Bhooth Bangla X Review ; ಅಕ್ಷಯ್ ಕುಮಾರ್ 'ಭೂತ್ ಬಂಗ್ಲಾ'ದಲ್ಲಿದೆಯಾ ಕಾಮಿಡಿ ಕಿಕ್ ? 14 ವರ್ಷದ ನಂತರ ಗೆಲ್ಲುತ್ತಾ ಜೋಡಿ ?
ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಗೆದ್ದಾಗ ಹಿರಿಹಿರಿ ಹಿಗ್ಗುವ ಅನೇಕರು ಸೋತಾಗ ಕುಗ್ಗಿ ಹೋಗುತ್ತಾರೆ. ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಳ್ಳುತ್ತಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಸೋಲೇ ಗೆಲುವಿನ ಸೋಪಾನ ಎಂದು ನಿರಂತರ ಪ್ರಯತ್ನ ಮಾಡುತ್ತಾರೆ.
ಆದರೂ ಕೂಡ ಒಮ್ಮೊಮ್ಮೆ ಅದೆಷ್ಟೇ ಪ್ರಯತ್ನವನ್ನು ಮಾಡಿದರೂ ಕೂಡ ಗೆಲುವು ಎನ್ನುವುದು ಸಿಗದೇ ಮತ್ತೆ ಸತಾಯಿಸುತ್ತೆ. ಇಂಥಹದ್ದೊಂದು ಸೋಲಿನ ಕಮರಿಗೆ ಬಿದ್ದು ಒದ್ದಾಡುತ್ತಿರುವ ಅಕ್ಷಯ್ ಕುಮಾರ್ ಪ್ರೇಕ್ಷಕರನ್ನು ತಮ್ಮ ''ಭೂತ್ ಬಂಗ್ಲಾ''ಗೆ ಕರೆದೊಯ್ಯಲು ಬಂದಿದ್ದಾರೆ.

ವಿಶೇಷ ಅಂದರೆ ಈ ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ. 14 ವರ್ಷದ ನಂತರ ಈ ಜೋಡಿ ಒಂದಾದ ಹಿನ್ನೆಲೆ ಈ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳಿವೆ. ಹಾಗಿದ್ದರೆ ಹೇಗಿದೆ ಭೂತ್ ಬಂಗ್ಲಾ..? ಚಿತ್ರ ನೋಡಿದ ಪ್ರೇಕ್ಷಕರು ಚಿತ್ರದ ಕುರಿತು ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.
ಮಜಾ ಕೊಡುವ ಸಿನಿಮಾ
ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಜೋಡಿ ಮತ್ತೊಮ್ಮೆ ಮ್ಯಾಜಿಕ್ ಮಾಡಿದೆ. ''ಭೂತ್ ಬಂಗ್ಲಾ'' ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಸಿನಿಮಾದ ಫಸ್ಟ್ ಹಾಫ್ ಅಂತೂ ಫುಲ್ ಕಾಮಿಡಿ, ಹಳೆಯ ಬಾಲಿವುಡ್ ಶೈಲಿಯ ನಗು ಪ್ರೇಕ್ಷಕರನ್ನು ರಂಜಿಸುತ್ತದೆ. ಅಕ್ಷಯ್ ಕುಮಾರ್ ಅವರ ವಿಂಟೇಜ್ ಕಾಮಿಡಿ ನಟನೆ ಇಲ್ಲಿ ಅದ್ಭುತವಾಗಿದೆ. ಇವರ ಜೊತೆಗೆ ರಾಜ್‌ಪಾಲ್ ಯಾದವ್, ಅಸ್ರಾನಿ ಜಿ ಮತ್ತು ಪರೇಶ್ ರಾವಲ್ ಅವರ ಕಾಂಬಿನೇಷನ್ ಥಿಯೇಟರ್‌ನಲ್ಲಿ ನಗೆಯ ಅಲೆ ಎಬ್ಬಿಸುತ್ತದೆ. ಸೆಕೆಂಡ್ ಹಾಫ್ ಸ್ವಲ್ಪ ಗಂಭೀರವಾಗಿ ಸಾಗುತ್ತದೆ, ಕಥೆ ಮತ್ತು ಹಾರರ್ ಎಲಿಮೆಂಟ್ಸ್‌ಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಅಲ್ಲಿಯೂ ಸ್ವಲ್ಪ ಹೆಚ್ಚು ಕಾಮಿಡಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನಿಸುತ್ತದೆ. ಆದರೆ ಒಟ್ಟಾರೆಯಾಗಿ ಹೇಳುವುದಾದರೆ, ಸಿನಿಮಾ ಮಾತ್ರ ಫುಲ್ ಎಂಟರ್ಟೈನಿಂಗ್ ಆಗಿದ್ದು, ಮಜಾ ಕೊಡುತ್ತದೆ.
ಪಕ್ಕಾ ಪೈಸಾ ವಸೂಲ್ ಸಿನಿಮಾ
ಹೊಟ್ಟೆ ಹುಣ್ಣಾಗುವಷ್ಟು ನಗು, ಕಾಮಿಡಿ ಬಾಂಬ್ ಅಂದರೆ ಇದೇ. ''ಭೂತ್ ಬಂಗ್ಲಾ'' ಚಿತ್ರದ ಮೂಲಕ ದಿಗ್ಗಜ ಕಲಾವಿದರು ಮತ್ತೆ ಒಂದಾಗಿದ್ದಾರೆ. ಅಕ್ಷಯ್ ಕುಮಾರ್ ಅವರ ಆ ಎಕ್ಸ್‌ಪ್ರೆಶನ್ಸ್‌ಗಳಂತೂ ನೆಕ್ಸ್ಟ್ ಲೆವೆಲ್ ನಲ್ಲಿವೆ. ಇನ್ನು ಪರೇಶ್ ರಾವಲ್, ರಾಜ್‌ಪಾಲ್ ಯಾದವ್ ಮತ್ತು ಅಸ್ರಾನಿ ಅವರ ಕಾಂಬಿನೇಷನ್ ಅಪ್ಪಟ ಬಂಗಾರ. ಪಕ್ಕಾ ಹಳೆಯ ಕಾಲದ ಕಾಮಿಡಿಗೆ ಹಾರರ್ ಟಚ್ ಕೊಟ್ಟಿದ್ದಾರೆ. ಮಜವೋ ಮಜಾ... ಪಕ್ಕಾ ಪೈಸಾ ವಸೂಲ್ ಸಿನಿಮಾ.
ಸಾಲಿಡ್ ಹಾರರ್ ಕಾಮಿಡಿ ಸಿನಿಮಾ
ಟ್ವಿಸ್ಟ್ , ನಗು ಮತ್ತು ಮೈ ನಡುಗಿಸುವ ಸೀನ್‌ಗಳಿರೋ ಒಂದು ಸಾಲಿಡ್ ಹಾರರ್ ಕಾಮಿಡಿ ಸಿನಿಮಾ ಇದು. ಫಸ್ಟ್ ಹಾಫ್ ಫುಲ್ ಹಾಸ್ಯಮಯ ಆಗಿದ್ರೆ, ಸೆಕೆಂಡ್ ಹಾಫ್ ಮಾತ್ರ ಸಖತ್ ಕುತೂಹಲಕಾರಿಯಾಗಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಅಂತೂ ಶಾಕಿಂಗ್. ನಮ್ಮ ಅಕ್ಷಯ್ ಕುಮಾರ್ ಸ್ಕ್ರೀನ್ ಮೇಲೆ ಮಿಂಚಿದ್ದಾರೆ. ಇನ್ನು ಪರೇಶ್ ರಾವಲ್ ಮತ್ತು ರಾಜ್‌ಪಾಲ್ ಯಾದವ್ ಅವರ ಕಾಮಿಡಿ ಚಿತ್ರದ ಪ್ಲಸ್ ಪಾಯಿಂಟ್. ಪ್ರಿಯದರ್ಶನ್ ಅವರು ಈ ಬಾರಿ ಫುಲ್ ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್ ನೀಡಿದ್ದಾರೆ. ಪಕ್ಕಾ ಮಜಾ ಇರೋ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಒಬ್ಬರು ಚಿತ್ರಕ್ಕೆ ನಾಲ್ಕು ಸ್ಟಾರ್ ಗಳನ್ನು ನೀಡಿದ್ದಾರೆ.
ಮನೆ ಮಂದಿ ಕುಂತು ನೋಡುವ ಸಿನಿಮಾ
ಮನೆಯವರೆಲ್ಲಾ ಜೊತೆಯಲ್ಲಿ ಕುಳಿತು ನಕ್ಕು ನಲಿಯುವಂತಹ ಚಿತ್ರ ಇದು. ಪಕ್ಕಾ ಫ್ಯಾಮಿಲಿ ಎಂಟರ್ಟೈನರ್. ವಿಚಿತ್ರ ತಿರುವುಗಳು ಮತ್ತು ಹಾರರ್ ಎಲಿಮೆಂಟ್ಸ್ ಚಿತ್ರದ ಮಜಾವನ್ನು ಡಬಲ್ ಮಾಡಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಮತ್ತೊಬ್ಬರು ಕೂಡ ಚಿತ್ರಕ್ಕೆ 4 ಸ್ಟಾರ್ ಗಳನ್ನು ನೀಡಿದ್ದಾರೆ.
ಕೇವಲ ಜನಸಾಮಾನ್ಯರು ಮಾತ್ರವಲ್ಲ. ಬಾಲಿವುಡ್‌ನ ಪಂಡಿತರಾದ ತರಣ್ ಆದರ್ಶ್, ರೋಹಿತ್ ಜೈಸ್ವಾಲ್, ಜುನೆಂದರ್ ಟುಟೇಜಾ, ಸೇರಿ ಹಲವರು ''ಭೂತ್ ಬಂಗ್ಲಾ'' ಚಿತ್ರವನ್ನು ಮನಸಾರೆ ಹೊಗಳಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಜೋಡಿಗೆ ಬಹುಪರಾಕ್ ಹಾಕಿದ್ದಾರೆ.


Click it and Unblock the Notifications