Bangaarada Manushya Review: 'ಜೆನ್‌ ಝೀ' ಜಮಾನಕ್ಕೂ ಪ್ರಸ್ತುತ ಅಣ್ಣಾವ್ರ 'ಬಂಗಾರದ ಮನುಷ್ಯ'

ಭಾರತೀಯ ಚಿತ್ರರಂಗದ 10 ಅದ್ಭುತ ಸಿನಿಮಾಗಳ ಪಟ್ಟಿಯಲ್ಲಿ, ಕನ್ನಡ ಚಿತ್ರರಂಗದ ಮರೆಯಲಾಗದ 5 ಸಿನಿಮಾಗಳ ಪಟ್ಟಿಯಲ್ಲಿ ಮುಲಾಜಿಲ್ಲದೇ ಅಣ್ಣಾವ್ರ 'ಬಂಗಾರದ ಮನುಷ್ಯ' ಸಿನಿಮಾವನ್ನು ಸೇರಿಸಬಹುದು. ಬಂಗಾರ ಉಜ್ಜಿದಷ್ಟು ಹೊಳೆಯುತ್ತದೆ. ಅದೇ ರೀತಿ ಈ ಅಪರೂಪದ ಸಿನಿಮಾವನ್ನು ನೋಡಿದಷ್ಟು ಹೊಸ ಹೊಳಹು ಗೋಚರಿಸುತ್ತದೆ. ಸಿದ್ಧಲಿಂಗಯ್ಯ ನಿರ್ದೇಶನ, ಅಣ್ಣಾವ್ರ ಅಭಿನಯ ಮರೆಯೋಕೆ ಸಾಧ್ಯವಿಲ್ಲ.

ಸದ್ಯ ಎಐ ಭೂತ ಎಲ್ಲರನ್ನು ಕಾಡುತ್ತಿದೆ. ಐಟಿ ಕ್ಷೇತ್ರದ ಬಹುತೇಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಒಂದು ವೇಳೆ ಕೆಲಸ ಹೋದರೂ ಊರಿನಲ್ಲಿ ಅರ್ಧ ಎಕರೆ ಭೂಮಿ ಇದ್ದರೆ ಬೆಳೆದು ತಿನ್ನಬಹುದು ಎನ್ನುವ ಚರ್ಚೆ ಶುರುವಾಗಿದೆ. ಕೋವಿಡ್ ಸಮಯದಲ್ಲಿ ಕೂಡ ಕೆಲವರು ಹುಟ್ಟೂರಿಗೆ ಹೋಗಿ ಬದುಕು ಕಂಡುಕೊಂಡಿದ್ದರು. ಆದರೆ ದಶಕಗಳ ಹಿಂದೆಯೇ ಜನ ಪಟ್ಟಣ ಬಿಟ್ಟು ಹಳ್ಳಿ ಸೇರಿ ವ್ಯವಸಾಯ ಮಾಡಲು ಪ್ರೇರೇಪಿಸಿದ ಸಿನಿಮಾ ಇದು. 'ಬಂಗಾರದ ಮನುಷ್ಯ' ಚಿತ್ರದ ಪಾತ್ರಗಳು, ಹಾಡುಗಳು ಇವತ್ತಿಗೂ ಜನಜನಿತ.

Bangaarada Manushya Review  A Timeless Classic That Still Inspires Today s Generation

ಟಿಕೆ ರಾಮರಾವ್ ಬರೆದ ಕಾದಂಬರಿ ಆಧರಿಸಿ ಸಿದ್ಧಲಿಂಗಯ್ಯ ಈ ಸಿನಿಮಾ ಕಟ್ಟಿಕೊಟ್ಟಿದ್ದರು. ಹುಣಸೂರು ಕೃಷ್ಣಮೂರ್ತಿ ಸಂಭಾಷಣೆ, ಜಿ. ಕೆ ವೆಂಕಟೇಶ್ ಸಂಗೀತ ಚಿತ್ರಕ್ಕೆ ಆನೆಬಲ ತುಂಬಿತ್ತು. 'ಬಂಗಾರದ ಮನುಷ್ಯ' ಚಿತ್ರದ ಕೌಟುಂಬಿಕ ಮೌಲ್ಯಗಳು, ಆಶಯ ಹಾಗೂ ರಾಜೀವನ ಪಾತ್ರ ಇವತ್ತಿನ 'Gen z' ಜಮಾನಕ್ಕೂ ಪ್ರಸ್ತುತ. ಈ ಚಿತ್ರದಿಂದ ಯುವ ಜನತೆ ನೋಡಿ ಕಲಿಯುವುದು ಸಾಕಷ್ಟಿದೆ. ಅಂತಹವರಿಗಾಗಿ ಈ ಚಿತ್ರ ವಿಮರ್ಶೆ.

ಸಿನಿಮಾ ಕಥೆ

ಅಕ್ಕ, ಭಾವನ ಸಹಾಯದಿಂದ ಪಟ್ಟಣದಲ್ಲಿ ಓದಿ ಉದ್ಯೋಗ ಪಡೆಯುವ ಹಂಬಲದಲ್ಲಿದ್ದ ರಾಜೀವ(ಡಾ. ರಾಜ್‌ಕುಮಾರ್) ಆಘಾತ ಎದುರಾಗುತ್ತದೆ. ಊರಿಗೆ ಹೋಗುವ ಆತನಿಗೆ ಭಾವನ ಸಾವಿನ ಸ್ವಾಗತ ಸಿಗುತ್ತದೆ. ಆಧಾರ ಸ್ತಂಭವನ್ನು ಕಳೆದುಕೊಂಡ ಅಕ್ಕನ ಮನೆಗೆ ಊರುಗೋಲಾಗಲು ರಾಜೀವ ಮನಸ್ಸು ಮಾಡ್ತಾರೆ. ಎಲ್ಲರ ತುತ್ತಿನ ಚೀಲ ತುಂಬುವುದರ ಜೊತೆಗೆ ಅಕ್ಕನ ಮಕ್ಕಳು ಚಕ್ರಪಾಣಿ(ಶ್ರೀನಾಥ್) ಹಾಗೂ ಕೇಶವ(ವಜ್ರಮುನಿ) ಓದಿಸಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಾನೆ. ಈ ನಡುವೆ ಲಕ್ಷ್ಮಿ(ಭಾರತಿ ವಿಷ್ಣುವರ್ಧನ್) ಪ್ರೀತಿ, ಮದುವೆ ನಡೆಯುತ್ತದೆ.

Bangaarada Manushya Review  A Timeless Classic That Still Inspires Today s Generation

ಮೊದಲಿಗೆ ಭಾವನ ಎರಡು ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಾನೆ. ಅದು ಸಾಲದಿದ್ದಾಗ ಸರ್ಕಾರದಿಂದ 25 ಎಕರೆ ಬಂಜರು ಭೂಮಿ ಖರೀದಿಸಿ ಉಳುಮೆ ಮಾಡ್ತಾನೆ. ರಾಜೀವನಿಗೆ ಊರಿನ ಸಾಹುಕಾರ ರಾಚೂಟಪ್ಪನಿಂದ (ಬಾಲಕೃಷ್ಣ) ಹಣಕಾಸಿನ ನೆರವು ಸಿಗುತ್ತದೆ. ಮಾದರಿ ರೈತನಾಗಿ ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದು ಶ್ರೀಮಂತನಾಗುತ್ತಾನೆ. ಕೊನೆಗೆ ಅಕ್ಕನ ಮಗ ಕೇಶವನಿಂದಲೇ ಆರೋಪ, ಅವಮಾನ ಎದುರಾಗುತ್ತದೆ. ಎಲ್ಲರಿಗೂ ಸತ್ಯ ಗೊತ್ತಾಗುವ ವೇಳೆಗೆ ರಾಜೀವ ಬಹಳ ದೂರ ಹೊರಟು ಹೋಗಿರುತ್ತಾನೆ.

ಸಿನಿಮಾ ವಿಶ್ಲೇಷಣೆ

ಮೇಲ್ನೋಟಕ್ಕೆ ಇದು ಸೀದಾಸಾದ ಕಥೆ ಎನಿಸುತ್ತದೆ. ಆದರೆ ಅದನ್ನು ದೃಶ್ಯರೂಪಕ್ಕೆ ಇಳಿಸುವಲ್ಲಿ ಸಿದ್ಧಲಿಂಗಯ್ಯ ಗೆದ್ದಿದ್ದರು. ಚಿತ್ರಕಥೆ, ಕಲಾವಿದರ ಅಭಿನಯ, ಸಂಗೀತ ಎಲ್ಲವೂ ಚಿತ್ರಕ್ಕೆ ಕಸುವು ತುಂಬಿತ್ತು. ಆರ್‌. ಲಕ್ಷ್ಮಣ್ ಹಾಗೂ ಕೆಸಿಎನ್ ಗೌಡರು ಚಿತ್ರ ನಿರ್ಮಾಣ ಮಾಡಿದ್ದರು. ಪ್ರೀಮಿಯರ್ ಶೋ ನೋಡಿ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ "ನಿರ್ಮಾಪಕ ಗೌಡರನ್ನು ದೇವರೇ ಕಾಪಾಡಬೇಕು" ಎಂದುಬಿಟ್ಟಿದ್ದರು. ಮೊದಲ ಎರಡು ಮೂರು ದಿನ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಬಳಿಕ ಸಿನಿಮಾ 104 ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ಜನ ಎತ್ತಿನ ಬಂಡಿ ಕಟ್ಟಿಕೊಂಡು ಬಂದು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದ್ದರು.

ಅವತ್ತಿನ ಕಾಲಕ್ಕೆ 12 ಲಕ್ಷ ರೂಪಾಯಿ ಬಂಡವಾಳದಲ್ಲಿ 'ಬಂಗಾರದ ಮನುಷ್ಯ' ಸಿನಿಮಾ ನಿರ್ಮಾಣವಾಗಿತ್ತು. ಹತ್ತೊಂಬತ್ತು ಪ್ರಿಂಟ್‌ಗಳಲ್ಲಿ ಪ್ರದರ್ಶನ ಆರಂಭಿಸಿತ್ತು. ಲಕ್ಷ ಲಕ್ಷ ಕಲೆಕ್ಷನ್ ಮಾಡಿತ್ತು. ನಮ್ಮ ಮಣ್ಣಿನ ಕಥೆ, ನಿರೂಪಣೆ, ಕನ್ನಡತನ ಎಲ್ಲವೂ ಚಿತ್ರವನ್ನು ಗೆಲ್ಲಿಸಿಬಿಟ್ಟಿತ್ತು. ಪ್ರತಿ ದೃಶ್ಯವನ್ನು ಅದ್ಭುತವಾಗಿ ಕಟ್ಟಿದ್ದರು ಸಿದ್ಧಲಿಂಗಯ್ಯ. ಅದಕ್ಕೆ ಅಣ್ಣಾವ್ರ ಎಂಟ್ರಿ ಸೀನ್ ಸ್ಪಷ್ಟ ನಿದರ್ಶನ.

ಇವತ್ತಿನ ಸಿನಿಮಾಗಳಲ್ಲಿ ನಾಯಕನ ಇಂಟ್ರೊಡಕ್ಷನ್ ಅಂದ್ರೆ ಮಾಸ್ ಹೀರೊ ಆಗಿ ಜಬರ್ದಸ್ತ್ ಆಕ್ಷನ್ ಮಾಡಿ, 20 ಮಂದಿ ಪುಂಡರನ್ನು ಹೊಡೆದು, ಖಡಕ್ ಡೈಲಾಗ್ ಹೊಡೆಯುವುದನ್ನು ನೋಡುತ್ತೇವೆ. ಆದರೆ 'ಬಂಗಾರದ ಮನುಷ್ಯ' ಚಿತ್ರದ ಮೊದಲ ಶಾಟ್ ನೋಡಿ. ರೈಲು ನಿಲ್ಲುತ್ತಿದ್ದಂತೆ ರಾಜೀವ ಬಾಗಿಲ ಬಳಿ ಬಂದು ಬಹಳ ದಿನಗಳ ಬಳಿಕ ಊರನ್ನು ಆಶ್ಚರ್ಯದಿಂಧ ನೋಡುತ್ತಿರುತ್ತಾನೆ. ಅಷ್ಟರಲ್ಲಿ ಒಳಗಿನಿಂದ ಪ್ರಯಾಣಿಕನೊಬ್ಬ ಇಳಿಯಲು ಬಂದಾಗ ರಾಜೀವ ಜಾಗ ಬಿಟ್ಟು ಕೊಡುತ್ತಾನೆ. ಹೀಗೆ ಮೊದಲ ದೃಶ್ಯದಲ್ಲೇ ರಾಜೀವನ ಸರಳ, ಸಜ್ಜನ ವ್ಯಕ್ತಿತ್ವದ ದರ್ಶನ ಮಾಡಿಸಿಬಿಡುತ್ತಾರೆ. 'ನಗು ನಗುತಾ ನಲಿ ನಲಿ' ಹಾಡಿನ ಉದ್ದಕ್ಕೂ ಇದು ಮುಂದುವರೆಯುತ್ತದೆ.

ಬ್ಯುಸಿನೆಸ್ ಮಾಡಲು ಹಣ ಕೊಡಲ್ಲ ಎಂದು ರಾಜೀವ ಹೇಳಿದಾಗ ಆಸ್ತಿಯಲ್ಲಿ ಪಾಲು ಕೇಳಲು ವಕೀಲರ ಜೊತೆ ಕೇಶವ ಬರ್ತಾನೆ. ಕೇಶವನ ಚುಚ್ಚು ಮಾತುಗಳಿಗೆ ಊಟ ಮಾಡುತ್ತಾ ಕೂತ ರಾಜೀವ ತುತ್ತು ಬಾಯಿಗೆ ಇಡುವ ಮುನ್ನ ಕೈ ತೊಳೆದು ಎದ್ದು ಹೊರಟುಬಿಡ್ತಾನೆ. ಇಂತಹ ಸನ್ನಿವೇಶಗಳೇ ಚಿತ್ರದ ಜೀವಾಳ. ಸಂದರ್ಭಗಳನ್ನೇ ವಿಲನ್ ಮಾಡಿ ತ್ಯಾಗಮೂರ್ತಿಯ ಕಥೆಯನ್ನು ತೆರೆಗೆ ತರಲಾಗಿತ್ತು.

ಕಲಾವಿದರ ನಟನೆ

ಅದ್ಭುತ ಸಿನಿಮಾದಲ್ಲಿ ಅಣ್ಣಾವ್ರ, ಭಾರತಿ, ಬಾಲಕೃಷ್ಣ ಅವರ ನಟನೆ ನೋಡುವುದೇ ಚೆಂದ. ಕಠಿಣ ಶ್ರಮದಿಂದ ತನ್ನವರನ್ನು ಬೆಳೆಸುವ ಹಠಕ್ಕೆ ಬೀಳುವ ವಿದ್ಯಾವಂತ ಯುವಕ ರಾಜೀವನ ಪಾತ್ರದಲ್ಲಿ ಡಾ. ರಾಜ್‌ಕುಮಾರ್ ಅವರನ್ನು ನೋಡುವುದೇ ಚೆಂದ. ನಮ್ಮ ಅಣ್ಣನೋ, ತಮ್ಮನೋ ಎನ್ನುವಂತೆ ಆ ಪಾತ್ರದಲ್ಲಿ ಅವರು ಜೀವಿಸಿದ್ದಾರೆ. ಆ ಕನ್ನಡ ಭಾಷೆ, ನವರಸಗಳನ್ನು ತುಂಬಿದ ಅಭಿನಯ ಕಣ್ಣಿಗೆ ಹಬ್ಬ. ಇನ್ನುಳಿದಂತೆ ಭಾರತಿ, ಬಾಲಕೃಷ್ಣ, ವಜ್ರಮುನಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದರು. ದ್ವಾರಕೀಶ್ ಕಾಮಿಡಿ ಕಿಕ್ ಕೂಡ ಚಿತ್ರದಲ್ಲಿದೆ.

ತಾಂತ್ರಿಕವಾಗಿ ಸಿನಿಮಾ

'ಬಂಗಾರದ ಮನುಷ್ಯ' ತಾಂತ್ರಿಕವಾಗಿಯೂ ಬಹಳ ಶ್ರೀಮಂತ ಸಿನಿಮಾ. ಆಗ ತಾನೆ ಬೋರ್‌ವೆಲ್ ಕೊರೆಸುವ ರೂಢಿ ಆರಂಭವಾಗಿತ್ತು. ಕನ್ನಡದಲ್ಲಿ ಇದೇ ಸಿನಿಮಾದಲ್ಲಿ ಮೊದಲ ಬಾರಿಗೆ ಬೋರ್‌ವೆಲ್ ಹಾಕಿಸುವ ದೃಶ್ಯವನ್ನು ತೋರಿಸಲಾಗಿತ್ತು. ಚಿಕ್ಕಮಗಳೂರು ಕಳಸ ಸುತ್ತಾಮುತ್ತಾ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿತ್ತು. ಕನ್ನಡದಲ್ಲಿ ಚಿತ್ರೀಕರಣಕ್ಕಾಗಿ ಮೊದಲ ಬಾರಿ ಕ್ರೇನ್‌ಗಳನ್ನು ಬಳಸಿದ್ದ ಸಿನಿಮಾ ಇದು. ಅದೇ ಕಾರಣಕ್ಕೆ ಕೆಲ ದೃಶ್ಯಗಳು ಹೊಸದಾಗಿ ಕಂಡಿತ್ತು. ಛಾಯಾಗ್ರಾಹಕ ಡಿ. ವಿ ರಾಜಾರಾಮ್ ಮತ್ತವರ ತಂಡದ ಶ್ರಮ ಮರೆಯುವಂತಿಲ್ಲ. ಇನ್ನು ಜಿ. ಕೆ ವೆಂಕಟೇಶ್ ಸಂಗೀತದ 5 ಹಾಡುಗಳಿಗೆ ದಿಗ್ಗಜರು ಸಾಹಿತ್ಯ ಬರೆದಿದ್ದರು.

'ನಗು ನಗುತಾ ನಲಿ' ಹಾಗೂ 'ಬಾಳ ಬಂಗಾರ ನೀನು' ಹಾಡುಗಳಿಗೆ ಹುಣಸೂರು ಕೃಷ್ಣಮೂರ್ತಿ ಸಾಹಿತ್ಯ ಪೋಣಿಸಿದ್ದರು. ಅದೇ ರೀತಿ 'ಆಹಾ ಮೈಸೂರು ಮಲ್ಲಿಗೆ' ಹಾಡಿಗೆ ಚಿ. ಉದಯಶಂಕರ್, 'ಆಗದು ಎಂದು ಕೈ ಕಟ್ಟಿ ಕುಳಿತರೆ' ಹಾಡಿಗೆ ಆರ್‌. ಎನ್ ಜಯಗೋಪಾಲ್ ಹಾಗೂ 'ಹನಿ ಹನಿ ಗೂಡಿದ್ರೆ ಹಳ್ಳ' ಹಾಡಿಗೆ ವಿಜಯನಾರಸಿಂಹ ಲೇಖನಿ ಹಿಡಿದಿದ್ದರು.

ಸಾಮಾಜಿಕ ಪರಿಣಾಮ

ಸಿನಿಮಾ ಬಹಳ ಪರಿಣಾಮಕಾರಿ ಮಾಧ್ಯಮ. ಅದನ್ನು ಒಳ್ಳೆ ರೀತಿಯಲ್ಲಿ ಬಳಸಿಕೊಳ್ಳಬೇಕು. 'ಬಂಗಾರದ ಮನುಷ್ಯ' ಸಿನಿಮಾ ಕರ್ನಾಟಕದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿತ್ತು. ಸಿನಿಮಾ ನೋಡಿ ಸಾಕಷ್ಟು ಜನ ಪಟ್ಟಣ ಬಿಟ್ಟು ಹಳ್ಳಿಗೆ ಹೋಗಿ ಕೃಷಿಕರಾಗಿದ್ದರು. ಮಂಡ್ಯದ ಕೆಲವು ಭಾಗಗಳಲ್ಲಿ ಬೆಟ್ಟ, ಗುಡ್ಡ ಅಗೆದು ಜನ ವ್ಯವಸಾಯ ಆರಂಭಿಸಿದ್ದರು. ಅಷ್ಟರಮಟ್ಟಿಗೆ ಸಿನಿಮಾ ಜಾದು ಮಾಡಿತ್ತು. ಇನ್ನು ರಾಜೀವನಂತಹ ಮತ್ತೊಂದು ಪಾತ್ರವನ್ನು ಬೆಳ್ಳಿಪರದೆ ಮೇಲೆ ಸೃಷ್ಟಿಸಲು ಸಾಧ್ಯವಾಗಲಿಲ್ಲ ಅಂದ್ರೆ ತಪ್ಪಾಗಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X