»   » ಆರು ಹಾಡುಗಳು, ಮೂರು ಹೊಡೆದಾಟಗಳು ಹಾಗೂ ಹತ್ತಾರು ಡಬಲ್‌ ಮೀನಿಂಗ್‌ ಜೋಕುಗಳ ಮೂಲಕ ನಾರಾಯಣ್‌ ಸಿನಿಮಾದ ಕತೆ ಹೇಳುತ್ತಾರೆ

ಆರು ಹಾಡುಗಳು, ಮೂರು ಹೊಡೆದಾಟಗಳು ಹಾಗೂ ಹತ್ತಾರು ಡಬಲ್‌ ಮೀನಿಂಗ್‌ ಜೋಕುಗಳ ಮೂಲಕ ನಾರಾಯಣ್‌ ಸಿನಿಮಾದ ಕತೆ ಹೇಳುತ್ತಾರೆ

Subscribe to Filmibeat Kannada

ಚಿತ್ರ : ಅಂಜಲಿ ಗೀತಾಂಜಲಿನಿರ್ದೇಶನ : ಎಸ್‌.ನಾರಾಯಣ್‌, ಸಂಗೀತ : ಪ್ರಶಾಂತ್‌ ರಾಜ್‌ತಾರಾಗಣ : ಎಸ್‌.ನಾರಾಯಣ್‌, ಪ್ರೇಮಾ, ಅನು ಪ್ರಭಾಕರ್‌
* ದೀಪಿಕಾ

ನಿರ್ದೇಶಕ ನಾಯಕನಾಗಬಾರದು ಅನ್ನುವ ನಿಯಮವೇನಿಲ್ಲ . ಆದರೆ ನಿರ್ದೇಶನ ಪ್ರತಿಭೆಯಾಂದನ್ನೆ ನೆಚ್ಚಿಕೊಂಡು ನಿರ್ದೇಶನಕ್ಕಿಳಿಯುವುದು ಪ್ರೇಕ್ಷಕರ ಪಾಲಿಗೆ ಅನಾಹುತಕಾರಿ. ಯಾಕೆಂದರೆ ಒಳ್ಳೆಯ ನಿರ್ದೇಶಕ, ಒಳ್ಳೆಯ ನಟನಾಗಬೇಕಿಲ್ಲ . ಒಳ್ಳೆಯ ಕೋಚ್‌, ಒಳ್ಳೆಯ ಕ್ರಿಕೆಟ್‌ ಆಟಗಾರ ಆಗಿರದೇ ಇರುವ ಹಾಗೆ !

ಅಂಜಲಿ- ಗೀತಾಂಜಲಿ ಎಸ್‌. ನಾರಾಯಣ್‌ ಅವರೇ ಪಂಚಪಾತ್ರಗಳಲ್ಲಿ ನಟಿಸಿರುವ ಚಿತ್ರ. ಕತೆ- ಚಿತ್ರಕತೆ- ಸಂಭಾಷಣೆ- ಗೀತರಚನೆ- ನಿರ್ದೇಶನದ ಪಂಚಹೊಣೆಗಳ ಜೊತೆಗೆ ನಟಿಸುವ ಧೈರ್ಯವನ್ನೂ ಅವರು ಮಾಡಿದ್ದಾರೆ. ಹೀಗಾಗಿ ಅವರ ಪ್ರತಿಭೆ ಈ ಆರೂ ವಿಭಾಗಗಳಿಗೆ ಹಂಚಿಹೋಗಿದೆ. ಆರು ಕಾಸನ್ನು ಅರವತ್ತು ಮಂದಿಗೆ ಹಂಚಿದಂತಾಗಿದೆ.

ಪಾರ್ವತಿ, ಅಂಬಿಕಾ. ದುರ್ಗಾ ಮುಂತಾದ ಸೀರಿಯಲ್‌ ಖ್ಯಾತಿಯ ನಾರಾಯಣ್‌ ಹೊಸೆದಿರುವ ಕತೆ ಇಂತಿದೆ. ವೈಲ್ಡ್‌ಲೈಫ್‌ ಛಾಯಾಗ್ರಾಹಕನೊಬ್ಬ ದಕ್ಷಿಣ ಕನ್ನಡದ ಹಳ್ಳಿಯಾಂದಕ್ಕೆ ಹೋಗುತ್ತಾನೆ. ಅವನಿಗೆ ನೆಗೆಟಿವ್‌ ಕರಿಬಸಯ್ಯ ಜೋಡಿ. ಅಲ್ಲಿ ಆತ ಒಂದು ಮನೆಯಲ್ಲಿ ಉಳಿದುಕೊಳ್ಳುತ್ತಾನೆ. ಆ ಮನೆಯಾತನಿಗೆ ಮೂವರು ಹೆಣ್ಣು ಮಕ್ಕಳು. ಆ ಮೂವರೂ ನಮ್ಮ ನಾಯಕನನ್ನು ಪ್ರೀತಿಸುತ್ತಾರೆ. ನಾಯಕ ಮಾತ್ರ ಹಿರಿಯ ಮಗಳಿಗೆ ಮನ ಸೋಲುತ್ತಾನೆ. ಆಕೆಯನ್ನೇ ಮದುವೆಯಾಗಲು ಹಂಬಲಿಸುತ್ತಾನೆ.

ಆದರೆ ಆಕೆಗೆ ಆಗಲೇ ಒಂದು ಮದುವೆಯಾಗಿದೆ. ಗಂಡ ತೀರಿಕೊಂಡಿದ್ದಾನೆ. ಸಮಾಜದ ವಿರುದ್ಧ ಹೋರಾಡಿ, ಆಕೆಯ ಅಜ್ಜನ ಮನಸ್ಸು ಒಲಿಸಿ, ಆಕೆಯನ್ನು ಮದುವೆಯಾಗಿ ಬರುವುದೇ ಚಿತ್ರದ ಕತೆ.

ಈ ಕತೆಯನ್ನು ಆರು ಹಾಡುಗಳ ಮೂಲಕ, ಮೂರು ಹೊಡೆದಾಟಗಳ ಮೂಲಕ, ಹತ್ತಾರು ಡಬಲ್‌ ಮೀನಿಂಗ್‌ ಜೋಕುಗಳ ಮೂಲಕ ನಾರಾಯಣ್‌ ಹೇಳುತ್ತಾರೆ. ಅವರ ಪ್ರತಿಭೆಗಿಂತ ಅಧೃಷ್ಟವೇ ಚೆನ್ನಾಗಿದೆ ಎಂದೂ ಅವರ ಚಿತ್ರಜೀವನವನ್ನು ನೋಡುತ್ತಾ ಬಂದವರಿಗೆ ಅನ್ನಿಸಬಹುದು. ಈಗಂತೂ ಅವರ ಹಾಸ್ಯಾಸ್ಪದ ಹಾಸ್ಯಗಳೇ ಮಾರ್ಕೆಟ್‌ನಲ್ಲಿ ಅತ್ಯಂತ ಬೇಡಿಕೆಯ ವಸ್ತು ಎಂದು ಸ್ವತಃ ನಾರಾಯಣ್‌ ನಂಬಿರುವಂತಿದೆ. ಹೀಗಾಗಿ ಅಪಹಾಸ್ಯದ ಪ್ರಸಂಗಗಳು ನಗೆಗೆ ಕಾರಣವಾಗುತ್ತವೆ. ಹಳೆಯ ಚಿತ್ರಗಳಲ್ಲಿ ಬಂದು ಹೋದ ತಮಾಷೆಗಳನ್ನು ನಾರಾಯಣ್‌ ಅನಾಮತ್ತಾಗಿ ಎತ್ತಿಕೊಳ್ಳ್ತುತಾರೆ. ಉದಾಹರಣೆಗೆ ಸಿಗರೇಟು ಎಂದುಕೊಂಡು ಪಟಾಕಿ ಬಾಯಿಗಿಟ್ಟು ಹಚ್ಚಿಕೊಳ್ಳುವುದು.

ಪ್ರಶಾಂತ್‌ರಾಜ್‌ ಸಂಗೀತ ನಿರ್ದೇಶನವಿರುವ ಅಂಜಲಿ ಗೀತಾಂಜಲಿಯಲ್ಲಿ ಮೆಚ್ಚುಗೆಯಾಗುವ ಏಕೈಕ ಸಂಗತಿಯೆಂದರೆ ಮಹೇಂದ್ರನ್‌ ಅವರ ಛಾಯಾಗ್ರಹಣ ಮತ್ತು ಹಾಡುಗಳ ಕೊರಿಯೋಗ್ರಫಿ. ಕೆಲವೊಮ್ಮೆ ನಿಮಗೆ ರವಿಚಂದ್ರನ್‌ ಕೂಡ ನೆನಪಾಗುತ್ತಾರೆ. ಅಷ್ಟು ಸೊಗಸಾದ ನೃತ್ಯ ಸಂಯೋಜನೆ ಚಿತ್ರದಲ್ಲಿದೆ.

ನಾರಾಯಣ್‌ ನಟಿಸಬಾರದು ಎನ್ನುವ ಮಾತಿಗೆ ಸಮರ್ಥನೆ ಬೇಕಿದ್ದವರು ಈ ಚಿತ್ರವನ್ನು ನೋಡಲೇಬೇಕು. ಉಳಿದಂತೆ ಪ್ರೇಮಾ ಪ್ರತಿಭೆ ಕಡಲಿಗೆ ಬಿದ್ದ ಉಪ್ಪಿನಂತೆ ವೇಸ್ಟ್‌ ಆಗಿದೆ. ಅನು ಪ್ರಭಾಕರ್‌ ವರ್ತನೆಯಿಂದ ಬೇಸರ ಹುಟ್ಟಿಸಿದರೆ, ಮೂರನೆಯ ಹುಡುಗಿ ಸಂಭ್ರಮಳಿಗೆ ಅಭಿನಯದ ಗಂಧವಿಲ್ಲ .

ಕರಿಬಸಯ್ಯ ಮತ್ತು ಧೀರೇಂದ್ರಗೋಪಾಲ್‌ ಧಾರಾಳವಾಗಿ ಕೆಟ್ಟ ಜೋಕುಗಳನ್ನು ಹಂಚಿಕೊಳ್ಳುತ್ತಾರೆ. ವಿಷುಯಲೈಸ್‌ ಮಾಡದ ಕಾರಣ ಜೋಕ್‌ಗಳು ಕ್ಯಾಸೆಟ್‌ ಜೋಕ್‌ಗಳಂತೆ ಕೇಳಿಸುತ್ತವೆ. ಒಂದು ಉದಾಹರಣೆ ಬೇಕಿದ್ದರೆ ಕೇಳಿ- ಈ ಕನ್ನಡಕ ಹಾಕಿಕೊಂಡರೆ ಬಟ್ಟೆ ಹಾಕಿಕೊಂಡಿರೋರು ಬಟ್ಟೆ ಇಲ್ದಂಗೆ ಕಾಣಿಸ್ತಾರಾ
ಹೌದು !
ಅದೂ ಕಾಣಿಸ್ತದಾ ?
ಅದು ಅಂದ್ರೆ ...
ಅದು ಅಂದ್ರೆ ಅದು.. .

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada