Baahubali: The Epic Review: ಸಪೂರವಾಗಿ ಬಂದ 'ಬಾಹುಬಲಿ' ಚಿತ್ರದಲ್ಲಿ ಏನುಂಟು? ಏನಿಲ್ಲ?
ಚಿತ್ರರಂಗದಲ್ಲಿ ಭಿನ್ನ ವಿಭಿನ್ನ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಹೇಳಿ ಕೇಳಿ ಇದು ಕ್ರಿಯೇಟಿವ್ ಪ್ರಪಂಚ. ದಶಕದ ಹಿಂದೆ ಕಥೆ ದೊಡ್ಡದಾಯಿತು ಎಂದು 'ಬಾಹುಬಲಿ' ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತಂದಿದ್ದ ರಾಜಮೌಳಿ ಈಗ ಉಲ್ಟಾ ಮಾಡಿದ್ದಾರೆ. ಎರಡೂ ಸಿನಿಮಾಗಳನ್ನು ಒಟ್ಟಿಗೆ ಎಡಿಟ್ ಮಾಡಿ ಹೊಸ ಅನುಭವ ಕೊಟ್ಟಿದ್ದಾರೆ.
'ಬಾಹುಬಲಿ: ದಿ ಎಪಿಕ್' ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಿದೆ. ಸದ್ಯ ಸೂಪರ್ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. ಎರಡು ಭಾಗಗಳಾಗಿ ಬಂದಿರುವ 'ಬಾಹುಬಲಿ' ಚಿತ್ರವನ್ನು ಒಂದಾಗಿ ಸೇರಿಸಿ ಮತ್ತೆ ಬಿಡುಗಡೆ ಮಾಡಿದ್ದಾರೆ. 5 ಗಂಟೆ 27 ನಿಮಿಷದ ಒಟ್ಟು ಫುಟೇಜ್ ಅನ್ನು 3 ಗಂಟೆ 43 ನಿಮಿಷಕ್ಕೆ ಕತ್ತರಿಸಿದ್ದಾರೆ. ಒಂದಷ್ಟು ಸನ್ನಿವೇಶಗಳನ್ನು, ಹಾಡುಗಳನ್ನು ತೆಗೆದುಬಿಟ್ಟಿದ್ದಾರೆ. ಮೊದಲಿಗೆ ರಾಜಮೌಳಿ ಹೇಳಬೇಕು ಎಂದುಕೊಂಡಿದ್ದ ಕಥೆಯನ್ನು ಮಾತ್ರ ಈಗ ತೆರೆಮೇಲೆ ನೋಡುವಂತಾಗಿದೆ.

'ಬಾಹುಬಲಿ: ದಿ ಬಿಗಿನಿಂಗ್' ಚಿತ್ರವನ್ನು ಫಸ್ಟ್ ಹಾಫ್ ಆಗಿ 'ಬಾಹುಬಲಿ: ದಿ ಕನ್‌ಕ್ಲೂಷನ್' ಚಿತ್ರವನ್ನು ಸೆಕೆಂಡ್ ಹಾಫ್ ಆಗಿ ನೋಡಬಹುದು. ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದ? ಎನ್ನುನ ಪ್ರಶ್ನೆಯೊಂದಿಗೆ 'ಬಾಹುಬಲಿ' ಪಾರ್ಟ್ 1 ಮುಗಿದ್ದಿತ್ತು. ಆದರೆ ಈಗ ಅದು ಇಂಟರ್‌ವಲ್ ಟ್ವಿಸ್ಟ್ ಆಗಿ ಬದಲಾಗಿದೆ. ರಾಜಮೌಳಿ ಮೊದಲೇ ಹೇಳಿದಂತೆ ಶಿವುಡು(ಪ್ರಭಾಸ್) ಹಾಗು ಆವಂತಿಕಾ(ತಮನ್ನಾ) ಲವ್ ಸ್ಟೋರಿ ಎಪಿಸೋಡ್ ಸಂಪೂರ್ಣವಾಗಿ ತೆಗೆದು ಹಾಕಿದ್ದಾರೆ.
ಸಿನಿಮಾ ಕಥೆ
ದಶಕದ ಹಿಂದೆಯೇ ಪ್ರೇಕ್ಷಕರು ಬಾಹುಬಲಿ ಪ್ರಪಂಚದಲ್ಲಿ ವಿಹರಿಸಿ ಬಂದಿದ್ದಾರೆ. ಹಾಗಾಗಿ ಹೊಸದಾಗಿ ಚಿತ್ರದ ಕಥೆಯನ್ನು ಹೇಳುವುದಕ್ಕೆ ಏನು ಇಲ್ಲ. ಚಿಕ್ಕದಾಗಿ ಹೇಳಬೇಕು ಅಂದ್ರೆ ಬುಡಕಟ್ಟು ಜನರ ನಡುವೆ ಬೆಳೆದ ಹುಡುಗನೊಬ್ಬ(ಶಿವುಡು) ತನ್ನ ರಾಜಮನೆತನದ ಪರಂಪರೆಯನ್ನು ಮಾಹಿಷ್ಮತಿ ರಾಜ್ಯದಲ್ಲಿ ಕಂಡುಕೊಳ್ಳುತ್ತಾನೆ. ತನ್ನ ತಂದೆ(ಅಮರೇಂದ್ರ ಬಾಹುಬಲಿ)ಯನ್ನು ಮೋಸದಿಂದ ಕೊಂದು ರಾಜನಾಗಿ ಮೆರೆಯುತ್ತಿರುವ ಚಿಕ್ಕಪ್ಪ(ಬಲ್ಲಾಳದೇವ)ನನ್ನು ಕೊಂದು ಸೇಡು ತೀರಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದ ತನ್ನ ತಾಯಿ(ದೇವಸೇನಾ)ಯನ್ನು ರಕ್ಷಿಸಿ ಅಂತಿಮವಾಗಿ ತನ್ನ ನ್ಯಾಯಯುತ ಸಿಂಹಾಸನವನ್ನು ಮರಳಿ ಪಡೆಯುವ ಕಥೆ ಚಿತ್ರದಲ್ಲಿದೆ.

ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಇಂತಹ ಕಥೆಗಳು ಬಂದಿದ್ದರೂ ರಾಜಮೌಳಿ ಕಟ್ಟಿಕೊಟ್ಟ 'ಬಾಹುಬಲಿ' ಸರಣಿ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಿತ್ತು. ಮಾಹಿಷ್ಮತಿ ಸಾಮ್ರಾಜ್ಯ, ಕಾಲಕೇಯನ ವಿರುದ್ಧದ ಯುದ್ಧ ಅಂತಿಮವಾಗಿ ಶಿವುಡು, ಬಲ್ಲಾಳದೇವ ನಡುವಿನ ಕದನ ಅದ್ಭುತ ಎನ್ನುವಂತೆ ಕಟ್ಟಿಕೊಟ್ಟಿದ್ದರು. ದೊಡ್ಡ ಪರದೆಯಲ್ಲಿ ಬಾಹುಬಲಿ ಪ್ರಪಂಚವೇ ನೋಡುಗರಿಗೆ ಹೊಸ ಅನುಭವ ನೀಡಿತ್ತು. ಅದೇ ಕಾರಣಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು.
ಸದ್ಯ 'ಬಾಹುಬಲಿ: ದಿ ಎಪಿಕ್' ಚಿತ್ರದಲ್ಲಿ ಬೇಡದ ದೃಶ್ಯಗಳನ್ನು ಹಿಂದು ಮುಂದು ನೋಡದೇ ರಾಜಮೌಳಿ ಕತ್ತರಿಸಿ ಬಿಸಾಕಿದ್ದಾರೆ. ಹೆಚ್ಚು ಕಮ್ಮಿ 2 ಗಂಟೆ ಅವಧಿಯ ದೃಶ್ಯಗಳು, ಹಾಡುಗಳನ್ನು ಕೈಬಿಟ್ಟು ಮೂಲ ಕಥೆಯನ್ನು ಹೇಳಲು ಬೇಕಾದ ದೃಶ್ಯಗಳನ್ನು ಮಾತ್ರ ಉಳಿಸಿದ್ದಾರೆ. ತಮ್ಮ ವಾಯ್ಸ್ ಓವರ್ ಮೂಲಕ ಶಿವುಡು, ಆವಂತಿಕಾ ಲವ್ ಸ್ಟೋರಿ ಹೇಳಿಮುಗಿಸಿದ್ದಾರೆ.
ಸಿನಿಮಾ ಹೇಗಿದೆ?
ಮೂಲ ಕಥೆಗೆ ಬದ್ಧವಾಗಿ 'ಬಾಹುಬಲಿ: ದಿ ಎಪಿಕ್' ಚಿತ್ರವನ್ನು ರಾಜಮೌಳಿ ತಿದ್ದಿ ತೀಡಿ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಕಥೆಯ ವೇಗ, ಎಮೋಷನ್ ಮಿಸ್ ಆಗದಂತೆ ಚಿತ್ರವನ್ನು ನೋಡಿಸಿಕೊಂಡು ಹೋಗಿದ್ದಾರೆ. ಯುದ್ಧದ ಸನ್ನಿವೇಶಗಳನ್ನು ಅಲ್ಲಲ್ಲಿ ಟ್ರಿಮ್ ಮಾಡಿದ್ದಾರೆ. ಕಥೆಗೆ ಚ್ಯುತಿ ಬರಬಾರದು, ಸಿನಿಮಾ ಕಾಲಾವಧಿ ದೊಡ್ಡದಾಗಬಾರದು ಎನ್ನುವ ಮೂಲ ಉದ್ದೇಶದೊಂದಿಗೆ ಎಡಿಟ್ ಮಾಡಿರುವುದು ಗೊತ್ತಾಗುತ್ತದೆ. ಈಗಾಗಲೇ ಹಲವು ಬಾರಿ ನೋಡಿರುವ ಸಿನಿಮಾ ಆಗಿರುವುದರಿಂದ ಕಲಾವಿದರ ನಟನೆ ಬಗ್ಗೆ ಹೊಸದಾಗಿ ಹೇಳಲು ಏನು ಇಲ್ಲ. ದಶಕದ ಬಳಿಕ ಮತ್ತೆ ದೊಡ್ಡ ಪರದೆಯಲ್ಲಿ ಸಿನಿಮಾ ನೋಡುವ ಅನುಭವ ಮಾತ್ರವೇ ಉಳಿದಿರುವುದು.
ಏನುಂಟು? ಏನಿಲ್ಲ?
ಯಾವೆಲ್ಲಾ ದೃಶ್ಯಗಳಿಗೆ ಕತ್ತರಿ ಹಾಕಿದ್ದಾರೆ ಎನ್ನುವಾಗ ಕಟ್ಟಪ್ಪ(ಸತ್ಯರಾಜ್) ಹಾಗೂ ಅಸ್ಲಾಂ ಖಾನ್(ಸುದೀಪ್) ಭೇಟಿ ಸನ್ನಿವೇಶಕ್ಕೆ ಕತ್ತರಿಬಿದ್ದಿದೆ. ಸುದೀಪ್ ದೃಶ್ಯ ಇರಲೇಬೇಕು, ಇಲ್ಲದಿದ್ದರೆ ನಾವು ಸಿನಿಮಾ ನೋಡಲು ಎಂದು ಕಿಚ್ಚನ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ನಿಜಕ್ಕೂ ಆ ಸನ್ನಿವೇಶಕ್ಕೆ ಕತ್ತರಿ ಬಿದ್ದಿದೆ.
'ಬಾಹುಬಲಿ'ಯ ಪರಾಕ್ರಮದ ಬಗ್ಗೆ ಹೇಳಲು ರಾಜಮೌಳಿ ಆ ಸನ್ನಿವೇಶವನ್ನು ಬಳಸಿಕೊಂಡಿದ್ದರು. ನಿನಗೆ ಏನಾದರೂ ಸಹಾಯ ಬೇಕಿದ್ದರೆ ನನ್ನನ್ನು ಕೇಳು ಎಂದು ಕಟ್ಟಪ್ಪನಿಗೆ ಅಸ್ಲಾಂ ಖಾನ್ ಹೇಳಿರುತ್ತಾನೆ. ಆದರೆ ಪಾರ್ಟ್- 2ನಲ್ಲಿ ಅಸ್ಲಾಂ ಖಾನ್ ಪಾತ್ರ ಬರಲೇಯಿಲ್ಲ. ಆ ಸನ್ನಿವೇಶ ಕಥೆಗೆ ಅಷ್ಟು ಅವಶ್ಯಕ ಎನ್ನಲಾಗದು. ಅದೇ ಕಾರಣಕ್ಕೆ ಅನವಾರ್ಯವಾಗಿ ಕೈಬಿಟ್ಟಿರುವುದು ಗೊತ್ತಾಗುತ್ತದೆ.
ಸಾಕಷ್ಟು ಡಿಲೀಟ್ ಸೀನ್‌ಗಳನ್ನು ಚಿತ್ರದಲ್ಲಿ ಸೇರಿಸಿದ್ದಾರೆ ಎನ್ನುವ ಊಹಾಪೋಹ ಇತ್ತು. ಆದರೆ ಸಣ್ಣದೊಂದು ಸನ್ನಿವೇಶ ಮಾತ್ರ ಇದೆ. ಕಥೆಗೆ ಅನ್ಯಾಯವಾಗದಂತೆ ಎಡಿಟ್ ಮಾಡಲು ಜಕ್ಕಣ್ಣ ಸಾಕಷ್ಟು ಕಸರತ್ತು ಮಾಡಿದ್ದಾರೆ. 3 ಗಂಟೆ 43 ನಿಮಿಷಕ್ಕೆ ಕಾಲಾವಧಿ ಇಳಿಸಲು ಸರ್ಕಸ್ ಮಾಡಿದ್ದಾರೆ. ಹಾಗಾಗಿ ಹೊಸದಾಗಿ ಹೆಚ್ಚು ಸನ್ನಿವೇಶಗಳ ಸೇರ್ಪಡೆ ಆಗಿಲ್ಲ. ಶಿವುಡು ಮಾಹಿಷ್ಮತಿ ಸಾಮ್ರಾಜ್ಯದ ಒಳಗೆ ಎಂಟ್ರಿ ಕೊಡುವಾಗ ಬಿಜ್ಜಳದೇವ(ನಾಸರ್) ಮಾತನಾಡಿ ಬಾಹುಬಲಿ ಇನ್ನು ಬರಲು ಸಾಧ್ಯವೇ ಇಲ್ಲ ಎಂದು ಹೇಳುವ ಚಿಕ್ಕ ಝಲಕ್ ಮಾತ್ರ ಹೊಸದಾಗಿ ಸೇರಿಸಿದ್ದಾರೆ. ಅದು ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ.
ಒಟ್ಟಾರೆ ರಾಜಮೌಳಿ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಂ. ಎಂ ಕೀರವಾಣಿ ಹಿನ್ನೆಲೆ ಸಂಗೀತ ಮತ್ತೊಮ್ಮೆ ಸದ್ದು ಮಾಡ್ತಿದೆ. ಇದೇ ರೀತಿ 2 ಭಾಗಗಳಾಗಿ ಬಂದಿರುವ ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ಒಟ್ಟಿಗೆ ಎಡಿಟ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ಮಾಡಿದರೂ ಅಚ್ಚರಿಪಡಬೇಕಿಲ್ಲ. ಆದರೂ ಹೆಚ್ಚು ಕಮ್ಮಿ 4 ಗಂಟೆ ಕಾಲಾವಧಿ ಹೆಚ್ಚಾಯಿತು. ಮತ್ತೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಪ್ರೇಕ್ಷಕರ ತಾಳ್ಮೆಯನ್ನು ಇದು ಪರೀಕ್ಷಿಸುತ್ತದೆ. ಇನ್ನು ಅರ್ಧ ಗಂಟೆ ಫುಟೇಜ್ ಕತ್ತರಿಸಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸದೇ ಇರದು.


Click it and Unblock the Notifications











