»   » ಕಾಪಿ ಮಾಡುವಲ್ಲಿ ತಜ್ಞರೆನಿಸಿದ ರಾಜೇಂದ್ರಬಾಬುಗೆ ಮಹೇಂದರ್‌ ಪ್ರತಿಸ್ಪರ್ಧಿಯಾಗಬಹುದು. ಹಂಸಲೇಖಾಗೆ ಇದು ಹತ್ತರಲ್ಲೊಂದು ಚಿತ್ರ. ಪ್ರೇಕ್ಷಕರಿಗೆ ಬೇರೆ ಆಯ್ಕೆಯೇ ಇಲ್ಲವಾದ್ದರಿಂದ ಅಸುರ ಉತ್ತಮ ಚಿತ್ರವಾಗಬಹುದು

ಕಾಪಿ ಮಾಡುವಲ್ಲಿ ತಜ್ಞರೆನಿಸಿದ ರಾಜೇಂದ್ರಬಾಬುಗೆ ಮಹೇಂದರ್‌ ಪ್ರತಿಸ್ಪರ್ಧಿಯಾಗಬಹುದು. ಹಂಸಲೇಖಾಗೆ ಇದು ಹತ್ತರಲ್ಲೊಂದು ಚಿತ್ರ. ಪ್ರೇಕ್ಷಕರಿಗೆ ಬೇರೆ ಆಯ್ಕೆಯೇ ಇಲ್ಲವಾದ್ದರಿಂದ ಅಸುರ ಉತ್ತಮ ಚಿತ್ರವಾಗಬಹುದು

Subscribe to Filmibeat Kannada

ಚಿತ್ರ : ಅಸುರನಿರ್ದೇಶನ : ಮಹೇಂದರ್‌, ಸಂಗೀತ : ಹಂಸಲೇಖಾತಾರಾಗಣ : ಶಿವರಾಜ್‌ ಕುಮಾರ್‌, ದಾಮಿನಿ, ರಘುವರನ್‌, ಅನಂತ್‌ನಾಗ್‌
*ವಿನೋದಿನಿ

ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಮನುಷ್ಯ ರಾಕ್ಷಸನಾಗುತ್ತಾನೆ. ಪ್ರೀತಿಯ ಒತ್ತಾಯಕ್ಕೆ ಮಣಿದು ಅದೇ ರಾಕ್ಷಸ ಮತ್ತೆ ಮಾನವನಾಗುತ್ತಾನೆ. ಅದೆಷ್ಟನೆಯ ಬಾರಿಗೋ ಏನೋ ಈ ಕತೆ ಮತ್ತೊಮ್ಮೆ ಸಿನಿಮಾ ಆಗಿದೆ. ದುರಂತವೆಂದರೆ ಇಂಥಾ ಕಥಾವಸ್ತುವಿಗೂ ಕನ್ನಡ ಚಿತ್ರರಂಗ ಪರಭಾಷೆಗೆ ಕೈಚಾಚಿರುವುದು.

ಅಸುರ ಚಿತ್ರ ತಮಿಳಿನ ಅಮರ್‌ ಕಲಾಂ ಚಿತ್ರದ ರಿಮೇಕು. ಇದನ್ನು ನಿರ್ಮಿಸಿದವರು ಕಾದಂಬರಿ ಆಧಾರಿತ ಚಿತ್ರಗಳ ನಿರ್ಮಾಣದಲ್ಲಿ ದಾಖಲೆಯನ್ನೇ ಮಾಡಿರುವ ಸಂದೇಶ್‌ ನಾಗರಾಜ್‌. ನಿರ್ದೇಶಕರು ಮಣ್ಣಿನ ವಾಸನೆಯ ಚಿತ್ರಗಳ ನಿರ್ದೇಶನಕ್ಕೆ ಹೆಸರಾಗಿರುವ ಮಹೇಂದರ್‌. ಸ್ವಮೇಕ್‌ನಲ್ಲಿ ಸಿಗುವ ಮಜಾ ರಿಮೇಕ್‌ನಲ್ಲಿ ಸಿಗೋದಿಲ್ಲ , ಆದರೂ ಕಾರ್ಮಿಕರ ಹೊಟ್ಟೆ ಪಾಡನ್ನು ಗಮನದಲ್ಲಿಟ್ಟುಕೊಂಡು ರಿಮೇಕ್‌ ಮಾಡಬೇಕು ಎಂಬ ಹೊಸ ಪಾಲಿಸಿಗೆ ಗಂಟು ಬಿದ್ದಿರುವ ಶಿವರಾಜ್‌ಕುಮಾರ್‌ ಈ ಚಿತ್ರದ ನಾಯಕ ನಟ.

ಇಷ್ಟೆಲ್ಲಾ ವಿಪರ್ಯಾಸಗಳ ನಡುವೆಯೇ ಅಸುರ ಚಿತ್ರ ಖುಷಿ ಕೊಡುತ್ತದೆ. ಅದಕ್ಕೆ ಕಾರಣ ಹಿಂಸೆಯ ಹೊದಿಕೆಯಾಳಗೆ ಸೆಂಟಿಮೆಂಟು ಮತ್ತು ತಮಾಷೆಯನ್ನು ಸುತ್ತಿಟ್ಟಿರುವ ರೀತಿ ಮತ್ತು ಕೇಂದ್ರ ಪಾತ್ರದಲ್ಲಿ ಶಿವರಾಜ್‌ ಅವರ ಮನ ಕಲಕುವ ಅಭಿನಯ. ಈ ಹಿಂದೆ ಓಂ ಮತ್ತು ಸಿಂಹದ ಮರಿ ಚಿತ್ರಗಳಲ್ಲಿ ಇದೇ ರೀತಿಯ ಪಾತ್ರ ಮಾಡಿದ್ದ ಶಿವರಾಜ್‌ ಇಲ್ಲಿ ಒಂದಷ್ಟು ಇಂಪ್ರೂವೈಸ್‌ ಮಾಡಿಕೊಂಡಿದ್ದಾರೆ. ಬಾಡಿ ಲಾಂಗ್ವೇಜ್‌ ಮತ್ತು ಭಾವಾಭಿನಯವನ್ನು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ಶಿವರಾಜ್‌ಕುಮಾರ್‌ ಗೆದ್ದಿರುವುದೇ ಇಂಥಾ ಪಾತ್ರಗಳಲ್ಲಿ . ಈ ಇಮೇಜನ್ನು ದಾಟಿ ಹೋಗಲು ಪ್ರಯತ್ನಿಸಿದಾಗಲೆಲ್ಲಾ ಅವರು ದಯನೀಯವಾಗಿ ಸೋತಿದ್ದಾರೆ. ಅವರ ಅಭಿಮಾನಿಗಳು ಮೆಚ್ಚುವುದೂ ಇಂಥಾ ಪಾತ್ರಗಳನ್ನೇ.

ಈಗ ಚಿತ್ರದ ಕತೆ ನೋಡೋಣ. ವಾಸು ಎಂಬಾತನ ಹಿಂದೆ ಬಾಲ್ಯದ ಕರಾಳ ನೆನಪುಗಳಿವೆ. ಆ ಕಾರಣಕ್ಕೆ ಆತ ಗೂಂಡಾ ಆಗಿದ್ದಾನೆ. ಮನೆ, ಸೈಟು ಖಾಲಿ ಮಾಡಿಸುವ ಕಾಂಟ್ರಾಕ್ಟ್‌ ತೆಗೆದುಕೊಳ್ಳುವ ಆತ ಬಾಡಿಗೆ ಪಾತಕಿಯೂ ಹೌದು. ಥಿಯೇಟರ್‌ ಒಂದರ ಪ್ರೊಜೆಕ್ಷನ್‌ ಕೋಣೆಯೇ ಆತನ ವಾಸಸ್ಥಾನ. ಎಂದಿನಂತೆ ಆಕಸ್ಮಿಕವಾಗಿ ಆತನ ಬದುಕಿನೊಳಗೆ ಪೊಲೀಸ್‌ ಮನೆತನದ ಹುಡುಗಿಯಾಬ್ಬಳು ಪ್ರವೇಶಿಸುತ್ತಾಳೆ. ಆಕೆಯ ಧೈರ್ಯ, ನೇರ ನುಡಿಗೆ ವಾಸು ಮನ ಸೋಲುತ್ತಾನೆ. ಈ ಒಂಟಿ ಸಲಗಕ್ಕೆ ಆಕೆ ಮಾವುತೆಯಾಗುತ್ತಾಳೆ. ಆದರೆ ಪ್ರೀತಿ ಫಲಿಸುವ ಹೊತ್ತಲ್ಲಿ ಭೂಗತ ದೊರೆ, ಪೊಲೀಸ್‌ ಕಮಿಷನರ್‌ ನಡುವಣ ಹಳೇ ಜಗಳ ನವೀಕೃತಗೊಳ್ಳುತ್ತದೆ. ವಾಸು ಭೂಗತ ದೊರೆಗಳ ಕೈಯಲ್ಲಿ ದಾಳವಾಗುತ್ತಾನೆ. ಒಂದು ಕಿಡ್ನಾಪ್‌, ಎರಡು ಫೈಟ್‌ಗಳು ಸಿನಿಮಾದ ಅಂತ್ಯವನ್ನು ಇತ್ಯರ್ಥಗೊಳಿಸುತ್ತವೆ.

ಅಸುರನಾಗಿ ಶಿವರಾಜ್‌ಕುಮಾರ್‌, ನಾಯಕಿಯಾಗಿ ದಾಮಿನಿ- ಇವರೇ ಚಿತ್ರದ ಹೈಲೈಟ್ಸ್‌. ಮಿಕ್ಕಂತೆ ಅನಂತ್‌ನಾಗ್‌, ರಘುವರನ್‌, ದೊಡ್ಡಣ್ಣ, ಮಂಡ್ಯ ರಮೇಶ್‌,ಶರಣ್‌, ಮೊದಲಾದ ತಾರಾಗಣವೇ ಇದೆ. ಅನಂತ್‌ ಮುಂದೆ ರಘುವರನ್‌ ಜೀರೋ ಆಗಿರುವುದು ಚಿತ್ರದ ಸಿಹಿ ದೃಶ್ಯಗಳಲ್ಲೊಂದು. ಗಣಪತಿ ಉತ್ಸವ, ಬ್ರೆತ್‌ಲೆಸ್‌ ಗೀತೆಗಳು ಕಣ್ಣಿಗೆ ಖುಷಿ. ಕನಸಿನ ಗೀತೆಯಾಂದರ ಚಿತ್ರಣ ಹೊಸ ಪ್ರಯೋಗವಾಗಬಹುದು. ಆದೆರ ಮೂಲ ಚಿತ್ರದಲ್ಲೂ ಇದೇ ಇದ್ದರೆ ನಾವು ಜವಾಬ್ದಾರರಲ್ಲ .

ಗ್ರಾಮೀಣ ಚಿತ್ರಗಳ ನಿರೂಪಣೆಯಲ್ಲಿ ಸಿದ್ಧ ಹಸ್ತರೆನಿಸಿದ ಮಹೇಂದರ್‌ ಅವರಿಗೆ ಅಸುರದಂಥ ಚಿತ್ರ ಕೊಂಚ ಪರಕೀಯವೇ. ಆದರೆ ಆ್ಯಕ್ಷನ್‌ ದೃಶ್ಯಗಳ ಚಿತ್ರಣದಲ್ಲಿ ನಿರ್ದೇಶಕರು ಬೇಕಿಲ್ಲವಲ್ಲಾ . ಕಾಪಿ ಮಾಡುವಲ್ಲಿ ತಜ್ಞರೆನಿಸಿದ ರಾಜೇಂದ್ರಬಾಬು ಅವರಿಗೆ ಈಗ ಮಹೇಂದರ್‌ ಪ್ರತಿಸ್ಪರ್ಧಿಯಾಗಬಹುದು. ಹಂಸಲೇಖಾಗೆ ಇದು ಹತ್ತರಲ್ಲೊಂದು ಚಿತ್ರ. ಪ್ರೇಕ್ಷಕರಿಗೆ ಬೇರೆ ಆಯ್ಕೆಯೇ ಇಲ್ಲವಾದ್ದರಿಂದ ಅಸುರ ಉತ್ತಮ ಚಿತ್ರವಾಗಬಹುದು.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada