Ayyana Mane Series Review ; ಭಯ, ನಂಬಿಕೆ, ಸಂಸ್ಕ್ರತಿ, ಹೇಗಿದೆ ಕನ್ನಡದ ಮೊದಲ ಮಿನಿ ವೆಬ್ ಸೀರೀಸ್ ಅಯ್ಯನ ಮನೆ ?
ಕಳೆದ ಹಲವಾರು ವರ್ಷಗಳಿಂದ ಜೀ ಕನ್ನಡ ವಾಹಿನಿ ಸದಾ ತನ್ನ ಕಾರ್ಯಕ್ರಮ ಕಟ್ಟಿಕೊಡುವಲ್ಲಿ ಹೊಸತನವನ್ನು ಮೈಗೂಡಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಹೆಚ್ಚೆಚ್ಚು ಹತ್ತಿರವಾಗುತ್ತಿದೆ. ಕೇವಲ ಜೀ ಕನ್ನಡ ಮಾತ್ರವಲ್ಲ ಜೀ 5 ಕೂಡ ಮನರಂಜನಾ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡುತ್ತಲೇ ಬಂದಿದೆ. ಬೇರೆ ಓಟಿಟಿ ವೇದಿಕೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಲೇ ಬಂದಿದೆ.
ಇದೀಗ ಇನ್ನೊಂದು ಮಹತ್ತರ ಹೆಜ್ಜೆಯನ್ನಿಟ್ಟಿರುವ ಜೀ 5 ಕನ್ನಡ ಚಿತ್ರಪ್ರೇಮಿಗಳಿಗಾಗಿ ಮಿನಿ ವೆಬ್ ಸೀರೀಸ್ ಪರಿಚಯಿಸಿದೆ. ಜೀ 5ದಿಂದ ಬಂದ ಮೊದಲ ಈ ವೆಬ್ ಸರಣಿಯ ಹೆಸರು ಅಯ್ಯನ ಮನೆ. ಹಾಗಿದ್ದರೆ ಅಯ್ಯನ ಮನೆ ಹೇಗಿದೆ ? ಎಂದು ತಿಳಿಯಲು ಮುಂದೆ ಓದಿ

Star Cast : ಖುಷಿ ರವಿ, ಮಾನಸಿ ಸುಧೀರ್, ಹಿತಾ ಚಂದ್ರಶೇಖರ್, ಖುಷಿ ಚಂದ್ರಶೇಖರ್, ಶೋಭರಾಜ್ ಪಾವೂರ್, ಮುಂತಾದವರು
Director : ರಮೇಶ್ ಇಂದಿರಾ
ಎಲ್ಲಿ ನೋಡಬಹುದು : ಜೀ 5
ಅಯ್ಯನ ಮನೆ ಕಥೆ
90ರ ದಶಕದಲ್ಲಿ ನಡೆಯುವ ಕಥೆ ಇದು. ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ನಡೆಯುವ ಈ ಕಥೆ ದುಷ್ಯಂತ { ಅಕ್ಷಯ್ ನಾಯಕ } ಮತ್ತು ಜಾಜಿ { ಖುಷಿ ರವಿ } ಮದುವೆಯೊಂದಿಗೆ ತೆರೆದುಕೊಳ್ಳುತ್ತೆ. ಒಬ್ಬರ ನಂತರ ಒಬ್ಬರನ್ನು ಬಲಿ ಪಡೆಯುವ ಅಯ್ಯನ ಮನೆಗೆ ಸೊಸೆಯಾಗಿ ಜಾಜಿ ಹೋಗುತ್ತಾಳೆ. ಜಾಜಿ ಮನೆಗೆ ಬಲಗಾಲಿಟ್ಟ ತಕ್ಷಣವೇ ಒಂದು ಘಟನೆ ನಡೆಯುತ್ತೆ.
ಅದು ಜಾಜಿಯ ಕಾಲ್ಗುಣದಿಂದ ನಡೆದಿದ್ದಾ ಅಥವಾ ಕಾಕತಾಳಿಯನಾ ? ಎನ್ನುವ ಪ್ರಶ್ನೆಯ ನಡುವೆ ಸರಣಿ ಸಾವುಗಳ ನಿಗೂಢತೆ ಜಾಜಿಯ ಆತಂಕವನ್ನು ಹೆಚ್ಚಿಸುತ್ತೆ. ಪೂಜಾರಿ ಹೇಳಿದ ಮಾತು ಜಾಜಿಯ ನೆಮ್ಮದಿಯನ್ನೇ ಕಿತ್ತುಕೊಳ್ಳುತ್ತೆ. ಪೂಜಾರಿ ಹೇಳಿದ ಆ ಮಾತೇನು..? ಮನೆಯಲ್ಲಿ ನಡೆಯುವ ಸರಣಿ ಸಾವುಗಳಿಗೆ ಕಾರಣವೇನು ? ಜಾಜಿಯ ಅತ್ತೆ ಜಾಜಿಯ ಅತ್ತೆ ನಾಗಲಂಬಿಕೆ { ಮಾನಸಿ ಸುಧೀರ್ } ಯಾವುದಾದರೂ ರಹಸ್ಯವನ್ನು ಮುಚ್ಚಿಡುತ್ತಿದ್ದಾರಾ ? ದುಷ್ಯಂತನ ಸಹೋದರರ ಉದ್ದೇಶವೇನು ? ಈ ಪ್ರಶ್ನೆಗಳಿಗೆ ಉತ್ತರವನ್ನು ಈ ಸರಣಿಯನ್ನು ನೋಡಿಯೇ ನೀವು ಪಡೆಯಬೇಕು.
ಅಯ್ಯನ ಮನೆಯಲ್ಲಿ ಕೊಂಡಯ್ಯ ದೈವ
ತುಳುನಾಡಿನ ಜನರ ನಂಬುಗೆಯ ಪಂಜುರ್ಲಿ ದೈವ ಮತ್ತು ಗುಳಿಗ ದೈವದ ಕಾರ್ಣಿಕವನ್ನು ಬಿಂಬಿಸುವ ಕಾಂತಾರ ಚಿತ್ರವನ್ನು ರಿಷಬ್ ಶೆಟ್ಟಿ ಮಾಡಿ ಗೆದ್ದ ನಂತರ ಅನೇಕರು ದೈವ ಮತ್ತು ಸ್ಥಳಿಯ ಸಂಸ್ಕ್ರತಿಯನ್ನು ಬಿಂಬಿಸುವ ಕಥೆಗಳನ್ನೊಂದಿರುವ ಚಿತ್ರಗಳನ್ನು ಮಾಡುತ್ತಿದ್ದಾರೆ. ಅಯ್ಯನ ಮನೆ ಚಿತ್ರ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಕೂಡ ಕೊಂಡಯ್ಯ ದೈವದ ನೆರಳಿದೆ. ಈ ದೈವ ಶಿಕ್ಷೆಯನ್ನು ನೀಡುತ್ತಾ ಅಥವಾ ರಕ್ಷಣೆಯನ್ನು ಮಾಡುತ್ತಾ ಎನ್ನುವುದಕ್ಕೆ ಉತ್ತರ ಕೊನೆಯಲ್ಲಿಯೇ ಸಿಗುತ್ತೆ.
ಪರ್ಫಾಮೆನ್ಸ್ ಹೇಗಿದೆ ?
ದಿಯಾ ಚಿತ್ರದ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ , ಕನ್ನಡಿಗರ ಹೃದಯ ಗೆದ್ದ ಖುಷಿ ರವಿ ಇಡೀ ಚಿತ್ರದ ಜೀವಾಳ. ತಮ್ಮ ಅಭಿನಯದಿಂದ ಖುಷಿ ರವಿ ಈ ಮಿನಿ ವೆಬ್ ಸೀರೀಸ್‌ನಲ್ಲಿ ಗಮನ ಸೆಳೆಯುತ್ತಾರೆ. ಮಾನಸಿ ಸುಧೀರ್ ಕೂಡ ಮತ್ತೊಮ್ಮೆ ತಮ್ಮ ಅಭಿನಯದಿಂದ ಮೋಡಿ ಮಾಡುತ್ತಾರೆ. ಮಾನಸಿ ಸುಧೀರ್ ಅವರ ನಾಗಲಂಬಿಕೆ ಪಾತ್ರಕ್ಕೆ ಇನ್ನೂ ಸ್ಕೋಪ್ ನೀಡಬಹುದಿತ್ತು.
ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ಒಂದು ದೃಶ್ಯದಲ್ಲಿ ಬಂದು ಹೋಗುತ್ತಾರೆ. ಶೋಭರಾಜ್ ಪಾವೂರ್ ಅಭಿನಯ ಲವಲವಿಕೆಯಿಂದ ಕೂಡಿದೆ. ಸಿಹಿ ಕಹಿ ಚಂದ್ರು ಅವರ ಮಕ್ಕಳಾದ ಹಿತಾ ಚಂದ್ರಶೇಖರ್ ಮತ್ತು ಖುಷಿ ಚಂದ್ರಶೇಖರ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅನಿರುದ್ದ್ ಆಚಾರ್ಯ, ಆರ್.ಜೆ ಅನೂಪ್, ಅರ್ಚನಾ ಕೊಟ್ಟಿಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.
ನಿರ್ದೇಶನ ಹೇಗಿದೆ ?
ರಮೇಶ್ ಇಂದಿರಾ ಕಿರುತೆರೆಯಲ್ಲಿ ಹೆಸರನ್ನು ಗಳಿಸಿದವರು. ಹೀಗಾಗಿ 18 ರಿಂದ 20 ನಿಮಿಷಗಳ ಅವಧಿಯ ಆರು ಎಪಿಸೋಡ್‌ಗಳಲ್ಲಿ ಅಲ್ಲಲ್ಲಿ ಇವರ ಕಿರುತೆರೆಯ ಚಾಯೆ ಕಾಣಿಸುತ್ತೆ. ಇನ್ನು ವೆಬ್ ಸರಣಿಗಳಲ್ಲಿ ಪ್ರತಿಯೊಂದು ಎಪಿಸೋಡ್‌ನ ಅಂತ್ಯದಲ್ಲಿ ಕುತೂಹಲ ಇರಬೇಕು. ಮುಂದೇನಾಗುತ್ತೆ ಎಂಬ ಜಿಜ್ಞಾಸೆ ಕಾಡಬೇಕು. ಈ ಪ್ರಯತ್ನದಲ್ಲಿ ಭಾಗಶಃ ರಮೇಶ್ ಇಂದಿರಾ ಯಶಸ್ವಿಯಾಗಿದ್ದಾರೆ.
ಸಂಗೀತ ಮತ್ತು ಕ್ಯಾಮರಾ
ಖ್ಯಾತ ಸಂಗೀತ ನಿರ್ದೇಶಕ ಎಲ್ ವೈದ್ಯನಾಥನ್ ಅವರ ಮಗ ಎಲ್ ವಿ ಮುತ್ತು ಮತ್ತು ಗಣೇಶ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇವರ ಹಿನ್ನೆಲೆ ಸಂಗೀತ ಚಿತ್ರದ ತೂಕವನ್ನು ಹೆಚ್ಚಿಸಿದೆ. ಕ್ಯಾಮರಾ ಮ್ಯಾನ್ ರಾಹುಲ್ ರಾಯ್ ಅವರ ಕೆಲಸ ಕೂಡ ಗಮನ ಸೆಳೆಯುತ್ತೆ.
ಮೈನಸ್ ಪಾಯಿಂಟ್
ಚಿತ್ರದ ಕಥೆಯಲ್ಲಿ ಹಲವು ಉಪಕಥೆಗಳಿವೆ. ಉದಾಹರಣೆಗೆ ದೈವದ ಕೋಪಕ್ಕೆ ಜನ ಭಯಪಡುವ ದೃಶ್ಯ ಇದೆ, ಸೂಪರ್ ನ್ಯಾಚುರಲ್ ಅಂಶಗಳಿವೆ. ಇನ್ನು ಸೊಸೆಯಾಗಿ { ಹಿತಾ ಚಂದ್ರಶೇಖರ್ } ಮನೆಗೆ ಬಂದಾಗ ಸಂಸ್ಕ್ರತಿ-ಸಂಪ್ರದಾಯದ ಘರ್ಷಣೆ ಇದೆ. ಆದರೆ ಇವ್ಯಾವು ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ. ದೈವದ ಸನ್ನಿವೇಶಗಳನ್ನು ಇನ್ನು ಪರಿಣಾಮಕಾರಿಯಾಗಿ ಚಿತ್ರೀಸುವ ಅವಕಾಶ ಇತ್ತು. ಆದರೆ ರಮೇಶ್ ಇಂದಿರಾ ಆ ಕಡೆ ಹೆಚ್ಚಿನ ಗಮನ ವಹಿಸಿದಂತೆ ಇಲ್ಲ.
ಕೊನೆ ಮಾತು
ಅಂದ್ಹಾಗೇ ಈ ಚೋಟಾ ವೆಬ್ ಸರಣಿಯಲ್ಲಿ ಹೆಸರುಗಳು ಗಮನ ಸೆಳೆಯುತ್ತವೆ. ಜಾಜಿ, ಪುಷ್ಪವತಿ, ವನಮಾಲ, ಪದ್ಮಲತಾ, ಚಾರು ಲತಾ, ಬಿಂದು ಮಾಲಿನಿ ಹೀಗೆ ತುಂಬಾ ಸುಂದರವಾದ ಹೆಸರುಗಳನ್ನು ರಮೇಶ್ ಇಂದಿರಾ ತಮ್ಮ ಪಾತ್ರಗಳಿಗೆ ಇಟ್ಟಿದ್ದಾರೆ.
ಇನ್ನುಳಿದಂತೆ ಕನ್ನಡದಲ್ಲಿ ವೆಬ್ ಸರಣಿಗಳ ಸಂಪ್ರದಾಯ ಇಲ್ಲ. ಅಲ್ಲೊಂದು ಇಲ್ಲೊಂದು ಪ್ರಯತ್ನಕ್ಕೆ ಕೆಲವರು ಮುಂದಾದರು ಕೂಡ ಸರಿಯಾದ ವೇದಿಕೆ ಸಿಗಬೇಕಾದವರಿಗೆ ಸಿಗಲಿಲ್ಲ. ಸಿಕ್ಕರೂ ಕೂಡ ಕೆಲವರು ಅದನ್ನು ಬಳಸಿಕೊಳ್ಳಲಿಲ್ಲ. ಕೆಜಿಎಫ್ ಚಿತ್ರವನ್ನು ನಿರ್ಮಾಣ ಮಾಡಿದ ಕನ್ನಡದ ಹೆಮ್ಮೆಯ ಸಂಸ್ಥೆ ಹೊಂಬಾಳೆ ನೆಟ್‌ಪ್ಲಿಕ್ಸ್ ಜೊತೆ ವೆಬ್ ಸರಣಿಯ ಕುರಿತು ಚರ್ಚೆ ಮಾಡುತ್ತಿದೆ ಎನ್ನುವ ಮಾತಿದೆ.
ಹೀಗಿರುವಾಗ ರಮೇಶ್ ಇಂದಿರಾ ಮತ್ತು ಕನ್ನಡದ ಪ್ರಖ್ಯಾತ ನಿರ್ಮಾಪಕಿ, ಕಿರುತೆರೆಯಲ್ಲಿ ಕನ್ನಡದ ಏಕ್ತಾ ಕಪೂರ್ ಎಂದೇ ಕರೆಸಿಕೊಳ್ಳುವ ಶ್ರುತಿ ನಾಯ್ಡು ''ಅಯ್ಯನ ಮನೆ'' ಮೂಲಕ ಕನ್ನಡದಲ್ಲಿ ವೆಬ್ ಸರಣಿಯ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಕನ್ನಡದಲ್ಲಿ ಮಿನಿ ವೆಬ್ ಸೀರೀಸ್‌ನ ನಿರ್ಮಾಣ ಮಾಡಿದ್ದಾರೆ. ಈ ಪ್ರಯತ್ನಕ್ಕೆ ರಮೇಶ್ ಇಂದಿರಾ ಮತ್ತು ಶ್ರುತಿ ನಾಯ್ಡು ಇಬ್ಬರೂ ನಿಜಕ್ಕೂ ಅಭಿನಂದನಾರ್ಹರು. ಮುಂಬರುವ ದಿನಗಳಲ್ಲಿ ರಮೇಶ್ ಇಂದಿರಾ ಮತ್ತು ಶ್ರುತಿ ನಾಯ್ಡು ಅವರಿಂದ ಪ್ರಭಾವಿತರಾಗಿ ಇನ್ನು ಅನೇಕರು ಈ ತರಹದ ಪ್ರಯತ್ನಗಳನ್ನು ಕನ್ನಡದಲ್ಲಿ ಮಾಡಿದರು ಮಾಡಬಹುದು.
ಒಟ್ನಲ್ಲಿ ಕನ್ನಡದ ವೆಬ್ ಸರಣಿಯ ಪ್ರಪಂಚದಲ್ಲಿ ಹೊಸ ಅಧ್ಯಾಯ ಶುರು ಮಾಡಿರುವ ಅಯ್ಯನ ಮನೆ ಭಯ, ನಂಬಿಕೆಯ ಕಥೆಯನ್ನೊಂದಿದೆ. ರೋಚಕತೆಯಿಂದ ಕೂಡಿದೆ. ದೀರ್ಘವಾದ ವೆಬ್ ಸರಣಿಗಳನ್ನು ನೋಡಲು ಇಚ್ಚಿಸದವರು, ನೋಡಿ ಬೇಸತ್ತವರು ಕನ್ನಡದ ಈ ಮಿನಿ ವೆಬ್ ಸೀರೀಸ್‌ನ ಮನೆ ಮಂದಿಯ ಜೊತೆ ಕುಳಿತು ಒಮ್ಮೆ ಮುಲಾಜಿಲ್ಲದೇ ನೋಡಬಹುದು. ಪ್ರತಿ ಎಪಿಸೋಡ್‌ನ ಅವಧಿ 20 ನಿಮಿಷಕ್ಕಿಂತ ಕಡಿಮೆ ಇದ್ದು ಒಟ್ಟಾರೆ ಆರು ಎಪಿಸೋಡ್‌ಗಳ ಅವಧಿ 111 ನಿಮಿಷ ಇದೆ. ಅಯ್ಯನ ಮನೆ ಜೀ 5ನಲ್ಲಿ ನೋಡಲು ಲಭ್ಯ ಇದೆ.


Click it and Unblock the Notifications











