ವಿಮರ್ಶೆ : ಭೈರವನ ಕಥೆಯಲ್ಲ.. ಸ್ವಲ್ಪ 'ಬೋರ್' ಇವನ ಕಥೆ..
'ಭೈರವಗೀತ' ರಾಮ್ ಗೋಪಾಲ್ ವರ್ಮ ಸ್ಟೈಲ್ ಆಫ್ ಸಿನಿಮಾ. ನಿರ್ದೇಶಕ ಸಿದ್ದಾರ್ಥ್ ಆರ್ ಜಿ ವಿ ಶಿಷ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ. 'ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟ' ಇಲ್ಲಿದ್ದು, ಸತ್ಯಕಥೆಯನ್ನು 'ರಾ' ಆಗಿ ತೋರಿಸಿದ್ದಾರೆ. ಚಿತ್ರಮಂದಿರಕ್ಕೆ ಹೋಗುವ ಮುನ್ನ ಭೈರವನ ಕಥೆ ಸ್ವಲ್ಪ ಬೋರು ಹೊಡೆಸುವ ಕಥೆ ಎನ್ನುವುದನ್ನು ಸಹ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.
ಉಳ್ಳವರು V/S ಇಲ್ಲದವರ
ಮುಂಚೆಯೇ ಹೇಳಿದ ಹಾಗೆ, ಇದು 'ಉಳ್ಳವರ ವಿರುದ್ಧ ಇಲ್ಲದವರು ಮಾಡುವ ಹೋರಾಟದ ಕಥೆ'. ಆ ಕಾಲದಲ್ಲಿ ಇದ್ದ ಜೀತ ಪದ್ಧತಿ ಈಗಲೂ ಜೀವಂತವಾಗಿದೆಯೇ ತಿಳಿದಿಲ್ಲ. ಆದರೆ, ಸಿನಿಮಾದ ಕಥೆ ನಿಂತಿರುವುದು ಈ ವಿಷಯದ ಮೇಲೆ. ಶಂಕ್ರಪ್ಪನ ಜೊತೆಗೆ ಗುಲಾಮನ ರೀತಿ ಕೆಲಸ ಮಾಡುವ ಭೈರವ (ಧನಂಜಯ್) ಹೇಗೆ ಅವನ ವಿರುದ್ಧ ಹೋರಾಟ ಮಾಡುತ್ತಾನೆ ಎನ್ನುವುದು ಸಿನಿಮಾ ಕಥೆ.
ಕಥೆಯ ನಿರೂಪಣೆ
ತಂದೆಯ ನಂತರ ಭೈರವ (ಧನಂಜಯ್) ಕೂಡ ಶಂಕ್ರಪ್ಪ ಎಂಬ ಸಾಹುಕಾರನ ಜೊತೆಗೆ ಕೆಲಸ ಮಾಡುತ್ತಿರುತ್ತಾನೆ. ಮನೆಯ ಸಣ್ಣ ಪುಟ್ಟ ಕೆಲಸದಿಂದ ಹಿಡಿದು ಕೊಲೆಯ ಎಂಬ ಕ್ರೂರ ಕಾರ್ಯದವರೆಗೆ ಎಲ್ಲದರಲ್ಲಿ ಭೈರವ ಎತ್ತಿದ ಕೈ. ಹೀಗಿದ್ದ ಭೈರವ ಒಂದು ಸಮಯಕ್ಕೆ ಶಂಕ್ರಪ್ಪ ವಿರುದ್ಧ ನಿಲ್ಲುತ್ತಾನೆ. ಅದು ಯಾಕೆ?, ಹೇಗೆ?, ಕೊನೆಗೆ ಅಧಿಕಾರಶಾಹಿಗಳನ್ನ ಭೈರವ ಗೆಲ್ಲುತ್ತಾನಾ ಇಲ್ವಾ ಎನ್ನುವುದು ಚಿತ್ರದ ನಿರೂಪಣೆ.
ನಟ ರಾಕ್ಷಸ, ಜೊತೆ ಜೊತೆಗೆ ಸರಸ
ಚಿತ್ರದ ಟೈಟಲ್ ಕಾರ್ಡ್ ನಲ್ಲಿ 'ನಟ ರಾಕ್ಷಸ ಧನಂಜಯ್' ಎಂದು ತೋರಿಸುವುದು ಸಿನಿಮಾ ಮುಗಿದ ಮೇಲೆ ಸತ್ಯ ಎನಿಸುತ್ತದೆ. ಡಾಲಿ ಧನಂಜಯ್ ಇಲ್ಲಿ ರಾಕ್ಷಸನ ರೀತಿ ನಟಿಸಿದ್ದಾರೆ. ಒಂದು ಕಡೆ ಮಚ್ಚು ಹಿಡಿದು ಹೊಡೆಯುವ ಭೈರವ, ಮತ್ತೊಂದು ಕಡೆ ತನ್ನ ಗೀತಾ (ಇರಾ) ಜೊತೆಗೆ ಮಾಡುವ ಸರಸದಲ್ಲಿಯೂ ಹಿಂದೆ ಬೀಳುವುದಿಲ್ಲ.
ಗ್ಲಾಮರ್ ಗೀತಾ
ನಾಯಕಿ ಇರಾ, ಗೀತಾ ಪಾತ್ರದಲ್ಲಿ ಅಂದವಾಗಿ ಕಾಣುತ್ತಾರೆ. ಸಿನಿಮಾದ ತುಂಬ ಇರುವ ಅಬ್ಬರ ಆರ್ಭಟದ ನಡುವೆ ಅವರು ಘಮ ಗೂಡುವ ಮಲ್ಲಿಗೆಯಂತೆ ಅರಳಿದ್ದಾರೆ. ಇನ್ನು ಹಾಡುಗಳಲ್ಲಿ ಇರಾ ಗ್ಲಾಮರ್ ತುಂಬಿಕೊಂಡಿದೆ. ಅವರ ನಟನೆ ಕೂಡ ಓಕೆ ಓಕೆ.
ಶಂಕ್ರಣ್ಣ ಹಾಗೂ ನಂಜಮರಿ ಖದರ್
ಸಿನಿಮಾದಲ್ಲಿ ಹೀರೋ ಪಾತ್ರ ಬಿಟ್ಟರೆ ಹೆಚ್ಚು ಇಷ್ಟ ಆಗುವುದು ಶಂಕ್ರಣ್ಣ ಹಾಗೂ ನಂಜಮರಿ ಪಾತ್ರಗಳು. ಈ ಎರಡು ಪಾತ್ರಗಳಲ್ಲಿ ನಟಿಸಿರುವ ಕಲಾವಿದರು ಸಿನಿಮಾವನ್ನು ಹೊತ್ತುಕೊಂಡಿರುವ ಧನಂಜಯ್ ಭಾರವನ್ನು ಕಡಿಮೆ ಮಾಡಿದ್ದಾರೆ. ತೆರೆ ಮೇಲೆ ಹೆಚ್ಚು ಆರ್ಭಟ ಮಾಡುತ್ತದೆ ನಂಜಮರಿ ಪಾತ್ರ.
ಎರಡು ಭಾಷೆ, ಎಲ್ಲರಿಗೂ ಗೊಂದಲ
ಸಿನಿಮಾ ನೋಡಿ ಬಂದವರಲ್ಲಿ ಅನೇಕರಿಗೆ ಒಂದು ಗೊಂದಲ ಉಂಟಾಗುತ್ತದೆ. ಸಿನಿಮಾ ಎರಡು ಭಾಷೆಗಳಲ್ಲಿ ಬಂದ ಕಾರಣ ಅನೇಕ ಪಾತ್ರಗಳಿಗೆ ಬರೀ ಡಬ್ ಮಾಡಿಸಿದ ಆಗೆ ಕಾಣುತ್ತದೆ. ಕೆಲ ಖಳ ನಟರ ಮಾತಿಗೂ, ಧ್ವನಿಗೂ ವ್ಯತ್ಯಾಸ ಮೂಡುತ್ತದೆ. ಅನೇಕ ಮುಖಗಳು ಕನ್ನಡಕ್ಕೆ ತೀರ ಹೊಸದಾಗಿ ಕಾಣುತ್ತದೆ.
ಭೈರವನ ಕಥೆ, 'ಬೋರ್' ಇವನ ಕಥೆ
ತೆರೆ ಮೇಲೆ ಸಿನಿಮಾ ಪ್ರಾರಂಭ ಆದಾಗ ಪ್ರೇಕ್ಷಕರಿಗೆ ಇದ್ದ ಉತ್ಸಾಹ ಬರುಬರುತ್ತ ಕಡಿಮೆ ಆಗುತ್ತದೆ. ಎಲ್ಲೋ ನೋಡಿದ ಹಳೆ ಕಥೆಯೇ ಇಲ್ಲಿದೆಯಲ್ಲ ಅನಿಸುತ್ತದೆ. ರಕ್ತ, ಹೊಡೆದಾಟದ ಮೂಲಕ ಪ್ರಾರಂಭವಾದ ಕಥೆ ಹಾಗೆಯೇ ಅಂತ್ಯವಾಗುತ್ತದೆ. ಭೈರವನ ಕಥೆ 'ಬೋರ್' ಇವನ ಕಥೆ ಎನ್ನುವ ಹಾಗೆ ಮಾಡುತ್ತದೆ.
ಸೌಂಡು, ಸೌಂಡು, ಸೌಂಡು
ಆರ್ ಜಿ ವಿ ಸಿನಿಮಾದ ಶಕ್ತಿ ಬಿಜಿಎಂ. ಈ ಸಿನಿಮಾದಲ್ಲಿ ಕೂಡ ಹಿನ್ನಲೆ ಸಂಗೀತ ಕೆಣಕುತ್ತದೆ. ಅದು ಸಿನಿಮಾ ನೋಡುವ ಪ್ರೇಕ್ಷಕರ ಎದೆ ಬಡಿತ ಹೆಚ್ಚಿಸುತ್ತದೆ. ಜೊತೆಗೆ, ಕ್ಯಾಮರಾ ಕೆಲಸ ಕೂಡ ಚೆನ್ನಾಗಿ ಆಗಿದೆ. ಸಿನಿಮಾ ಗೆದ್ದರೆ, ಅದರ ಭಾಗ ಮೇಕಿಂಗ್ ಹಾಗೂ ಮ್ಯೂಸಿಕ್ ಗೆ ಹೆಚ್ಚು ಸಲಬೇಕು.
ಸಿದ್ಧಾರ್ಥ್ ಸಾಹಸ
ಈ ವಯಸ್ಸಿನಲ್ಲಿ ಇಂತಹ ಸಿನಿಮಾ ಮಾಡಿರುವ ನಿರ್ದೇಶಕ ಸಿದ್ಧಾರ್ಥ್ ಅವರ ಸಾಹಸ ಮೆಚ್ಚಬೇಕು. ತೀರ ಸರಳ ಕಥೆಯನ್ನ ಅದಷ್ಟೂ ಪ್ರೇಕ್ಷಕರ ಮುಂದೆ ಚೆನ್ನಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಇನ್ನೊಂದಿಷ್ಟು ಪ್ರಯೋಗ ಮಾಡಿದ್ದರೆ, ಒಂದಷ್ಟು ಪಲಿತಾಂಶ ಸಿಗುತ್ತಿತ್ತು.
ಆರ್ ಜಿ ವಿ ಅಭಿಮಾನಿಗಳಿಗೆ
ಈ ಸಿನಿಮಾ ಅಧ್ಬುತವಲ್ಲ... ಹಾಗೆಂದು ಕನಿಷ್ಟವೂ ಅಲ್ಲ. ಇದೊಂದು ಸರಳ ಸಿನಿಮಾ. ರಾಮ್ ಗೋಪಾಲ್ ವರ್ಮ ಅವರ ಸಿನಿಮಾ ನೋಡುವ ಅಭಿಮಾನಿಗಳು 'ಭೈರವಗೀತ' ಚಿತ್ರವನ್ನು ಒಮ್ಮೆ ನೋಡಬಹುದು. ಧನಂಜಯ್ ನಟನೆಗಾಗಿ ಬೋರ್ ಆದರೂ ಸಹಿಸಿಕೊಳ್ಳಬಹುದು.


Click it and Unblock the Notifications











