ಈ ನೆಲದ ಮೇಲೆ ಹುಟ್ಟಿ, ಉಸಿರಾಡಲೂ ಯೋಗ್ಯತೆಯಿಲ್ಲದ ಕ್ರಿಮಿಗಳು ಹೆಣ್ಣೊಬ್ಬಳ ಮೇಲೆ ಎರಗಿ ಆಕೆಯ ದೇಹ, ಮನಸ್ಸನ್ನು ಗಾಯಗೊಳಿಸುತ್ತವೆ. ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತಾದ ಸುದ್ದಿಗಳನ್ನು ನೋಡುತ್ತಲೇ ಕೇಳುತ್ತಲೇ ಇದ್ದೇವೆ. ಸ್ತ್ರೀಯನ್ನು ದೈವೀ ಸ್ವರೂಪದಲ್ಲಿ ಸ್ವೀಕರಿಸಿರುವ ಭಾರತದಂತಹ ರಾಷ್ಟ್ರದಲ್ಲೂ ಸ್ತ್ರೀಯರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತಾಗಿ ಬೆಂಕಿ ಹತ್ತಿ ಕೆಂಡ ಆರುವವರೆಗೂ ವಿರೋಧಿ ಘೋಷಣೆಗಳು, ಧರಣಿಗಳು, ಮೆರವಣಿಗೆಗಳನ್ನು ಮಾಡುತ್ತಲೇ ಇದ್ದೇವೆ.
ಆದರೂ ಮಹಿಳೆ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅ*ತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ರಾಷ್ಟ್ರೀಯ ಅಪರಾಧ ಬ್ಯೂರೋ (NCRB) ಮಾಹಿತಿಯ ಪ್ರಕಾರ, ಭಾರತದಲ್ಲಿ ಪ್ರತಿದಿನ ಸರಾಸರಿ 80-90ಕ್ಕೂ ಹೆಚ್ಚು ಅ*ತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಈ ವಾರ ( ಫೆಬ್ರವರಿ 20 ) ತೆರೆಗೆ ಬಂದ ''ಅಸ್ಸಿ'' ಮೂಲಕ ಈ ಗಂಭೀರವಾದ ವಿಚಾರದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.
Photo Credit : Taapsee Pannu Instagram
ಹೌದು, ತಾಪ್ಸಿ ಪನ್ನು ಮತ್ತು ಅನುಭವ್ ಸಿನ್ಹಾ ಜೋಡಿಯ ಮೂರನೇ ಚಿತ್ರ ''ಅಸ್ಸಿ'' ಈ ವಾರ ತೆರೆಗೆ ಬಂದಿದೆ. ಈ ಹಿಂದೆ ''ಮುಲ್ಕ್'' ಮತ್ತು ''ಥಪ್ಪಡ್'' ಚಿತ್ರವನ್ನು ಮಾಡಿದ್ದ ಇಬ್ಬರು ಈ ಬಾರಿ ಸಮಾಜದ ಕೊಳಕು ವ್ಯವಸ್ಥೆ ಮತ್ತು ಮನಸ್ಥಿತಿಗೆ ಕೈಗನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಹಾಗಿದ್ದರೆ ಹೇಗಿದೆ ಅಸ್ಸಿ..? ಅನುಭವ್ ಸಿನ್ಹಾ ಮತ್ತು ತಾಪ್ಸಿ ಪನ್ನು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರಾ..? ಎಂದು ತಿಳಿಯಲು ಮುಂದೆ ಓದಿ.
ಕಥಾಹಂದರ
ದೆಹಲಿಯ ಶಿಕ್ಷಕಿ ಪರಿಮಾ ( ಕನಿ ಕುಸ್ರುತಿ ) ಅವರ ಅಪಹರಣ ಮತ್ತು ಅತ್ಯಾಚಾರದ ಮೂಲಕ ಕಥೆ ಅನಾವರಣವಾಗುತ್ತೆ. ಮನೆಗೆ ಹಿಂದಿರುವಾಗ ಐವರು ಪುರುಷರು ಪರಿಮಾಳನ್ನು ಅಪಹರಿಸಿ ಪೈಶಾಚಿಕ ಕೃತ್ಯ ಎಸಗುತ್ತಾರೆ. ರೇಲ್ವೆ ಹಳಿಯ ಮೇಲೆ ಎಸೆದು ಹೋಗುತ್ತಾರೆ. ಪರಿಮಾ ಬದುಕುಳಿಯುತ್ತಾಳೆ.
ಈ ಘಟನೆ ಪರಿಮಾ ಪತಿ ವಿನಯ್ (ಮೊಹಮ್ಮದ್ ಜೀಶಾನ್ ಅಯ್ಯೂಬ್) ಮತ್ತು ಮಗ (ಅದ್ವಿಕ್ ಜೈಸ್ವಾಲ್) ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತೆ. ಆದರೂ ನ್ಯಾಯಕ್ಕಾಗಿ ಹೋರಾಡಲು ಪತ್ನಿ ಪರಿಮಾ ಜೊತೆ ವಿನಯ್ ಮುಂದಾಗುತ್ತಾನೆ. ಈ ಹಾದಿಯಲ್ಲಿ ವಕೀಲೆ ರಾವಿ ( ತಾಪ್ಸಿ ಪನ್ನು ) ಜೊತೆಯಾಗುತ್ತಾಳೆ.
ಆದರೆ, ಈ ಪ್ರಯಾಣ ಸುಲಭದ್ದಲ್ಲ. ಯಾಕೆಂದರೆ, ನಮ್ಮ ಸಮಾಜದಲ್ಲಿ ಹಲವರು ಅತ್ಯಾಚಾರಿಗಳ ವಿರುದ್ಧ ಗುಡುಗುವುದಿಲ್ಲ. ಬದಲಿಗೆ ಸಂತ್ರಸ್ತರನ್ನೇ ದೂಷಿಸುತ್ತಾರೆ. ಇನ್ನೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲದಕ್ಕೂ ಸಾಕ್ಷಿ ಬೇಕು. ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಹೇಗೆ ತಾಂಡವವಾಡುತ್ತೆ ಎನ್ನುವುದು ಕೂಡ ಎಲ್ಲರಿಗೆ ಗೊತ್ತಿರುವ ವಿಚಾರವೇ. ಈ ಕೊಳಕು ವ್ಯವಸ್ಥೆಯ ವಿರುದ್ಧ ಪರಿಮಾ ಮತ್ತು ರಾವಿ ಹೇಗೆ ಹೋರಾಡುತ್ತಾರೆ ಎನ್ನುವುದೇ ಚಿತ್ರದ ತಿರುಳು.
Photo Credit : Taapsee Pannu Instagram
ಅಭಿನಯ ಹೇಗಿದೆ..?
''ಮುಲ್ಕ್'' ನಂತರ ಮತ್ತೊಮ್ಮೆ ತಾಪ್ಸಿ ಪನ್ನು ವಕೀಲೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ತಮ್ಮ ಅಭಿನಯ ಸಾಮರ್ಥ್ಯದ ಪ್ರದರ್ಶನವನ್ನು ಕೂಡ ಮಾಡಿದ್ದಾರೆ. ವಾದ-ಪ್ರತಿವಾದದ ಸಮಯದಲ್ಲಿ ತಾಪ್ಸಿ ಅವರ ಅಭಿನಯ ಅದ್ಭುತ. ಪರಿಮಾ ಪಾತ್ರವನ್ನು ಕನಿ ಕುಸ್ರುತಿ ಜೀವಿಸಿದ್ದಾರೆ.
ಮೊಹಮ್ಮದ್ ಜೀಶಾನ್ ಅಯ್ಯೂಬ್ ಅವರ ಪಾತ್ರವನ್ನು ಸೊಗಸಾಗಿ ಬರೆಯಲಾಗಿದ್ದು ಪತ್ನಿಯ ಬೆಂಬಲಕ್ಕೆ ನಿಲ್ಲುವ, ಧೈರ್ಯ ತುಂಬುವ ಪತಿಯ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಮಗನ ಪಾತ್ರ ನಿರ್ವಹಿಸಿರುವ ಬಾಲನಟ ಅದ್ವಿಕ್ ಜೈಸ್ವಾಲ್ ಈ ಚಿತ್ರದ ಅಚ್ಚರಿ. ಸತ್ಯಜಿತ್ ಶರ್ಮಾ ಕೂಡ ಅದ್ಭುತವಾಗಿ ಅಭಿನಯಿಸಿದ್ದಾರೆ. ಹಿರಿಯ ನಟಿ ರೇವತಿ ಜಡ್ಜ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪೊಲೀಸ್ ಪಾತ್ರದಲ್ಲಿ ಜತಿನ್ ಗೋಸ್ವಾಮಿ ಇಷ್ಟವಾಗುತ್ತಾರೆ. ಮನೋಜ್ ಪಾಹ್ವಾ, ಕುಮುದ್ ಮಿಶ್ರಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನಾಸಿರುದ್ದೀನ್ ಶಾ, ಸುಪ್ರೀಯಾ ಪಾಠಕ್, ಸೀಮಾ ಪಹ್ವಾ ಅತಿಥಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಪ್ಲಸ್ ಪಾಯಿಂಟ್ಸ್
ಗೌರವ್ ಸೋಲಂಕಿ ಮತ್ತು ಅನುಭವ್ ಸಿನ್ಹಾ ಈ ಚಿತ್ರದ ಮೂಲಕ ಸಮಾಜದ ವಿಕೃತ ಮನಸ್ಥಿಗೆ ಕೈಗನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ಧಾರೆ. ಕೇವಲ ಪರಿಮಾ ಕಥೆಯನ್ನು ಮಾತ್ರ ಹೇಳದ ಅನುಭವ್ ಸಿನ್ಹಾ 20 ನಿಮಿಷಕ್ಕೊಮ್ಮೆ ಪರದೆಯನ್ನು ರಕ್ತದ ಕಲೆಗಳಿಂದ ತುಂಬಿಸಿದ್ದಾರೆ. ಈ ಮೂಲಕ ಪ್ರತಿ 20 ನಿಮಿಷಕ್ಕೊಂದು ಅತ್ಯಾಚಾರ ಪ್ರಕರಣ ಭಾರತದಲ್ಲಿ ದಾಖಲಾಗುತ್ತೆ ಎಂಬ ಕಹಿ ಸತ್ಯವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿನ ಸಂಭಾಷಣೆಗಳು ಮೊನಚಾಗಿವೆ.ಎವಾನ್ ಮುಲಿಗನ್ ಛಾಯಾಗ್ರಹಣ ಮತ್ತು ರಂಜಿತ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
ಮೈನಸ್ ಪಾಯಿಂಟ್ಸ್
ಅ*ತ್ಯಾಚಾರ.. ಅವಮಾನ.. ಕಾನೂನು ಹೋರಾಟ.. ಭ್ರಷ್ಟಾಚಾರ.. ಕೇವಲ ಮಾಧ್ಯಮ ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲಿ ನಡೆಯುವ ವಿಚಾರಣೆ.. ಚಾರಿತ್ಯ್ರ ಹರಣ.. ಮಕ್ಕಳ ಭವಿಷ್ಯ.. ಸಾಮಾಜಿಕ ಜವಾಬ್ಧಾರಿ.. ಹೀಗೆ ಹಲವು ವಿಚಾರಗಳನ್ನು ಅನುಭವ್ ಸಿನ್ಹಾ 2 ಗಂಟೆ 14 ನಿಮಿಷಗಳ ಅವಧಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಚಿತ್ರಕ್ಕೆ ತುಸು ಹಿನ್ನೆಡೆಯಾಗಿದೆ.
ಇನ್ನು ''ಅಸ್ಸಿ'' ಅ*ತ್ಯಾಚಾರದಂತಹ ಸಾಮಾಜಿಕ ಪಿಡುಗು ಸುತ್ತ ಸುತ್ತುವ ಸಿನಿಮಾ ಆದ ಹಿನ್ನೆಲೆ ಚಿತ್ರವು ತುಂಬಾ ಗಂಭೀರವಾಗಿರುವುದರಿಂದ ಸೂಕ್ಷ್ಮ ಮನಸಿನ ಪ್ರೇಕ್ಷಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮಾನಸಿಕ ಒತ್ತಡಕ್ಕೆ ಈ ಚಿತ್ರ ಕಾರಣವಾದರೂ ಆಗಬಹುದು. ಕೆಲವು ದೃಶ್ಯಗಳು ಮಂದಗತಿ ಅನ್ನಿಸಬಹುದು.
ಕೊನೆ ಮಾತು
ಒಟ್ನಲ್ಲಿ ಕೋರ್ಟ್ ರೂಮ್ ಡ್ರಾಮಾ ಸಿನಿಮಾಗಳನ್ನು ಇಷ್ಟ ಪಡುವರು, ಗಂಭೀರವಾದ ಚಿತ್ರಗಳನ್ನು ನೋಡಲು ಬಯಸುವರು '' ಅಸ್ಸಿ'' ಚಿತ್ರವನ್ನು ನೋಡಬಹುದು. ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರವಲ್ಲದಿದ್ದರೂ, ಸಮಾಜದ ವಾಸ್ತವವನ್ನು ನೋಡಲು ಬಯಸುವವರು ಖಂಡಿತವಾಗಿ ನೋಡಬೇಕಾದ ಚಿತ್ರ ''ಅಸ್ಸಿ''.
Triggering, traumatic, and unflinching. 'Assi' exposes a rotten system through a ticking-clock narrative. Discover why this Taapsee Pannu starrer is Sinha's most uncomfortable film yet.
Story first published: Saturday, February 21, 2026, 15:30 [IST]