಬಳಸುವ ತಂತ್ರಗಳು ಯಾವುವು? ಎಲ್ಲವನ್ನೂ ತಿಳಿಯಲು ಸಿನಿಮಾ ನೋಡಬೇಕು.

    Ek Love Ya Review: ಪ್ರೀತಿಯಲ್ಲಿ ಏಕಲವ್ಯನಷ್ಟೇ ಶ್ರದ್ಧೆಯುಳ್ಳ ಪ್ರೇಮಿಯ ಕಥೆ 'ಏಕ್ ಲವ್ ಯಾ'!
    ಸಿನಿಮಾದ ಪ್ಲಸ್ಸು, ಮೈನಸ್ಸುಗಳೇನು?

    ಅತ್ಯದ್ಭುತ ಆಕ್ಷನ್ ದೃಶ್ಯಗಳು ಸಿನಿಮಾದಲ್ಲಿವೆ. ಹಾಲಿವುಡ್ ಸಿನಿಮಾಗಳನ್ನು ನೆನಪಿಸುವ ಆಕ್ಷನ್ ದೃಶ್ಯಗಳು, ಚೇಸಿಂಗ್ ದೃಶ್ಯಗಳು ಜೊತೆಗೆ ಅಜಿತ್ ಹಾಗೂ ಕಾರ್ತಿಕೇಯ ನಟನೆ ಸಿನಿಮಾದ ಧನಾತ್ಮಕ ಅಂಶ.

    ಸಿನಿಮಾದ ಮೊದಲಾರ್ಧ ಎಳೆದಿರುವ ರೀತಿ, ಹಳೆಯ ಮಾದರಿಯ ಕೌಟುಂಬಿಕ ಸೆಂಟಿಮೆಂಟ್ ದೃಶ್ಯಗಳು, ಸುಲಭವಾಗಿ ಊಹಿಸಬಹುದಾದ ತಿರುವುಗಳು ಸಿನಿಮಾದ ಮೈನೆಸ್ಸು.

    Ajith Starer Valimai Tamil Movie Review In Kannada
    ನಿರ್ದೇಶನ ಹೇಗಿದೆ?

    ಹೀರೋ v/s ವಿಲನ್‌ ಈ ಮಾದರಿಯ ಕತೆಯನ್ನು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಬಳಸಲಾಗಿದೆ. ಆದರೂ ನಿರ್ದೇಶಕ ಇದಕ್ಕೆ ಬೇರೆ ರೀತಿಯ ಟಚ್ ನೀಡಲು ಯತ್ನಿಸಿದ್ದಾರೆ. ಸಿನಿಮಾದಲ್ಲಿ ಹೀರೋ ಹಾಗೂ ವಿಲನ್‌ ನಡುವಿನ ಸಂಘರ್ಷ ಹಾಗೂ ಸಿನಿಮಾದ ಆಕ್ಷನ್ ದೃಶ್ಯಗಳನ್ನು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಕಟ್ಟಿಕೊಡಲಾಗಿದೆ. ದ್ವಿತೀಯಾರ್ಧದಲ್ಲಿ ಬರುವ ಬಸ್‌ ಚೇಸ್ ದೃಶ್ಯವಂತೂ ಅತ್ಯದ್ಭುತ. ಈವರೆಗೆ ಭಾರತದ ಇನ್ಯಾವ ಸಿನಿಮಾದಲ್ಲಿಯೂ ಈ ರೀತಿಯ ಅದ್ಭುತ ಸಾಹಸ ದೃಶ್ಯವನ್ನು ಸಂಯೋಜಿಸಲಾಗಿಲ್ಲ. ಆದರೆ ದ್ವಿತೀಯಾರ್ಧ ಇಡೀಯ ಸಿನಿಮಾವನ್ನು ಬ್ರೇಕ್ ಹಾಕಿ ನಿಲ್ಲಿಸಿದಂತಾಗಿದೆ. ಧಾರಾವಾಹಿಯಂಥ ಕೌಟುಂಬಿಕ ಕತೆಯಿಂದಾಗಿ ಸಿನಿಮಾ ಎಳೆದಂತೆ ಭಾಸವಾಗುತ್ತದೆ. ಇದನ್ನು ತಪ್ಪಿಸಿದ್ದರೆ ಚೆನ್ನಾಗಿತ್ತು ಎನಿಸುತ್ತದೆ.

    'By Two Love' Movie Review: ಹೊಸ ತಲೆಮಾರಿನ ಪ್ರೀತಿ, ದಾಂಪತ್ಯ
    ನಟನೆ ಹೇಗಿದೆ?

    ಅಜಿತ್ ನಟನೆ ಸೂಪರ್ ಆಗಿದೆ. ಅವರ ಭಿನ್ನ ಶೈಲಿ, ಆಕ್ಷನ್ ದೃಶ್ಯಗಳಲ್ಲಿ ತೊಡಗಿಕೊಂಡಿರುವ ರೀತಿ ಅವರನ್ನು ಸಿನಿಮಾದ ಉಳಿದ ನಟರಿಗಿಂತಲೂ ಎತ್ತರದಲ್ಲಿ ನಿಲ್ಲಿಸುತ್ತದೆ. ಈ ವಯಸ್ಸಿನಲ್ಲಿಯೂ ಬೈಕ್ ಸ್ಟಂಟ್‌ಗಳನ್ನು ಮಾಡಿರುವ ರೀತಿ ಆಶ್ಚರ್ಯ ಹುಟ್ಟಿಸುತ್ತದೆ.

    ಕಾರ್ತಿಕೇಯ ನಟನೆ ಹೇಗಿದೆ?

    ವಿಲನ್ ಪಾತ್ರದಲ್ಲಿ ಕಾರ್ತಿಕೇಯ ನಟನೆ ಅದ್ಭುತ. ಮೊದಲ ತಮಿಳು ಸಿನಿಮಾ ಆದರೂ ಆತ್ಮವಿಶ್ವಾಸದಿಂದ ಅಜಿತ್ ಅಂಥಹಾ ಅನುಭವಿ ನಟನಿಗೆ ಠಕ್ಕರ್ ಕೊಟ್ಟಿದ್ದಾರೆ. ಪ್ರೇಕ್ಷಕರ ನಿರೀಕ್ಷೆಗಳನ್ನು ಮೀರಿಸಿದ ನಟನೆ ಅವರದ್ದು.

    ತಾಂತ್ರಿಕ ಅಂಶಗಳು

    ಸಿನಿಮಾದ ಪ್ರಮುಖ ಅಂಶ ಆಕ್ಷನ್ ದೃಶ್ಯಗಳು. ಮೈ ನವಿರೇಳಿಸುವ ರೀತಿಯಲ್ಲಿ ಸಿನಿಮಾಕ್ಕೆ ಆಕ್ಷನ್ ದೃಶ್ಯಗಳನ್ನು ಸಂಯೋಜಿಸಲಾಗಿದೆ. ಚೇಸಿಂಗ್‌ ದೃಶ್ಯಗಳನ್ನು ಅದ್ಭುತಗೊಳಿಸಿದೆ ಸಿನಿಮಾದ ಎಡಿಟಿಂಗ್ ಮತ್ತು ಹಿನ್ನೆಲೆ ಸಂಗೀತ. ನೀರವ್ ಶಾ ಸಿನಿಮಾಟೊಗ್ರಫಿ ಸಿನಿಮಾಕ್ಕೆ ಭಾರಿ ರಿಚ್ ಲುಕ್ ನೀಡಿದೆ.

    English summary
    Ajith Kumar starer Valimai Tamil movie review in Kannada. Movie directed by H Vinoth. produced by Boney Kapoor.
    Friday, February 25, 2022, 9:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X