Akhanda 2 X (Twitter) Review ; ಮಾಸ್ ಬ್ಲಾಕ್‌ಬಸ್ಟರಾ ? ಡಿಸಾಸ್ಟರಾ ? ಹೇಗಿದೆ ಅಖಂಡ 2 ? ಪ್ರೇಕ್ಷಕರ ಅಭಿಪ್ರಾಯ
ಬಾಲಯ್ಯ ಅವರಿಗೆ ತೆಲುಗು ಚಿತ್ರರಂಗದಲ್ಲಿ ಅವ್ರದ್ದೇ ಆದ ಖದರ್ ಇದೆ, ತೆಲುಗು ನಾಡಿನಲ್ಲಿ ಪವರ್ ಇದೆ. ಆಂಧ್ರ ತೆಲಂಗಾಣ ಮಾತ್ರ ಅಲ್ಲ ಕರ್ನಾಟಕದಲ್ಲಿ ಕೂಡ ಬಾಲಕೃಷ್ಣ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಇನ್ನು ಬಾಲಯ್ಯ ತೆರೆ ಮೇಲೆ ಸಿಂಹದಂತೆ ಗರ್ಜಿಸಿ ಚಿತ್ರದ ವಿಲನ್‌ಗಳ ವಿರುದ್ಧ ನಡೆಸುವ ಆಟಾಟೋಪ ಒಂದೆರಡಲ್ಲ. ತುಪಾಕಿಯಿಂದ ಸಿಡಿದ ಗುಂಡಿನಂತೆ ಮಾತನಾಡುವ ಬಾಲಯ್ಯನ ಡೈಲಾಗ್‌ಗೆ ಚಪ್ಪಾಳೆ ಶಿಳ್ಳೆ ಖಚಿತ.
ಇಂಥಾ ಬಾಲಯ್ಯ ಸದ್ಯ ''ಅಖಂಡ 2'' ಚಿತ್ರದ ಮೂಲಕ ಮತ್ತೊಮ್ಮೆ ತಮ್ಮ ಸಮಸ್ತ ಅಭಿಮಾನಿಗಳ ಎದುರು ಪ್ರತ್ಯಕ್ಷರಾಗಿದ್ದಾರೆ. ಆರಂಭದಿಂದಲೂ ಸದ್ದು ಮಾಡುತ್ತಾ, ಕುತೂಹಲ ಕೆರಳಿಸುತ್ತಾ, ಹಣಕಾಸಿನ ವಿವಾದದಲ್ಲಿ ಸಿಲುಕಿ ಕಳೆದ ವಾರ ಮುಂದೂಡಲ್ಪಟ್ಟ ಈ ಚಿತ್ರ ಸದ್ಯ ಈ ವಾರ ( ಡಿಸೆಂಬರ್ 12 ) ಬಿಡುಗಡೆಯಾಗಿದೆ. ಹಾಗಿದ್ದರೆ.. ''ಅಖಂಡ-2'' ಚಿತ್ರವನ್ನು ನೋಡಿದ ಪ್ರೇಕ್ಷಕರು ಹೇಳಿದ್ದೇನು..? ಚಿತ್ರ ಹೇಗಿದೆ..? ಒಮ್ಮೆ ನೋಡಬಹುದಾ..? ಅಥವಾ ಪದೇ ಪದೇ ನೋಡುವಂತಹ ಸಿನಿಮಾನಾ..? ಎಂದು ತಿಳಿಯಲು ಮುಂದೆ ಓದಿ.

ಮಾಸ್ ಬ್ಲಾಕ್‌ಬಸ್ಟರ್
ಆಕರ್ಷಕ, ಉತ್ಸಾಹಭರಿತ, ಬಾಲಯ್ಯ ಅಭಿನಯದ ಬಗ್ಗೆ ಹೇಳಲು ಪದಗಳು ಸಾಲುವುದಿಲ್ಲ. ಸ್ಫೋಟಕ ಆಕ್ಷನ್. ಬಲವಾದ ಭಾವನೆ. ಕ್ಲೈಮ್ಯಾಕ್ಸ್ ಗುಡುಗು ಮಿಂಚು. ಜೈ ಬಾಲಯ್ಯ ಎಂದು ಹೇಳಿರುವ ಅಭಿಮಾನಿಯೊಬ್ಬರು ಚಿತ್ರ ಮಾಸ್ ಬ್ಲಾಕ್ ಬಸ್ಟರ್ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನಗತ್ಯ ಸೀಕ್ವೆಲ್
''ಅಖಂಡ 2'' ಸೀಕ್ವೆಲ್‌ನ ಅಗತ್ಯ ಇರಲಿಲ್ಲ. ಹಿಂದೂ ಧರ್ಮದ ಸೂಕ್ಷ್ಮ ವಿಷಯವನ್ನು ಆಧರಿಸಿದ ಈ ಚಿತ್ರವನ್ನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು. ಇಡೀ ಚಿತ್ರದಲ್ಲಿ ನೋಡಬಹುದಾದ ಸನ್ನಿವೇಶಗಳು ಕೇವಲ ಒಂದೆರಡಿವೆ ಅಷ್ಟೇ. ಆಕ್ಷನ್ ಸನ್ನಿವೇಶಗಳು ಹತ್ತು ವರ್ಷಗಳಷ್ಟು ಹಿಂದಿನವು ಎಂಬಂತೆ ಭಾಸವಾಗುತ್ತೆ. ನಂದಮೂರಿ ಬಾಲಕೃಷ್ಣ ಅವರ ಅಭಿನಯ ಎಂದಿನಂತೆ ಇದೆ. ಅಭಿಮಾನಿಯಾಗಿ ನಿಮಗೆ ಇಷ್ಟ ಆಗಬಹುದು. ಆದರೆ ಸಾಮಾನ್ಯರಿಗೆ ಅವರ ಅಭಿನಯ ಸಾಧಾರಣವೆನಿಸುತ್ತೆ. ಬೋಯಪತಿ ಶ್ರೀನು ನಿರ್ದೇಶನ ಎಂದಿನಂತೆ ಸಾಮಾನ್ಯವಾಗಿದೆ. ಇದು ಇವರ ದುರ್ಬಲ ಚಿತ್ರಗಳಲ್ಲಿ ಒಂದು ಎಂದು ತಮ್ಮ ಬೇಸರ ಹೊರ ಹಾಕಿರುವ ವ್ಯಕ್ತಿಯೊಬ್ಬರು ಚಿತ್ರಕ್ಕೆ 1.25 ಸ್ಟಾರ್‌ಗಳನ್ನು ಮಾತ್ರ ನೀಡಿದ್ದಾರೆ.
ದುರ್ಬಲ ಸಿನಿಮಾ
''ಅಖಂಡ 2'' ಅತ್ಯಂತ ದುರ್ಬಲ ನಿರೂಪಣೆ ಇರುವ ಸಿನಿಮಾ. ಇದೇ ಚಿತ್ರದ ನ್ಯೂನತೆ. ಮೈಜುಮ್ಮೆನಿಸುವ ಯಾವ ಸನ್ನಿವೇಶಗಳು ಕೂಡ ಇಲ್ಲ. ಇದರ ಮತ್ತೊಂದು ಭಾಗವನ್ನು ದಯಮಾಡಿ ಮಾಡಬೇಡಿ ಎಂದು ಮತ್ತೊಬ್ಬರು ಮನವಿಯನ್ನು ಮಾಡಿಕೊಂಡಿದ್ದಾರೆ.
ಮಿಸ್ ಮಾಡಬೇಡಿ
''ಅಖಂಡ 2''ದಲ್ಲಿ ಹಿಂದಿಗಿಂತಲೂ ಘರ್ಜನೆ ಜೋರಾಗಿದೆ. ಬಾಲಕೃಷ್ಣ ಬೀಸ್ಟ್ ಮೋಡ್‌ನಲ್ಲಿದ್ದಾರೆ. ಈ ಚಿತ್ರವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಹೀಗೆ ಹಲವರು ''ಅಖಂಡ 2'' ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವರಿಗೆ ಚಿತ್ರ ಇಷ್ಟ ಆಗಿದೆ. ಇನ್ನೂ ಕೆಲವರಿಗೆ ಚಿತ್ರ ಅಷ್ಟಕಷ್ಟೇ ಎಂದು ಎನಿಸಿದೆ. ಅನಗತ್ಯ ಸೀಕ್ವೆಲ್ ಎಂಬ ಭಾವನೆ ಬಂದಿದೆ.
ಇನ್ನೂ ''ಅಖಂಡ 2'' ಕೇವಲ ತೆಲುಗು ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿಲ್ಲ. ಬದಲಿಗೆ ಕನ್ನಡ, ಹಿಂದಿ ಸೇರಿ ಬೇರೆ ಭಾಷೆಗಳಿಗೆ ಕೂಡ ಡಬ್ ಆಗಿದೆ. ಈ ಚಿತ್ರದ ಮೂಲಕ ಎಲ್ಲರಂತೆ ಬಾಲಯ್ಯ ಕೂಡ ಇದೇ ಮೊದಲ ಬಾರಿ ಪ್ಯಾನ್ ಇಂಡಿಯಾ ಪ್ರವಾಸ ಮಾಡಿದ್ದಾರೆ. ಈ ಹಿನ್ನೆಲೆ ಬೇರೆ ಭಾಷೆಯ ಪ್ರೇಕ್ಷಕರು ಕೂಡ ಚಿತ್ರವನ್ನು ನೋಡಿದ್ದಾರೆ. ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಒಟ್ನಲ್ಲಿ ''ಅಖಂಡ 2'' ಚಿತ್ರಕ್ಕೆ ಸದ್ಯ ಪ್ರೇಕ್ಷಕರ ವಲಯದಲ್ಲಿ ಸದ್ಯ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸಾಫೀಸ್‌ನಲ್ಲಿ ''ಅಖಂಡ 2'' ಅಬ್ಬರ ಹೇಗಿರುತ್ತೆ..? ಎಷ್ಟು ಕೋಟಿ ಹಣವನ್ನು ಈ ಚಿತ್ರ ಗಳಿಸುತ್ತೆ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











