Pushpa- 2 Review: ಬರೀ ಬಿಲ್ಡಪ್‌ನಲ್ಲೇ ಬಳಲಿ ಬೆಂಡಾದ 'ಪುಷ್ಪ'ರಾಜ್
ಮೂರು ವರ್ಷಗಳಿಂದ ಈ ಚಿತ್ರಕ್ಕಾಗಿ ಸಿನಿರಸಿಕರು ಕಾಯುತ್ತಿದ್ದರು. ಕರ್ನಾಟಕದಲ್ಲಿ ಕೂಡ 1000 ರೂ, 1500 ರೂ. ಕೊಟ್ಟು ಟಿಕೆಟ್ ಖರೀದಿಸಿ ಸಿನಿಮಾ ನೋಡಲು ಪ್ರೇಕ್ಷಕರ ಮುಗಿಬಿದ್ದಿದ್ದರು. ಅಂತೂ ಆ ದಿನ ಬಂದಿದೆ. ಒಂದೇ ದಿನ ಮೊದಲೇ 'ಪುಷ್ಪ'-2 ಪ್ರೀಮಿಯರ್ ಶೋಗಳು ಶುರುವಾಗಿದೆ. ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆ ಕೂಡ ಇದೆ.
ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ'-2 ಸಿನಿಮಾ ಇನ್ನಿಲ್ಲದ ಕುತೂಹಲ ಹುಟ್ಟಾಕ್ಕಿತ್ತು. ಟೀಸರ್, ಟ್ರೈಲರ್, ಸಾಂಗ್ಸ್ ಕೊಂಚ ನಿರಾಸೆ ಮೂಡಿಸಿದರೂ ಅಭಿಮಾನಿಗಳು ಮಾತ್ರ ಸಿನಿಮಾ ನೋಡಲು ಕಾದು ಕೂತಿದ್ದರು.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 6 ಭಾಷೆಗಳಲ್ಲಿ 'ಪುಷ್ಪ'-2 ಸಿನಿಮಾ ಬಿಡುಗಡೆ ಆಗಿದೆ. ಪೇಯ್ಡ್ ಪ್ರೀಮಿಯರ್ ಶೋಗಳು ಹೌಸ್‌ಫುಲ್ ಆಗಿತ್ತು. ಅಭಿಮಾನಿಗಳು ಅದ್ಧೂರಿಯಾಗಿ ಮತ್ತೊಮ್ಮೆ 'ಪುಷ್ಪರಾಜ್'ನನ್ನು ಸ್ವಾಗತಿಸಿದ್ದಾರೆ. ಅವನ ಆರ್ಭಟ ನೋಡಿದ್ದಾರೆ. ಅಷ್ಟಕ್ಕೂ 'ಪುಷ್ಪ'-2 ಕಥೆಯೇನು? ಸಿನಿಮಾ ಹೇಗಿದೆ? ಕಂಪ್ಲೀಟ್ ರಿವ್ಯೂ ರಿಪೋರ್ಟ್ ಮುಂದೆ ಓದಿ.
'ಪುಷ್ಪ'-2 ಕಥೆ
ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್‌ಗೆ 'ಪುಷ್ಪ'ರಾಜ್ ಸವಾಲು ಹಾಕುವುದರೊಂದಿಗೆ ಮೊದಲ ಭಾಗ ಮುಕ್ತಾಯವಾಗಿತ್ತು. ಪಾರ್ಟ್-2ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್ ಸಿಂಡಿಕೇಟ್ ಪ್ರೆಸಿಡೆಂಟ್ ಆಗಿ 'ಪುಷ್ಪ' ಮೆರೆಯೋಕೆ ಶುರು ಮಾಡಿದ್ದಾನೆ. ಹಂತ ಹಂತವಾಗಿ ಬೆಳೆದು ಬಹಳ ಶ್ರೀಮಂತನಾಗಿದ್ದಾನೆ. ಅವನಿಗಿಂತ ಅವನ ಹಣವೇ ಹೆಚ್ಚು ಮಾತನಾಡುತ್ತದೆ. ಕೊನೆಗೆ ಒಂದು ಪೊಲೀಸ್ ಠಾಣೆಯ ಅಷ್ಟು ಸಿಬ್ಬಂದಿಯನ್ನು ಕೊಂಡುಕೊಂಡು ಶೇಖಾವತ್‌ಗೆ ತಿರುಗೇಟು ಕೊಡುತ್ತಾನೆ.
ಇತ್ತ ಶ್ರೀವಲ್ಲಿ ಜೊತೆ ಸಂಸಾರ ಶುರುವಾಗಿದೆ. ಆಕೆ ಕೇಳಿದ ಸಣ್ಣ ಆಸೆ ಈಡೇರಿಸಲು ಪುಷ್ಪರಾಜ್ ರಾಜ್ಯದ ಸಿಎಂ ಅನ್ನೇ ಬದಲಿಸುವ ಸಾಹಸಕ್ಕೆ ಕೈಹಾಕುತ್ತಾನೆ. ಅದಕ್ಕೆ ದೊಡ್ಡಮೊತ್ತದ ಹಣ ಬೇಕು. ಒಂದು ದೊಡ್ಡ ಡೀಲ್ ಮಾಡಿ ಹಣ ಹೊಂದಿಸಲು ಮುಂದಾಗುತ್ತಾನೆ. ಈ ಹಾದಿಯಲ್ಲಿ ಶೇಖಾವತ್‌ಗೆ ಚಳ್ಳೆಹಣ್ಣು ತಿನ್ನಿಸಿ ಪುಷ್ಪ ಅಸಲು ತಗ್ಗೊದೇಇಲ್ಲ ಎಂದು ಡೈಲಾಗ್ ಹೊಡಿತ್ತಾನೆ. ಅಲ್ಲಿಗೆ ಮೊದಲಾರ್ಧ ಮುಕ್ತಾಯವಾಗುತ್ತದೆ.
ದ್ವಿತಿಯಾರ್ಧದಲ್ಲಿ ರಕ್ತಚಂದನ ಸ್ಮಗ್ಲಿಂಗ್ ಕಥೆ ಪಕ್ಕಕ್ಕೆ ಸರಿಯುತ್ತದೆ. 'ಪುಷ್ಪ'ರಾಜ್ ಫ್ಯಾಮಿಲಿ ಕಥೆ ಮುಂದಕ್ಕೆ ಬರುತ್ತದೆ. ಎಷ್ಟೇ ಹಣ ಸಂಪಾದಿಸಿದರೂ ಪುಷ್ಪರಾಜ್‌ಗೆ ಮನೆತನದ ಹೆಸರು ಸಿಗಲ್ಲ. ಆ ಕೊರಗಿಗೆ ಕಾರಣ ಅಣ್ಣ. ಅವನು ನನ್ನ ತಮ್ಮ ಅಲ್ಲ ಎನ್ನುತ್ತಿದ್ದ ಅದೇ ಅಣ್ಣ ಕೊನೆಗೆ ನೀನೇ ನನ್ನ ತಮ್ಮ ಎಂದು ಒಪ್ಪಿಕೊಳ್ಳುವುದರೊಂದಿಗೆ 'ಪುಷ್ಪ'-2 ಕಥೆ ಮುಗಿಯುತ್ತದೆ.
'ಪುಷ್ಪ'-2 ಚಿತ್ರ ಹೇಗಿದೆ?
ನಿರ್ದೇಶಕ ಸುಕುಮಾರ್ ಹಿಂದಿನ ತಮ್ಮ ಸಿನಿಮಾಗಳಲ್ಲಿ ಕಥೆಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಆದರೆ ಇಲ್ಲಿ ಬರೀ ಪುಷ್ಪರಾಜ್ ಬಿಲ್ಡಪ್ ಹೈಲೆಟ್ ಆಗಿದೆ. ಚಿತ್ರದಲ್ಲಿ ಬರುವ ಅಷ್ಟು ಪಾತ್ರಗಳು ಆತನ ಜಪ ಮಾಡುತ್ತವೆ. ಕೊನೆಗೆ ಪೊಲೀಸ್ ಆಫೀಸರ್ ಶೇಖಾವತ್ ಕೂಡ ಜೈಕಾರ ಹಾಕುತ್ತಾನೆ. ಅಷ್ಟರಮಟ್ಟಿಗೆ ಅಲ್ಲು ಅರ್ಜುನ್‌ಗಾಗಿಯೇ ಕಥೆ ಮಾಡಿದಂತಿದೆ. ಇನ್ನು ಚಿತ್ರದ ಸುದೀರ್ಘ ಕಾಲಾವಧಿ ಕೂಡ ಮೈನಸ್ ಆಗಿದೆ.
ಮಾಸ್ ಪ್ರೇಕ್ಷಕರನ್ನು ಮುಖ್ಯವಾಗಿ ಅಲ್ಲು ಅಲ್ಲುನ್ ಅಭಿಮಾನಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ದೇಶಕರು ಸನ್ನಿವೇಶಗಳನ್ನು ಕಟ್ಟಿದ್ದಾರೆ. ಆದರೆ ಅದರಲ್ಲಿ ಕೆಲವು ಅಷ್ಟಾಗಿ ವರ್ಕ್ ಆಗಿಲ್ಲ. ಗಂಭೀರ ಸನ್ನಿವೇಶಗಳಲ್ಲಿ ಕೂಡ ಪ್ರೇಕ್ಷಕರು ಪೇಚಾಡುವಂತಾಗಿದೆ. ಅತಿರೇಕದ ಸನ್ನಿವೇಶಗಳು ಚಿತ್ರದಲ್ಲಿ ಹೇರಳವಾಗಿದೆ. ಪಾರ್ಟ್-1ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್ ಅನ್ನು ಹೆಚ್ಚಾಗಿ ತೋರಿಸಿದ್ದಕ್ಕೋ ಏನೋ ಇಲ್ಲಿ, ಸೆಕೆಂಡ್ ಹಾಫ್ ಅದನ್ನು ಬಿಟ್ಟು ಹೊರ ಬಂದಿದ್ದಾರೆ.
ಬಹಳ ನಿರೀಕ್ಷೆ ಹುಟ್ಟಿಸಿದ್ದ ಗಂಗಮ್ಮ ಜಾತ್ರೆ ಎಪಿಸೋಡ್ ಕೂಡ ಅಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ. ಅದಕ್ಕೆ ಸೆಂಟಿಮೆಂಟ್ ಟಚ್ ಕೊಟ್ಟು ನಿರ್ದೇಶಕರು ಬಚಾವ್ ಆಗಿದ್ದಾರೆ. ರಾಜ್ಯದ ಸಿಎಂ ಐಟಂ ಡ್ಯಾನ್ಸರ್ ಜೊತೆ ಕುಣಿಯೋದು, ಪುಷ್ಪರಾಜ್ ಸುಖಾ ಸುಮ್ಮನೆ ಹೆಲಿಕಾಪ್ಟರ್ ಏರಿ ಓಡಾಡೋದು, ಬಂದೂಕು ಹಿಡಿದು ನೇರವಾಗಿ ಟಿವಿ ಸ್ಟುಡಿಯೋ ಲೈವ್‌ಗೆ ಬಂದು ಮಾತನಾಡುವುದು, ನೈಜತೆ ಇಲ್ಲದ ಸ್ಟಂಟ್ಸ್, ಪೊಲೀಸ್ ಆಫೀಸರ್(ಫಹಾದ್ ಫಾಸಿಲ್) ಕೂಡ ಕಾಮಿಡಿಯನ್ ರೀತಿ ಆಡುವುದು, ಶ್ರೀವಲ್ಲಿ ಪದೇ ಪದೆ ಪೀಲಿಂಗ್ಸ್ ಬಂತು ಅಂತ ಆಡೋದು ಅತಿರೇಕ ಅನ್ನಿಸದೇ ಇರದು.
ಇದ್ದಿದ್ದರಲ್ಲಿ ಶೇಖಾವತ್‌ಗೆ ಪುಷ್ಪರಾಜ್ ತಿರುಗೇಟು ಕೊಡುವ ಒಂದೆರಡು ಸನ್ನಿವೇಶ ಮಾತ್ರ ಪರವಾಗಿಲ್ಲ ಎನಿಸುತ್ತದೆ. 'ಪುಷ್ಪ ಪುಷ್ಪ', 'ಪೀಲಿಂಗ್ಸ್' ದೊಡ್ಡ ಪರದೆಯಲ್ಲಿ ಅಭಿಮಾನಿಗಳಿಗೆ ಕಿಕ್ ಕೊಡುವಂತಿದೆ. ಸಿನಿಮಾವನ್ನು ಬಹಳ ಅದ್ಧೂರಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಕೂಲಿ ಆಗಿದ್ದವನು, ಚಿಕ್ಕಂದಿನಿಂದ ಬಹಳ ನೋವು ಅನುಭವಿಸಿದನು, ಶ್ರೀಮಂತನಾದರೆ ಆತನಿಗೆ ಹಣ, ಅಧಿಕಾರ ಸಿಕ್ಕರೆ ಹೇಗೆಲ್ಲಾ ಆಡ್ತಾನೆ ಎನ್ನುವುದನ್ನು ಚೆನ್ನಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ಕಲಾವಿದರ ಅಭಿನಯ
ನಟನೆ ವಿಚಾರಕ್ಕೆ ಬಂದರೆ ಅಲ್ಲು ಅರ್ಜುನ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಸಿಂಡಿಕೇಟ್ ಪ್ರೆಸಿಡೆಂಟ್ ಆಗಿ ಅಬ್ಬರಿಸಿದ್ದಾರೆ. ಪುಷ್ಪ ಮ್ಯಾನರಿಸಂನ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಇನ್ನು ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಆದರೆ ಕೆಲವು ಕಡೆ ಆಕೆಯ ಓವರ್ ಆಕ್ಟಿಂಗ್ ಕಸಿವಿಸಿ ಅನ್ನಿಸುತ್ತದೆ. ಫಹಾದ್ ಫಾಸಿಲ್ ನಟನೆ ಚೆನ್ನಾಗಿದೆ. ಆದರೆ ಮೊದಲೇ ಹೇಳಿದಂತೆ ಆ ಪಾತ್ರವನ್ನು ಜೋಕರ್ ರೀತಿ ಮಾಡಿಬಿಟ್ಟಿದ್ದಾರೆ.
ಶ್ರೀಲೀಲಾ ಬಿಂದಾಸ್ ಆಗಿ ಕುಣಿದು ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ಜಾಲಿ ರೆಡ್ಡಿಯಾಗಿ ಧನಂಜಯ್ ಕ್ಲೈಮ್ಯಾಕ್ಸ್‌ನಲ್ಲಿ ಕೆಲ ಸೆಕೆಂಡುಗಳು ಮಾತ್ರ ಕಾಣಿಸಿಕೊಳ್ಳುವುದು ಕನ್ನಡ ಸಿನಿರಸಿಕರಿಗೆ ಬೇಸರದ ಸಂಗತಿ. ತಾರಪ್ ಪೊನ್ನಪ್ಪ ಪಾತ್ರಕ್ಕೆ ಮಹತ್ವ ಸಿಕ್ಕಿದೆ. ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾ
ಬಹಳ ಅದ್ಧೂರಿಯಾಗಿ 'ಪುಷ್ಪ'-2 ಸಿನಿಮಾ ಮೂಡಿ ಬಂದಿದೆ. ದೇವಿ ಶ್ರೀಪ್ರಸಾದ್ ಹಾಡುಗಳಲ್ಲಿ ಒಂದು ಹಂತಕ್ಕೆ ಸಕ್ಸಸ್ ಕಂಡಿದ್ದಾರೆ. ಬಿಜಿಎಂ ಚಿತ್ರಕ್ಕೆ ಪೂರಕವಾಗಿದೆ. ಅಜನೀಶ್ ಲೋಕನಾಥ್ ಕೂಡ ಚಿತ್ರ ಕೆಲ ಸನ್ನಿವೇಶಗಳಿಗೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಸೀಕ್ವೆಲ್ ಮಾಡಬೇಕು ಎನ್ನುವ ಕಾರಣಕ್ಕೆ ಮಾಡಿದಂತೆ ಭಾಸವಾಗುತ್ತದೆ. ಸುಕುಮಾರ್ ಹಿಂದಿನ ಸಿನಿಮಾಗಳ ಮ್ಯಾಜಿಕ್ ಇಲ್ಲಿ ಮಿಸ್ ಆಗಿದೆ. ಮಸಾಲೆ ಹೆಚ್ಚಾಗಿ ಅಡುಗೆ ರುಚಿ ಕೆಟ್ಟಿದೆ.
ಸಂಕಲನಕಾರ ನವೀನ್ ನೂಲಿ ಕತ್ತರಿಯನ್ನು ಮತ್ತಷ್ಟು ಹರಿತಗೊಳಿಸಿದ್ದರೆ ಚೆನ್ನಾಗಿತ್ತು. 3 ಗಂಟೆ 22 ನಿಮಿಷ ಸಿನಿಮಾ ನಿಜಕ್ಕೂ ಕಷ್ಟ ಕಷ್ಟ. ಇನ್ನು ಕೊನೆಗೆ 'ಪುಷ್ಪ'- 3 ಬರುತ್ತದೆ ಎನ್ನುವ ಸುಳಿವು ಸಿಕ್ಕಿದೆ. ಕ್ಲೈಮ್ಯಾಕ್ಸ್ ನೋಡಿದರೆ ಅಲ್ಲು ಅರ್ಜುನ್ ಮುಂದಿನ ಭಾಗದಲ್ಲಿ ಇರಲ್ಲ ಎನ್ನುವುದು ಅರ್ಥವಾಗುತ್ತದೆ. ವಿಜಯ್ ದೇವರಕೊಂಡ ಹೀರೊ ಆಗಿ ನಟಿಸೋದು ಬಹುತೇಕ ಖಚಿತ ಎನ್ನುವಂತಾಗಿದೆ. ಇನ್ನು ಕನ್ನಡ ಡಬ್ಬಿಂಗ್ ಚೆನ್ನಾಗಿದೆ. ವರದರಾಜ್ ಕನ್ನಡ ವರ್ಷನ್ ಸಂಭಾಷಣೆ ಸೊಗಸಾಗಿ ಬರೆದಿದ್ದಾರೆ. ಕನ್ನಡ ಹಾಡುಗಳ ಲಿರಿಕ್ಸ್ ಕೂಡ ಇಷ್ಟವಾಗುತ್ತದೆ.
ಕೊನೆ ಮಾತು
ಕೆಲ ಸನ್ನಿವೇಶಗಳಲ್ಲಿ ಲಾಜಿಕ್ ಪಕ್ಕಕ್ಕಿಟ್ಟು ನೋಡಿದರೆ 'ಪುಷ್ಪ'-2 ಸಿನಿಮಾ ಪರವಾಗಿಲ್ಲ ಎನಿಸುತ್ತದೆ. ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಇಷ್ಟವಾಗಬಹುದು. ಆದರೆ ಸಾಮಾನ್ಯ ಪ್ರೇಕ್ಷಕರಿಗೆ ಅಷ್ಟಾಗಿ ರುಚಿಸಲ್ಲ. ಬಹಳ ನಿರೀಕ್ಷೆ ಇಟ್ಟುಕೊಂಡು ಮಾತ್ರ ಚಿತ್ರಮಂದಿರಕ್ಕೆ ಹೋಗಬೇಡಿ.


Click it and Unblock the Notifications











