For Quick Alerts
  ALLOW NOTIFICATIONS  
  For Daily Alerts

  Pushpa Movie Review: 'ಪುಷ್ಪ' ಸಿನಿಮಾ ಹೇಗಿದೆ?

  |

  ಬಾಹುಬಲಿ, ಕೆಜಿಎಫ್, ಸಿನಿಮಾಗಳ ನಂತರ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ 'ಪುಷ್ಪ', ಇಂದು ಬಿಡುಗಡೆ ಆಗಿದೆ. ಅಲ್ಲು ಅರ್ಜುನ್-ನಿರ್ದೇಶಕ ಸುಕುಮಾರ್ ಜೋಡಿಯ ಮೂರನೇ ಸಿನಿಮಾ ಇದು.
  ಚಿತ್ರತಂಡ ಮೊದಲಿನಿಂದಲೂ ಪ್ರಚಾರ ಮಾಡಿದ್ದ ರೀತಿ ಈ ಸಿನಿಮಾ ರಕ್ತ ಚಂದನ ಕಳ್ಳಸಾಗಣೆ ಕುರಿತಾದದ್ದು. ಪುಷ್ಪರಾಜ್ ಅಲಿಯಾಸ್ ಪುಷ್ಪ ಪಾತ್ರ ಮಾಡಿರುವ ಅಲ್ಲು ಅರ್ಜುನ್ ಇಲ್ಲಿ ರಕ್ತ ಚಂದನ ಕಳ್ಳಸಾಗಣೆದಾರ. ಸಿನಿಮಾದ ಆರಂಭದಲ್ಲಿ ರಕ್ತ ಚಂದನದ ಕುರಿತು, ಅದರ ಕಳ್ಳ ಸಾಗಣೆ, ಪೊಲೀಸರ ದಾಳಿ, ಅದರಿಂದ ತಪ್ಪಿಸಿಕೊಳ್ಳುವುದು, ಮರ ಕಡಿವವರ ಗುಂಪು, ಅದರ ನಾಯಕ, ಮರ ಕಡಿವವರ ಕೂಲಿ, ರಕ್ತ ಚಂದನದ ಮಾರುಕಟ್ಟ ಮೌಲ್ಯ, ಅದು ದೊರಕುವ ಸ್ಥಳ ಇತ್ಯಾದಿ ಕೆಲವು ಮಾಹಿತಿಗಳನ್ನು ನಿರ್ದೇಶಕರು ನೀಡಿದ್ದಾರೆ.
  ಆದರೆ ಸಿನಿಮಾ ತುಸು ಮುಂದೆ ಸಾಗಿದಂತೆ ಸಿನಿಮಾ ರಕ್ತ ಚಂದನದ ಕತೆಯಿಂದ ಅಲ್ಲು ಅರ್ಜುನ್ ಕಡೆಗೆ ಪೂರ್ಣವಾಗಿ ಶಿಫ್ಟ್ ಆಗಿಬಿಡುತ್ತದೆ. ಸಿನಿಮಾ ರಕ್ತ ಚಂದನ ಕಳ್ಳಸಾಗಣೆ ಅದರ ಸುತ್ತಲಿನ ಕರಾಳ ಲೋಕವನ್ನು ಬಿಟ್ಟು ಪುಷ್ಪನ ಸೋ ಕಾಲ್ಡ್ ಪ್ರಗತಿ ಕಡೆಗೆ ಮಾತ್ರವೇ ಫೋಕಸ್ ಆಗಿಬಿಡುತ್ತೆ.
  ಹಾಗೆಂದು ಸಿನಿಮಾ ಎಂಗೇಜಿಂಗ್ ಆಗಿಲ್ಲವೆಂದೇನೂ ಇಲ್ಲ. ಸಿನಿಮಾದ ಮೊದಲಾರ್ಧ ಚೆನ್ನಾಗಿ ನೋಡಿಸಿಕೊಳ್ಳುತ್ತದೆ. 'ಪುಷ್ಪ' ಒಬ್ಬೊಬ್ಬರೇ ಗ್ಯಾಂಗ್‌ ಲೀಡರ್‌ಗಳನ್ನು ಎದುರು ಹಾಕಿಕೊಳ್ಳುವುದು ಅವರನ್ನು ಮೀರಿಸಿ ಮೇಲೇರುವುದು ಒಳ್ಳೆಯ ಹೀರೋ-ವಿಲನ್ ಕಾನ್ಫ್ಲಿಕ್ಟ್ ಎನಿಸುತ್ತದೆ. ದ್ವಿತೀಯಾರ್ಧ, ಅದರಲ್ಲಿಯೂ ಕ್ಲೈಮ್ಯಾಕ್ಸ್ ಹತ್ತಿರಕ್ಕೆ ಬರುತ್ತಿದ್ದಂತೆ ಪುಷ್ಪನ ಫೈರ್ ತುಸು ಕಡಿಮೆಯಾದಂತೆ ಗೋಚರವಾಗುತ್ತದೆ. ಸಿನಿಮಾದ ಆರಂಭದಿಂದಲೂ ಪ್ರೇಕ್ಷಕ ನೋಡಿಕೊಂಡು ಬಂದಿದ್ದ ಪುಷ್ಪನ ಪಾತ್ರ ಬದಲಾದಂತೆ ಭಾಸವಾಗುತ್ತದೆ. ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹಾಗಾಗಿಯೇ ಸಿನಿಮಾವನ್ನು ಎರಡನೇ ಭಾಗದಲ್ಲಿ ಸ್ವಲ್ಪ ಹಿಂಜಿಸಿ ಎಳೆದಾಡಿ ಕತೆಯನ್ನು ಮುಂದಿನ ಭಾಗಕ್ಕೆ ಶಿಫ್ಟ್‌ ಮಾಡಿಕೊಂಡಿದ್ದಾರೇನೋ ಎಂಬ ಅನುಮಾನವೂ ಮೂಡುತ್ತದೆ.

  ಟ್ರಿಕ್ಸ್ ಬಳಸಿದ್ದಾರೆ ಸುಕುಮಾರ್

  ಟ್ರಿಕ್ಸ್ ಬಳಸಿದ್ದಾರೆ ಸುಕುಮಾರ್

  ಸುಕುಮಾರ್ ಒಬ್ಬ ಪಳಗಿದ ನಿರ್ದೇಶಕ ಆದ್ರೆ 'ಪುಷ್ಪ' ಸಿನಿಮಾದ ಮೇಲೆ ಸ್ವತಃ ಅವರಿಗೇ ಪೂರ್ಣ ನಂಬಿಕೆ ಇದ್ದ ಹಾಗೆ ಇಲ್ಲ. ಅದಕ್ಕೆ ಸಿನಿಮಾ ಅಲ್ಲಲ್ಲಿ ವೇಗವಾಗಿ ಅಲ್ಲಲ್ಲಿ ಸ್ಲೋ ಆಗಿ ಸಾಗುತ್ತದೆ. ಸಿನಿಮಾದ ಕತೆಯ ಮೇಲೆ ಪೂರ್ತಿ ನಂಬಿಕೆ ಇಲ್ಲದ ಕಾರಣಕ್ಕೆ ಕೆಲವು ಸೇಲೆಬಲ್ ಮಸಾಲೆ ಅಂಶಗಳನ್ನು ತುಂಬಿದ್ದಾರೆ ಸುಕುಮಾರ್. ರಶ್ಮಿಕಾರ ಸೆರಗು ಆಗಾಗ್ಗೆ ಜಾರುವುದು, ಸಮಂತಾರ ಅತಿ ಮಾದಕ ನೃತ್ಯ ಇಂಥಹವು ಪ್ರೇಕ್ಷಕನನ್ನು ಎಂಗೇಜ್ ಆಗಿಟ್ಟುಕೊಳ್ಳಲು ಸುಕುಮಾರ್ ಮಾಡಿದ ಟ್ರಿಕ್ಸ್ ಅನ್ನಬಹುದೇನೋ.

  ಕೆಲವು ಗಟ್ಟಿ, ಕೆಲವು ಜೊಳ್ಳು ಪಾತ್ರ

  ಕೆಲವು ಗಟ್ಟಿ, ಕೆಲವು ಜೊಳ್ಳು ಪಾತ್ರ

  ಸಿನಿಮಾದಲ್ಲಿ ಕೆಲವು ಗಟ್ಟಿ ಪಾತ್ರಗಳಿವೆ, ಕೆಲವು ಬಹಳ ಜೊಳ್ಳಾದ ಪಾತ್ರಗಳು ಇವೆ. ನಟ ಸುನಿಲ್ ಪಾತ್ರ ಚೆನ್ನಾಗಿದೆ, ಸುನಿಲ್ vs ಪುಷ್ಪ ಸಂಘರ್ಷ ಚೆನ್ನಾಗಿದೆ. ಆದರೆ ಡಾಲಿ ಧನಂಜಯ್ ನಿರ್ವಹಿಸಿರುವ ಜಾಲಿ ರೆಡ್ಡಿ ಪಾತ್ರ ಈ ಹಿಂದಿನ ಹಲವು ಸಿನಿಮಾಗಳಲ್ಲಿ ಇರುವ ಮಾಮೂಲಿ ಪುಡಿ ವಿಲನ್ ಪಾತ್ರವೇ ಆಗಿದೆ. ಊರ ಹೆಣ್ಣು ಮಕ್ಕಳ ಮೇಲೆಲ್ಲ ಕಣ್ಣು ಹಾಕುವ ವಿಲನ್ ಮಗ, ಊರ ಯುವತಿಯರನ್ನೆಲ್ಲ ತನ್ನ ಅಡ್ಡಾಕ್ಕೆ ಕರೆಸಿ ಅನುಭವಿಸುತ್ತಿರುತ್ತಾನೆ ಒಂದು ದಿನ ನಾಯಕಿ ಮೇಲೆ ಕಣ್ಣು ಹಾಕುತ್ತಾನೆ. ಕೊನೆಗೆ ನಾಯಕನಿಂದ ಹೊಡೆತ ತಿನ್ನುತ್ತಾನೆ. ಇಂಥಹಾ ಪಾತ್ರಗಳೂ ನೂರಾರು ಸಿನಿಮಾಗಳಲ್ಲಿ ಬಂದು ಹೋಗಿವೆ. ಅದೇ ರೀತಿಯ ಪಾತ್ರ ಧನಂಜಯ್ ಅವರದ್ದು. ಧನಂಜಯ್ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ, ಆದರೆ ಸಿಕ್ಕ ಪಾತ್ರದಲ್ಲಿ ಸಮಾಧಾನಕರ ರೀತಿಯಲ್ಲಿ ನಟಿಸಿದ್ದಾರೆ ಧನಂಜಯ್.

  ರಶ್ಮಿಕಾ ಹೇಗೆ ನಟಿಸಿದ್ದಾರೆ?

  ರಶ್ಮಿಕಾ ಹೇಗೆ ನಟಿಸಿದ್ದಾರೆ?

  ರಶ್ಮಿಕಾ-ಅಲ್ಲು ಅರ್ಜುನ್‌ ನಡುವಿನ ಕೆಲವು ಸನ್ನಿವೇಶಗಳು ಚೆನ್ನಾಗಿವೆ. ರಶ್ಮಿಕಾ ಸಿಕ್ಕ ಅವಕಾಶದಲ್ಲಿ ಚೆನ್ನಾಗಿ ನಟಿಸಿದ್ದಾರೆ, ನಿರ್ದೇಶಕರ ಅಣತಿಯಂತೆ ಅಲ್ಲಲ್ಲಿ ಗ್ಲಾಮರಸ್ ಟಚ್ ಸಹ ಕೊಟ್ಟಿದ್ದಾರೆ. ಇನ್ನು ಸಮಂತಾರ ಮಾದಕ ನೃತ್ಯ ಚೆನ್ನಾಗಿದೆ. ಯಾರ ಮೇಲೋ ದ್ವೇಷ ತೀರಿಕೊಳ್ಳಲೆಂದೇನೋ ಎಂಬ ರೀತಿಯಲ್ಲಿ ಬಹಳ ಮಾದಕವಾಗಿ ಸಮಂತಾ ಕುಣಿದಿದ್ದಾರೆ. ಹಾಸ್ಯ ನಟ ಸುನಿಲ್ ಚೆನ್ನಾಗಿ ನಟಿಸಿದ್ದಾರೆ. ಈ ಸಿನಿಮಾದ ಬಳಿಕ ಅವರಿಗೆ ಬೇರೆಯದ್ದೇ ರೀತಿಯ ಪಾತ್ರಗಳು ಸಿಗುವ ಸಾಧ್ಯತೆ ಹೆಚ್ಚಿದೆ. ಇನ್ನು ಅಲ್ಲು ಅರ್ಜುನ್ ಅದ್ಭುತವಾಗಿ ನಟಿಸಿದ್ದಾರೆ. ಇಡೀ ಸಿನಿಮಾದಲ್ಲಿ ಅವರು 'ಪುಷ್ಪ' ಪಾತ್ರದಿಂದ ಒಂದಿಷ್ಟೂ ಕದಲಿಲ್ಲ. ಫೈಟ್, ಹಾಸ್ಯ, ಸೆಂಟಿಮೆಂಟ್, ಸಿಟ್ಟು ಎಲ್ಲದರಲ್ಲೂ ಅವರ ಅಭಿನಯ ಸೂಪರ್. ಮೊದಲಾರ್ಧದಲ್ಲಿ ಅಲ್ಲು ಅರ್ಜುನ್ ಹೊಡೆವ ಡೈಲಾಗ್‌ಗಳಿಗೆ ಶಿಳ್ಳೆ-ಚಪ್ಪಾಳೆಗಳು ಧಾರಾಳವಾಗಿ ಬೀಳುತ್ತವೆ.

  ಫಹಾದ್ ಫಾಸಿಲ್ ಪಾತ್ರ?

  ಫಹಾದ್ ಫಾಸಿಲ್ ಪಾತ್ರ?

  ಇನ್ನು ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಳ್ಳುವ ಫಹಾದ್ ಫಾಸಿಲ್ ನಿರೀಕ್ಷಿತ ಮಟ್ಟದಲ್ಲಿ ಗಮನ ಸೆಳೆಯುವುದಿಲ್ಲ. ಸಿನಿಮಾದಲ್ಲಿ ಅವರಿಗೆ ಹೆಚ್ಚು ದೃಶ್ಯಗಳು ಇಲ್ಲದೇ ಇರುವುದು ಇದಕ್ಕೆ ಮುಖ್ಯ ಕಾರಣ. ಆದರೆ 'ಪುಷ್ಪ' ಸಿನಿಮಾದ ಎರಡನೇ ಭಾಗ ಪುಷ್ಪ v/s ಫಹಾದ್ ಫಾಸಿಲ್‌ ಪಾತ್ರ ಎಂಬುದು ಖಾತ್ರಿ ಮಾಡುವುದರೊಂದಿಗೆ ಸಿನಿಮಾ ಮುಗಿಸಿದ್ದಾರೆ ಸುಕುಮಾರ್. ಹಾಗಾಗಿ 'ಪುಷ್ಪ'ದ ಮುಂದಿನ ಭಾಗದಲ್ಲಿ ಫಹಾದ್ ಫಾಸಿಲ್ ನಟನೆಯನ್ನು ಅಭಿಮಾನಿಗಳು ಕಣ್ಣು ತುಂಬಿಕೊಳ್ಳಬಹುದು. ಆದರೆ 'ಬಾಹುಬಲಿ' ಆಗಲಿ 'ಕೆಜಿಎಫ್' ಆಗಲಿ ದೊಡ್ಡ ಕುತೂಹಲಕಾರಿ ತಿರುವುನೊಂದಿಗೆ ಮೊದಲ ಭಾಗವನ್ನು ಮುಗಿಸಿದ್ದವು. ಆದರೆ 'ಪುಷ್ಪ' ಸಿನಿಮಾದಲ್ಲಿ ಈ ಕುತೂಹಲಕಾರಿ ತಿರುವು ದೊಡ್ಡ ಮಟ್ಟದಲ್ಲಿಲ್ಲ. ಆದರೆ ತಕ್ಕ ಮಟ್ಟಿಗಿನ ನಿರೀಕ್ಷೆಯನ್ನಷ್ಟೆ ಹುಟ್ಟುಹಾಕಿದೆ ಈ ಸಿನಿಮಾದ ಕ್ಲೈಮ್ಯಾಕ್ಸ್.

  ಒಟ್ಟಾರೆ ಸಿನಿಮಾ ಹೇಗಿದೆ?

  ಒಟ್ಟಾರೆ ಸಿನಿಮಾ ಹೇಗಿದೆ?

  ಇತ್ತೀಚಿನ ಯಾವುದೇ ಮಾಸ್ ಸಿನಿಮಾ ಆಗಲಿ ಫೈಟ್‌ ದೃಶ್ಯಗಳ ಬಗ್ಗೆ ಹೆಚ್ಚು ಗಮನವಹಿಸುತ್ತಿವೆ. ಆದರೆ 'ಪುಷ್ಪ' ಸಿನಿಮಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಫೈಟ್ ದೃಶ್ಯಗಳನ್ನು ಅದ್ಭುತ ಎಂಬಂತೆ ತೆರೆ ಮೇಲೆ ಪ್ರೆಸೆಂಟ್ ಮಾಡಿದೆ. ಹಾಡುಗಳು ಸಹ ಈಗಾಗಲೇ ಹಿಟ್ ಆಗಿದೆ. ಹಿನ್ನೆಲೆ ಸಂಗೀತ ಅಲ್ಲಲ್ಲಿ ಕಿವಿಗಡಚಿಕ್ಕುವ ರೀತಿಯಲ್ಲಿದೆ ಎನಿಸುತ್ತದೆ. ಕ್ಯಾಮೆರಾ ಕೆಲಸವಂತೂ ಅದ್ಭುತ. ಒಟ್ಟಾರೆ ಸಿನಿಮಾವನ್ನು ಒಂದು ಬಾರಿ ನೋಡಲು ಅಡ್ಡಿಯಿಲ್ಲ.

  Rating:
  3.0/5

  English summary
  Allu Arjun starer Pushpa Telugu movie review in Kannada. Movie is watchable. Movie directed by Sukumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X