Baby Review: ಹದಿಹರೆಯದ ವಯಸ್ಸಿಗೆ ಸಿಕ್ಕ ಪ್ರೀತಿ ಪಜೀತಿ; ಪ್ರೀತಿಯಲ್ಲಿ ಬೇಡವೇ ಬೇಡ ಮೂರ್ಖತನ!
ಶಾಲಾ ಕಾಲೇಜುಗಳಲ್ಲಿ ಹುಟ್ಟುವ ಪ್ರೀತಿ ಪ್ರೀತಿಯೇ ಅಲ್ಲ, ಅದು ಕೇವಲ ಆಕರ್ಷಣೆಯಷ್ಟೇ ಎಂದು ಹಿರಿಯರು ಎಷ್ಟೇ ಹೇಳಿದರೂ ಅದನ್ನು ಬಿಸಿ ರಕ್ತದ ಯುವಕ - ಯುವತಿಯರು ಮಾತ್ರ ಒಪ್ಪಲು ತಯಾರಿಲ್ಲ. ತಾವು ಮಾಡಿದ್ದೇ ಸರಿ, ತಾವು ಹಾಕುತ್ತಿರುವ ಹೆಜ್ಜೆಯೇ ಅತ್ಯುತ್ತಮ ಎಂಬ ನಿರ್ಧಾರವನ್ನು ಮಾಡಿ ತಮ್ಮನ್ನು ತಾವೇ ಗ್ರೇಟ್ ಎಂದು ನಿಶ್ಚಯಿಸಿಕೊಂಡು ತಪ್ಪು ಹೆಜ್ಜೆ ಇಡುವ ಅನೇಕ ಯುವಕ ಹಾಗೂ ಯುವತಿಯರು ಶಾಲಾ ಕಾಲೇಜು ದಿನಗಳಲ್ಲಿ ಮಾಡಿದ ಪ್ರೀತಿಯಲ್ಲಿ ಗೆದ್ದದ್ದಕ್ಕಿಂತ ಸೋತಿದ್ದೇ ಹೆಚ್ಚು, ಸತ್ತಿದ್ದೂ ಉಂಟು.
ಈ ಮೇಲಿನ ಸಾಲುಗಳಿಗೆ ಹಿಡಿದ ಕೈಗನ್ನಡಿಯೇ ತೆಲುಗಿನ ಇತ್ತೀಚೆಗಿನ ಬ್ಲಾಕ್‌ಬಸ್ಟರ್ ಚಿತ್ರ ಬೇಬಿ. ಅರೇ ಇದೇನಿದು ಚಿತ್ರ ಬಿಡುಗಡೆಯಾಗಿ ಮೂರು ದಿನಗಳು ಕಳೆದಿದೆ, ಆಗಲೇ ಬ್ಲಾಕ್‌ಬಸ್ಟರ್ ಹೇಗೆ ಎಂದು ಪ್ರಶ್ನಿಸಬೇಡಿ, ಬೇರೆ ಚಿತ್ರಗಳ ಹಾಗೆ ಕೇವಲ ಪ್ರಚಾರಕ್ಕಾಗಿ ಪೋಸ್ಟರ್ ಮೇಲೆ ಬ್ಲಾಕ್‌ಬಸ್ಟರ್ ಟ್ಯಾಗ್ ಹಾಕಿಕೊಳ್ಳದ ಬೇಬಿ ಚಿತ್ರ ಬಿಡುಗಡೆಯಾದ ಎರಡೇ ದಿನಗಳಲ್ಲಿ ಬರೋಬ್ಬರಿ 14.3 ಕೋಟಿ ಗಳಿಕೆಯನ್ನು ಮಾಡಿ ಲಾಭದ ಟಾರ್ಗೆಟ್ ಮುಟ್ಟಿದೆ.

ಹೀಗೆ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿರುವ ಬೇಬಿ ಚಿತ್ರಕ್ಕೆ ವಿಮರ್ಶೆಗಳೂ ಸಹ ಅದ್ಭುತವಾಗಿ ಬರತೊಡಗಿವೆ. ಬೇಬಿ ಚಿತ್ರತಂಡ ಬಿಡುಗಡೆಗೂ ಮುನ್ನ ಹಂಚಿಕೊಂಡಿದ್ದ ಪೋಸ್ಟರ್‌ಗಳನ್ನು ಕಂಡು ಇದು ಕುಟುಂಬ ಸಮೇತ ಕುಳಿತು ನೋಡುವಂತಹ ಚಿತ್ರವಲ್ಲ ಎಂಬ ಅಭಿಪ್ರಾಯವಿತ್ತು. ಆದರೆ ಈ ಚಿತ್ರವನ್ನು ಕುಟುಂಬ ಸಮೇತರಾಗಿ ಕುಳಿತು ಧಾರಾಳವಾಗಿ ವೀಕ್ಷಿಸಬಹುದಾಗಿದೆ.
ವಿದ್ಯಾಭ್ಯಾಸದ ಸಮಯದಲ್ಲಿ ಮಕ್ಕಳನ್ನು ಹೇಗೆ ಬೆಳೆಸಬೇಕು, ಅವರ ಚಟುವಟಿಕೆಗಳು ಹೇಗಿರಲಿವೆ ಎಂಬ ಪಾಠವನ್ನು ಪೋಷಕರಿಗೆ ಮಾಡುವ ಬೇಬಿ ಚಿತ್ರ ಹೇಗೆ ನಡೆದುಕೊಳ್ಳಬೇಕು, ಏನು ಮಾಡಬೇಕು, ಏನನ್ನು ಮಾಡಲೇಬಾರದು ಎಂಬ ನೀತಿಪಾಠವನ್ನು ಯುವಕ - ಯುವತಿಯರಿಗೆ ಹೇಳಲಿದೆ.
ಬೇಬಿ ಒನ್‌ಲೈನ್ ಸ್ಟೋರಿ, ಕಥೆ ಏನು?
ಬೇಬಿ ಚಿತ್ರದ ಒನ್‌ಲೈನ್ ಸ್ಟೋರಿ ಹೇಳುವ ಪ್ರಯತ್ನ ಮಾಡಿದರೂ ಇಡೀ ಚಿತ್ರದ ಕಥೆಯನ್ನು ಹೇಳಿಬಿಟ್ಟಂತಾಗಲಿದೆ. ಚಿತ್ರದ ಟ್ರೈಲರ್ ನೋಡಿದರೂ ಸಹ ಸಿನಿಮಾ ನೋಡುವ ಹವ್ಯಾಸವಿರುವ ಸಿನಿ ರಸಿಕರು ಕಥೆಯನ್ನು ಸುಲಭವಾಗಿ ಊಹಿಸಿಬಿಡ್ತಾರೆ. ಅಷ್ಟೇ ಅಲ್ಲದೇ ಚಿತ್ರದ ಪೋಸ್ಟರ್ ಸಹ ತನ್ನ ಕಥೆಯನ್ನು ಬಿಟ್ಟುಕೊಟ್ಟಿದೆ ಎಂದೇ ಹೇಳಬಹುದು. ಸ್ಲಂನಲ್ಲಿ ಬೆಳೆದ ನಾಯಕಿ ಶಾಲಾ ದಿನಗಳಿಂದಲೂ ಅದೇ ಸ್ಲಂನಲ್ಲಿ ಇದ್ದ ನಾಯಕನನ್ನು ಪ್ರೀತಿಸಿ ಬಳಿಕ ಕಾಲೇಜು ಸೇರಿದ ಬಳಿಕ ಏನೆಲ್ಲಾ ಬದಲಾವಣೆಯಾಗ್ತಾಳೆ ಹಾಗೂ ಇದು ಆಕೆಯ ಜೀವನದಲ್ಲಿ ಏನೆಲ್ಲಾ ಅವಾಂತರ ಸೃಷ್ಟಿಸುತ್ತೆ ಎನ್ನುವುದೇ ಬೇಬಿ ಚಿತ್ರದ ಒನ್‌ಲೈನ್ ಕಥೆ.
ಈ ರೀತಿಯ ಕಥೆಯನ್ನು ಆಧರಿಸಿ ಈಗಾಗಲೇ ತುಂಬಾ ಸಿನಿಮಾಗಳು ಬಂದಿವೆಯಾದರೂ ಅವೆಲ್ಲವನ್ನೂ ಹಿಂದಿಕ್ಕಿ ಬೇಬಿ ಸ್ಪೆಷಲ್ ಎನಿಸುವುದಕ್ಕೆ ಕಾರಣ ಚಿತ್ರದಲ್ಲಿರುವ ಮಾಡರ್ನ್ ಯುಗದ ಸ್ಕ್ರೀನ್‌ಪ್ಲೇ. ಹೌದು, ಈಗಿನ ಐ ಫೋನ್ ಯುಗದಲ್ಲಿ ಹುಡುಗಿಯರ ಚಂಚಲ ಮನಸ್ಸು ಯಾರ ಮಾತಿನಿಂದ ಏನೆಲ್ಲಾ ಸ್ಪೂರ್ತಿಗೊಳ್ಳುತ್ತೆ, ಮೂರ್ಖತನವನ್ನು ಹೇಗೆ ಅಳವಡಿಸಿಕೊಳ್ಳುತ್ತೆ ಹಾಗೂ ಇದರಿಂದ ಏನೆಲ್ಲಾ ಕಷ್ಟಗಳನ್ನು ಅನುಭವಿಸ್ತಾರೆ ಎಂಬುದನ್ನು ನಿರ್ದೇಶಕ ಶ್ರೀ ರಾಜೇಶ್ ನೀಲಮ್ ತುಂಬಾ ಅರ್ಥಗರ್ಭಿತವಾಗಿ ಬರೆದು ನಿರ್ದೇಶಿಸಿದ್ದಾರೆ. ನಾಯಕನಾಗಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಹಾಗೂ ನಾಯಕಿಯಾಗಿ ವೈಷ್ಣವಿ ಚೈತನ್ಯ ಅದ್ಭುತವಾಗಿ ನಟಿಸಿದ್ದಾರೆ.
ಪ್ಲಸ್ ಪಾಯಿಂಟ್ ಹಾಗೂ ಮೈನಸ್ ಪಾಯಿಂಟ್ಸ್
ಬೇಬಿ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಚಿತ್ರದಲ್ಲಿರುವ ಅಪ್‌ಡೇಟೆಡ್ ಕಥೆ. ಕಥೆಯನ್ನು ಸುಲಭವಾಗಿ ಊಹಿಸಬಹುದಾಗಿದ್ದರೂ ಸಹ, ಈ ಘಟನೆಗಳನ್ನು ನಾವು ನಿಜ ಜೀವನದಲ್ಲಿ ನೋಡಿದ್ದೇವೆ ಎಂಬ ಫೀಲ್ ಆ ಸಿನಿ ರಸಿಕರಲ್ಲಿ ಹುಟ್ಟಿಬಿಡುತ್ತದೆ. ಲವ್, ಬ್ರೇಕಪ್, ಚೀಟಿಂಗ್ ಸಹಜ ಎನ್ನುವಂತೆ ಮಾರ್ಪಾಡಾಗುತ್ತಿರುವ ಈಗಿನ ಕಾಲದಲ್ಲಿ ಪ್ರೀತಿಯಲ್ಲಿ ಬಿದ್ದು ಮೋಸ ಹೋದ ಹುಡುಗರಿಗರ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ಅಂತಹದ್ದೇ ಕಥೆಯನ್ನು ಆರಿಸಿಕೊಂಡಿರುವುದು ನಿರ್ದೇಶಕರ ಜಾಣ್ಮೆಯನ್ನು ತೋರಿಸಿದ್ದು, ಇಂತಹ ಕಥೆಯಲ್ಲಿಯೂ ನಾಯಕಿಯನ್ನು ಖಳನಾಯಕಿಯನ್ನಾಗಿ ಮಾಡದೆಯೇ ಆಕೆಯ ಪಾತ್ರವನ್ನು ಹೆಣೆದಿರುವ ರೀತಿ ನಿರ್ದೇಶಕರಿಗೆ ಮೆಚ್ಚುಗೆಯ ಮಹಾಪೂರ ಹರಿದುಬರುವಂತೆ ಮಾಡಿದ್ದಾರೆ.
ಇನ್ನು ಚಿತ್ರದಲ್ಲಿ ಹೆಚ್ಚೇನೂ ಮೈನಸ್ ಪಾಯಿಂಟ್ ಇಲ್ಲ. ಚಿತ್ರ 2 ಗಂಟೆ 51 ನಿಮಿಷವಿರುವುದು ಮೈನಸ್ ಎನಿಸಿದರೂ ಚಿತ್ರದ ರನ್‌ಟೈಮ್ ಅನ್ನು ಕೊಂಚ ತಗ್ಗಿಸಿದ್ದರೂ ನಾಯಕಿಯ ಪಾತ್ರದ ಮೇಲೆ ಪ್ರೇಕ್ಷಕರಿಗೆ ಬೇರೆಯದ್ದೆ ಅಭಿಪ್ರಾಯ ಮೂಡುತ್ತಿದ್ದದ್ದು ಸುಳ್ಳಲ್ಲ. ಆದರೆ ಇದೇ ರೀತಿಯ ಲವ್‌ಸ್ಟೋರಿ ಪಜೀತಿ ಕಥೆಯನ್ನು ಆಧರಿಸಿ ಬಂದಿದ್ದ ಲವ್ ಟುಡೇ ಹಾಗೂ ಆರ್‌ಎಕ್ಸ್ 100 ಚಿತ್ರಗಳಲ್ಲಿ ಇದ್ದಂತಹ ಅದ್ಭುತ ಸಂಗೀತ ಹಾಗೂ ಟ್ರೆಂಡಿ ಹಾಡುಗಳು ಈ ಚಿತ್ರದಲ್ಲಿ ಇಲ್ಲದಿರುವುದು ಮೈನಸ್ ಎಂದೇ ಹೇಳಬಹುದು.
ಒಟ್ಟಿನಲ್ಲಿ ಮಾಡರ್ನ್ ಯುಗದ ಲವ್ ಸ್ಟೋರಿ ಕಥೆಯನ್ನು ಹೊಂದಿರುವ ಈ ಚಿತ್ರ ಖಂಡಿತವಾಗಿ ಯುವ ಸಿನಿ ರಸಿಕರಿಗೆ ಇಷ್ಟವಾಗಲಿದ್ದು, ಒಂದೊಮ್ಮೆ ಥಿಯೇಟರ್‌ಗೆ ಹೋಗಿ ನೋಡಬಹುದಾಗಿದೆ.


Click it and Unblock the Notifications











